ಪ್ರಯಾಣಿಕರ ಗಮನಕ್ಕೆ: ನಮ್ಮ ಮೆಟ್ರೋಗೆ ಅಚ್ಚ ಕನ್ನಡದ ನಿರೂಪಕಿ ಅಪರ್ಣ ಧ್ವನಿ ಆಯ್ಕೆ ಆಗಿದ್ದೇಗೆ?
ಅಪ್ಪಟ ಕನ್ನಡದಲ್ಲಿಯೇ ನಿರೂಪಣೆ ಮಾಡುತ್ತಿದ್ದ ಅಪರ್ಣ ಧ್ವನಿಯನ್ನು ಕೇಳದವರೇ ಇಲ್ಲ. ಅಪರ್ಣ ನಿರೂಪಣೆಗೆ ನಿಂತರೆ, ನಿರರ್ಗಳವಾಗಿ ಗಂಟೆಗಟ್ಟಲೇ ಕನ್ನಡದಲ್ಲಿಯೇ ಮಾತುಡುತ್ತಿದ್ದರು. ಇವರ ನಿರೂಪಣೆಯ ಶೈಲಿಗೆ ಅಪ್ಪಟ ಕನ್ನಡಕ್ಕೆ ಅದೆಷ್ಟೋ ಅಭಿಮಾನಿಗಳು ಇದ್ದಾರೆ. ವಿಶ್ವದ ಮೂಲೆ ಮೂಲೆಯಲ್ಲಿ ನೆಲೆಸಿರುವ ಕನ್ನಡಿಗರ ಫೇವರಿಟ್ ನಿರೂಪಕಿ ಈಕೆ.
ಅಪರ್ಣ ಅವರ ಧ್ವನಿ ಕೇವಲ ನಿರೂಪಣೆಗಷ್ಟೇ ಮೀಸಲಾಗಿರಲಿಲ್ಲ. ಅರ್ಪಣ ಧ್ವನಿಯನ್ನು ಮೆಟ್ರೋದಲ್ಲಿಯೂ ಕೇಳಬಹುದಿತ್ತು. ಮೆಟ್ರೋ ಆರಂಭ ಆದಾಗ, ಪ್ರಯಾಣಿಕರಿಗೆ ಮಾಹಿತಿಯನ್ನು ನೀಡುವುದಕ್ಕೆ ಮೊದಲು ಇವರ ಧ್ವನಿಯನ್ನೇ ಆಯ್ಕೆ ಮಾಡಲಾಗಿತ್ತು. ನಿಜಕ್ಕೂ ಮೆಟ್ರೋಗೆ ಕಳೆ ಅಂತ ಬಂದಿದ್ದೇ ಇವರ ಧ್ವನಿಯಿಂದ.

ಅಷ್ಟಕ್ಕೂ ನಮ್ಮ ಮೆಟ್ರೋಗೆ ನಿರೂಪಕಿ, ನಟಿ ಅಪರ್ಣ ಅವರ ಧ್ವನಿ ಆಯ್ಕೆಯಾಗಿದ್ದೇ ಒಂದು ರೋಚಕ ಸಂಗತಿ. ಅವರ ಧ್ವನಿಯನ್ನು ಮೆಟ್ರೋದಲ್ಲಿ ಮೊಳಗುವುದಕ್ಕೆ ಆರಂಭ ಆದ ಮೇಲೆ ಕನ್ನಡಿಗರು ಖುಷಿಯನ್ನು ವ್ಯಕ್ತಪಡಿಸಿದ್ದರು. ಆಗ ಸ್ವತ: ಅಪರ್ಣ ಅವರು ಮೆಟ್ರೋದಲ್ಲಿ ತಮ್ಮದೇ ಧ್ವನಿಯನ್ನು ಕೇಳುವುದಕ್ಕೆ ಹೋಗಿದ್ದರು. ಆ ವಿಷಯವನ್ನು ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.
"ನನಗೂ ಮೆಟ್ರೋಗೂ ಅದ್ಯಾವ ರೀತಿಯ ಸಂಬಂಧ ಅಂದರೆ, ಹಿಂತಿರುಗಿ ನೋಡಿದಾಗ ನನಗೆ ಆಶ್ಚರ್ಯ ಆಗುತ್ತೆ. ಮತ್ತೆ ತುಂಬಾ ಹೆಮ್ಮೆ ಎನಿಸುತ್ತೆ. ಒಂದು ದಿನ ನನಗೆ ಕರೆ ಬಂತು. ಒಂದು ಹತ್ತು 12 ವರ್ಷದ ಹಿಂದೆನೇ ಆಗಿರಬಹುದು. ನಿಮ್ಮದೊಂದು ವಾಯ್ಸ್ ಬೇಕು. ನಮ್ಮ ಮೆಟ್ರೋಗೆ ಅಂತ ಹೇಳಿದರು. ಆ ಮೇಲೆ ಏನಿದು ಅಂತ ಕೇಳಿದಾಗ, ನಿಮ್ಮದೊಂದು ವಾಯ್ಸ್ ಸ್ಯಾಂಪಲ್ ಕೊಡಿ" ಎಂದು ಹೇಳಿದ್ದರು.
ಆದರೆ, ಅಪರ್ಣ ಅವರಿಗೆ ಹೇಗೆ ವಾಯ್ಸ್ ಕಳಿಸಬೇಕು ಅಂತ ಗೊತ್ತಿರಲಿಲ್ಲ. ನ್ಯೂಸ್ ಪೇಪರ್ ಅನ್ನು ಇಟ್ಟುಕೊಂಡು ವಾಯ್ಸ್ ರೆಕಾರ್ಡ್ ಮಾಡಿ ಕಳುಹಿಸಿದ್ದರು. ಚೆನ್ನೈನಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. ಆ ವೇಳೆ ಅಪರ್ಣ ಅವರ ಧ್ವನಿಯನ್ನು ಕೇಳಿ ಈ ವಾಯ್ಸ್ ಇರಲಿ ಅಂತ ನಿರ್ಧಾರ ಮಾಡಿದ್ದರು. ಆಗ ನಿಮ್ಮ ವಾಯ್ಸ್ ಸೆಲೆಕ್ಟ್ ಆಗಿದೆ ಸಹಿ ಮಾಡಬೇಕು ಅಂತ ಮೇಲ್ ಕಳುಹಿಸಿದ್ದರು.

