ಕೌಟುಂಬಿಕ ಕಲಹ.. ನಿರಂತರ ಸೋಲು.. ಫಿನಿಕ್ಸ್‌ನಂತೆ ಎದ್ದು ಬಂದಿದ್ದೇಗೆ ದುನಿಯಾ ವಿಜಯ್
ವಿಜಯ್ ಕುಮಾರ್ ಉರ್ಫ್ ದುನಿಯಾ ವಿಜಯ್ ಸೋತು ಗೆದ್ದಿರುವ ಕನ್ನಡ ಚಿತ್ರರಂಗದ ನಾಯಕ. ಕನ್ನಡ ಚಿತ್ರರಂಗದಲ್ಲಿ ನಾಯಕರು ಅಂದರೆ ಹೀಗೆ ಇರಬೇಕು ಅಂತ ಅನ್ನೋ ಸೂತ್ರವಿತ್ತು. ಬಣ್ಣ-ಬ್ಯಾಕ್‌ಗ್ರೌಂಡ ಇರಬೇಕು. ಸುಂದರವಾಗಿರಬೇಕು, ಡ್ಯಾನ್ಸ್ ಬರಬೇಕು, ಆಕ್ಷನ್ ಮಾಡಬೇಕು, ಹೀಗೆ ನೂರೆಂಟು ಮಾನದಂಡಗಳಿವೆ. ಇವುಗಳಲ್ಲಿ ಒಂದೆರಡು ಕ್ವಾಲಿಟಿ ಬಿಟ್ಟರೆ ವಿಜಯ್ ಬಳಿ ಬೇರೆ ಏನೂ ಇರಲಿಲ್ಲ. ಇದ್ದ ಪ್ರತಿಭೆಯಿಂದಲೇ ಹೊಸ ದುನಿಯಾ ಕಟ್ಟಿಕೊಂಡಿದ್ದು ಇದೇ ವಿಜಯ್.
ಸುಕ್ಕಾ ಸೂರಿ ನಿರ್ದೇಶಿಸಿದ ಸಿನಿಮಾ ಇವರ ದುನಿಯಾವನ್ನು ಬದಲಾಯಿಸಿಬಿಟ್ಟಿತ್ತು. ವಿಜಯ್ ಆಗಿದ್ದವರು ರಾತ್ರೋ ರಾತ್ರಿ ದುನಿಯಾ ವಿಜಯ್ ಆಗಿ ಹೊರ ಹೊಮ್ಮಿದ್ದರು. ಆಮೇಲೆ 'ಜಂಗ್ಲಿ' ಆದರು. 'ಬ್ಲಾಕ್ ಕೋಬ್ರಾ' ಅಂತ ಕರೆಸಿಕೊಂಡರು. 'ಕರಿ ಚಿರತೆ' ಅಂತಾದರು. 'ಸ್ಲಮ್ ಬಾಲ' ಅಂತ ಯಾರದ್ದೋ ಕಥೆ ಹೇಳುವುದಕ್ಕೆ ಹೋದರು. ಜನಪ್ರಿಯತೆಯನ್ನು ಹೊತ್ತು ಸಾಗುವ ವೇಳೆನೇ ಎಲ್ಲೋ ಎಡವಿದರು. ಮತ್ತೆ ಎದ್ದೇಳುವುದಕ್ಕೆ ಒದ್ದಾಡಿದರು.

ಈ ಮಧ್ಯೆ ಕೌಟುಂಬಿಕ ಕಲಹವನ್ನು ಬೇರೆ ಎದುರಿಸಬೇಕಾಯ್ತು. ಮೊದಲ ಪತ್ನಿ ಹಾಗೂ ದುನಿಯಾ ವಿಜಯ್ ನಡುವಿನ ಕಿತ್ತಾಟ ಬೀದಿ ರಂಪಾಟ ಆಯ್ತು. ಇನ್ನೂ ಏನೇನೋ ಬೇಡದ ವಿಷಯಗಳು ವಿಜಯ್ ದುನಿಯಾವನ್ನು ನಿಧಾನವಾಗಿ ಹಾಳು ಮಾಡುತ್ತಿತ್ತು. ಇತ್ತ ಸಿನಿಮಾಗಳು ಸೋಲುತ್ತಿತ್ತು. ದುನಿಯಾ ವಿಜಯ್ ಕಥೆ ಮುಗೀತು ಅಂತ ಅದೆಷ್ಟೋ ಮಂದಿ ಅಂದರು. ಆಗಲೇ ವಿಜಯ್ ಮತ್ತೆ ಫಿನಿಕ್ಸ್‌ನಂತೆ ಎದ್ದು ಬಂದರು.
