Operation Sindoor:"ಭಾರತವನ್ನು ಪ್ರೀತಿಸಿ, ಇಲ್ಲಾ ಅಂದ್ರೆ ಭಾರತದಿಂದ ಒದ್ದು ಓಡಿಸುತ್ತೇವೆ"; ಧ್ರುವ ಸರ್ಜಾ
ಪಹಲ್ಗಾನ್ ಉಗ್ರರ ದಾಳಿಗೆ ಭಾರತ ಪ್ರತಿಕಾರ ತೀರಿಸಿಕೊಂಡಿದೆ. ಹಲವು ವರ್ಷಗಳಿಂದ ಪಾಕಿಸ್ತಾನದಲ್ಲಿ ಬಿಡಾರ ಹಾಕಿ ಕೂತಿದ್ದ ಭಯೋತ್ಪಾದಕರ 9 ನೆಲೆಗಳ ಮೇಲೆ ಬಾಂಬ್ ಎಸೆದು ಬಂದಿದೆ. ಮುಗ್ಧ ಪ್ರವಾಸಿಗರ ಹತ್ಯೆ ಮಾಡಿ ನೆಮ್ಮದಿಯಾಗಿ ಮಲಗಿದ್ದ ಉಗ್ರರು ಶಾಶ್ವತವಾಗಿ ನಿದ್ದೆಗೆ ಜಾರಿದ್ದಾರೆ. 9 ಕಡೆ ಉಗ್ರ ನೆಲೆಗಳ ಮೇಲೆ ಮಾಡಿದ ದಾಳಿಯಲ್ಲಿ ಸುಮಾರು 70 ಮಂದಿ ಭಯೋತ್ಪಾದಕರು ಸಾವನ್ನಪ್ಪಿರಬಹುದೆಂದು ಭಾರತ ಹೇಳಿದೆ.
ಅತ್ತ ಲಜ್ಜೆಗೆಟ್ಟ ಪಾಕಿಸ್ತಾನ ಸುಳ್ಳುಗಳ ಮೇಲೆ ಸುಳ್ಳನ್ನು ಹೇಳುತ್ತಿದೆ. ಎಂದಿನಂತೆ ಭಾರತದ ಮೇಲೆ ಆರೋಪಗಳ ಸುರಿಮಳೆಯನ್ನು ಸುರಿಸುತ್ತಿದೆ. 'ಆಪರೇಷನ್ ಸಿಂಧೂರ' ಬಳಿಕ ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನ ತಲೆ ತಗ್ಗಿಸುವಂತಾಗಿದೆ. ಭಾರತಕ್ಕೆ ತಿರುಗೇಟು ಕೊಡುತ್ತೇವೆ ಎಂದು ಪಾಕ್ ಕೂಡ ಪಟ್ಟಿ ಹಿಡಿದಿದ್ದೇನೋ ಸರಿ, ಆದರೆ, ಆರ್ಮಿ ಚೀಫ್ "ಪಿಕ್ಚರ್ ಅಭಿ ಬಾಕಿ ಹೇ" ಎಂದಿದ್ದು ಭಯ ಹುಟ್ಟಿಸಿದೆ.

ಇದೆಲ್ಲ ಏನೇ ಇದ್ದರೂ 'ಆಪರೇಷನ್ ಸಿಂಧೂರ' ಸಕ್ಸಸ್ ಆಗಿದೆ. ಭಯೋತ್ಪಾದಕರಿಗೆ ಬೆಂಬಲ ನೀಡುತ್ತಿರುವ ಪಾಕಿಸ್ತಾನಕ್ಕೆ ಭಾರತ ತಿರುಗೇಟು ಕೊಟ್ಟಿದ್ದಕ್ಕೆ ಪ್ರಶಂಸೆಗಳ ಸುರಿಮಳೆಯೇ ಹರಿದು ಬರುತ್ತಿದೆ. ಕನ್ನಡದ ಸಿನಿಮಾ ತಾರೆಯರೂ ಕೂಡ 'ಆಪರೇಷನ್ ಸಿಂಧೂರ'ದಂತಹ ದಿಟ್ಟ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಿಚ್ಚ ಸುದೀಪ್, ಶಿವರಾಜ್‌ಕುಮಾರ್ ಬಳಿಕ ಆಕ್ಷನ್ ಧ್ರುವ ಸರ್ಜಾ ತಮ್ಮ ಎಕ್ಸ್ ಖಾತೆಯಲ್ಲಿ ಭಾರತದಲ್ಲಿ ಇದ್ದುಕೊಂಡು ಪಾಕಿಸ್ತಾನ ಬೆಂಬಲಿಸುವವರಿಗೆ ಪೋಸ್ಟ್ ಮಾಡಿದ್ದಾರೆ. ಶೀಘ್ರದಲ್ಲಿಯೇ ನಿಮ್ಮನ್ನು ಭಾರತದಿಂದ ಒದ್ದು ಹೊರಹಾಕುತ್ತೇವೆ ಎಂದಿದ್ದಾರೆ.
