"ಫಸ್ಟ್ ರಾಜ್‌ಕುಮಾರ್ ಅಣ್ಣನನ್ನು ಹಾಡಿಸಿದ್ದು ನಾನೇ"; ಯುವ ದಸರಾದಲ್ಲಿ ರಿವೀಲ್ ಮಾಡಿದ ಇಳಯರಾಜ
"ಯಾರೇ ಕೂಗಾಡಲಿ.. ಊರೇ ಹೋರಾಡಲಿ.." ಸಂಪತ್ತಿಗೆ ಸವಾಲ್ ಸಿನಿಮಾ ಈ ಹಾಡು ಇಂದಿಗೂ ಈ ಹಾಡು ಸಿಕ್ಕಾಪಟ್ಟೆ ಫೇಮಸ್. ಅಣ್ಣಾವ್ರು ಹಾಡಿದ ಈ ಹಾಡು ಇಂದಿನ ಯುವ ಪೀಳಿಗೆಯ ಬಾಯಲ್ಲೂ ಕೇಳುವುದಕ್ಕೆ ಸಿಗುತ್ತೆ. ಇದೊಂದು ಕೇವಲ ಫೇಮಸ್ ಸಾಂಗ್ ಅಷ್ಟೇ ಅಲ್ಲ. ಈ ಹಾಡಿನ ಹಿಂದೊಂದು ಇತಿಹಾಸವಿದೆ. ಈ ಹಾಡಿಗೊಂದು ಕಥೆಯಿದೆ.
ಆ ಕಥೆಯೇನು ಅನ್ನೋದನ್ನೇ 2024ರ ಯುವ ದಸರಾದ ಸಂಭ್ರಮದಲ್ಲಿ ಸಂಗೀತ ಮಾಂತ್ರಿಕ ರಿವೀಲ್ ಮಾಡಿದ್ದಾರೆ. ಅಣ್ಣಾವ್ರಿಗೆ ಲೆಜೆಂಡರಿ ಗಾಯಕ ಪಿ.ಬಿ. ಶ್ರೀನಿವಾಸ್ ಧ್ವನಿಯಾಗಿದ್ದವರು. ಇವರು ಹಾಡಿದರೆ ಅಣ್ಣಾವರೇ ಹಾಡಿದಂತೆ ಅನಿಸುತ್ತಿತ್ತು. ಆದರೆ, 'ಸಂಪತ್ತಿಗೆ ಸವಾಲ್' ಸಿನಿಮಾದ ಮೂಲಕ ಡಾ.ರಾಜ್‌ಕುಮಾರ್ ಹಾಡುವುದಕ್ಕೆ ಶುರು ಮಾಡಿದ್ದರು.

'ಸಂಪತ್ತಿಗೆ ಸವಾಲ್' ಸಿನಿಮಾದ "ಯಾರೇ ಕೂಗಾಡಲಿ.." ಹಾಡು ಡಾ.ರಾಜ್‌ಕುಮಾರ್ ಹಾಡಿದ ಮೊದಲ ಹಾಡು. ರಾಜ್‌ಕುಮಾರ್ ಅವರಿಗೆ ಈ ಹಾಡನ್ನು ಹಾಡುವಂತೆ ಸಲಹೆ ಕೊಟ್ಟಿದ್ದೇ ಇಳಯರಾಜ. ಯುವ ದಸರಾದಲ್ಲಿ ಕಾರ್ಯಕ್ರಮ ನಡೆಸಿಕೊಟ್ಟಿದ್ದ ಇಳಯರಾಜ ಅದ್ಹೇಗೆ ರಾಜ್‌ಕುಮಾರ್ ಅವರನ್ನು ಹಾಡಲು ಒಪ್ಪಿಸಿದ್ದರು ಅನ್ನೋದನ್ನು ನಿರ್ದೇಶಕ ಎಸ್.ನಾರಾಯಣ್ ಅವರ ಮುಂದೆ ರಿವೀಲ್ ಮಾಡಿದ್ದಾರೆ.
