ಮೊನ್ನೆ ರುಕ್ಮಿಣಿ ವಸಂತ್.. ಇಂದು ಗುಲ್ಶನ್ ದೇವಯ್ಯ; ಕಾಂತಾರ ಚಾಪ್ಟರ್ 1ರಲ್ಲಿ ಕುಲಶೇಖರನಾದ ಬಾಲಿವುಡ್ ನಟ
ಕನ್ನಡದ ಮತ್ತೊಂದು ಬಹು ನಿರೀಕ್ಷೆಯ ಸಿನಿಮಾ 'ಕಾಂತಾರ ಚಾಪ್ಟರ್ 1'. ರಿಷಬ್ ಶೆಟ್ಟಿ ನಿರ್ದೇಶಿಸಿ, ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಈ ಸಿನಿಮಾ ಕನ್ನಡ ಚಿತ್ರರಂಗ ಅಷ್ಟೇ ಅಲ್ಲ. ಇಡೀ ಭಾರತೀಯ ಚಿತ್ರರಂಗವೇ ಎದುರು ನೋಡುತ್ತಿದೆ. ಕಳೆದೆರಡು ವರ್ಷಗಳಿಂದ ನಿರ್ಮಾಣ ಹಂತದಲ್ಲಿದ್ದ 'ಕಾಂತಾರ ಚಾಪ್ಟರ್ 1' ಬಿಡುಗಡೆಗೆ 43 ದಿನಗಳು ಬಾಕಿ ಉಳಿದಿವೆ. ಹೀಗಾಗಿ ನಿಧಾನವಾಗಿ ಹೊಂಬಾಳೆ ಫಿಲ್ಮ್ಸ್ ಪ್ರಚಾರವನ್ನು ಆರಂಭಿಸಿದೆ.
'ಕಾಂತಾರ ಚಾಪ್ಟರ್ 1' ನಿರ್ಮಾಣ ಹಂತದಲ್ಲಿ ಒಂದೇ ಒಂದು ಸುಳಿವನ್ನೂ ಬಿಟ್ಟು ಕೊಟ್ಟಿರಲಿಲ್ಲ. ಈ ಕಾರಣಕ್ಕೆ ರಿಷಬ್ ಶೆಟ್ಟಿಯನ್ನು ಬಿಟ್ಟು ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಕಲಾವಿದರನ್ನು ರಿವೀಲ್ ಮಾಡುತ್ತಿದೆ. ಕೆಲವು ದಿನಗಳ ಹಿಂದಷ್ಟೇ ಸಿನಿಮಾ ನಾಯಕಿ ರುಕ್ಮಿಣಿ ವಸಂತ್ ಲುಕ್ ಅನ್ನು ರಿವೀಲ್ ಮಾಡಲಾಗಿತ್ತು. ಈಗ ಮತ್ತೊಂದು ಜನಪ್ರಿಯ ನಟನ ಪಾತ್ರ ಹಾಗೂ ಲುಕ್ ಅನ್ನು ರಿವೀಲ್ ಮಾಡಲಾಗಿದೆ.

ಬಹು ಭಾಷೆಯಲ್ಲಿ ಈ ಸಿನಿಮಾವನ್ನು ರಿಲೀಸ್ ಮಾಡುವುದಕ್ಕೆ ಹೊಂಬಾಳೆ ಫಿಲ್ಮ್ಸ್ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಹೀಗಾಗಿ ಸಿನಿಮಾ ಬಿಡುಗಡೆಗೆ ಹೆಚ್ಚು ಕಡಿಮೆ ಒಂದು ತಿಂಗಳು ಇರುವಾಗಲೇ ಪ್ರಚಾರವಾಗಿ ನಿಧಾನವಾಗಿ ಆರಂಭ ಮಾಡಿದೆ. ರುಕ್ಮಿಣಿ ವಸಂತ್ ಬಳಿಕ ಬಾಲಿವುಡ್ ಜನಪ್ರಿಯ ನಟ ಗುಲ್ಶನ್ ದೇವಯ್ಯ ಅವರ ಪಾತ್ರದ ಫಸ್ಟ್ ಲುಕ್ ಅನ್ನು ರಿವೀಲ್ ಮಾಡಿದೆ.
ಕುತೂಹಲ ಹೆಚ್ಚಿಸುತ್ತಿದೆ 'ಕಾಂತಾರ' ಯೂನಿವರ್ಸ್
ರಿಷಬ್ ಶೆಟ್ಟಿಯ 'ಕಾಂತಾರ' ಯೂನಿವರ್ಸ್‌ನಲ್ಲಿ ಇರುವ ಒಬ್ಬೊಬ್ಬರೇ ಸ್ಟಾರ್‌ಗಳು ರಿವೀಲ್ ಆಗುತ್ತಿದೆ. 'ಕಾಂತಾರ'ಗಿಂತಲೂ ಬಿಗ್ ಬಜೆಟ್‌ನಲ್ಲಿ 'ಕಾಂತಾರ ಚಾಪ್ಟರ್ 1' ನಿರ್ಮಾಣ ಮಾಡಲಾಗಿದೆ. ಈಗಾಗಲೇ ಎರಡು ಪಾತ್ರಗಳು ರಿವೀಲ್ ಆಗಿದ್ದರಿಂದ ಈ ಯುನಿವರ್ಸ್‌ನಲ್ಲಿ ಇನ್ನು ಯಾರೆಲ್ಲ ಇರಬಹುದು? ಅನ್ನೋ ಕುತೂಹಲ ಮೂಡುವುದಕ್ಕೆ ಶುರುವಾಗಿದೆ. ಇನ್ಮುಂದೆ ದಿನಕ್ಕೊಂದು ಸರ್ಪ್ರೈಸ್ ಸಿಕ್ಕರೂ ಸಿನಿಪ್ರಿಯರು ಅಚ್ಚರಿ ಪಡಬೇಕಾಗಿಲ್ಲ.
ಯಾರಿದು ಕುಲಶೇಖರ?
'ಕಾಂತಾರ ಚಾಪ್ಟರ್ 1'ರಲ್ಲಿ ಕುಲಶೇಖರನ ಪಾತ್ರದಲ್ಲಿ ಗುಲ್ಶನ್ ದೇವಯ್ಯ ನಟಿಸುತ್ತಿದ್ದಾರೆ. ಈ ನಟ ಬಾಲಿವುಡ್ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದರೂ, ಇವರು ಅಪ್ಪಟ ಕನ್ನಡದವರು. ಕನ್ನಡವನ್ನು ತುಂಬಾನೇ ಚೆನ್ನಾಗಿ ಮಾತಾಡಬಲ್ಲರು. ಕೊಡವ ಕುಟುಂಬದಲ್ಲಿ ಜನಿಸಿದ 47 ವರ್ಷದ ನಟ ಫ್ಯಾಷನ್ ಇಂಡಸ್ಟ್ರಿಯಲ್ಲಿ ಹೆಸರು ಮಾಡಿದ್ದರು. ಬಳಿಕ ಚಿಕ್ಕ ಪುಟ್ಟ ಡ್ರಾಮಾಗಳಲ್ಲಿ ನಟಿಸಿ, ಜನಪ್ರಿಯತೆ ಸಿಗುತ್ತಿದ್ದಂತೆ ಮುಂಬೈಗೆ ಶಿಫ್ಟ್ ಆಗಿದ್ದರು. ಬಳಿಕ ಬಾಲಿವುಡ್ ಸಿನಿಮಾ ಹಾಗೂ ವೆಬ್ ಸೀರಿಸ್‌ಗಳಲ್ಲಿ ನಟಿಸಿ, ಬಹುಬೇಡಿಕೆಯ ನಟನಾಗಿದ್ದಾರೆ. ಈಗ 'ಕಾಂತಾರ ಚಾಪ್ಟರ್ 1' ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