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ 'ಆಪರೇಷನ್ ಸಿಂಧೂರ'ಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಭಾರತೀಯ ಸೇನೆಯ ಈ ಕಾರ್ಯಾಚರಣೆಯ ಬಳಿಕ ಧ್ರುವ ಸರ್ಜಾ ತನ್ನ ಎಕ್ಸ್ (ಟ್ವಿಟರ್) ಖಾತೆಯಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಭಾರತದಲ್ಲಿಯೇ ಇದ್ದುಕೊಂಡು ಪಾಕಿಸ್ತಾನವನ್ನು ಬೆಂಬಲಿಸುವವರಿಗೆ ಖಡಕ್ ತಿರುಗೇಟು ಕೊಟ್ಟಿದ್ದಾರೆ. ಅವರ ಪೋಸ್ಟ್ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
"ಪಾಕಿಸ್ತಾನದ ಬಗ್ಗೆ ಅನುಕಂಪ ತೋರಿಸುತ್ತಾ ಭಾರತದಲ್ಲಿರುವವರೇ, ನೀವು ಅವರಿಗೆ ಅನುಕಂಪವನ್ನು ತೋರಿಸಿದರೇ ನೀವು ಭಯೋತ್ಪಾದಕರೇ. ನೀವು ಭಾರತಕ್ಕೆ ದ್ರೋಹವನ್ನು ಬಗೆಯಬೇಡಿ. ಭಾರತದಲ್ಲಿ ಇರುವುದು ಭಾರತದ ಮೇಲೆ ನಂಬಿಕೆ ಇಟ್ಟಂತೆ. ನೀವು ಇರುವ ದೇಶವನ್ನು ನೀವು ಪ್ರೀತಿಸಿ, ಇಲ್ಲವೇ ನಿಮ್ಮನ್ನು ಭಾರತದಿಂದ ಹೊರ ಹಾಕುತ್ತೇವೆ. ಜೈ ಹಿಂದ್" ಎಂದು ಧ್ರುವ ಸರ್ಜಾ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಎಕ್ಸ್ ಪೋಸ್ಟ್ ವೈರಲ್ ಆಗುತ್ತಿದೆ. ಕನ್ನಡದ ನಟರು ಗಂಭೀರ ವಿಷಯಗಳ ಬಗ್ಗೆ ಹೀಗೆ ಓಪನ್ ಆಗಿ ಕಮೆಂಟ್ ಮಾಡುವುದು ತೀರಾ ವಿರಳ. ಆದರೆ, ಧ್ರುವ ಸರ್ಜಾ ದೇಶದೊಳಗೆ ಇರುವ ಶತ್ರುಗಳಿಗೆ ಟಾಂಗ್ ಕೊಟ್ಟಿದ್ದಾರೆ. ಹೀಗಾಗಿ ಅವರ ಅಭಿಮಾನಿಗಳು ಧ್ರುವ ಪೋಸ್ಟ್‌ಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಈ ಪೋಸ್ಟ್‌ನಲ್ಲಿ ಎರಡು ಫೋಟೊಗಳನ್ನು ಕೂಡ ಹಾಕಿದ್ದಾರೆ. ಅದರಲ್ಲಿ ಒಂದು ಪೆಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ದಾಳಿ ಮಾಡಿ ಹತ್ಯೆಗೈದಾಗ ಮೋದಿಗೆ ಹೋಗಿ ಹೇಳು ಎಂದಿದ್ದು ಒಂದು ಕಡೆ, ಇನ್ನೊಂದು ಕಡೆ ಆಪರೇಷನ್ ಸಿಂಧೂರ್ ಬಳಿಕ ಮೋದಿಗೆ ಹೇಳಿ ಆಯ್ತು ಎನ್ನುವ ಡೈಲಾಗ್ ಇದೆ. ಎರಡನೇ ಫೋಟೊದಲ್ಲಿ ಮಹಿಳೆಯ ಹಣೆಯ ಮೇಲೆ ಸಿಂಧೂರವಿದ್ದು ಅದರ ಮೇಲೆ ಯುದ್ಧ ವಿಮಾನವಿದೆ.
