ಯೂಟ್ಯೂಬ್‌ಗೂ ಬಂತು 'ಹೊಂದಿಸಿ ಬರೆಯಿರಿ'; ಸಿನಿಮಾ ನೋಡಿ ಇಷ್ಟ ಆದ್ರೆ ಹಣ ನೀಡಿ
ಸ್ಯಾಂಡಲ್‌ವುಡ್‌ನಲ್ಲಿ ಈ ಹಿಂದೆ ಹಲವು ಒಳ್ಳೊಳ್ಳೆ ಸಿನಿಮಾಗಳು ಬಂದು ಹೋಗಿವೆ. ಪ್ಯಾನ್ ಇಂಡಿಯಾ ಸಿನಿಮಾ ಮೋಡಿ ಮಾಡುತ್ತಿರುವ ಈ ಸಂದರ್ಭದಲ್ಲಿ ಅದೆಷ್ಟೇ ಒಳ್ಳೆಯ ಕಂಟೆಂಟ್ ಇಟ್ಕೊಂಡು ಸ್ಮಾಲ್ ಬಜೆಟ್ ಸಿನಿಮಾಗಳು ರಿಲೀಸ್ ಆಗಿದ್ದರೂ, ಅವುಗಳನ್ನು ಜನರು ಥಿಯೇಟರ್‌ನಲ್ಲಿ ನೋಡಲಿಲ್ಲ.
ಅದೇ ಸಿನಿಮಾ ಓಟಿಟಿಯಲ್ಲಿ ತೆರೆಕಂಡಾಗ ಜನರು ಮೆಚ್ಚುಗೆ ಮಾತುಗಳನ್ನು ಆಡಿದ್ದರು. ಅಂತಹ ಕನ್ನಡ ಸಿನಿಮಾಗಳಲ್ಲಿ 'ಹೊಂದಿಸಿ ಬರೆಯಿರಿ' ಕೂಡ ಒಂದು. ಕನ್ನಡ ಉದಯೋನ್ಮುಖ ನಟರೆಲ್ಲ ಈ ಸಿನಿಮಾದಲ್ಲಿ ನಟಿಸಿದ್ದರು. ರಾಮೇನಹಳ್ಳಿ ಜಗನ್ನಾಥ್ 'ಹೊಂದಿಸಿ ಬರೆಯಿರಿ'ಗೆ ಆಕ್ಷನ್ ಕಟ್ ಹೇಳಿದ್ದರು. ಈ ಸಿನಿಮಾ ನೋಡಿದವರೆಲ್ಲರೂ ಮೆಚ್ಚುಗೆ ಸೂಚಿಸಿದ್ದರು.

