"ಬೈಯಿಸಿಕೊಂಡರೂ ದರ್ಶನ್-ಸುದೀಪ್ ಒಂದು ಮಾಡೋ ಪ್ರಯತ್ನ ಪಟ್ಟೆ"; ನಟ ರವಿ ಚೇತನ್
ಒಂದು ಕಾಲದಲ್ಲಿ ದರ್ಶನ್ ಹಾಗೂ ಸುದೀಪ್ ಇಬ್ಬರೂ ಕುಚಿಕು ಗೆಳೆಯರು. ಅಭಿಮಾನಿಗಳು ರೆಬೆಲ್ ಸ್ಟಾರ್ ಅಂಬರೀಶ್ ಹಾಗೂ ವಿಷ್ಣುವರ್ಧನ್ ಅವರನ್ನು ಇವರಲ್ಲಿ ಕಾಣುತ್ತಿದ್ದರು. ಕನ್ನಡ ಚಿತ್ರರಂಗದ ಇಬ್ಬರು ಸೂಪರ್‌ಸ್ಟಾರ್‌ಗಳು ಒಂದೇ ವೇದಿಕೆ ಮೇಲೆ ಕಂಡರೆ ಅಭಿಮಾನಿಗಳ ಖುಷಿಯೇ ಬೇರೆ. ಆದರೆ, ಈ ಸ್ನೇಹ ಹೆಚ್ಚು ದಿನ ಮುಂದುವರೆಯಲಿಲ್ಲ. ಈ ಬೇಸರ ಕೂಡ ಅಭಿಮಾನಿಗಳಲ್ಲಿ ಇದೆ.
ದರ್ಶನ್ ಹಾಗೂ ಸುದೀಪ್ ಮಧ್ಯೆ ಆರಂಭದಿಂದಲೂ ಪೈಪೋಟಿ ಇತ್ತು. ಹೀಗಿದ್ದರೂ ತಮ್ಮಷ್ಟಕ್ಕೆ ತಾವು ಸಿನಿಮಾ ಮಾಡಿಕೊಂಡು ಹೋಗುತ್ತಿದ್ದರು. ಆದರೆ, ಸಂಗೊಳ್ಳಿರಾಯಣ್ಣ ಸಮಯದಲ್ಲಿ ಇವರಿಬ್ಬರ ಸ್ನೇಹ ಗಾಢವಾಗಿ ಬೆಳೆದಿತ್ತು. ಇಬ್ಬರೂ ಒಟ್ಟಿಗೆ ರೋಡ್ ಟ್ರಿಪ್ ಪ್ಲ್ಯಾನ್ ಮಾಡುತ್ತಿದ್ದರು. ಒಬ್ಬರ ಸಿನಿಮಾಗೆ ಇನ್ನೊಬ್ಬರು ಸಪೋರ್ಟ್ ಮಾಡುತ್ತಿದ್ದರು.

ಇಷ್ಟೇ ಯಾಕೆ ಸಿಸಿಎಲ್‌ನಲ್ಲೂ ಸುದೀಪ್ ಹಾಗೂ ದರ್ಶನ್ ಇಬ್ಬರೂ ಮೈದಾನಕ್ಕಿಳಿದಿದ್ದರು. ಅದರಲ್ಲೂ ಕುಚಿಕು ಹಾಡಿಗೆ ಒಂದೇ ವೇದಿಕೆ ಮೇಲೆ ಹೆಜ್ಜೆ ಹಾಕಿದ್ದನ್ನು ಕಣ್ತುಂಬಿ ಕೊಟ್ಟಿದ್ದರು. ಇಷ್ಟೆ ಚೆನ್ನಾಗಿದ್ದ ಸ್ನೇಹಿತರು "ನಾನೊಂದು ತೀರ.. ನೀನೊಂದು ತೀರಾ" ಎನ್ನುವಂತಾಗಿದ್ದಾರೆ. ಇವರಿಬ್ಬರ ಫ್ರೆಂಡ್‌ಶಿಫ್ ಬಗ್ಗೆ ಸಾಕಷ್ಟು ಮಂದಿ ಮಾತಾಡಿದ್ದಾರೆ. ಆದರೆ, ನಟ ರವಿ ಚೇತನ್ ಇತ್ತೀಚೆಗೆ ಸ್ಪೀಡ್ ನ್ಯೂಸ್ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಇವರಿಬ್ಬರ ಸ್ನೇಹದ ಬಗ್ಗೆ ಮಾತಾಡಿದ್ದಾರೆ. ಅಲ್ಲದೇ, ದರ್ಶನ್ ಅವರೊಂದಿಗಿನ ತಮ್ಮ ಸ್ನೇಹ, ಅವರ ಆಪ್ತರು ನಡೆದುಕೊಂಡ ರೀತಿ ಬಗ್ಗೆ ರಿವೀಲ್ ಮಾಡಿದ್ದಾರೆ.
