"ರಾಜ್‌ಕುಮಾರ್ ಅಗಲಿದಾಗ ಮನೆಯವರು ಮೊದಲು ನಮಗೆ ಮಾಹಿತಿ ಕೊಡಲಿಲ್ಲ"; ಎಚ್‌ಡಿ ಕುಮಾರಸ್ವಾಮಿ
ಬೆಂಗಳೂರಿನಲ್ಲಿ ಆರ್‌ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತಕ್ಕೆ 11 ಮಂದಿ ಸಾವನ್ನಪ್ಪಿದ್ದಾರೆ. ಈ ದುರಂತಕ್ಕೆ ಮೈತ್ರಿ ಪಕ್ಷದ ಮುಖಂಡರು ಕಾಂಗ್ರೆಸ್ ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದಾರೆ. ಆತುರದ ಸಂಭ್ರಮವೇ ಇಷ್ಟಕ್ಕೆಲ್ಲ ಕಾರಣವೆಂದು ದೂರುತ್ತಿದ್ದಾರೆ. ಅದರಲ್ಲೂ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಅವರ ವಿರುದ್ಧ ಕಿಡಿಕಾರಿದ್ದರು. ಪತ್ರಿಕಾಗೋಷ್ಠಿ ನಡೆಸಿ, ಡಿಸಿಎಂ ಡಿಕೆಶಿವಕುಮಾರ್ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದರು.
ಈ ಆರೋಪಗಳಿಗೆ ಪ್ರತಿಯಾಗಿ ಎಚ್ ಡಿ ಕುಮಾರಸ್ವಾಮಿ ವಿರುದ್ಧವೂ ಆರೋಪ ಮಾಡಲಾಗಿತ್ತು. ಡಾ.ರಾಜ್‌ಕುಮಾರ್ ತೀರಿಕೊಂಡಾಗ ಎಚ್‌ಡಿ ಕುಮಾರಸ್ವಾಮಿ ಸಿಎಂ ಆಗಿದ್ದರು. ಆ ವೇಳೆ ಕೂಡ ಗಲಾಟೆಗಳು ಆಗಿದ್ದವು. ಹೀಗಾಗಿ ಪೊಲೀಸರು ಗೋಲಿಬಾರ್ ಮಾಡಿದ್ದರು,. ಇದರಿಂದ ಇಬ್ಬರು ಜೀವವನ್ನು ಕಳೆದುಕೊಂಡಿದ್ದರು. ಆ ಘಟನೆಯನ್ನು ಇಟ್ಟುಕೊಂಡು ಎಚ್‌ಡಿಕೆಗೆ ತಿರುಗೇಟು ಕೊಟ್ಟಿದ್ದಾರೆ.

ಈ ಆರೋಪದ ಕುರಿತು ಎಚ್‌ಡಿ ಕುಮಾರಸ್ವಾಮಿಯವರಿಗೆ ಮಾಧ್ಯಮದವರು ಪ್ರಶ್ನೆ ಮಾಡಿದ್ದರು. ಅಣ್ಣಾವ್ರು ಅಗಲಿದ ದಿನ ಏನಾಯ್ತು? ಯಾಕೆ ಜನರನ್ನು ಕಂಟ್ರೋಲ್ ಮಾಡುವುದಕ್ಕೆ ಆಗಲಿಲ್ಲ ಎಂದು ಎಚ್‌ಡಿ ಕುಮಾರಸ್ವಾಮಿ ಮಾಧ್ಯಮಗಳಿಗೆ ವಿವರಿಸಿದ್ದಾರೆ. ಇದೇ ವೇಳೆ ಅಂಬರೀಶ್ ಹಾಗೂ ಪುನೀತ್ ರಾಜ್‌ಕುಮಾರ್ ಅಗಲಿದ ಕ್ಷಣಗಳ ಬಗ್ಗೆನೂ ಪ್ರಸ್ತಾಪ ಮಾಡಿದ್ದಾರೆ. ಎಚ್‌ಡಿಕೆ ಏನು ಹೇಳಿದ್ದಾರೆ ಅಂತ ನೋಡುವುದಾರೇ,