ಕೈ ಬಿಟ್ಟು ಹೋಗಿತ್ತು. ಕೌಟುಂಬಿಕ ಕಲಹ ಅವರ ವೃತ್ತಿ ಬದುಕಿನ ಮೇಲೂ ಪರಿಣಾಮ ಬೀರುವುದಕ್ಕೆ ಶುರುವಾಗಿತ್ತು. ಈ ಮಧ್ಯೆ ಎರಡನೇ ಮದುವೆ ಬಗ್ಗೆ ಟೀಕೆಗಳನ್ನು ಎದುರಿಸಬೇಕಾಯ್ತು. ಇಷ್ಟೆಲ್ಲ ಇಟ್ಟುಕೊಂಡು ಸಿನಿಮಾ ಮಾಡಿದರೆ ಓಡುತ್ತಾ? ಅಂತ ಪ್ರಶ್ನೆ ಮಾಡುವವರೇ ಹೆಚ್ಚಾಗಿದ್ದರು. ಕೆಲವರಂತೂ ದುನಿಯಾ ವಿಜಯ್ ಕಥೆ ಮುಗೀತು ಅಂತ ನೇರವಾಗಿಯೇ ಕಾಮೆಂಟ್ ಪಾಸ್ ಮಾಡಿದ್ದರು.
ಸಾಲದ್ದಕ್ಕೆ 'ಮಾಸ್ತಿಗುಡಿ' ಅಂತಹ ಸಿನಿಮಾದಲ್ಲಿ ಇಬ್ಬರು ಗೆಳೆಯರು ದುರಂತ ಸಾವನ್ನಪ್ಪಿದ್ದು ವಿಜಯ್ ಕರಿಯರ್‌ಗೆ ದೊಡ್ಡ ಪೆಟ್ಟು ಬಿದ್ದಿತ್ತು. 2014ರಲ್ಲಿ ನಟಿಸಿದ 'ಶಿವಾಜಿನಗರ' ಸಿನಿಮಾದಿಂದ 2018ರಲ್ಲಿ ರಿಲೀಸ್ ಆಗಿದ್ದ 'ಜಾನಿ ಜಾನಿ ಎಸ್ ಪಪ್ಪ' ಸಿನಿಮಾವರೆಗೂ ಒಂದೇ ಒಂದೂ ಸಿನಿಮಾ ಕೂಡ ಬಾಕ್ಸಾಫೀಸ್‌ನಲ್ಲಿ ಜೋರಾಗಿ ಸದ್ದು ಮಾಡಲೇ ಇಲ್ಲ. ಇಲ್ಲಿಂದ ದುನಿಯಾ ವಿಜಯ್ ವೃತ್ತಿ ಬದುಕಿನ ಬಗ್ಗೆ ಪ್ರಶ್ನೆಗಳು ಹುಟ್ಟಿಕೊಂಡಿದ್ದವು. ಇಲ್ಲಿಂದ ಮೂರು ವರ್ಷಗಳ ಬಳಿಕ ಮತ್ತೆ ತನ್ನ ವೃತ್ತಿ ಬದುಕನ್ನೇ ತಾನೇ ಲಯಕ್ಕೆ ತಂದುಕೊಂಡರು. ಒಂದು ಸಿನಿಮಾ ಮತ್ತೆ ಅವರು ಕಳೆದು ಕೊಂಡಿದ್ದ ಯಶಸ್ಸನ್ನು ಮರಳಿ ಕೊಟ್ಟಿತ್ತು. ಅದುವೇ 'ಸಲಗ'.

