"ತುಂಬಾ ಒಳ್ಳೆಯವನಾಗಿರೋದು ಕಷ್ಟ.. ಸ್ವಲ್ಪ ಕೆಟ್ಟವನಾಗಿ ಇರೋಣ"; ಬರ್ತ್‌ಡೇ ದಿನವೇ ದರ್ಶನ್ ಹೀಗಂದಿದ್ಯಾಕೆ?
ಚಾಲೆಂಜಿಂಗ್ ಸ್ಟಾರ್ ದರ್ಶನ್ 47ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಿನ್ನೆ ಮಧ್ಯರಾತ್ರಿಯಿಂದಲೇ ತಮ್ಮ ಅಭಿಮಾನಿಗಳೊಂದಿಗೆ ಬರ್ತ್‌ಡೇ ಆಚರಿಸಿಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಕೂಡ ದೂರದ ಊರುಗಳಿಂದ ಬಂದು ತಮ್ಮ ನೆಚ್ಚಿನ ನಟನಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳುತ್ತಿದ್ದಾರೆ. ದರ್ಶನ್ ಜೊತೆ ನಿಂತು ಫೋಟೊಗಳನ್ನು ತೆಗೆಸಿಕೊಳ್ಳುತ್ತಿದ್ದಾರೆ.
ದರ್ಶನ್ ಕೂಡ ಅಭಿಮಾನಿಗಳ ಸಂಭ್ರಮದಲ್ಲಿ ಖುಷಿ ಖುಷಿಯಾಗಿ ಭಾಗಿಯಾಗುತ್ತಿದ್ದಾರೆ. ಇದೇ ವೇಳೆ ದರ್ಶನ್ ಗ್ರೀನ್ ಸಿಗ್ನಲ್ ಕೊಟ್ಟಿರೋ ಹೊಚ್ಚ ಹೊಸ ಸಿನಿಮಾಗಳು ಕೂಡ ಅನೌನ್ಸ್ ಆಗಿವೆ. ಅದರಲ್ಲೂ 'ಡೆವಿಲ್; ದಿ ಹೀರೊ' ಸಿನಿಮಾ ಕೂಡ ಒಂದು. ಈ ಸಂಭ್ರಮದ ವೇಳೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಒಂದ್ಕಡೆ ದರ್ಶನ್ ಹುಟ್ಟುಹಬ್ಬ. ಇನ್ನೊಂದು ಕಡೆ ದರ್ಶನ್ 25 ವರ್ಷಗಳ ಸಂಭ್ರಮ. ಬ್ಯಾಕ್ ಟು ಬ್ಯಾಕ್ ಸಂಭ್ರಮದಲ್ಲಿ ಅಭಿಮಾನಿಗಳು ಮಿಂದೇಳಲಿದ್ದಾರೆ. ಈ ಸಂದರ್ಭದಲ್ಲಿ ಸಿನಿಮಾ ಜರ್ನಿ, ಡೆವಿಲ್ ಸಿನಿಮಾ ಹಾಗೂ ತಂದೆ ತೂಗುದೀಪ ಶ್ರೀನಿವಾಸ್ ಬಗ್ಗೆ ಚುಟುಕಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇದೇ ವೇಳೆ ಒಳ್ಳೆಯವನಾಗಿರೋದು ಕಷ್ಟ ಆಗುತ್ತಿದೆ. ಸ್ವಲ್ಪ ಕೆಟ್ಟವನಾಗಿ ಇರೋಣ ಅಂತ ಹೇಳಿದ್ದೇಕೆ? ಅನ್ನೋದನ್ನು ತಿಳಿಯಲು ಮುಂದೆ ಓದಿ..
