ಅಭಿಷೇಕ್ ಅಂಬರೀಶ್-ಅವಿವಾ ಬೀಗರ ಊಟಕ್ಕೆ ಆಗಿದ್ದೆಷ್ಟು ಖರ್ಚು? ಉಂಡವರೆಷ್ಟು? ನಷ್ಟ ಆಗಿದ್ದೆಷ್ಟು?
ಮಂಡ್ಯ ಸಂಸದೆ ಹಾಗೂ ರೆಬೆಲ್ ಸ್ಟಾರ್ ಅಂಬರೀಶ್ ಪತ್ನಿ ಸುಮಲತಾ ತಮ್ಮ ಮಗನ ಬೀಗರ ಔತಣಕೂಟವನ್ನು ಮದ್ದೂರಿನ ಗೆಜ್ಜಲಗೆರೆ ಗ್ರಾಮದಲ್ಲಿ ಆಯೋಜಿಸಿದ್ದು ಗೊತ್ತೇ ಇದೆ. ನಿನ್ನೆ (ಜೂನ್ 16) ಸುಮಾರು 1 ಲಕ್ಷ ಮಂದಿಯವರೆಗೂ ಊಟ ವ್ಯವಸ್ಥೆಯನ್ನು ಮಾಡಿಟ್ಟುಕೊಳ್ಳಲಾಗಿತ್ತು.
ಇತ್ತ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಮಂಡ್ಯದ ಜನತೆ ಹಾಗೂ ಅಭಿಮಾನಿಗಳ ಆಶೀರ್ವಾದವನ್ನು ಪಡೆದುಕೊಳ್ಳುತ್ತಿದ್ದರು. ಸ್ವತ: ಅಭಿಷೇಕ್ ಅಂಬರೀಶ್ ಮಂಡ್ಯದ ಜನರು ಅಪ್ಪನ ಅಭಿಮಾನಿಗಳಿಂದ ಆಶೀರ್ವಾದವನ್ನು ಪಡೆದುಕೊಳ್ಳುತ್ತಿದ್ದರು.

ಅದ್ಧೂರಿಯಾಗಿ ಆಯೋಜಿಸಿದ ಬೀಗರ ಊಟಕ್ಕೆ ಮಂಡ್ಯದ ಜನತೆ ಹಾಗೂ ಅಂಬರೀಶ್ ಅಭಿಮಾನಿಗಳು ಖುಷಿಯಿಂದಲೇ ಭಾಗವಹಿಸಿದ್ದರು. ಆದರೂ, ಮಧ್ಯದಲ್ಲಿ ಕದ್ದಲ ಆಗಿದ್ದು ಗೊತ್ತೇ ಇದೆ. ಇವೆಲ್ಲವನ್ನೂ ಬಿಟ್ಟರೆ ಕಾರ್ಯಕ್ರಮ ಬಹುತೇಕ ಯಶಸ್ವಿಯಾಗಿಯೇ ನಡೆದಿದೆ. ಈಗ ಎದ್ದಿರೋ ಪ್ರಶ್ನೆ ಎಂದರೆ, ಇಷ್ಟು ದೊಡ್ಡ ಕಾರ್ಯಕ್ರಮಕ್ಕೆ ಅಂಬಿ ಕುಟುಂಬ ಖರ್ಚು ಮಾಡಿದ್ದೆಷ್ಟು? ಎಷ್ಟು ಜನರು ಸೇರಿದ್ದರು? ಅನ್ನೋ ಮಾಹಿತಿಗೆ ಮುಂದೆ ಓದಿ.
ಈಡೇರಿತು ಅಂಬಿ-ಸುಮಲತಾ ಕನಸು
ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ಸುಮಲತಾ ಅಂಬರೀಶ್ ಇಬ್ಬರ ಕನಸು ಇದು. ಮಗ ಅಭಿಷೇಕ್ ಅಂಬರೀಶ್ ವಿವಾಹದ ಔತಣಕೂಟವನ್ನು ಮಂಡ್ಯದಲ್ಲೇ ಮಾಡಬೇಕು ಅಂದುಕೊಂಡಿದ್ದರು. ಅದರಂತೆಯೇ ನಿನ್ನೆ (ಜೂನ್ 16) ಬೀಗರ ಔತಣಕೂಟ ಅದ್ದೂರಿಯಾಗಿಯೇ ನಡೆದಿದೆ.

