HMPV ಚೀನಾದ ಹೊಸ ವೈರಸ್ ಆತಂಕ; ಮತ್ತೆ ಚಿತ್ರಮಂದಿರ ಮುಚ್ಚುತ್ತಾ?ಏನಂತಾರೆ ಥಿಯೇಟರ್ ಮಾಲೀಕರು?
ಕೋವಿಡ್‌ನಿಂದ ಚೇತರಿಸಿಕೊಂಡು ಜಗತ್ತು ಈಗತಾನೇ ನಿಟ್ಟುಸಿರು ಬಿಡುತ್ತಿದೆ. ಕೋವಿಡ್‌ನಿಂದ ಭಾರತ ಸೇರಿದಂತೆ ವಿಶ್ವದ ಪ್ರತಿಯೊಂದು ರಾಜ್ಯವೂ ಕೂಡ ಸಂಕಷ್ಟಕ್ಕೆ ಸಿಲುಕಿತ್ತು. ಅಪಾರ ಮಟ್ಟದಲ್ಲಿ ಸಾವುಗಳು ಸಂಭವಿಸಿದ್ದರು. ಚೀನಾ ವೈರಸ್ ಸೃಷ್ಟಿಸಿದ ಆ ಅವಾಂತರದ ದಿನಗಳನ್ನು ಮತ್ತೆ ನೆನಪಿಸಿಕೊಳ್ಳುವುದಕ್ಕೆ ಇಷ್ಟ ಪಡುವುದಿಲ್ಲ. ಇಂತಹ ಸಂದರ್ಭದಲ್ಲಿ ಚೀನಾದ ಮತ್ತೊಂದು ವೈರಸ್ (HMPV)ಆತಂಕ ಹುಟ್ಟಾಕಿದೆ.
ಚೀನಾದ ಹೊಸ ವೈರಸ್ ಬೆಂಗಳೂರಿನಲ್ಲಿ ಪತ್ತೆಯಾಗಿದೆ. 3 ತಿಂಗಳ ಮಗು ಹಾಗೂ 8 ತಿಂಗಳ ಮಗುವಿನಲ್ಲಿ ಈ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಕನ್ಫರ್ಮ್ ಮಾಡಿದೆ. ಹಾಗೇ ಗುಜರಾತಿನಲ್ಲೂ 3 ತಿಂಗಳ ಮಗುವಲ್ಲೂ ಎಚ್‌ಎಂಪಿವಿ ಪತ್ತೆ ಆಗಿದೆ. ಹೀಗಾಗಿ ಬೆಂಗಳೂರಿನಲ್ಲಿ ಆರೋಗ್ಯ ಇಲಾಖೆ ಅಲರ್ಟ್ ಆಗಿದೆ. ಹಾಗೇ ಕೆಲವು ಮಾರ್ಗಸೂಚಿಗಳನ್ನು ಈಗಾಗಲೇ ರಿವೀಲ್ ಮಾಡಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯದ ಮೇಲೆ ಆರೋಗ್ಯ ಇಲಾಖೆ ಕಣ್ಣಿಟ್ಟಿದೆ.

ಕೋವಿಡ್ ಪತ್ತೆ ಆದಾಗಲೂ ಹೀಗೆ ಆತಂಕ ಶುರುವಾಗಿತ್ತು. ಥಿಯೇಟರ್‌ಗಳನ್ನು ಬಂದ್ ಮಾಡಲಾಗಿತ್ತು. ಬಳಿಕ ಶೇ.50ರಷ್ಟು ಆಸನ ವ್ಯವಸ್ಥೆಯನ್ನು ಮಾಡಲಾಗಿತ್ತು. ಆದ್ರೀಗ ಚೀನಾದ ಹೊಸ ವೈರಸ್ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಲಾಗುತ್ತಿದೆ. ಹೀಗಿದ್ದರೂ ಕೆಲವು ಉದ್ಯಮಗಳ ಮೇಲೆ ಪರಿಣಾಮದ ಬೀರ ಬಹುದಾ? ಅದಕ್ಕೆ ಎಚ್ಚರಿಕೆ ಕ್ರಮ ಏನು ತೆಗೆದುಕೊಳ್ಳಬೇಕು ಅಂತ ಸಮಾಲೋಚನೆ ನಡೆಸಲಾಗುತ್ತಿದೆ. ಅದರಲ್ಲೂ ಚಿತ್ರರಂಗ ಕೊಂಚ ಮಟ್ಟಿಗೆ ಆತಂಕದಲ್ಲಿದೆ.
