ಅಪ್ಪು ಸ್ಮರಿಸಿದ 'ಹಾಸ್ಟೆಲ್ ಹುಡುಗರು'.. ಥಿಯೇಟರ್‌ನಲ್ಲಿ ಕರ್ನಾಟಕ ರತ್ನನಿಗೆ ಸ್ಪೆಷಲ್ ಸೀಟು!
ಇನ್ನೇನು ಥಿಯೇಟರ್‌ಗೆ ಬರಬೇಕು ಅನ್ನುವಾಗಲೇ ಹಾಸ್ಟೆಲ್ ಹುಡುಗರು ಕೊನೆಯ ಕ್ಷಣದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದರು. ರಮ್ಯಾ ಕಳುಹಿಸಿದ್ದ ಲೀಗಲ್ ನೋಟಿಸ್‌ಗೆ ಕಂಗಾಲಾಗಿದ್ದರು. ಕೊನೆಗೂ ಆ ಎಲ್ಲಾ ಕಷ್ಟಗಳನ್ನು ಎದುರಿಸಿ ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟೇ ಬಿಟ್ಟಿದ್ದಾರೆ.
'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಅಂತಹ ಹೊಸಬರ ಸಿನಿಮಾವೊಂದು ಈ ಮಟ್ಟಿಗೆ ಪ್ರಚಾರ ಗಿಟ್ಟಿಸಿಕೊಂಡಿದ್ದು ತೀರಾ ವಿರಳ. ಥಿಯೇಟರ್‌ಗೆ ಬಂದ್ಮೇಲೆ ಜನರು ಸಿನಿಮಾ ನೋಡಿ ಮೆಚ್ಚಿದ ಮೇಲೆ ಹಿಟ್ ಆಗುತ್ತಿತ್ತು. ಇನ್ನೊಂದು ಕಡೆ 'ಹಾಸ್ಟೆಲ್ ಹುಡುಗರು' ಸಿನಿಮಾಗೆ ಬಹುತೇಕ ಸಿನಿಮಾರಂಗವೇ ಬೆನ್ನೆಲುಬಾಗಿ ನಿಂತಿದೆ.

ಅದರಲ್ಲೂ ಮೊದಲಿನಿಂದಲೂ ಈ ತಂಡಕ್ಕೆ ಪುನೀತ್ ರಾಜ್‌ಕುಮಾರ್ ಬೆನ್ನೆಲುಬಾಗಿ ನಿಂತಿದ್ದರು. ಹೀಗಾಗಿ ಸಿನಿಮಾ ಬಿಡುಗಡೆಯ ಈ ಸಂದರ್ಭದಲ್ಲಿ ಪುನೀತ್ ರಾಜ್‌ಕುಮಾರ್‌ಗಾಗಿ ವಿಶೇಷ ಸೀಟ್ ಅನ್ನು ಅಪ್ಪುಗಾಗಿ ಮೀಸಲಿರಿಸಲಾಗಿದೆ. ಈ ಮೂಲಕ ಪವರ್‌ಸ್ಟಾರ್‌ಗೆ ಗೌರವ ಸೂಚಿಸಿದೆ ಚಿತ್ರತಂಡ.
ಥಿಯೇಟರ್‌ನಲ್ಲಿ ಅಪ್ಪುಗೆ ಸ್ಪೆಷಲ್ ಸೀಟ್
'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾದ ಮೊದಲ ಪೋಸ್ಟರ್ ರಿಲೀಸ್ ಮಾಡಿದ್ದು ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್. ಅಲ್ಲಿಂದ ಅವರ ಕೊನೆಯ ದಿನದವರೆಗೂ ಪುನೀತ್ ಈ ಹೊಸ ತಂಡದೊಂದಿಗೆ ಇದ್ದರು. ಪ್ರತಿಯೊಂದು ಹಂತದಲ್ಲಿಯೂ ಬೆಂಬಲ ನೀಡುತ್ತಿದ್ದರು. ಇದನ್ನು ಚಿತ್ರತಂಡ ಪ್ರತಿಬಾರಿಯೂ ಹೇಳುತ್ತಲೇ ಬಂದಿದೆ.
ಇಂದು (ಜುಲೈ 21) ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ಬಿಡುಗಡೆಯಾಗಿದ್ದು, ಅಪ್ಪುಗಾಗಿ ಪ್ರಮುಖ ಚಿತ್ರಮಂದಿರದಲ್ಲಿ ಸ್ಪೆಷಲ್ ಸೀಟ್ ಅನ್ನು ಕಾಯ್ದಿರಿಸಿದ್ದಾರೆ. ಈ ಮೂಲಕ ಮೆಚ್ಚಿನ ನಟನಿಗೆ ಗೌರವ ಸೂಚಿಸಿದ್ದಾರೆ.

