"ನಾನು ಬಾರ್ಡರ್ ದಾಟಬೇಕು.. ಅವರನ್ನು ಮೆಚ್ಚಿಸ್ಬೇಕು ಅನ್ನೋದಕ್ಕೆ ಸಿನಿಮಾ ಮಾಡಲ್ಲ"; ಕುಕ್ಕಿದ್ದು ಯಾರಿಗಪ್ಪ?
ಸ್ಯಾಂಡಲ್‌ವುಡ್ ಭರವಸೆ ಇಟ್ಟು ಕಾಯ್ತಿರೋ ಸ್ಟಾರ್ ಹೀರೋಗಳಲ್ಲಿ ರೋರಿಂಗ್ ಸ್ಟಾರ್ ಶ್ರೀ ಮುರಳಿ ಕೂಡ ಒಬ್ಬರು. ಕನ್ನಡದಲ್ಲಿ ಇರುವ ಕೆಲವೇ ಕೆಲವು ಸ್ಟಾರ್ ನಟರಲ್ಲಿ ಶ್ರೀ ಮುರಳಿ ಕೂಡ ಸೇರಿಕೊಳ್ಳುತ್ತಿದ್ದಾರೆ. ಸದ್ಯ ಕನ್ನಡ ಚಿತ್ರರಂಗದ ಪರಿಸ್ಥಿತಿ ಕೆಟ್ಟಾಗಿ ಇದ್ದು, ಹೀರೋ ವರ್ಷಕ್ಕೆ ಕನಿಷ್ಟ ಅಂದರೂ ಒಂದೊಂದು ಸಿನಿಮಾ ಮಾಡಬೇಕು ಅಂತ ಕೂಗಿ ಕೇಳಿ ಬರುತ್ತಿದೆ. ಆದರೆ, ಶ್ರೀಮುರಳಿ ಈ ಥಿಯೇರಿಗೆ ವಿರುದ್ಧವಾಗಿ ಇದ್ದಂತೆ ಇದೆ.
ರೋರಿಂಗ್ ಸ್ಟಾರ್ ಶ್ರೀಮುರಳಿ ನಟಿಸಿದ 'ಬಘೀರ' ಬಳಿಕ ಸಿನಿಮಾ ಮಾಡೋ ಸ್ಪೀಡ್ ಅನ್ನು ಕಡಿಮೆ ಮಾಡಿದ್ದಾರೆ. ಕಥೆಗಳನ್ನು ಅಳೆದು-ತೂಗಿ ಆಯ್ಕೆ ಮಾಡುತ್ತಿದ್ದಾರೆ. ಹೀಗಾಗಿ ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳು ಕೂಡ ತಡವಾಗುತ್ತಿವೆ. ಅದರಲ್ಲಿ 'ಪರಾಕ್' ಕೂಡ ಒಂದು. 'ಬಘೀರ' ಶೂಟಿಂಗ್ ವೇಳೆನೇ 'ಪರಾಕ್' ಅನೌನ್ಸ್ ಆಗಿತ್ತು. ಆದರೆ ಇನ್ನೂ ಸಿನಿಮಾ ಮುಗಿದಿಲ್ಲ. ಈಗ ಟೀಸರ್ ಬಿಟ್ಟು ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಹೀಗಾಗಿ 'ಪರಾಕ್' ಟೀಸರ್ ಲಾಂಚ್ ವೇಳೆ ಪತ್ರಕರ್ತರು ಶ್ರೀಮುರಳಿಗೆ ಪ್ರಶ್ನೆಗಳ ಸರಿಮಳೆ ಸುರಿಸಿದ್ದಾರೆ. ಒಂದೊಂದು ಸಿನಿಮಾವನ್ನು ಸಮಯ ನಿಗದಿ ಪಡಿಸಿಕೊಂಡು ಮುಗಿಸಬೇಕು ಎಂದು ಆಗ್ರಹಿಸಿದ್ದಾರೆ. ಅದಕ್ಕೆ ಶ್ರೀಮುರಳಿ ಕೊಟ್ಟ ಉತ್ತರ ಬೇರೆ ಯಾರಿಗೋ ಟಾಂಗ್ ಕೊಟ್ಟಂತೆ ಅನಿಸಿದೆ. "ನಾನು ಬಾರ್ಡರ್ ದಾಟಬೇಕು.. ಅವರನ್ನು ಮೆಚ್ಚಿಸ್ಬೇಕು ಅನ್ನೋದಕ್ಕೆ ಸಿನಿಮಾ ಮಾಡಲ್ಲ" ಎಂದಿದ್ದು, ಆತುರದಲ್ಲಿ ಸಿನಿಮಾ ಮಾಡುವುದು ಬೇರೆ, ಬುದ್ದಿವಂತಿಕೆಯಿಂದ ಸಿನಿಮಾ ಮಾಡುವುದು ಬೇರೆ ಅನ್ನೋ ಮಾತುಗಳು ಚರ್ಚೆಯಾಗುತ್ತಿವೆ.