'ಸಂಪತ್ತಿಗೆ ಸವಾಲ್' ಸಿನಿಮಾಗೆ ಜಿ.ಕೆ. ವೆಂಕಟೇಶ್ "ಯಾರೇ ಕೂಗಾಡಲಿ.." ಅಂತ ಟ್ಯೂನ್ ಹಾಕಿದ್ದರು. ಈ ವೇಳೆ ಈ ಹಾಡನ್ನು ಪಿಬಿಎಸ್‌ಗಿಂತ ಬೇರೆಯವರು ಹಾಡಿದರೆ ಉತ್ತಮ ಅಂತ ಅನಿಸಿತ್ತು. ಆಗ ಜಿ.ಕೆ. ವೆಂಕಟೇಶ್ ಅವರಿಗೆ ಇಳಯರಾಜ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು.

"ಸಂಪತ್ತಿಗೆ ಸವಾಲ್ ಸಿನಿಮಾವನ್ನು ಜಿಕೆ ವೆಂಕಟೇಶ್ ಮ್ಯೂಸಿಕ್ ಮಾಡುತ್ತಾರೆ. ಅವರಿಗೆ ನಾನು ಅಸಿಸ್ಟೆಂಟ್. ಅವರು ಕಂಪೋಸ್ ಮಾಡುವಾಗ ಯಾರೇ ಕೂಗಾಡಲಿ ಅಂತ ಸನ್ನಿವೇಶ ಹೇಳಿದರು. ಅದನ್ನು ಯಾರು ಹಾಡುತ್ತಾರೆ ಅಂದೆ, ರಾಜ್‌ಕುಮಾರ್ ಅಣ್ಣನಿಗೆ ಯಾವಾಗಲೂ ಪಿ ಬಿ ಶ್ರೀನಿವಾಸ್ ಹಾಡುತ್ತಾ ಬಂದಿದ್ದರು. ಈ ಹಾಡು ತುಂಬಾನೇ ಖುಷಿಯಾಗಿದೆ. ಅದಕ್ಕೆ ಪಿ ಬಿ ಶ್ರೀನಿವಾಸ್ ಹಾಡಿದರೇ ಹೇಗಿರುತ್ತೆ? ಎಂದು ಹೇಳಿದ್ದೆ" ಎಂದು ಆ ಸನ್ನಿವೇಶವನ್ನು ವಿವರಿಸಿದ್ದಾರೆ.
"ಯಾರೇ ಕೂಗಾಡಲಿ.." ಸಾಂಗ್ ಪಿಬಿಎಸ್ ಹಾಡಬಾರದು ಅನ್ನೋದು ಇಳಯರಾಜ ಅವರ ಉದ್ದೇಶ ಆಗಿರಲಿಲ್ಲ. ಇದು ಹೈ ಪಿಚ್ ಸಾಂಗ್ ಆಗಿದ್ದರಿಂದ ಬೇರೆಯವರು ಹಾಡಬೇಕು ಅನ್ನೋದು ಇಳಯರಾಜ ಅವರ ಆಸೆಯಾಗಿತ್ತು. "ಪಿ ಬಿ ಶ್ರೀನಿವಾಸ್ ಹಾಡಿದರೆ ಹೇಗಿರುತ್ತೆ ಅಂತ ತಿಳಿದುಕೊಳ್ಳಬೇಡ. ಅವರು ಚೆನ್ನಾಗಿಯೇ ಹಾಡುತ್ತಾರೆ. ಆದರೆ, ಈ ಹಾಡಿಗೆ ಪಂಚ್ ಬರಬೇಕಾದರೆ, ನಾವು ಹೊಸ ವಾಯ್ಸ್ ಅನ್ನು ಇಂಟ್ರುಡ್ಯೂಸ್ ಮಾಡಬೇಕು. ಅದನ್ನು ಜಿ ಕೆ ವೆಂಕಟೇಶ್ ಅವರ ಬಳಿ ಹೇಳಿದೆ." ಎನ್ನುತ್ತಾರೆ.