ಕಿಚ್ಚ ಸುದೀಪ್ ಹಾಗೂ ದರ್ಶನ್ ಇಬ್ಬರನ್ನೂ ಒಂದು ಮಾಡೋಕೆ ರವಿಚೇತನ್ ಮುಂದಾಗಿದ್ದರು. ಆದರೆ, ಈ ಪ್ರಯತ್ನದಲ್ಲಿ ಸೋತೆ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. "ಅವರಿಬ್ಬರನ್ನು ನೋಡಿದರೆ, ಅಂಬರೀಶ್ ಅಣ್ಣ-ವಿಷ್ಣು ಸರ್ ನೆನಪಾಗುತ್ತಾರೆ. ಅದು ಇಲ್ಲಿ ಕ್ಯಾರಿ ಆಗುತ್ತೆ ಅಂತ ಅಂದ್ಕೊಂಡಿದ್ವಿ. ಕ್ಯಾರಿನೂ ಆಗಿತ್ತು. ಒಂದು ವೇದಿಕೆಯಲ್ಲಿ ಹಾಡಿಗೆ ಡ್ಯಾನ್ಸ್ ಮಾಡಿದರು. ಸಿಸಿಎಲ್‌ನಲ್ಲೂ ಇಬ್ಬರೂ ಒಟ್ಟಿಗೆ ಆಡಿದ್ದರು. ಅದೇನಾಯ್ತೋ ಒಂದು ಕೆಟ್ಟ ಗಳಿಗೆ ಬಿರುಕು ಉಂಟಾಯ್ತು. ನಾನು ಇಬ್ಬರನ್ನು ಒಂದು ಮಾಡುವುದಕ್ಕೆ ಪ್ರಯತ್ನ ಪಟ್ಟೆ. ಬೈಯಿಸಿಕೊಂಡರೂ ಪ್ರಯತ್ನ ಮಾಡಿದೆ. ಆದರೆ, ಅದು ಯಶಸ್ಸು ಕಾಣಲಿಲ್ಲ" ಎಂದು ನಟ ರವಿಚೇತನ್ ಹೇಳಿದ್ದಾರೆ.

ಹಾಗೇ ತಮ್ಮ ಹಾಗೂ ದರ್ಶನ್ ನಡುವಿನ ಸಂಬಂಧದಲ್ಲಿ ಅಂತರ ಎದುರಾಗಿದ್ದು ಯಾಕೆ ಅಂತಲೂ ರಿವೀಲ್ ಮಾಡಿದ್ದಾರೆ. "ಹಿಂದೇನೂ ಹೇಳಿದ್ದೆ, ಕುರುಕ್ಷೇತ್ರದವರೆಗೂ ಎಲ್ಲದೂ ಚೆನ್ನಾಗಿಯೇ ಇತ್ತು. ದರ್ಶನ್ ಅವರ ಸುತ್ತಮುತ್ತ ಇದ್ದ ಆರ್ಟಿಸ್ಟ್‌ಗಳು, ಡೈರೆಕ್ಟರ್‌ಗಳು, ಪ್ರಡ್ಯೂಸರ್‌ಗಳು, ಡಿಸ್ಟ್ರಿಬ್ಯೂಟರ್‌ಗಳು ಎಲ್ಲಾ ನಾವೇ ಇರುತ್ತಿದ್ವಿ. ಕೂತರೂ, ನಿಂತರೂ ಸಿನಿಮಾ ಬಗ್ಗೆನೇ ಮಾತಾಡುತ್ತಿದ್ವಿ. ಕುರುಕ್ಷೇತ್ರದ ಆದ್ಮೇಲೆ ನಾನು ಬ್ಯುಸಿಯಾದರೆ, ಆಗ ಒಂದಿಷ್ಟು ಮಂದಿ ಸೇರಿಕೊಂಡರು. ನಾವಿದ್ದಾಗ ದರ್ಶನ್ ಸರ್ ಚೈಲ್ಡ್‌ವುಡ್ ಫ್ರೆಂಡ್ಸ್ ಕೂಡ ಇದ್ದರು. ನಾನು ಒಂದು ಆರು ತಿಂಗಳು ಹೋಗಿರಲಿಲ್ಲ. ಅವರೂ ಎಲ್ಲರೂ ಬಿಟ್ರು. ಆಮೇಲೆ ನಾನು ಅವರನ್ನು ಭೇಟಿ ಮಾಡುವುದಕ್ಕೆ ಹೋದೆ ನನ್ನನ್ನೇ ತಡೆದರು. ಅದು ದರ್ಶನ್ ಅವರಿಗೆ ಗೊತ್ತಿಲ್ಲ." ಎಂದಿದ್ದರೆ.
