ಹಂಸಲೇಖ-ಬರಗೂರು ರಾಮಚಂದ್ರಪ್ಪ ಸೇರಿ ಬರೆದರು 'ಹೊಸ ಅಧ್ಯಾಯ'
ಖ್ಯಾತ ನಿರ್ದೇಶಕ, ಸಾಹಿತಿ ಬರಗೂರು ರಾಮಚಂದ್ರಪ್ಪ ಹಾಗೂ ಸಂಗೀತ ನಿರ್ದೇಶಕ ಹಂಸಲೇಖ ಸಹಯೋಗದಲ್ಲಿ ಕೊರೊನಾ ವೈರಸ್ ವಿರುದ್ಧ ಹೋರಾಟದ ಸ್ಫೂರ್ತಿದಾಯಕ ವಿಡಿಯೋ ಆಲ್ಬಮ್ 'ಹೊಸ ಅಧ್ಯಾಯ' ಹೊರಬಂದಿದೆ.
ಕೊರೊನಾ ವೈರಸ್ ಪಿಡುಗು ಜನಜೀವನದ ಮೇಲೆ ನಡೆಸಿರುವ ದಾಳಿ, ಅದರ ವಿರುದ್ಧದ ಹೋರಾಟ ಹಾಗೂ ಈ ಹೋರಾಟದಲ್ಲಿ ಗೆಲುವು ಕಂಡುಕೊಳ್ಳುತ್ತೇವೆ ಎಂದು ಭರವಸೆ ತುಂಬುವ ಸಾಲುಗಳನ್ನು ಬರಗೂರು ರಾಮಚಂದ್ರಪ್ಪ ರಚಿಸಿದ್ದಾರೆ. ಇದಕ್ಕೆ ಹಂಸಲೇಖ ಹಿನ್ನೆಲೆ ಸಂಗೀತ ನೀಡಿರುವುದಲ್ಲದೆ, ಆ ಸಾಲುಗಳಿಗೆ ಧ್ವನಿ ಕೊಟ್ಟಿದ್ದಾರೆ.
'ದೇಶವಿದೇಶದ ಸಂಚಾರಿ, ಕಣ್ಣಿಗೆ ಕಾಣದ ಸಂಹಾರಿ
ಅಂಟಿದ ನಂಟನು ತಂದವನು
ಜೀವ ಜೀವನ ಕೊಂದವನು

ಕೊರೊನಾ ಕೊರೊನಾ ನಿಶ್ಚಿತ ನಿನ್ನ ಪಲಾಯನ' ಎಂದು ಆರಂಭವಾಗುವ ಸಾಲುಗಳು ಕೊರೊನಾದ ದಾಳಿಯ ಪರಿಣಾಮವನ್ನು ವಿವರಿಸುವುದರ ಜತೆಗೆ ಅದನ್ನು ಹಿಮ್ಮೆಟ್ಟಿಸುತ್ತೇವೆ ಎಂಬ ಭರವಸೆಯನ್ನೂ ಮೂಡಿಸುತ್ತವೆ.
ಲಾಕ್ ಡೌನ್ ಕಾರಣದಿಂದ ಸ್ತಬ್ಧವಾಗಿರುವ ನಗರ, ಸಂಕಷ್ಟದಲ್ಲಿರುವ ಜನ ಸಾಮಾನ್ಯರು, ದುಡಿಮೆ ಇಲ್ಲದೆ ಕಂಗಾಲಾಗಿರುವ ಕಾರ್ಮಿಕರು, ನಿರೀಕ್ಷೆಗಳನ್ನು ತುಂಬಿಕೊಂಡು ಕಾದಿರುವ ಜನರ ಚಿತ್ರಣಗಳನ್ನು ಸಾಹಿತ್ಯಕ್ಕೆ ಅನುಗುಣವಾಗಿ ಸೆರೆಹಿಡಿದು ಚಿತ್ರಿಸಿದ್ದಾರೆ ನಿರ್ದೇಶಕ ವಿಶ್ವಾಸ್ ಮಾದಿಸೆಟ್ಟಿ. ಸಂಕಲನದ ಕಾರ್ಯವನ್ನೂ ಅವರೇ ನಿರ್ವಹಿಸಿದ್ದಾರೆ. ಸತೀಶ್ ರಾಜೇಂದ್ರನ್ ಅವರ ಛಾಯಾಗ್ರಹಣ, ಕೊರೊನಾ ವೈರಸ್ ಹಾವಳಿ ಬೀರಿರುವ ಪರಿಣಾಮವನ್ನು ಮನಮುಟ್ಟುವಂತೆ ಚಿತ್ರಿಸಿದೆ.
'ಹೊಸ ಅಧ್ಯಾಯ' ವಿಡಿಯೋ ಆಲ್ಬಮ್ ಕಲಾಕ್ಷಯ ಸ್ಟುಡಿಯೋಸ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದ್ದು, ಕೊರೊನಾ ವೈರಸ್ ಕಾರಣದಿಂದ ದಿಕ್ಕೆಟ್ಟಿರುವ ಜನರಲ್ಲಿ ಆತ್ಮವಿಶ್ವಾಸ ಮತ್ತು ಸ್ಫೂರ್ತಿ ತುಂಬುವಂತಿದೆ.


Click it and Unblock the Notifications











