ಪ್ರಭಾಸ್ ಬಳಿಕ ಹೃತಿಕ್ ರೋಷನ್‌ಗೆ ಗಾಳ ಹಾಕಿದ ಹೊಂಬಾಳೆ ಫಿಲ್ಮ್ಸ್; 'ಕೆಜಿಎಫ್ 3' ಕಡೆ ಬೊಟ್ಟು ಮಾಡಿದ್ದೇಕೆ ನೆಟ್ಟಿಗರು?
ಗ್ಲೋಬಲ್ ಲೆವೆಲ್‌ನಲ್ಲಿ ಸಿನಿಮಾ ನಿರ್ಮಾಣ ಮಾಡುವ ಗುರಿ ಇಟ್ಟುಕೊಂಡಿರುವ ಹೊಂಬಾಳೆ ಫಿಲ್ಮ್ಸ್ ಮತ್ತೊಂದು ಹೆಜ್ಜೆ ಇಟ್ಟಿದೆ. ದಕ್ಷಿಣ ಭಾರತದಲ್ಲಿ ಎಲ್ಲಾ ಭಾಷೆಯ ಸಿನಿಮಾಗಳನ್ನು ನಿರ್ಮಾಣ ಮಾಡಿದ ಬಳಿಕ ಈಗ ಬಾಲಿವುಡ್‌ಗೆ ಲಗ್ಗೆ ಇಟ್ಟಿದೆ. ಕಳೆದ ಕೆಲವು ದಿನಗಳಿಂದ ಹೊಂಬಾಳೆ ಫಿಲ್ಮ್ಸ್ ಹಿಂದಿ ಸಿನಿಮಾವನ್ನು ನಿರ್ಮಾಣ ಮಾಡುತ್ತೆ ಎಂದು ಸುದ್ದಿ ಕೇಳಿ ಬರುತ್ತಿತ್ತು. ನಿರೀಕ್ಷೆ ಮಾಡಿದಂತೆ ಮೊದಲ ಬಾಲಿವುಡ್ ಪ್ರಾಜೆಕ್ಟ್ ಅನ್ನು ಅನೌನ್ಸ್ ಮಾಡಿದೆ.
ಬಾಲಿವುಡ್‌ನ ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್‌ಗೆ ಜೊತೆ ಸಿನಿಮಾವನ್ನು ಘೋಷಣೆ ಮಾಡಿದೆ. ಬಿಗ್ ಪ್ರಾಜೆಕ್ಟ್‌ಗಳನ್ನು ನಿರ್ಮಾಣ ಮಾಡುವತ್ತ ಹೆಜ್ಜೆ ಇಟ್ಟಿರುವ ಹೊಂಬಾಳೆ ಫಿಲ್ಮ್ಸ್ ಬಾಲಿವುಡ್ ಎಂಟ್ರಿ ಕುತೂಹಲ ಕೆರಳಿಸಿದೆ. ಹೃತಿಕ್ ರೋಷನ್ ಹಾಗೂ ಹೊಂಬಾಳೆ ಫಿಲ್ಮ್ಸ್ ಕಾಂಬಿನೇಷನ್‌ನಲ್ಲಿ ಮೂಡಿಬರಲಿರುವ ಸಿನಿಮಾದ ಬಗ್ಗೆ ಸಿನಿಪ್ರಿಯರಲ್ಲಿ ಕ್ಯೂರಿಯಾಟಿಸಿ ಹೆಚ್ಚಾಗಿದೆ.