ಈ ಸಂದರ್ಶನದಲ್ಲಿ ದರ್ಶನ್ ಅವರ ಒಳ್ಳೆಯ ಗುಣಗಳ ಬಗ್ಗೆನೂ ಮಾತಾಡಿದ್ದಾರೆ. ಹಾಗೇ ತಮ್ಮ ಕೋ ಆರ್ಟಿಸ್ಟ್ ಅನ್ನು ಹೇಗೆ ನೋಡಿಕೊಳ್ಳುತ್ತಾರೆ? ಅನ್ನೋ ಕೆಲ ಘಟನೆಗಳನ್ನು ವಿವರಿಸಿದ್ದಾರೆ. "ನಾನು ಎಷ್ಟು ಹೀರೋಗಳ ಜೊತೆ ಕೆಲಸ ಮಾಡಿದ್ದೀನಿ. ಫೈಟ್‌ನಲ್ಲಿ ಪರ್ಫೆಕ್ಟ್ ಟೈಮಿಂಗ್ ಅಂದರೆ, ಅದು ದರ್ಶನ್ ಅವರದ್ದು. ಬೇರೆ ಹೀರೋ ಬೇಜಾರು ಮಾಡಿಕೊಂಡರೂ ಪರ್ವಾಗಿಲ್ಲ. ನಮಗೆ ಏಟು ಆಗಬಾರದು ಅನ್ನೋದೆ ಅವರ ತಲೆಯಲ್ಲಿ ಇರುತ್ತೆ. ಅವರ ಕಾಲು ಉದ್ದ. ನಮಗೆ ಗೊತ್ತು ಅವರ ಕಾಲು ಎಲ್ಲಿಗೆ ಬರುತ್ತೆ ಅಂತ. ಒಂದು ಸಾರಿ ರಿಹರ್ಸಲ್ ಮಾಡಿರುತ್ತೇವೆ. ಏಟು ಬಿದ್ದರೆ, ಚಕ್ಕನೆ ಎಂದು ಓಕೆನಾ ಚೇತು ಅಂತಾರೆ, ಯಾವುದೇ ಕೋ ಆರ್ಟಿಸ್ಟ್ ಆದರೂ ಕೇರ್ ತೆಗೆದುಕೊಳ್ತಾರೆ. ಅಂತಹ ಅದ್ಭುತ ವ್ಯಕ್ತಿ" ಎಂದಿದ್ದಾರೆ.
ದರ್ಶನ್ ಬೇಗ ರಿಲೀಸ್ ಆಗಿ ಬರಬೇಕು. ತೊಂದರೆಯಲ್ಲಿರುವ ಕನ್ನಡ ಚಿತ್ರರಂಗಕ್ಕೆ ಅವರು ಮುಖ್ಯ ಎಂದು ಅಭಿಪ್ರಾಯ ಪಟ್ಟಿದ್ದಾರೆ. "ಕೋ ಆರ್ಟಿಸ್ಟ್‌ಗಳನ್ನು ಎಷ್ಟು ಕೇರ್ ತೆಗೆದುಕೊಳ್ತಾರೆ. ಅಂತಹವರು ಈತರ ಎಲ್ಲಾ ಮಾಡ್ತಾರೆ ಅನ್ನೋದನ್ನು ನಂಬೋಕೆ ಆಗುತ್ತಿಲ್ಲ. ಹೇಳ್ತಾರಲ್ಲ ಸುತ್ತಮುತ್ತ ವಾತಾವರಣ ಕೆಟ್ಟಾಗ ತಲೆ ಕೆಡಿಸುತ್ತೆ ಅನಿಸುತ್ತೆ. ಕೋರ್ಟ್‌ನಲ್ಲಿ ಇರುವುದರಿಂದ ನಾವು ಮಾತಾಡೋದು ತಪ್ಪಾಗುತ್ತೆ. ಆ ಬಗ್ಗೆ ನನಗೆ ಗೊತ್ತಿಲ್ಲ. ಅದಾಗಬಾರದಿತ್ತು, ಅದರಿಂದ ಹೊರಬರಲಿ. ಅವರು ಹೊರಬರಲೇ ಬೇಕು. ಕನ್ನಡ ಚಿತ್ರರಂಗ ತೊಂದರೆಯಲ್ಲಿದೆ. ಅವರು ಬಂದರೇ ಎಲ್ಲರಿಗೂ ಒಳ್ಳೆಯದಾಗುತ್ತೆ ಅನ್ನೋ ಆಸೆ." ಎಂದು ನಟ ರವಿ ಚೇತನ್ ಸಂದರ್ಶನದಲ್ಲಿ ಹೇಳಿದ್ದಾರೆ.


Click it and Unblock the Notifications















