ಹೊಂಬಾಳೆ ಫಿಲ್ಮ್ಸ್‌ನ 'ರಾಜಾಧಿರಾಜ ಯಾತ್ರೆ'ಗೆ ಭರ್ಜರಿ ರೆಸ್ಪಾನ್ಸ್; ಬೆಂಗಳೂರಿನ ಎಲ್ಲಾ ಶೋಗಳು ಹೌಸ್‌ಫುಲ್
ಕನ್ನಡದ ಜನಪ್ರಿಯ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್, LWP ಹಾಗೂ ಕಲಾನೇಷನ್ ಫೌಂಡೇಶನ್ ಸಹಯೋಗದೊಂದಿಗೆ 'ರಾಜಾಧಿರಾಜ್ ಯಾತ್ರಾ: ಕೃಷ್ಣ ಲೀಲಾ ಆಪ್ಕೆ ದ್ವಾರ್' ಎಂಬ ಭಕ್ತಿಪ್ರಧಾನ ನಾಟಕವನ್ನು ಆಯೋಜಿಸಲಾಗಿದೆ. ಬೆಂಗಳೂರಿನಲ್ಲಿ ಈ ಶೋ ಮಾರ್ಚ್ 19ರಿಂದ ಆರಂಭ ಆಗಿತ್ತು. ಪ್ರೆಸ್ಟೀಜ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್, ಕೋಣನಕುಂಟೆ ಇಲ್ಲಿ ಪ್ರದರ್ಶನ ಕಾಣುತ್ತಿತ್ತು. ಇಂದು (ಮಾರ್ಚ್ 22) ಬೆಂಗಳೂರಿನಲ್ಲಿ ಈ ಪ್ರದರ್ಶನಗಳು ಕೊನೆಗೊಳ್ಳಲಿದೆ.
'ರಾಜಾಧಿರಾಜ್ ಯಾತ್ರಾ'ದ ಬಗ್ಗೆ ಹೇಳುವುದಾರೇ, ಶ್ರೀಕೃಷ್ಣನ ಪವಿತ್ರ ಜೀವನದ ಪಯಣವನ್ನು ಗೋಕುಲ, ವೃಂದಾವನದ ಬೀದಿಗಳಿಂದ ಹಿಡಿದು ಮಥುರೆಯವರೆಗೆ ದ್ವಾರಕೆಯ ರಾಜಾಧಿರಾಜನಾಗಿ ಆಳ್ವಿಕೆಯನ್ನು ನಡೆಸಿದ್ದನ್ನು ಈ ನಾಟಕವು ಪ್ರದರ್ಶನ ಮಾಡಲಿದೆ. ವಿಶ್ವದಾದ್ಯಂತ ಈಗಾಗಲೇ ಸುಮಾರು 75ಕ್ಕೂ ಹೆಚ್ಚು ಯಶಸ್ವಿ ಪ್ರದರ್ಶನಗಳನ್ನು ಈ ನಾಟಕ ಕಂಡಿದೆ. ಈಗ ದಕ್ಷಿಣ ಭಾರತದ ಪ್ರೇಕ್ಷಕರ ಮುಂದೆ ಈ ನಾಟಕವನ್ನು ಪ್ರದರ್ಶನ ಮಾಡಲಾಗುತ್ತಿದೆ.