ದಕ್ಷಿಣ ಭಾರತದಲ್ಲಿ ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾಗಳನ್ನು ನೀಡಿರುವ ಕನ್ನಡದ ನಿರ್ಮಾಣ ಸಂಸ್ಥೆಯ ಮತ್ತೊಂದು ಹೆಜ್ಜೆಯಿದು. ಸಾಲು ಸಾಲು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿರುವ ಹೊಂಬಾಳೆ ಫಿಲ್ಮ್ಸ್ ಹೊಸ ಪ್ರಾಜೆಕ್ಟ್ ಇಂಟರ್‌ನೆಟ್‌ನಲ್ಲಿ ಸಂಚಲನವನ್ನು ಸೃಷ್ಟಿಸುತ್ತಿದೆ. ಹೃತಿಕ್ ರೋಷನ್ ಜೊತೆ ಕೈ ಜೋಡಿಸಿರುವ ಹೊಂಬಾಳೆ ಈ ಮೂಲಕ ದೇಶದ ಗಡಿ ದಾಟಿ ವಿಶ್ವದಾದ್ಯಂತ ತಲುಪುವ ಗುರಿಯನ್ನು ಹೊಂದಿದೆ. ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ವಿಜಯ್ ಕಿರಗಂದೂರು ಹಾಗೂ ಹೃತಿಕ್ ರೋಷನ್ ಈ ಪ್ರಾಜೆಕ್ಟ್ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಹೊಂಬಾಳೆ ಫಿಲ್ಮ್ಸ್ ಕನ್ನಡದಲ್ಲಿ 'ರಾಜಕುಮಾರ', 'ಯುವರತ್ನ', ಕೆಜಿಎಫ್ 1', ಕೆಜಿಎಫ್ 2', ಕಾಂತಾರ 'ಬಘೀರ' ದಂತಹ ಸಿನಿಮಾಗಳನ್ನು ನಿರ್ಮಿಸಿ ಯಶಸ್ಸು ಗಳಿಸಿದೆ. ಪ್ಯಾನ್ ಇಂಡಿಯಾ ಲೆವಲ್‌ನಲ್ಲಿ ಯಶಸ್ಸು ಗಳಿಸುತ್ತಿದ್ದಂತೆ ಟಾಲಿವುಡ್‌ನಲ್ಲಿ 'ಸಲಾರ್' ಸಿನಿಮಾ ನಿರ್ಮಿಸಿ ಯಶಸ್ಸು ಗಳಿಸಿತ್ತು. ಹಾಗೇ ಮಲಯಾಳಂ ಹಾಗೂ ತಮಿಳು ಸಿನಿಮಾಗೂ ಕೈ ಹಾಕಿ ಗೆದ್ದಿತ್ತು. ಈಗ ಮತ್ತೊಂದು ಹೆಜ್ಜೆಯಾಗಿ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದೆ. ಈ ಬಾರಿ ಹೃತಿಕ್ ರೋಷನ್ ಅಂತಹ ಸೂಪರ್‌ಸ್ಟಾರ್‌ಗೆ ಗಾಳ ಹಾಕಿದೆ. ಈ ಬಗ್ಗೆ ಪ್ರಾಜೆಕ್ಟ್ ಬಗ್ಗೆ ವಿಜಯ್ ಕಿರಗಂದೂರು ಹಾಗೂ ಹೃತಿಕ್ ರೋಷನ್ ಇಬ್ಬರೂ ಥ್ರಿಲ್ ಆಗಿದ್ದಾರೆ.
" ಈ ಒಡಂಬಡಿಕೆಯಿಂದ ನನಗೆ ತುಂಬಾನೇ ಖುಷಿಯಾಗಿದೆ. ಸ್ಪೂರ್ತಿ ನೀಡುವಂತಹ ಹಾಗೂ ಗಡಿಯನ್ನು ದಾಡಿದ ಕಥೆಗಳನ್ನು ಹೇಳುವುದು ಹೊಂಬಾಳೆ ಫಿಲ್ಮ್ಸ್ ಉದ್ದೇಶ. ಹೃತಿಕ್ ರೋಷನ್ ಜೊತೆ ಸೇರಿ ಸಿನಿಮಾ ಮಾಡುತ್ತಿರುವುದು ಈ ಗುರಿಗೆ ಒಂದು ಹೆಜ್ಜೆ ಮುಂದೆ ಇಟ್ಟಂತೆ. ಕಲ್ಪನೆಯನ್ನು ಮೀರಿದ ಅದ್ಧೂರಿ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ. ಪವರ್‌ಫುಲ್ ಹಾಗೂ ಕಾಲಾತೀತ ಅನುಭವಗಳನ್ನು ನೀಡುವುದಕ್ಕೆ ನಾನು ಕಮಿಟ್ ಆಗಿದ್ದೇವೆ." ಎಂದು ನಿರ್ಮಾಪಕ ವಿಜಯ್ ಕಿರಗಂದೂರು ಹೇಳಿದ್ದಾರೆ.