ಹಿರಿಯ ನಟಿ ತಾರಾ ಏನಂದರು?
"ನಾನೊಬ್ಬ ಭಾರತೀಯಳಾಗಿ ತುಂಬಾನೇ ಹೆಮ್ಮೆ ಪಡುವಂತಹ ವಿಚಾರ. ಯಾಕಂದ್ರೆ ಭಯೋತ್ಪಾದನೆಯನ್ನು ಬುಡ ಸಮೇತ ಕಿತ್ತು ಹಾಕುವಂತಹ ಆಪರೇಷನ್ ಸಿಂಧೂರ್ ಆಗುತ್ತಿರುವುದು ಭಾರತೀಯಳಾಗಿ ರೋಮಾಂಚನಗೊಳ್ಳುತ್ತಿರುವ ಸಂಗತಿಯಿದು. ಸಮರ್ಥ ನಾಯಕ ದೇಶಕ್ಕೆ ಇದ್ದರೆ, ಅವನು ಯಾವ ರೀತಿ ಉತ್ತರ ಕೊಡಬಲ್ಲ ಅನ್ನೋದು ಇವತ್ತು ತೋರಿಸಿಕೊಟ್ಟ ದಿನ" ಎಂದು ನಟಿ ತಾರಾ ಅಭಿಪ್ರಾಯ ಪಟ್ಟಿದ್ದಾರೆ.
ಹಾಗೇ ಇಡೀ ಭಾರತೀಯರು ಪಕ್ಷಾತೀತವಾಗಿ ಎಲ್ಲರೂ ಕೈ ಜೋಡಿ ಒಗ್ಗಟ್ಟಾಗಿ ನೋಡುತ್ತಿರುವುದು ಇದೆಯಲ್ಲ ಅದು ಒಂದು ರೀತಿ ಸಮಾಧಾನ ತಂದು ಕೊಟ್ಟಿದೆ. ಈ ರೀತಿಯಾದ ದಿನಗಳನ್ನು ಮೊದಲೇ ನಿರೀಕ್ಷೆಯನ್ನು ಮಾಡುತ್ತಿದ್ದೆವು. ಆಗಾಗ ಇಂತಹದ್ದೊಂದ ಅಟ್ಯಾಕ್ ಆಗುತ್ತಿದ್ದಾಗ. ಅದರಲ್ಲೂ ಕಾಶ್ಮೀರದಲ್ಲಿ ಅಟ್ಯಾಕ್ ಆಗುತ್ತಿದ್ದಾಗ ಇಂತಹದ್ದೊಂದು ಉತ್ತರ ಸಿಗಬೇಕಿತ್ತು. ಆ ದಿನ ಇವತ್ತು ಬಂದಿದೆ. ಭಯೋತ್ಪಾದಕರು ಅದು ಯಾವುದೇ ಕೋಮಿನವರೇ ಆಗಿರಲಿ, ಯಾವುದೇ ಧರ್ಮದವರೇ ಆಗಿರಲಿ ಭಯೋತ್ಪಾದನೆಯನ್ನು ಬುಡ ಸಮೇತ ಕಿತ್ತಾಕುವಂತಹ ಪ್ರಯತ್ನ ಇವತ್ತು ಆಗಬೇಕು ಎಂದು ಮಾಧ್ಯಮಗಳಿಗೆ ನಟಿ ತಾರಾ ಹೇಳಿದ್ದಾರೆ.