ಬೆಂಗಳೂರಿನಲ್ಲಿ ಮಾರ್ಚ್ 19 ರಿಂದ 'ರಾಜಾಧಿರಾಜ ಯಾತ್ರೆ' ನಾಟಕ ಪ್ರೆಸ್ಟೀಜ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್‌ನಲ್ಲಿ ನಡೆಯುತ್ತಿದೆ. ಈ ಅದ್ಭುತ ಮ್ಯೂಸಿಕಲ್ ನಾಟಕವನ್ನು ನೋಡುವುದಕ್ಕೆ ಜನ ಸಾಗರವೇ ಹರಿದುಬರುತ್ತಿದೆ. ಮಾರ್ಚ್ 19 ರಿಂದ ಮಾರ್ಚ 22ರವರೆಗೂ ಸತತವಾಗಿ ನಡೆದ ಎಲ್ಲಾ ಶೋಗಳು ಹೌಸ್‌ಫುಲ್ ಪ್ರದರ್ಶನ ಕಂಡಿವೆ.
ಇಂದು (ಮಾರ್ಚ್ 22) ಬೆಂಗಳೂರಿನಲ್ಲಿ 'ರಾಜಾಧಿರಾಜ್ ಯಾತ್ರಾ' ಈ ಭವ್ಯ ಪ್ರದರ್ಶನದ ಕೊನೆಯ ದಿನ. ಅಂತಿಮವಾಗಿ ಎರಡು ಶೋಗಳನ್ನು ನಡೆಸಲಾಗುತ್ತಿದೆ. ಟಿಕೆಟ್‌ಗಳು ಈಗಾಗಲೇ ಸೋಲ್ಡ್ ಔಟ್ ಆಗಿವೆ. ಕೃಷ್ಣನ ಲೀಲೆಗಳನ್ನು ಕಣ್ಣಮುಂದೆ ತರುತ್ತಿರುವ ಈ ಆರ್ಟ್‌ಗೆ ಸಿಲಿಕಾನ್ ಸಿಟಿ ಮಾರುಹೋಗಿದೆ. ಈ ಕೃಷ್ಣನ ಜೀವನ ಯಾನದಲ್ಲಿ ವ್ರಜದ ಬಾಲಕೃಷ್ಣನಿಂದ ಹಿಡಿದು ದ್ವಾರಕಾಧೀಶನವರೆಗಿನ ಶ್ರೀಕೃಷ್ಣನ ದೈವಿಕ ಪಯಣವನ್ನು ಈ ನಾಟಕದಲ್ಲಿ ಮನೋಜ್ಞವಾಗಿ ಚಿತ್ರಿಸಲಾಗಿದೆ.
ಪದ್ಮಶ್ರೀ ಪುರಸ್ಕೃತ ಪ್ರಸೂನ್ ಜೋಶಿ ಅವರ ಬರಹ, ಶ್ರುತಿ ಶರ್ಮಾ ಅವರ ನಿರ್ದೇಶನದ ಜೊತೆಗೆ ಬಾಲಿವುಡ್‌ನ ಸಂಗೀತ ನಿರ್ದೇಶಕರಾದ ಸಚಿನ್-ಜಿಗರ್ ಅವರ ಸಂಗೀತ ಈ ಪ್ರದರ್ಶನದಲ್ಲಿ ನೋಡಬಹುದಾಗಿದೆ. ನೀತಾ ಲುಲ್ಲಾ ಅವರ ವಸ್ತ್ರಾಲಂಕಾರ ಹಾಗೂ ಭವ್ಯವಾದ ಸೆಟ್, ಲೈಟಿಂಗ್‌ಗಳು ಪ್ರೇಕ್ಷಕರನ್ನು ದ್ವಾಪರ ಯುಗಕ್ಕೆ ಕರೆದುಕೊಂಡು ಹೋಗುತ್ತವೆ.

'ರಾಜಾಧಿರಾಜ್ ಯಾತ್ರಾ: ಕೃಷ್ಣ ಲೀಲಾ ಆಪ್ಕೆ ದ್ವಾರ್' ಈ ಭವ್ಯ ಭಕ್ತಿ ಪ್ರಧಾನ ನಾಟಕದಲ್ಲಿ 20ಕ್ಕೂ ಹೆಚ್ಚು ಮೂಲ ಹಾಡುಗಳಿವೆ. ಹಾಗೇ ಮೈನವಿರೇಳಿಸುವ ನೃತ್ಯ ಸಂಯೋಜನೆ ಈ ಶೋನ ಪ್ರಮುಖ ಹೈಲೈಟ್‌ಗಳಲ್ಲಿ ಒಂದು. ಲಾಫಿಂಗ್ ವಾಟರ್ ಪ್ರೊಡಕ್ಷನ್ಸ್, ಹೊಂಬಾಳೆ ಎಂಟರ್‌ಟೈನ್‌ಮೆಂಟ್ಸ್ ಮತ್ತು ಕಲಾನೇಷನ್ ಜಂಟಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿವೆ. ಈ ಶೋಗೆ ಬೆಂಗಳೂರಿನಲ್ಲಿ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ.
ಈಗ 'ರಾಜಾಧಿರಾಜ ಯಾತ್ರೆ' ಬೆಂಗಳೂರಿನಲ್ಲಿ ಯಶಸ್ವಿ ಪಯಣವನ್ನು ಮುಗಿಸಿ ಚೆನ್ನೈನತ್ತ ಸಾಗುತ್ತಿದೆ. ಮಾರ್ಚ್ 27 ರಿಂದ 29 ರವರೆಗೆ ಚೆನ್ನೈ ಪ್ರೇಕ್ಷಕರನ್ನು ರಂಜಿಸುವುದಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. "ಇದು ಕೇವಲ ಒಂದು ನಾಟಕವಾಗಿ ಉಳಿಯದೆ, ಭಕ್ತಿ ಮತ್ತು ಕಲೆಯ ಸಂಗಮವಾಗಿರುವ ಈ 'ರಾಜಾಧಿರಾಜ ಯಾತ್ರೆ' ಭಾರತೀಯ ರಂಗಭೂಮಿ ಇತಿಹಾಸದಲ್ಲಿ ಹೊಸ ದಾಖಲೆ ಬರೆಯುತ್ತಿದೆ" ಎಂದು ಆಯೋಜಕರು ಹೇಳಿಕೊಂಡಿದ್ದಾರೆ.


Click it and Unblock the Notifications