'ಕಾಂತಾರ'ಗೆ ಹೊಸ ಆಯಾಮ?
'ಕಾಂತಾರ ಚಾಪ್ಟರ್ 1'ಗೆ ಗುಲ್ಶನ್ ದೇವಯ್ಯ ಎಂಟ್ರಿಯಿಂದ ಸಿನಿಮಾಗೆ ಹೊಸ ಆಯಾಮ ಸಿಕ್ಕಿದೆ. ಚರ್ಚೆಗೆ ಒಳಪಡುವ ಪಾತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಳ್ಳುವ ಗುಲ್ಶನ್ ದೇವಯ್ಯ ಈ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ರಿಷಬ್ ಶೆಟ್ಟಿ, ರುಕ್ಮಿಣಿ ವಸಂತ್ ಬಳಿಕ ಈಗ ಗುಲ್ಶನ್ ದೇವಯ್ಯ ಅವರ ಕುಲಶೇಖರ ಪಾತ್ರ ಕೂಡ ಪ್ರೇಕ್ಷಕರಲ್ಲಿ ಕುತೂಹಲವನ್ನು ಸೆಳೆಯುತ್ತಿದೆ.
7 ಭಾಷೆಗಳಲ್ಲಿ 'ಕಾಂತಾರ' ರಿಲೀಸ್
2022ರಲ್ಲಿ ತೆರೆಕಂಡು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿದ 'ಕಾಂತಾರ' ಸಿನಿಮಾದ ಹಿಂದಿನ ಅಧ್ಯಾಯವನ್ನು ಹೇಳುತ್ತಿದ್ದಾರೆ. ಇದು ಹೊಂಬಾಳೆ ಫಿಲ್ಮ್ಸ್‌ನ ಮಹತ್ವಾಕಾಂಕ್ಷೆಯ ಸಿನಿಮಾ. ಹಾಗೇ ಇದೂವರೆಗೂ ಹೊಂಬಾಳೆ ನಿರ್ಮಿಸಿದ್ದಕ್ಕಿಂತ ದೊಡ್ಡ ಬಜೆಟ್ ಸಿನಿಮಾ ಎನ್ನಲಾಗಿದೆ. ಸಂಸ್ಕೃತಿ, ಜಾನಪದ ಹಾಗೂ ಅದ್ಭುತ ಕಥಾಹಂದರದೊಂದಿಗೆ ತೆರೆಮೇಲೆ ಬರಲಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಅಕ್ಟೋಬರ್ 2, 2025ರಂದು ಕನ್ನಡ, ಇಂಗ್ಲಿಷ್, ಹಿಂದಿ, ತೆಲುಗು, ತಮಿಳು, ಮಲಯಾಳಂ ಮತ್ತು ಬಂಗಾಳಿ ಭಾಷೆಗಳಲ್ಲಿ ವಿಶ್ವಾದ್ಯಂತ ಅದ್ದೂರಿಯಾಗಿ ರಿಲೀಸ್‌ಗೆ ರೆಡಿಯಾಗುತ್ತಿದೆ.


Click it and Unblock the Notifications