Operation Sindoor: 'ಆಪರೇಷನ್ ಸಿಂಧೂರ' ಒಂದು ಪ್ರತಿಜ್ಞೆ-ಕಿಚ್ಚ, ರಕ್ತ ಕುದಿಯುತ್ತೆ ಎಂದ ಶಿವಣ್ಣ
"ಆಪರೇಷನ್ ಸಿಂಧೂರ ಎನ್ನುವುದು ಎಂತಹ ಒಳ್ಳೆಯ ಹೆಸರು. ಅದು ನಮ್ಮ ಇಡೀ ಭಾರತೀಯರನ್ನು ತೋರಿಸಿಕೊಟ್ಟಂತಹ ಹೆಸರು. ಆ ಹೆಸರಿನಲ್ಲಿ ಒಂದು ಶಕ್ತಿಯಿದೆ. ಆ ಶಕ್ತಿ ತಾಯಿ ನ್ಯಾಯವನ್ನು ಒದಗಿಸಿಕೊಡುತ್ತಾಳೆ. ಇನ್ನು ಮುಂದೆಯಾದರೂ, ಪ್ರಪಂಚದಾದ್ಯಂತ ಎಲ್ಲೆಲ್ಲಿ ಭಯೋತ್ಪಾದಕರು ಇದ್ದಾರೆ, ಅವರಿಗೊಂದು ಪಾಠವಿದು. ಈ ರೀತಿಯಾಗಿ ಭಯೋತ್ಪಾದನೆಯನ್ನು ಮಟ್ಟ ಹಾಕಬಲ್ಲೆವು ಅನ್ನೋದನ್ನು ತೋರಿಸಿಕೊಟ್ಟ ದಿನವಿದು.
"ಇಂತಹದ್ದೊಂದು ಕಾರ್ಯಾಚರಣೆ ಆಗುತ್ತೆ ಅಂತ ಖಂಡಿತಾ ಅಂದುಕೊಂಡಿದ್ದೆ. ಯಾವಾಗ ಸಾಮಾನ್ಯ ಜನರ ಮೇಲೆ ಅಟ್ಯಾಕ್ ಆಗುತ್ತೆ. ಅದು ಯಾವ ಭಾರತೀಯರೂ ಕೂಡ ಮೆಚ್ಚುವಂತಹ ಕೆಲಸ ಅಲ್ಲ. ಇದು ಯಾವುದೇ ಕೋಮಿನ ಮೇಲೆ, ಯಾವುದೇ ಧರ್ಮದ ಮೇಲಿನ ಯುದ್ಧ ಅಲ್ಲ. ಈ ಯುದ್ಧ ಬಂದು ನಮ್ಮ ದೇಶದ ಘನತೆಯನ್ನು ಕಾಪಾಡಿಕೊಳ್ಳುವುದು. ಇಲ್ಲಿ ಶತ್ರು ನಾಶಕ್ಕಿಂತ ಶತ್ರುತ್ವ ನಾಶ ಆಗಬೇಕು. ಆ ಶತ್ರುತ್ವವನ್ನು ನಾಶ ಮಾಡುವ ಮಟ್ಟದಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದೆ. ಸಖತ್ ಆಗಿ ಅನಿಸುತ್ತಿದೆ. ಗಡಿಯನ್ನು ಕಾಯುತ್ತಿರುವ, ಯುದ್ಧದಲ್ಲಿ ಭಾಗವಹಿಸುತ್ತಿರುವ ಪ್ರತಿಯೊಬ್ಬ ಯೋಧನಿಗೆ ನಾನು ಇಲ್ಲಿಂದಲೇ ಗ್ರೇಟ್ ಸಲ್ಯೂಟ್ ಮಾಡುತ್ತೇನೆ." ಎಂದು ಹೆಮ್ಮೆ ವ್ಯಕ್ತಪಡಿಸಿದ್ದಾರೆ.
"ಎಲ್ಲರಿಗೂ ಇದೊಂದು ಪಾಠ ಆಗಿರುತ್ತೆ. ಪ್ರಪಂಚದಾದ್ಯಂತ ಎಲ್ಲೆಲ್ಲಿ ಭಯೋತ್ಪಾದಕರು ಇರುತ್ತಾರೆ. ಎಲ್ಲೆಲ್ಲಿ ಕೆಟ್ಟದ್ದಕ್ಕೆ ಸಪೋರ್ಟ್ ಮಾಡಲಾಗುತ್ತಿದೆ. ಯಾರೆಲ್ಲ ಕೆಟ್ಟ ಕೆಲಸಗಳನ್ನು ಮಾಡುತ್ತಿದ್ದಾರೆ. ಯಾರೆಲ್ಲ ದೇಶ ವಿರೋಧಿ ಕೆಲಸ ಮಾಡುತ್ತಿರುತ್ತಾರೆ. ಅವರೆಲ್ಲರಿಗೂ ಸಿಗುವಂತಹ ಪಾಠವಿದು. ನಾವು ಭಾರತೀಯರು ಶಾಂತಿಪ್ರಿಯರು, ಧರ್ಮದಲ್ಲಿ ನಡೆಯುವಂತಹವರು, ಅದೆಲ್ಲವೂ ಸತ್ಯ. ಅದೆಲ್ಲದರ ಜೊತೆಗೆ ಹೇಗೆ ನಡೆದುಕೊಳ್ಳಬೇಕು ಅನ್ನುವ ಪಾಠ ಹೇಳಿಕೊಟ್ಟಿಲ್ಲ ಅಂತ ಅಂದರೆ, ಅದು ನಮಗೆ ಲೋಪ ಆಗಿ ಹೋಗುತ್ತೆ." ಎಂದು ತಾರಾ ಹೇಳಿದ್ದಾರೆ.