"ನಾನು ಎಸ್‌ಪಿ ಬಾಲಸುಬ್ರಹ್ಮಣ್ಯಂ ಅಂದೆ. ಜಿಕೆವಿ ಅವರು ಈ ಹಿಂದೆ ಹಾಡಿದಂತೆ ಬರುತ್ತೆ. ಅದು ಚೆನ್ನಾಗಿ ಬರೋದಿಲ್ಲ. ಆಗ ನಾನು ಮತ್ತೆ ಏನು ಮಾಡೋಣ ಅಣ್ಣ ಅಂದೆ, ಅದಕ್ಕೆ ರಾಜ್‌ಕುಮಾರ್ ಹಾಡ್ತಾರಲ್ಲ ಅಂದರು. ರಾಜ್‌ಕುಮಾರ್ ಹಾಡ್ತಾರಾ ಅಂದೆ ನಾನು? ಅವರು ನಾಟಕದಿಂದ ಬಂದೋರು ಕಣಯ್ಯ ಅಂದರು. ಸ್ಟೇಜ್‌ನಲ್ಲಿ ಪ್ರಾಕ್ಟೀಸ್ ಮಾಡಿ ಹಾಡಿದವರು ಅಂತನೂ ಅಂದರು. ಹಾಗಿದ್ದರೆ, ಅವರೇ ಹಾಡಬಹುದಲ್ಲ ಅಂತ ಹೇಳಿದೆ." ಎಂದು ಇಳಯರಾಜ ಹೇಳಿದ್ದಾರೆ.
ಆಗ ರಾಜ್‌ಕುಮಾರ್ ಅವರಿಗೆ ಇಳಯರಾಜ ಟ್ಯೂನ್ ಅನ್ನು ಕೇಳಿಸಿ ಹಾಡನ್ನು ಹೇಳುವಂತೆ ಕೇಳಿಕೊಂಡಿದ್ದರು. "ರಾಜ್‌ಕುಮಾರ್ ಅವರ ಬಳಿಕ ಹೋಗಿ ಹೇಳಿದಾಗ, ಯಾಕೆ.? ಅವರ ಲೈಫ್ ನಡೀತಾ ಇದೆ. ಬಿಟ್ಟು ಬಿಡಿ ಬೇಡ ಅಂದರು. ಅವರಿಗೆ ಎಷ್ಟು ಒಳ್ಳೆಯ ಮನಸ್ಸು ಇದೆ ನೋಡಿ. ರಾಜ್‌ಕುಮಾರ್ ಅವರಿಗೆ ಟ್ಯೂನ್ ಕೇಳಿ ಆ ಮೇಲೆ ಡಿಸೈಡ್ ಮಾಡಿ ಅಂತ ಹೇಳಿದೆ. ಜಿ ಕೆ ವೆಂಕಟೇಶ್ ಅವರು ಹಾಡಿ ತೋರಿಸು ಅಂದರು. ನಾನು ಯಾರೇ ಕೂಗಾಡಲಿ ಅಂತ ಹಾಡಿದೆ. ಚೆನ್ನಾಗಿದೆಯಲ್ಲ ನಾನೇ ಹಾಡುತ್ತೇನೆ ಎಂದರು. ಹಾಗಾಗಿ ಫಸ್ಟ್ ರಾಜ್‌ಕುಮಾರ್ ಅಣ್ಣನನ್ನು ಹಾಡಿಸಿದ್ದು ನಾನೇ. ಅವರ ಸಿನಿಮಾ ಮ್ಯೂಸಿಕ್ ಮಾಡುವಾಗ ಹಾಡಿದ ಮೊದಲ ಹಾಡು ನನ್ನ ನೀನು ಗೆಲ್ಲಲಾರೆ."


Click it and Unblock the Notifications