'ಪರಾಕ್' ಅನೌನ್ಸ್ ಆಗಿ ವರ್ಷಗಳೇ ಆಗಿದ್ದರೂ ಸಿನಿಮಾ ಇನ್ನೂ ಮುಗಿದಿಲ್ಲ. ಹೊಗಲಿ, ಶೂಟಿಂಗ್ ಮುಗಿಸಿ, ಈ ವರ್ಷ 'ಪರಾಕ್' ರಿಲೀಸ್ ಆಗುತ್ತಾ ಅಂತ ನೋಡಿದರೆ, ಅದೂ ಆಗುವುದಿಲ್ಲ. ಈ ಕಾರಣಕ್ಕೆ ಸಿನಿಮಾ ಯಾಕೆ ತಡವಾಯ್ತು? ಅನ್ನೋ ಪ್ರಶ್ನೆ ಮುಂದಿಟ್ಟಿದ್ದರು. ಅದಕ್ಕೆ ಶ್ರೀಮುರಳಿ ನಿಖರವಾದ ಕಾರಣವನ್ನು ಕೊಟ್ಟಿದ್ದಾರೆ.
"ನದಿಯಲ್ಲಿ ಈಜುವುದಕ್ಕೆ ಹೋದ್ವಿ. ಆದರೆ, ಅದರು ಸಮುದ್ರ ಅಂತ ಗೊತ್ತಾಯ್ತು. ಸ್ವಲ್ಪ ಕಷ್ಟ. ಅದಕ್ಕೆ ಬೇಕಾಗಿರೋ ತಯಾರಿಗಳು, ಅದಕ್ಕೆ ಬೇಕಾಗಿರುವಂತಹ ಶ್ರಮ, ಎಲ್ಲಾ ರೀತಿಯಿಂದಲೂ ಅದಕ್ಕೆ ಬೇಕಾಗಿರೋದನ್ನು ಕೊಡುವುದಕ್ಕೆ ನಾವು ಕೆಲವು ತ್ಯಾಗಗಳನ್ನು ಮಾಡಲೇಬೇಕಿತ್ತು. ಅದನ್ನು ನಾನು ಮಾಡಿದ್ದೀನಿ. ನಾವು ಯಾವುದೇ ಪ್ರಡ್ಯೂಸರ್‌ಗೂ ಲೇಟ್ ಆಗಿ ಸಿನಿಮಾ ಮಾಡಿ ಅಂತ ಹೇಳಲ್ಲ. ನಾವು ರೆಡಿ ಆಗ್ತೀವಿ, ಬೇಗ ಬೇಗ ಸಿನಿಮಾ ಮಾಡಬೇಕು. ಆದರೆ, ನಿರ್ದೇಶಕರಿಗೆ ಅವರದ್ದೇ ಆದ ಒಂದು ತಲೆ ಅನ್ನೋದು ಇರುತ್ತೆ. ಕೆಲವು ವೇಳೆ ತಡವಾಗುತ್ತೆ. ಆದರೆ, ಅದ್ಯಾವುದೂ ಒಳ್ಳೆಯದಲ್ಲ. ಬೇಗ ಬೇಗ ಕೆಲಸ ಮಾಡಬೇಕು. ಬೇಗ ಬೇಗ ಕಥೆ ಮಾಡಿಕೊಳ್ಳಬೇಕು. ಬೇಗ ಬೇಗ ಶೂಟಿಂಗ್ ಮಾಡಬೇಕು. ಹೀಗಾಗಿ ಆದಷ್ಟು ಬೇಗ ಈ ಸಿನಿಮಾವನ್ನು ಮುಗಿಸಿಕೊಡುತ್ತೇನೆ"- ನಟ, ಶ್ರೀಮುರಳಿ.