ಬೀಗರ ಊಟಕ್ಕಾಗಿ 10 ಟನ್ ಮಟನ್, 10 ಟನ್ ಚಿಕನ್ ತರಿಸಲಾಗಿತ್ತು. ಮೊದಲೇ ಹೇಳಿದಂತೆ 7 ಟನ್ ಮಾಂಸದಿಂದ 10 ಟನ್‌ಗೆ ಏರಿಕೆ ಮಾಡಲಾಗಿತ್ತು. ಮಂಡ್ಯ ಜನರ ಫೇವರಿಟ್ ರಾಗಿಮುದ್ದೆ, ಮಟನ್ ಹಾಗೂ ಕಬಾಬ್ ಸಾರು, ಬೋಟಿ ಗೊಜ್ಜು ಸೇರಿದಂತೆ ಹಲವು ಖಾದ್ಯಗಳನ್ನು ಏರ್ಪಡಿಸಲಾಗಿತ್ತು. ಸುಮಾರು 1 ಸಾವಿರ ಮಂದಿ ಬೀಗರ ಔತಣಕೂಟದಲ್ಲಿ ಕೆಲಸ ಮಾಡಿದ್ದರು.
ಬೀಗರ ಔತಣಕೂಟಕ್ಕೆ ಖರ್ಚಾಗಿದ್ದೆಷ್ಟು?
ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಬೀಗರ ಔತಣ ಕೂಟಕ್ಕೆ ಅದ್ಧೂರಿಯಾಗಿದೆ. ಈ ದೊಡ್ಡಮಟ್ಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಬರೀಶ್ ಕುಟುಂಬ ದೊಡ್ಡ ಮೊತ್ತವನ್ನೇ ಖರ್ಚು ಮಾಡಿದೆ. ಮಗ ಮದುವೆಯಾದ ಸಂಭ್ರಮದಲ್ಲಿರುವ ಸುಮಲತಾ ಮಂಡ್ಯದ ಜನರಿಗೆ ಬೀಗರ ಊಟ ಹಾಕಿಸಲೇಬೇಕು ಅಂತ ನಿರ್ಧರಿಸಿದ್ದರು.
ಹಲವು ಮೂಲಗಳಿಂದ ಫಿಲ್ಮಿಬೀಟ್‌ಗೆ ಸಿಕ್ಕಿರುವ ಮಾಹಿತಿ ಪ್ರಕಾರ ಕೋಟಿಯಲ್ಲಿ ಖರ್ಚು ಮಾಡಲಾಗಿದೆ. ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಬೀಗರ ಔತಣಕೂಟಕ್ಕೆ ಸುಮಾರು 1 ಕೋಟಿ 60 ಲಕ್ಷ ರೂಪಾಯಿ ಖರ್ಚಾಗಿದೆ ಎನ್ನಲಾಗಿದೆ. ಹೀಗಾಗಿ ಇದು ಮಂಡ್ಯದಲ್ಲಿ ನಡೆದು ದುಬಾರಿ ಬೀಗರ ಔತಣಕೂಟದಲ್ಲೊಂದು ಎಂದು ಹೇಳಬಹುದು.
ಉಂಡವರೆಷ್ಟು? ನಷ್ಟ ಆಗಿದ್ದೆಷ್ಟು?
ಬೀಗರ ಊಟಕ್ಕೆ ಬಂದ ಜನರಿಗೆ ಒಂದು ಸಾವಿರಕ್ಕೆ ಒಂದರಂತೆ ನಾಲ್ಕು ಪಂಕ್ತಿಗಳಲ್ಲಿ ಊಟ ಬಡಿಸಲಾಗುತ್ತಿತ್ತು. ಈ ಅಂದಾಜಿನ ಪ್ರಕಾರ, ನಿನ್ನೆ(ಜೂನ್ 16) ಸುಮಾರು 60 ರಿಂದ 70 ಸಾವಿರ ಮಂದಿ ಬೀಗರ ಔತಣಕ್ಕೆ ಬಂದಿದ್ದಾರೆಂದು ಅಂದಾಜು ಹಾಕಲಾಗಿದೆ.
ಎಲ್ಲವೂ ಸರಿಯಾಗೇ ನಡೆಯುತ್ತಿತ್ತು. ಈ ವೇಳೆ ಕೆಲವರು ತಾಳ್ಮೆ ಕಳೆದುಕೊಂಡು ನೂಕುನುಗ್ಗಲಾಯ್ತು. ಕೆಲವರು ಅಡುಗೆ ಮನೆಗೆ ನುಗ್ಗಿ ಊಟವನ್ನು ಹಾಳು ಮಾಡಿದ್ದರು. ಇದರಿಂದ ಸುಮಾರು 10 ಸಾವಿರ ಮಂದಿ ಊಟ ಮಾಡಬಹುದಾದಷ್ಟು ಆಹಾರ ಹಾಳಾಗಿದೆ ಎಂದು ಅಂದಾಜಿಸಲಾಗಿದೆ. ಈ ಘಟನೆಯ ಬಳಿಕವೂ ರಾತ್ರಿ 8 ಗಂಟೆವರೆಗೂ ಊಟದ ವ್ಯವಸ್ಥೆ ಮಾಡಲಾಗಿತ್ತು.


Click it and Unblock the Notifications