"ಚೆನ್ನೈಗೆ ಹೋದೆ. ಅಲ್ಲಿ ಹೋಗಿ ನೋಡಿದರೆ, ದೊಡ್ಡ ಸ್ಕ್ರಿಪ್ಟ್ ಇತ್ತು. ಅಲ್ಲಿ ನಮ್ಮ ಬಡಾವಣೆಗಳ ಹೆಸರೆಲ್ಲ ಇದೆ. ಜಯನಗರ, ಈಗ ಏನೇನು ಬರುತ್ತೆ ಬಾಗಿಲನ್ನು ತೆರೆದು ಅಂತೆಲ್ಲ. ಇದೆಲ್ಲ ಹೆಂಗೆ, ಇದೆಲ್ಲ ಯಾಕೆ? ಅವರನ್ನು ಕೇಳಿದೆ. ನನಗೆ ಐಡಿಯಾ ಇಲ್ಲ. ಇದೆಲ್ಲ ಹೆಂಗೆ ಬರುತ್ತೆ ಅಂತ ಆಗ ಅವರು ವಿವರಣೆ ಕೊಟ್ಟರು" ಎಂದು ಅಪರ್ಣ ಯೂಟ್ಯೂಬ್ ಚಾನೆಲ್‌ಗೆ ಹೇಳಿದ್ದಾರೆ.
ಧ್ವನಿ ಎಲ್ಲ ಕೊಟ್ಟ ಬಳಿಕ ಮೆಟ್ರೋ ಶುರುವಾಗಿರಲಿಲ್ಲ. ಇತ್ತ ಅಪರ್ಣ ಕೂಡ ಸುಮ್ಮನಾಗಿದ್ದರು. ಒಂದಿಷ್ಟು ದಿನಗಳಾದ್ಮೇಲೆ ಬೈಯಪ್ಪನಹಳ್ಳಿಯಿಂದ ಎಂಜಿ ರಸ್ತೆಗೆ ಮೆಟ್ರೋ ಶುರುವಾಗೇ ಬಿಟ್ಟಿತ್ತು. "ಖುಷಿ ಏನಂದ್ರೆ ನನ್ನ ವಾಯ್ಸ್ ಬರುತ್ತೆ ಅಂತ. ಇಷ್ಟಾದರೂ ನಾನು ಮೆಟ್ರೋನಲ್ಲಿ ಹೋಗಿರಲಿಲ್ಲ. ನನಗೂ ನನ್ನ ಧ್ವನಿ ಹೇಗೆ ಕೇಳುತ್ತೆ ಅನ್ನುವ ಕುತೂಹಲವಿತ್ತು. ದೀಪಾವಳಿ ಹಬ್ಬದ ದಿನ ಬನಶಂಕರಿಯಿಂದ ಎಂಜಿ ರಸ್ತೆವರೆಗೂ ಹೋಗಿ, ಬೈಯಪ್ಪನಹಳ್ಳಿವರೆಗೂ ನನ್ನ ಧ್ವನಿ ಹೇಗೆ ಕೇಳುತ್ತೆ ಅಂತಾನೇ ಹೋದೆ." ಎಂದು ಅಪರ್ಣ ಹೇಳಿಕೊಂಡಿದ್ದರು.


Click it and Unblock the Notifications











