ಸಂಗೀತ ಕ್ಷೇತ್ರದಲ್ಲಿ ಸಂಚಲನ ಸೃಷ್ಟಿಸಲು ಹೊರಟ ಹೊಂಬಾಳೆ; ಯುಕೆ-ಐರ್ಲ್ಯಾಂಡ್‌ನಲ್ಲಿ ಸಂಜಿತ್ ಸಂಗೀತ ಸಂಜೆ
ಕನ್ನಡದ ಹೆಮ್ಮೆಯ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಹೊಸ ಹೊಸ ಸಾಹಸಕ್ಕೆ ಕೈ ಹಾಕುತ್ತಲೇ ಇರುತ್ತೆ. ಕನ್ನಡ ಸಿನಿಮಾಗಳನ್ನು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ರಿಲೀಸ್ ಮಾಡಿ ಗೆದ್ದಿರೋ ಸಂಸ್ಥೆ ಹೊಸ ಪ್ರಯತ್ನ ಮುಂದಾಗಿದೆ. ಇತ್ತೀಚೆಗಷ್ಟೇ ರಿಲೀಸ್ ಆಗಿದ್ದ 'ಕಾಂತಾರ ಚಾಪ್ಟರ್ 1' ವಿಶ್ವದಾದ್ಯಂತ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿತ್ತು. ಭಾರತದಲ್ಲಷ್ಟೇ ಅಲ್ಲ ವಿದೇಶದಲ್ಲಿಯೂ ಈ ಸಿನಿಮಾ ಜೋರಾಗಿಯೇ ಸದ್ದು ಮಾಡಿತ್ತು.
'ಕಾಂತಾರ ಚಾಪ್ಟರ್ 1' ವಿಶ್ವದಾದ್ಯಂತ ಸುಮಾರು ₹900 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇದು ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್‌ಗೆ ಸಿಕ್ಕಿರೋ ಮತ್ತೊಂದು ಯಶಸ್ಸು. ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಈ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ ಬೆನ್ನಲ್ಲೇ, ಯುನೈಟೆಡ್ ಕಿಂಗ್‌ಡಮ್ (UK)ನಲ್ಲಿ ಬಿಡುಗಡೆಯಾಗಿ ಮತ್ತೊಂದು ಮೈಲಿಗಲ್ಲು ಸೃಷ್ಟಿಸಿದೆ.

ಯುಕೆಯಲ್ಲಿ 'ಕಾಂತಾರ ಚಾಪ್ಟರ್ 1' ಒಂದೆರಡು ಸೆಂಟರ್‌ಗಳಲ್ಲಿ ನಿರ್ಮಾಣ ಆಗಿಲ್ಲ ಬದಲಾಗಿ, ಸುಮಾರು 450ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಪ್ರದರ್ಶನಗೊಂಡಿದೆ. ಈ ಸಿನಿಮಾ ಮೂಲಕ ಕರ್ನಾಟಕದ ಮಣ್ಣಿನ ಕಥೆಗಳನ್ನು ಅಂತರಾಷ್ಟ್ರೀಯ ಮಟ್ಟಿಕ್ಕೆ ತಲುಪಿಸುವಲ್ಲಿ ಯಶಸ್ವಿಯಾಗಿದೆ. ಭಾರತದ ಗ್ರಾಮೀಣ ಸೊಗಡಿನ ಕಥೆಗಳನ್ನು ವಿದೇಶದ ಪ್ರೇಕ್ಷಕರವರೆಗೂ ಹೇಗೆ ತೆಗೆದುಕೊಂಡು ಹೋಗಬಹುದು ಎಂಬುದನ್ನು ಹೊಂಬಾಳೆ ಫಿಲ್ಮ್ಸ್ ಸಾಬೀತು ಮಾಡಿದೆ.
ಕರ್ನಾಟಕದ ಈ ಸಾಂಸ್ಕೃತಿಕ ಕೊಂಡಿಯನ್ನು ಬೆಸೆಯಲು ಬ್ರಿಟನ್ ಮೂಲದ 'ಲಾಫಿಂಗ್ ವಾಟರ್ ಎಂಟರ್ಟೈನ್‌ಮೆಂಟ್' (Laughing Water Entertainment) ಹೊಂಬಾಳೆ ಫಿಲ್ಮ್ಸ್ ಜೊತೆ ಕೈ ಜೋಡಿಸಿತ್ತು. ಭಾರತೀಯ ಕಲೆ, ಸಿನಿಮಾ ಮತ್ತು ಸಂಗೀತವನ್ನು ವಿಶ್ವದಾದ್ಯಂತ ಪಸರಿಸುವ ಗುರಿ ಹೊಂದಿರುವ ಈ ಸಂಸ್ಥೆಯು ಈಗ ಸಂಗೀತ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಲು ಸಜ್ಜಾಗಿ ನಿಂತಿದೆ.