ಥಿಯೇಟರ್‌ನಲ್ಲಿ ಈ ಸಿನಿಮಾ ಹೆಚ್ಚು ದಿನ ಓಡಲಿಲ್ಲ. ಹೀಗಾಗಿ ಅಮೆಜಾನ್ ಫ್ರೈಂನಲ್ಲಿ ರಿಲೀಸ್ ಮಾಡಲಾಗಿತ್ತು. ಓಟಿಟಿಯಲ್ಲಿ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಅಲ್ಲಿ ಸಿನಿಮಾ ನೋಡಿದವರು ಮೆಚ್ಚುಗೆ ಸೂಚಿಸಿದ್ದರು. ಇದೀಗ ಈ ಸಿನಿಮಾ ಯೂಟ್ಯೂಬ್‌ನಲ್ಲೂ ರಿಲೀಸ್ ಮಾಡಲಾಗಿದೆ. ಈ ಸಿನಿಮಾವನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ.
ರಾಮೇನಹಳ್ಳಿ ಜಗನ್ನಾಥ ನಿರ್ದೇಶನದ 'ಹೊಂದಿಸಿ ಬರೆಯಿರಿ' ಸಿನಿಮಾ ಅಮೆಜಾನ್ ಪ್ರೈಂನಲ್ಲಿ ಇನ್ನೂ ಸ್ಟ್ರೀಮಿಂಗ್ ಆಗುತ್ತಿದೆ. ಹೀಗಿದ್ದರೂ, ಇದು ಭಾರತ, ಯುಎಸ್‌ಎ, ಯುಕೆ ಹೊರತಾಗಿ ಬೇರೆ ದೇಶಗಳಲ್ಲಿ ಸ್ಟ್ರೀಮಿಂಗ್ ಆಗುತ್ತಿಲ್ಲ. ಹೀಗಾಗಿ ಬೇರೆ ಬೇರೆ ದೇಶದಲ್ಲಿರುವ ಕನ್ನಡಿಗರಿಗೆ ಈ ಸಿನಿಮಾ ತಲುಪಲಿ ಎನ್ನುವ ಕಾರಣಕ್ಕೆ, ಹಾಗೂ ಥಿಯೇಟರ್ ಹಾಗೂ ಓಟಿಟಿ ಎರಡರಲ್ಲೂ ನೋಡಿರದ ಪ್ರೇಕ್ಷಕರಿಗೆ ಈ ಸಿನಿಮಾ ತಲುಪಲಿ ಎಂಬ ಉದ್ದೇಶದಿಂದ ಚಿತ್ರತಂಡ ಈ ನಿರ್ಧಾರಕ್ಕೆ ಬಂದಿದೆ.
'ಹೊಂದಿಸಿ ಬರೆಯಿರಿ' ಸಿನಿಮಾಗೆ ಹಾಕಿದ್ದ ಹಣ ವಾಪಸ್ ಬಂದಿಲ್ಲ. ಆದರೂ ಚಿತ್ರತಂಡ ಇಂತಹ ಗಟ್ಟಿ ನಿರ್ಧಾರಕ್ಕೆ ಬಂದಿದೆ. ಹಾಗಂತ ಯೂಟ್ಯೂಬ್‌ನಲ್ಲಿ ಹಣ ಕೊಟ್ಟು ಸಿನಿಮಾ ಏನು ನೋಡಬೇಕಿಲ್ಲ. ಉಚಿತವಾಗಿ ಯೂಟ್ಯೂಬ್‌ನಲ್ಲಿ ಸಿನಿಮಾ ನೋಡಿ, ಇಷ್ಟವಾದರೆ ಮಾತ್ರ ತೋಚಿದಷ್ಟು ಹಣ ಕೊಡಲಿ ಎಂಬ ನಿರ್ಧಾರಕ್ಕೆ ಚಿತ್ರತಂಡ ಬಂದಿದೆ. ಹೀಗಾಗಿ ಸಂಡೇ ಸಿನಿಮಾಸ್‌ನ ಕ್ಯೂರ್ ಕೋಡ್, ಯುಪಿಐ ಐಡಿ ಹಾಗೂ ಬ್ಯಾಂಕ್ ಡಿಟೈಲ್ಸ್ ಅನ್ನು ನೀಡಿದೆ ಚಿತ್ರತಂಡ.

ನಮ್ಮ 'ಹೊಂದಿಸಿ ಬರೆಯಿರಿ' ಸಿನಿಮಾದ ಯೂಟ್ಯೂಬ್ ಲಿಂಕ್ ಅನ್ನು ಸೋಶಿಯಲ್ ಮೀಡಿಯಾ ಹಾಗೂ ವಾಟ್ಸಾಪ್‌ನಲ್ಲಿ ಶೇರ್ ಮಾಡುವಂತೆ ಚಿತ್ರತಂಡ ಕೇಳಿಕೊಂಡಿದೆ. 'ಹೊಂದಿಸಿ ಬರೆಯಿರಿ' ಸಿನಿಮಾ ಬಳಿಕ ನಮ್ಮ ಮುಂದಿನ ಚಿತ್ರದ ವಿವರಣೆಯನ್ನು ಆದಷ್ಟು ಬೇಗ ಹಂಚಿಕೊಳ್ಳುತ್ತೇವೆ ಎಂದು ರಾಮೇನಹಳ್ಳಿ ಜಗನ್ನಥ್ ಹೇಳಿಕೊಂಡಿದ್ದಾರೆ.
ರಾಮೇನಹಳ್ಳಿ ಜಗನ್ನಾಥ ನಿರ್ದೇಶನದ ಜೊತೆಗೆ ತಮ್ಮ ಸ್ನೇಹಿತರ ಜೊತೆಗೂಡಿ ಸಂಡೇ ಸಿನಿಮಸ್ ಬ್ಯಾನರ್ ನಡಿ 'ಹೊಂದಿಸಿ ಬರೆಯಿರಿ' ಸಿನಿಮಾ ನಿರ್ಮಾಣ ಮಾಡಿದ್ದರು. ಇದರಲ್ಲಿ ಪ್ರವೀಣ್ ತೇಜ್, ನವೀನ್ ಶಂಕರ್, ಶ್ರೀ ಮಹದೇವ್, ಅನಿರುದ್ದ್ ಆಚಾರ್ಯ, ಭಾವನಾ ರಾವ್, ಐಶಾನಿ ಶೆಟ್ಟಿ, ಸಂಯುಕ್ತ ಹೊರ್ನಾಡ್, ಅರ್ಚನಾ ಜೋಯಿಸ್ ಹಲವರು ನಟಿಸಿದ್ದಾರೆ.


Click it and Unblock the Notifications