"ಮೋದಿಯವರ ಬಗ್ಗೆ ನಿಜವಾಗಿಯೂ ಹೆಮ್ಮೆ ಅನಿಸುತ್ತೆ. ಅದಕ್ಕೆ ಹೇಳಿದ್ದು ಸಮರ್ಥ ನಾಯಕರು ಇದ್ದರೆ, ಉತ್ತರ ಹೇಗಿರುತ್ತೆ ಎಂದು ತೋರಿಸಿಕೊಟ್ಟ ದಿನವಿದು. ಮೋದಿಯವರ ಬಗ್ಗೆಯಾಗಲಿ, ಭಾರತ ಸರ್ಕಾರದ ಬಗ್ಗೆಯಾಗಲಿ, ಭಾರತದ ಸೈನ್ಯ ಅತ್ಯಂತ ಗೌರವ ತಂದುಕೊಟ್ಟ, ನಾವೆಲ್ಲರೂ ನಿಂತು ಸಲ್ಯೂಟ್ ಮಾಡುವಂತಹ, ಭಾರತೀಯರು ಮೆರೆಯುವಂತಹ ದಿನವಿದು. ಅದಕ್ಕೆ ಕಾರಣ ಖಂಡಿತಾ ಭಾರತ ಸರ್ಕಾರ. ಭಾರತ ಅಂದ ತಕ್ಷಣ ಭಾರತ ಮಾತೆ ಅಂತ ಕರೆಯೋದು. ತಾಯಿ ಅಂತ ಕರೆಯೋದು. ಆ ತಾಯಿಯ ಸಿಂಧೂರವನ್ನು ಅಳಿಸಿದಂತಹ ದಿನಗಳು ಅವು. ಆ ತಾಯಿ ಸಿಂಧೂರಕ್ಕೆ ಉತ್ತರ ಕೊಡುವಂತಹ ಕಾಲ. ನಾನೊಬ್ಬಳು ಹೆಣ್ಣು ಮಗಳಾಗಿ ಅದಕ್ಕೆ ಹೇಳಿದ್ದು ರೋಮಾಂಚನ ಆಗುತ್ತಿರುವ ಘಟನೆ, ಶಕ್ತಿ ಕೊಟ್ಟಂತಹ ಘಟನೆ. ನನ್ನ ಅಣ್ಣ ನನ್ನ ತಾಯಿ ರಕ್ಷಣೆ ಕೊಡುವಂತಹ ದಿನ. ಇದಕ್ಕಿಂತ ಇನ್ನು ಹೆಚ್ಚು ಏನು ಬೇಕು ಎಂದು ಹೆಮ್ಮೆ ಪಟ್ಟಿದ್ದಾರೆ.
ಕನ್ನಡದ ನಟಿ ಹಾಗೂ ಬಿಜೆಪಿ ಲೀಡರ್ ತಾರಾ ಹೆಮ್ಮೆ ಪಡುವ ದಿನವೆಂದು ಹೇಳಿದ್ದಾರೆ. ಆಪರೇಷನ್ ಸಿಂಧೂರವನ್ನು ಭಾರತೀಯರು ಸಂಭ್ರಮಿಸಿದಂತೆ ಅವರೂ ಕೂಡ ಖುಷಿ ಪಟ್ಟಿದ್ದಾರೆ. ಸೇನೆಯ ಧೈರ್ಯ ಹಾಗೂ ಕಾರ್ಯಾಚರಣೆಯನ್ನು ಹೊಗಳಿ ಕೊಂಡಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯ ದಿಟ್ಟ ನಾಯಕತ್ವವನ್ನು ಸಮರ್ಥಿಸಿಕೊಂಡಿದ್ದಾರೆ.


Click it and Unblock the Notifications