ಡಾ.ರಾಜ್‌ಕುಮಾರ್ ಅಗಲಿದ ವೇಳೆ ಬಿಜೆಪಿ ಹಾಗೂ ಜೆಡಿಎಸ್ ಸೇರಿ ಮೈತ್ರಿ ಸರ್ಕಾರ ನಡೆಸುತ್ತಿದ್ದರು. ಆಗ ಎಚ್‌ಡಿ ಕುಮಾರಸ್ವಾಮಿ ಮುಖ್ಯಮಂತ್ರಿಗಳಾಗಿದ್ದರು. ಆ ಸಂದರ್ಭದಲ್ಲಿ ಅಣ್ಣಾವ್ರ ಅಗಲಿಕೆ ಸುದ್ದಿ ಗೊತ್ತಾಗುತ್ತಿದ್ದಂತೆ ಹಿಂಸಾಚಾರಕ್ಕೆ ತಿರುಗಿತ್ತು. ಅಂದು ಏನಾಯ್ತು ಅನ್ನೋದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
"ರಾಜ್‌ಕುಮಾರ್ ತೀರಿಕೊಂಡಂತಹ ಸಂದರ್ಭದಲ್ಲಿ ನಮಗೆ ಮೊದಲು ಮಾಹಿತಿಯನ್ನು ಮನೆಯವರು ಕೊಡಲೇ ಇಲ್ಲ. ಆ ಮಾಹಿತಿಯನ್ನು ಪಬ್ಲಿಕ್‌ಗೆ ಲೀಕ್ ಮಾಡಿದರು. ನಾವು ವ್ಯವಸ್ಥೆ ಮಾಡಿಕೊಳ್ಳುವುದಕ್ಕೆ ಬಹಳ ಹಿಂಸೆ ಆಯ್ತು. ನನಗೆ ಅವರ ಮೇಲೆ ಗೌರವವಿದೆ. ಅವರ ಸಿನಿಮಾಗಳನ್ನು ನೋಡಿಯೇ ನನಗೆ ಬಡವರ ಬಗ್ಗೆ ಮಾನವೀಯತೆ ಅನ್ನೋದು ಬೆಳೆದಿದೆ. ಅವರ ಸಿನಿಮಾಗಳನ್ನು ನೋಡಿಯೇ ಕಲಿತಿದ್ದು." ಎಂದು ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಹಾಗೇ ಮುಂದುವರೆಸಿ, "ಅವತ್ತಿನ ದಿನ ನಾನು ಮುಂಜಾಗೃತೆ ಕ್ರಮ ತೆಗೆದುಕೊಳ್ಳಲಿಕ್ಕೆ ಮಾಹಿತಿಯ ರಹಸ್ಯವನ್ನು ಕಾಪಾಡಬೇಕಿತ್ತು. ಯಾರಾದರೂ ಪ್ರಮುಖರು ನಿಧನರಾದಾಗ, ವ್ಯವಸ್ಥೆ ಮಾಡುವವರೆಗೂ ಹೇಳುವುದಿಲ್ಲ. ಆದರೆ, ಅವತ್ತು ಆಸ್ಪತ್ರೆಯಿಂದ ಅನೌನ್ಸ್ ಮಾಡಿಬಿಟ್ಟರು. ನಂತರ ಅವರ ಮೃತದೇಹವನ್ನು ಮನೆಗೆ ತೆಗೆದುಕೊಂಡು