ಯಾಕಂದ್ರೆ, ಕೋವಿಡ್ ವೇಳೆ ಆದ ಎಫೆಕ್ಟ್‌ನಿಂದ ಇನ್ನೂ ಕನ್ನಡ ಚಿತ್ರರಂಗ ಚೇತರಿಸಿಕೊಂಡಿಲ್ಲ. ಅಂದು ಥಿಯೇಟರ್‌ಗಳು ಮುಚ್ಚಿದ್ದರಿಂದ ಮಾಲೀಕರು ಇಂದಿಗೂ ಆ ನಷ್ಟದಿಂದ ಹೊರ ಬರುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ. ಓಟಿಟಿಗೆ ಅಡಿಕ್ಟ್ ಆಗಿದ್ದ ಪ್ರೇಕ್ಷಕರು ಕೂಡ ಚಿತ್ರಮಂದಿರಕ್ಕೆ ಬರುವುದಕ್ಕೆ ಶುರು ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಮತ್ತೆ ಹೊಸ ವೈರಲ್ ಹೆಸರು ಕೇಳಿದ ಬಳಿಕ ಪ್ರದರ್ಶಕರ ವಲಯದ ಹೇಗಿದೆ? ಥಿಯೇಟರ್ ಮಾಲೀಕರು ಯಾವ ರೀತಿ ಕ್ರಮ ಕೈಗೊಂಡಿದ್ದಾರೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಎಚ್‌ಎಂಪಿವಿ ವೈರಲ್ ಬಗ್ಗೆ ಕನ್ನಡ ಚಿತ್ರರಂಗ ಆತಂಕಕ್ಕೆ ಒಳಗಾಗಿಲ್ಲ. ಅದರಲ್ಲೂ ಚಿತ್ರಮಂದಿರದ ಮಾಲೀಕರು ಈ ವೈರಸ್ ಅನ್ನು ಗಂಭೀರವಾಗಿ ಪರಿಗಣಿಸಿ, ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ಮುಂದಾಗಿದ್ದಾರೆ. ಆದರೆ, ಮತ್ತೆ ಚಿತ್ರಮಂದಿರಗಳು ಬಂದ್ ಆಗುತ್ತವೆ. ಶೇ. 50 ಆಸನ ವ್ಯವಸ್ಥೆ ಬರುತ್ತೆ ಅನ್ನೋದನ್ನು ತಳ್ಳಿ ಹಾಕಿದ್ದಾರೆ. ಸರ್ಕಾರ ನೀಡುವ ಗೈಡ್‌ಲೈನ್ಸ್ ಅನ್ನು ಫಾಲೋ ಮಾಡುತ್ತೇವೆ ಎನ್ನುತ್ತಿದ್ದಾರೆ.
ಬೆಂಗಳೂರಿನ ಪ್ರಮುಖ ಚಿತ್ರಮಂದಿರ ನರ್ತಕಿ, ಮುಕುಂದ, ಸ್ವಪ್ನ, ಸಂಪಿಗೆ ಹಾಗೂ ಸವಿತಾ ಚಿತ್ರಮಂದಿರದ ಮಾಲೀಕರಾದ ವೆಂಕಟೇಶ್ ಈ ಬಗ್ಗೆ ಫಿಲ್ಮಿಬೀಟ್ ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. "ಸರ್ಕಾರ ಗೈಡ್ ಲೈನ್ಸ್ ಏನು ಕೊಡುತ್ತಾರೋ ಅದನ್ನು ಫಾಲೋ ಮಾಡುತ್ತೇವೆ. ಸದ್ಯಕ್ಕೆ ಅವರ ಗೈಡ್ ಲೈನ್ಸ್ ಏನೂ ಬಂದಿಲ್ಲ. ನಾವು ಮುನ್ನೆಚ್ಚರಿಕೆ ಕ್ರಮವಾಗಿ ಥಿಯೇಟರ್‌ಗಳನ್ನು ಸ್ಯಾನಿಟೈಸ್ ಮಾಡುವುದಕ್ಕೆ ನಿರ್ಧರಿಸಿದ್ದೇವೆ. ಇನ್ನು ಕೆಲವೇ ದಿನಗಳಲ್ಲಿ ಅದನ್ನು ಮಾಡಿಸುತ್ತೇವೆ." ಎನ್ನುತ್ತಾರೆ.