ವೈರಲ್ ಆಗುತ್ತಿದೆ ಫೋಟೊ
'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ತಂಡ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್‌ಗಾಗಿ ಸೀಟು ಕಾಯ್ದಿರಿಸಿದ ಫೋಟೊ ವೈರಲ್ ಆಗುತ್ತಿದೆ. ನರ್ತಕಿ ಚಿತ್ರಮಂದಿರದಲ್ಲಿ ಒಂದು ಸೀಟ್ ಅನ್ನು ಮೇಲೆ ಅಪ್ಪು ಇಟ್ಟು, ಅದನ್ನು ಅವರಿಗಾಗಿ ಮೀಸಲಿರಿಸಿದ್ದಾರೆ. ಇದೇ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಇತ್ತ ಪುನೀತ್ ರಾಜ್‌ಕುಮಾರ್ ಅಭಿಮಾನಿಗಳು ಕೂಡ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾವನ್ನು ಸ್ವಯಂ ಪ್ರೇರಿತರಾಗಿ ಪ್ರಮೋಟ್ ಮಾಡುತ್ತಿದ್ದಾರೆ. ರಮ್ಯಾ ಲೀಗಲ್ ನೋಟಿಸ್ ಕಳಿಸಿದಾಗಲೂ 'ಹಾಸ್ಟೆಲ್ ಹುಡುಗರ' ಬೆಂಬಲಕ್ಕೆ ನಿಂತಿದ್ದರು.
ಹಾಸ್ಟೆಲ್ ಹುಡುಗರಿಗಾಗಿ ವಿಶೇಷ ಪೂಜೆ
'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಪೋಸ್ಟರ್ ರಿಲೀಸ್ ಮಾಡಲು ಹೊರಡುವ ಮೊದಲು ಪುನೀತ್ ರಾಜ್‌ಕುಮಾರ್ ಪೂಜೆ ಸಲ್ಲಿಸಿದ್ದರು. ಅಪ್ಪು ಮನೆಯ ಸಮೀಪ ಸದಾಶಿವನಗರದಲ್ಲಿ ಗಣೇಶ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದರು. ಆ ವಿಷಯವನ್ನು ದೇವಸ್ಥಾನದ ಪೂಜಾರಿಯೇ ಕಮೆಂಟ್ ಮಾಡಿ ತಿಳಿಸಿದ್ದರು.
'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾ ಇಂದು (ಜುಲೈ 21) ರಾಜ್ಯಾದ್ಯಂತ ರಿಲೀಸ್ ಆಗಿದೆ. ಯೂತ್ ಕಾಮಿಡಿಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹೊಸಬರ ಸಿನಿಮಾವೊಂದಕ್ಕೆ ಒಂದೊಳ್ಳೆ ಪ್ರಚಾರ ಸಿಕ್ಕಿದೆ. ಇದು ಬಾಕ್ಸಾಫೀಸ್‌ನಲ್ಲಿ ಹೇಗೆ ಮೋಡಿ ಮಾಡುತ್ತೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.


Click it and Unblock the Notifications