2021ರಲ್ಲಿ ದುನಿಯಾ ವಿಜಯ್ 'ಸಲಗ' ಸಿನಿಮಾಗೆ ಕೈ ಹಾಕಿದ್ದರು. ಈ ಬಾರಿ ನಟನೆ ಅಷ್ಟೇ ನಿರ್ದೇಶನಕ್ಕೂ ಇಳಿದಿದ್ದರು. ಆಗಲೂ ದುನಿಯಾ ವಿಜಯ್ ಮೇಲೆ ಚಿತ್ರರಂಗದಲ್ಲಿ ನಂಬಿಕೆ ಇರಲಿಲ್ಲ. ಕೋವಿಡ್‌ನಿಂದ ಆಗಷ್ಟೇ ಚಿತ್ರರಂಗ ಚೇತರಿಸಿಕೊಳ್ಳುತ್ತಿದ್ದ ಕಾಲ. ಚಿತ್ರಮಂದಿರಕ್ಕೆ ಜನರೇ ಬರುತ್ತಿರಲಿಲ್ಲ. ಅಂತಹ ಸಮಯದಲ್ಲಿ ರಿಸ್ಕ್ ತೆಗೆದುಕೊಂಡು 'ಸಲಗ' ಸಿನಿಮಾ ಮಾಡಿದ್ದರು. ಥಿಯೇಟರ್‌ಗೆ ಜನ ಬಂದರು. ಸಿನಿಮಾ ಗೆಲ್ತು. ಅಭಿಮಾನಿಗಳ ಕೈಯಲ್ಲಿ 'ಸ್ಯಾಂಡಲ್‌ವುಡ್‌ನ ಸಲಗ' ಎನಿಸಿಕೊಂಡರು. ಇಲ್ಲಿಂದ ದುನಿಯಾ ವಿಜಯ್ ಸೆಕೆಂಡ್ ಇನ್ನಿಂಗ್ಸ್ ಶುರುವಾಗಿತ್ತು.
'ಸಲಗ' ಬಳಿಕ ಮತ್ತೇನು ಅನ್ನುವಾಗಲೇ 'ಭೀಮ'ಗೆ ಕೈ ಹಾಕಿದ್ದರು. ಮತ್ತೆ ತಾವೇ ನಿರ್ದೇಶನ ಮಾಡುವುದಕ್ಕೆ ಮುಂದಾದರು. ಕಳೆದ ವರ್ಷ ಸ್ಯಾಂಡಲ್‌ವುಡ್ ಸೋತು ಸುಣ್ಣವಾಗಿದ್ದಾಗ ಮೊದಲ ಹಿಟ್ ಅಂತ ಕೊಟ್ಟಿದ್ದು ಇವರ ಸಿನಿಮಾ 'ಭೀಮ'. ದುನಿಯಾ ವಿಜಯ್ ನಿರ್ದೇಶಿಸಿದ ಎರಡೂ ಸಿನಿಮಾಗಳೂ ಕನ್ನಡ ಚಿತ್ರರಂಗದಲ್ಲಿ ಹೊಸ ಇತಿಹಾಸವನ್ನೇ ಬರೆದಿವೆ. ಇಂದು (ಜನವರಿ 20) 50ನೇ ಹುಟ್ಟುಹಬ್ಬಕ್ಕೆ ಆಚರಿಸಿಕೊಂಡಿರುವ ವಿಜಯ್ 'ಲ್ಯಾಂಡ್ ಲಾರ್ಡ್' ಆಗಿ ಅಖಾಡಕ್ಕೆ ಇಳಿದಿದ್ದಾರೆ. ಗೆಟಪ್ ಬದಲಾಗಿದೆ. ಈ ಬಾರಿ ತಲೆ ಕೂದಲು, ಗಡ್ಡ ಬೆಳ್ಳಗಾಗಿದೆ. ಜೊತೆ ಮೊದಲು ಮಗಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ದುನಿಯಾ ಮತ್ತೆ ಹೇಗೆ ಬದಲಾಗುತ್ತೋ ನೋಡಬೇಕು.


Click it and Unblock the Notifications