ಯುಕೆ-ಐರ್ಲೆಂಡ್‌ನಲ್ಲಿ ಸಂಜಿತ್ ಹೆಗ್ಡೆ ಲೈವ್
ಕನ್ನಡದ ಸಿನಿಮಾದ ಸಂಗೀತ ಲೋಕದಲ್ಲಿ ಸಂಜಿತ್ ಹೆಗ್ಡೆ ಈಗ ಟ್ರೆಂಡಿಂಗ್‌ನಲ್ಲಿರೋ ಗಾಯಕ. ಸಿನಿಮಾ ಹಾಡುಗಳನ್ನು ಹಾಡಿ ಸಂಗೀತ ಪ್ರಿಯರನ್ನು ಸೆಳೆದಿರುವ ಸಂಜಿತ್ ಹೆಗ್ಡೆ ಈ ವಿದೇಶಿಗರನ್ನು ಸೆಳೆಯುವುದಕ್ಕೆ ಮುಂದಾಗಿದ್ದಾರೆ. ತಮ್ಮ ವಿಶಿಷ್ಟ ಶೈಲಿಯ ಗಾಯನದಿಂದಲೇ ಜನರನ್ನು ಸೆಳೆದಿರುವ ಸಂಜಿತ್ ಕನ್ನಡ ಅಷ್ಟೇ ಅಲ್ಲದೆ, ಬೇರೆ ಭಾಷೆಯ ಸಿನಿಮಾಗಳಿಗೂ ಹಾಡಿದ್ದಾರೆ. ಈಗ ಈ ವಿದೇಶ ಪ್ರವಾಸದ ಮೂಲಕ ಅಲ್ಲಿನ ಜನರನ್ನು ಸೆಳೆಯಲಿದ್ದಾರೆ. ಈ ಕಾರ್ಯಕ್ರಮದ ಪಟ್ಟಿ ಹೀಗಿದೆ.
ಕಾರ್ಯಕ್ರಮದ ವೇಳಾಪಟ್ಟಿ
* ಮಾರ್ಚ್ 19: ಡಬ್ಲಿನ್ (ಸೈಂಟಾಲಜಿ ಆಡಿಟೋರಿಯಂ)
* ಮಾರ್ಚ್ 20: ಮ್ಯಾಂಚೆಸ್ಟರ್ (ಮ್ಯಾಂಚೆಸ್ಟರ್ ಅಕಾಡೆಮಿ 1)
* ಮಾರ್ಚ್ 21: ಲಂಡನ್ (ಸ್ಥಳ ಶೀಘ್ರದಲ್ಲೇ ಪ್ರಕಟವಾಗಲಿದೆ)
* ಮಾರ್ಚ್ 22: ಲೀಸೆಸ್ಟರ್ (O2 ಅಕಾಡೆಮಿ ಲೀಸೆಸ್ಟರ್)
ಮೆಗಾ ಬ್ಲಾಕ್‌ಬಸ್ಟರ್ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಹೊಂಬಾಳೆ ಫಿಲ್ಮ್ಸ್ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುವುದಕ್ಕೆ ಮುಂದಾಗಿದೆ. ಬ್ರಿಟನ್‌ನ ಲಾವಿಂಗ್ ವಾಟರ್ ಎಂಟರ್ಟೈನ್‌ಮೆಂಟ್‌ನಂತಹ ಆಯೋಜಕರ ಜೊತೆ ಕೈಜೋಡಿಸಿ ಕನ್ನಡ ಹಾಡುಗಳನ್ನು ವಿಶ್ವದ ಮೂಲೆ ಮೂಲೆಗೆ ತಲುಪಿಸುವುದಕ್ಕೆ ಸಜ್ಜಾಗಿದೆ. ಹಾಗೇ ಮುಂದಿನ ದಿನಗಳಲ್ಲಿ ಭಾರತದ ಬೇರೆ ಬೇರೆ ಭಾಷೆಗಳ ಹಾಡುಗಳನ್ನು ವಿಶ್ವ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಸಾಧ್ಯತೆಯಿದೆ. "ಇದು ಕೇವಲ ಮನೋರಂಜನೆಯಲ್ಲ, ಬದಲಾಗಿ ನಮ್ಮ ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಸಂಭ್ರಮಿಸುವ ಒಂದು ಅದ್ಭುತ ಪ್ರಯತ್ನ." ಎಂದು ಹೊಂಬಾಳೆ ಫಿಲ್ಮ್ಸ್ ಹೇಳಿಕೊಂಡಿದೆ. ಹೊಂಬಾಳೆ ಜಾಗತೀಕ ಮಟ್ಟದಲ್ಲಿ ಸದ್ದು ಮಾಡುವುದಕ್ಕೆ ಸಜ್ಜಾಗಿದೆ.


Click it and Unblock the Notifications