ಈ ಪ್ರಾಜೆಕ್ಟ್ ಬಗ್ಗೆ ಹೃತಿಕ್ ರೋಷನ್ ಕೂಡ ಅಷ್ಟೇ ಖುಷಿಯಾಗಿದ್ದಾರೆ. " ಕಳೆದ ಕೆಲವು ವರ್ಷಗಳಿಂದ ಹೊಂಬಾಳೆ ಫಿಲ್ಮ್ಸ್ ಹಲವು ವಿಭಿನ್ನ ಸ್ಟೋರಿಗಳ ಮನೆಯಾಗಿದೆ. ನಮ್ಮ ಪ್ರೇಕ್ಷಕರಿಗೆ ಸಿನಿಮಾದ ಅನುಭವವನ್ನು ನೀಡುವುದಕ್ಕೆ ಹೊಂಬಾಳೆ ಫಿಲ್ಮ್ಸ್ ಜೊತೆ ಕೈ ಜೋಡಿಸಿದ್ದೇನೆ. ನಾವು ದೊಡ್ಡ ಕನಸನ್ನು ಕಾಣುತ್ತಿದ್ದೇವೆ. ಹಾಗೇ ಆ ಕನಸುಗಳನ್ನು ನನಸಾಗಿಸುವುದಕ್ಕೆ ಬದ್ಧರಾಗಿದ್ದೇವೆ." ಎಂದು ಹೃತಿಕ್ ರೋಷನ್ ಪ್ರತಿಕ್ರಿಯೆ ನೀಡಿದ್ದಾರೆ.
ಹೊಂಬಾಳೆ ಹಾಗೂ ಹೃತಿಕ್ ರೋಷನ್ ಸಿನಿಮಾ ಅನೌನ್ಸ್ ಮಾಡುತ್ತಿದಂತೆ ನೆಟ್ಟಿಗರು ಕಲ್ಪನಾ ಲೋಕಕ್ಕೆ ಜಾರಿದ್ದಾರೆ. ಹೃತಿಕ್ ರೋಷನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಕಾಂಬಿನೇಷನ್‌ನಲ್ಲಿ 'ಕೆಜಿಎಫ್ 3' ಸಿನಿಮಾ ಮಾಡಿ ಎಂದು ಸಲಹೆಯನ್ನು ನೀಡುತ್ತಿದ್ದಾರೆ. ಇನ್ನೊಬ್ಬರು ಇಂತಹ ಕಾಂಬಿನೇಷನ್ ಆಗಬೇಕು. ಆಗಲೇ ಭಾರತೀಯ ಸಿನಿಮಾ ಎನಿಸಿಕೊಳ್ಳುವುದಕ್ಕೆ ಸಾಧ್ಯವೆಂದು ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ಹೃತಿಕ್ ರೋಷನ್ ಸದ್ಯಕ್ಕೆ 'ವಾರ್ 2' ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜೊತೆಗೆ 'ಕ್ರಿಶ್ 4' ಸಿನಿಮಾದ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ. ಇನ್ನೊಂದು ಕಡೆ ಹೊಂಬಾಳೆ ಫಿಲ್ಮ್ಸ್ 'ಕಾಂತಾರ ಚಾಪ್ಟರ್ 1' , 'ಸಲಾರ್ 2' ಹಾಗೂ ಪ್ರಭಾಸ್ ಜೊತೆ ಮೂರು ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ.


Click it and Unblock the Notifications