ಹಾಗೇ ಕೋವಿಡ್ ಅಂತಹ ಎಫೆಕ್ಟ್ ಎನೂ ಆಗುವುದಿಲ್ಲ. ಆಗಲೇ ನಾವು ಅಂತಹ ಗಂಭೀರತೆಯನ್ನು ನೋಡಿದ್ದೇವೆ. ಥಿಯೇಟರ್‌ಗೆ ಬರುವ ಪ್ರೇಕ್ಷಕರಿಗೂ ಇಂತಹ ಸಂದರ್ಭದಲ್ಲಿ ಹೇಗಿರಬೇಕು ಅನ್ನೋ ಅರಿವಿದೆ ಎನ್ನುತ್ತಾ ಮುಕುಂದ ಚಿತ್ರಮಂದಿರ ಮಾಲೀಕರಾದ ವೆಂಕಟೇಶ್. "ಥಿಯೇಟರ್ ಬಂದ್ ಆಗೋದು, 50 ಪರ್ಸೆಂಟ್ ಅದ್ಯಾವುದೂ ಈ ಬಾರಿ ಇರುವುದಿಲ್ಲ. ಯಾಕಂದ್ರೆ, ಕೋವಿಡ್ ಅನ್ನು ನೋಡಿದ ಮೇಲೆ ಎಲ್ಲರೂ ಎಚ್ಚರಿಕೆ ತೆಗೆದುಕೊಳ್ಳುತ್ತಾರೆ. ಈಗ ಜನರು ಹೊಸ ವೈರಸ್‌ಗಳಿಗೆ ಹೆದರುವುದನ್ನು ನಿಲ್ಲಿಸಿದ್ದಾರೆ." ಎನ್ನುತ್ತಾರೆ.
ಇನ್ನು ಊರ್ವಶಿ ಸೇರಿದಂತೆ ಹಲವು ಪ್ರಮುಖ ಚಿತ್ರಮಂದಿರಗಳ ಮಾಲೀಕರು ಥಿಯೇಟರ್ ಅನ್ನು ಸ್ಯಾನಟೈಸ್ ಮಾಡುವುದಕ್ಕೆ ನಿರ್ಧರಿಸಿದ್ದಾರೆ. ಇಂತಹದ್ದೊಂದು ಸುದ್ದಿ ಓಡಾಡುತ್ತಿದೆ. ಸಹಜವಾಗಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರವನ್ನು ಶುಚಿಗೊಳಿಸುತ್ತವೆ. ಆದರೆ, ತಾಲೂಕು ಮಟ್ಟದಲ್ಲಿರುವ ಸಿಂಗಲ್ ಸ್ಕ್ರೀನ್‌ಗಳು ಚಿತ್ರಮಂದಿರವನ್ನು ಶುಚಿಯಾಗಿ ಇಟ್ಟುಕೊಂಡರೇ ಬಹುಶ: ಏನೂ ಸಮಸ್ಯೆ ಆಗುವುದಿಲ್ಲ.
Disclaimer: ಚೀನಾದ ಹೊಸ ವೈರಸ್‌ಗೆ ಆತಂಕ ಪಡೆಬೇಕಾಗಿಲ್ಲ. ಈ ವರದಿ ಚಿತ್ರಮಂದಿರ ಪ್ರೇಕ್ಷಕರ ಸುರಕ್ಷತೆಗೆ ಸ್ವಯಂ ಪ್ರೇರಿತರಾಗಿ ಏನೆಲ್ಲ ಕ್ರಮಗಳನ್ನು ಕೊಳ್ಳುತ್ತದೆ ಎಂಬುದನ್ನು ತಿಳಿಸುವುದಕ್ಕಷ್ಟೇ.


Click it and Unblock the Notifications