ಹೋದರು. ಕಣ್ಣುದಾನ ಮಾಡಬೇಕು ಅಂತಿದ್ದರು. ಅದಕ್ಕೆ ಆಪರೇಷನ್ ಮಾಡಿಕೊಂಡು ಕೂತರು. ಅಷ್ಟರೊಳಗೆ ಜನರೆಲ್ಲ ಸೇರಿಕೊಂಡರು. ವಿಷಯ ಗೊತ್ತಾಗುತ್ತಿದ್ದಂತೆ ನಾನು ಅಲ್ಲಿಗೆ ಹೋದೆ. ಆಮೇಲೆ ನಾವು ಕಂಠೀರವ ಸ್ಟೇಡಿಯಂನಲ್ಲಿ ಏನು ವ್ಯವಸ್ಥೆ ಮಾಡಬೇಕೋ ಅದನ್ನು ಮಾಡಿದ್ವಿ. ನೀಟಾಗಿಯೇ ಇತ್ತು. ಬೆಳಗ್ಗೆ 10 ಗಂಟೆಗೆ ಟೆಂಪೋಗಳಲ್ಲಿ ಕೆಲವು ಗೂಂಡಾಗಳು ಸೀಮೆ ಎಣ್ಣೆ ಡಬ್ಬ ಇಟ್ಕೊಂಡು ಬೆಂಕಿ ಹಚ್ಚಿ ಅಶಾಂತಿಯ ವಾತಾವರಣವನ್ನು ಸೃಷ್ಟಿ ಮಾಡುವುದಕ್ಕೆ ಪ್ರಯತ್ನ ಪಟ್ಟರು. ಅವತ್ತು ನಮ್ಮ ಸರ್ಕಾರವನ್ನು ಹಾಳು ಮಾಡಬೇಕು ಅಂತ ಹೊರಟರು. ಗೋಲಿಬಾರ್ ಆಯ್ತು. ಇಬ್ಬರು ತೀರಿಕೊಂಡರು. ಅದಾದ್ಮೇಲೆ ಕಂಟ್ರೋಲ್‌ಗೆ ಬಂತು." ಎಂದಿದ್ದಾರೆ.
ಹಾಗೆಯೇ ಅಂಬರೀಶ್ ತೀರಿಕೊಂಡಾಗಲೂ ಎಚ್ ಡಿ ಕುಮಾರಸ್ವಾಮಿ ಸಿಎಂ ಆಗಿದ್ದರು. ಆ ವೇಳೆ ವ್ಯವಸ್ಥೆ ಮಾಡಿದ್ದು, ಪುನೀತ್ ಅಗಲಿದಾಗ ಬಿಜೆಪಿ ಸರ್ಕಾರ ಇಂತಹ ದುರ್ಘಟನೆಗಳನ್ನು ನಡೆಯುವುದಕ್ಕೆ ಬಿಡುವುದಿಲ್ಲ ಎಂದಿದ್ದರು. "ಅದೇ ಅಂಬರೀಶ್ ಅವರು ತೀರಿಕೊಂಡಾಗ ಏನಾದರೂ ಸಣ್ಣ ಘಟನೆ ಆಯ್ತಾ? ನಾನೇ ಮುಖ್ಯ ಮಂತ್ರಿ ಇದ್ದೆ. ಅವತ್ತಿನ ಅನುಭವ ಅದು. ಪುನೀತ್ ರಾಜ್‌ಕುಮಾರ್ ತೀರಿಕೊಂಡಾಗಲೂ ಮಿತ್ರ ಪಕ್ಷ ಇತ್ತು. ಅವತ್ತೂ ಒಂದು ಸಣ್ಣ ಘಟನೆ ಆಗುವುದಕ್ಕೆ ಅವಕಾಶ ಕೊಡಲಿಲ್ಲ. ಅವತ್ತಿನದ್ದು ಈಗ ಹೋಲಿಕೆ ಮಾಡುವುದು ಅವರ ಸಣ್ಣತನ ಅಷ್ಟೇ." ಎಂದು ಕಾಂಗ್ರೆಸ್ ಮುಖಂಡರ ವಿರುದ್ಧ ಕಿಡಿಕಾರಿದ್ದಾರೆ.


Click it and Unblock the Notifications