ಇನ್ನು 'ಪರಾಕ್' ಕೂಡ ಹಲವು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ಆದರೆ, ಶ್ರೀಮುರಳಿ ಮಾತ್ರ ನನ್ನ ತಾಯ್ನಾಡಿಗೆ ಮೊದಲ ಆದ್ಯತೆ ಎಂದು ಹೇಳಿದ್ದಾರೆ. ಅದಲ್ಲದೆ, ನಾನು ಬಾರ್ಡರ್ ದಾಟಬೇಕು. ಅವರನ್ನು ಮೆಚ್ಚಿಸಿಕೊಳ್ಳಬೇಕು ಅನ್ನೋದಕ್ಕೆ ನಾನು ಸಿನಿಮಾ ಮಾಡುವುದಿಲ್ಲ ಎಂದು ಹೇಳಿದ್ದು, ಕನ್ನಡ ಪ್ಯಾನ್ ಇಂಡಿಯಾ ಸ್ಟಾರ್‌ಗಳಿಗೆ ಟಾಂಗ್ ಕೊಟ್ಟಿದ್ದಾ? ಅನ್ನೋ ಅನುಮಾನವೂ ಮೂಡಿದೆ.
"ಇಡೀ ವಿಶ್ವದಲ್ಲಿ ಸಿನಿಮಾ ಅನ್ನೋದಕ್ಕೆ ಇರೋದು ಒಂದೇ ಭಾಷೆ. ನಿಮಗೆ ಗೊತ್ತಿರೋದು ಸಿನಿಮಾ. ನನಗೆ ಗೊತ್ತಿರೋದು ಸಿನಿಮಾ. ನಾನು ಬಾರ್ಡರ್ ದಾಟಬೇಕು. ಅವರನ್ನು ಮೆಚ್ಚಿಸಿಕೊಳ್ಳಬೇಕು ಅನ್ನೋದಕ್ಕೆ ನಾನು ಸಿನಿಮಾ ಮಾಡುವುದಿಲ್ಲ. ಮೊದಲು ನನ್ನ ತಾಯ್ನಾಡು, ನನ್ನ ಭಾಷೆ, ನನ್ನ ನೆಲ, ನಾನು ಬೆಳೆದ ಜಾಗ, ಇದು ನನ್ನ ಮೊದಲ ಆದ್ಯತೆ. ನಮ್ಮ ರಾಜ್ಯದಲ್ಲಿಯೇ ನಾನು ಸಿನಿಮಾ ಮಾಡುತ್ತಿದ್ದೇನೆ. ಕೇವಲ ಒಳ್ಳೆಯ ಸಿನಿಮಾ ಮಾಡುವುದಷ್ಟೇ ನಮ್ಮ ಆಲೋಚನೆ. ಕೊಡುಗೆ ಅನ್ನೋದು ಎಲ್ಲಾ ರೆಡಿ ಆದ್ಮೇಲೆ. ಯಾರೆಲ್ಲ ಇದನ್ನು ನೋಡಿರುತ್ತಾರೋ? ಅವರಿಗೆ ಇಷ್ಟವಾಗಿ ಬೇಕಾದರೆ ಇದಕ್ಕೆ ಪ್ರತಿಕ್ರಿಯೆ ನೀಡುತ್ತಾರೆ. ನಾವು ಯಾರ ಹಿಂದೇನೂ ಹೋಗಲ್ಲ. ಮೊದಲು ನಾನು ಕೆಲಸ ಮಾಡುತ್ತೇನೆ"-ನಟ, ಶ್ರೀಮುರಳಿ
ಇನ್ನು 'ಪರಾಕ್' ಬಗ್ಗೆ ಶ್ರೀ ಮುರಳಿ ಕಾನ್ಫಿಡೆಂಟ್ ಆಗಿರೋ ಹಾಗೆ ಕಾಣಿಸುತ್ತಿದೆ. ಅಲ್ಲದೇ ವರ್ಷಕ್ಕೊಂದು ಸಿನಿಮಾ ಮಾಡುವ ಬಗ್ಗೆ ಸಹಮತ ಇದ್ದಂತೆ ಕಾಣುತ್ತಿಲ್ಲ. ಯಾಕಂದ್ರೆ "ಆತುರದಲ್ಲಿ ಸಿನಿಮಾ ಮಾಡುವುದು ಬೇರೆ, ಬುದ್ದಿವಂತಿಕೆಯಿಂದ ಸಿನಿಮಾ ಮಾಡುವುದು ಬೇರೆ" ಎಂದು ಹೇಳಿರೋದು ಅಂತಹದ್ದೊಂದು ಸುಳಿವು ನೀಡಿದೆ.


Click it and Unblock the Notifications