ನಾಳೆ (ಫೆಬ್ರವರಿ 17) ದರ್ಶನ್ ಚಿತ್ರರಂಗದಲ್ಲಿ 25 ವರ್ಷಗಳನ್ನು ಪೂರೈಸಿದ ಬೆನ್ನಲ್ಲೇ 'D 25' ಬೆಳ್ಳಿ ಪರ್ವ ಕಾರ್ಯಕ್ರಮ ನಡೆಯಲಿದೆ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಈ ಈ ಸಮಾರಂಭ ನಡೆಯಲಿದ್ದು, ಈಗಾಗಲೇ ಸಕಲ ಸಿದ್ಧತೆಗಳು ಜೋರಾಗಿಯೇ ನಡೆಯುತ್ತಿವೆ. ಹುಟ್ಟುಹಬ್ಬದ ಸಂಭ್ರಮದಲ್ಲಿರುವ ದರ್ಶನ್ 25 ವರ್ಷಗಳ ಜರ್ನಿ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. "ಕಷ್ಟ ಪಟ್ಟರೆ 25 ವರ್ಷದ್ದು ಅಲ್ಲ. 100 ವರ್ಷದ್ದು ಮಾಡಬಹುದು. ಯಾವ ಕೆಲಸದಲ್ಲಿ ಶ್ರದ್ಧೆ ಇಡುತ್ತೇವೋ ಅದು ಆಗುತ್ತೆ." ಎಂದು ಚುಟುಕಾಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಇದೇ ಸಂದರ್ಭದಲ್ಲಿ 'ಕಾಟೇರ' ಸಿನಿಮಾದ ಮೆಗಾ ಯಶಸ್ಸಿನ ಬಗ್ಗೆನೂ ಮಾತಾಡಿದ್ದಾರೆ. ಈ ಸಿನಿಮಾದಿಂದ ತನ್ನ ಬದುಕಿನಲ್ಲೇನು ಬದಲಾವಣೆ ಆಗಿಲ್ಲ. ಆದರೆ, ಚಿತ್ರರಂಗಕ್ಕೆ ಒಳ್ಳೆಯದಾಗಿದೆ ಎಂದು ಹೇಳಿದ್ದಾರೆ. "ಕಾಟೇರ ಗೆಲುವು ನಮಗೆ ಏನೂ ಬದಲಾವಣೆ ತಂದುಕೊಟ್ಟಿಲ್ಲ. ಚಿತ್ರರಂಗಕ್ಕೆ ಒಳ್ಳೆಯದಾಯ್ತು ಅಷ್ಟೇ.. " ಎಂದಿದ್ದಾರೆ.
ದರ್ಶನ್ ಬರ್ತ್‌ಡೇ ಖುಷಿಯಲ್ಲಿ 57ನೇ ಸಿನಿಮಾ 'ಡೆವಿಲ್' ಫಸ್ಟ್ ಲುಕ್ ಅನ್ನು ರಿವೀಲ್ ಮಾಡಲಾಗಿದೆ. ದರ್ಶನ್ ಲುಕ್ ಹಾಗೂ ಮ್ಯಾನರಿಸಂಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅದರಲ್ಲೂ ಡೈಲಾಗ್ ವೈರಲ್ ಆಗುತ್ತಿದೆ. "ಅದೊಂದು ಪದ್ಯ.. ಅದನ್ನೇ ಇಟ್ಟುಕೊಂಡಿದ್ದೇವೆ. ಡೆವಿಲ್ ಕಂಟೆಂಟ್ ಏನು ಅನ್ನೋದಕ್ಕೆ ಆಗಸ್ಟ್‌ವರೆಗೂ ಕಾಯೀರಿ ಎಲ್ಲಾ ಗೊತ್ತಾಗುತ್ತೆ. " ಎಂದಿದ್ದಾರೆ. ಹಾಗೇ "ಸಾಕಮ್ಮ ತುಂಬಾ ಒಳ್ಳೆಯವನಾಗಿರೋದು ಕಷ್ಟ ಆಗುತ್ತಿದೆ. ಸ್ವಲ್ಪ ಕೆಟ್ಟವನಾಗಿ ಇರೋಣ" ಎಂದು ತಮ್ಮ ವಿಲನ್ ಲುಕ್ ಬಗ್ಗೆ ಹೇಳಿದ್ದಾರೆ.
ಕನ್ನಡದ ಸೂಪರ್‌ಸ್ಟಾರ್‌ಗಳು ವರ್ಷಕ್ಕೆ ಎರಡು ಸಿನಿಮಾ ಮಾಡಬೇಕು ಅನ್ನೋ ಒತ್ತಾಸೆ ಚಿತ್ರರಂಗದಿಂದ ಇದೆ. ಆ ಪ್ರಶ್ನೆಗೆ ದರ್ಶನ್ ಹೇಳಿದ್ದಿಷ್ಟು. "ಮೊದಲಾದರೆ, 30, 40 ದಿನಗಳಲ್ಲಿ ಒಂದು ಸಿನಿಮಾ ಮಾಡುತ್ತಿದ್ವಿ. ಕ್ಯಾಮರಾಮ್ಯಾನ್ , ಡೈರೆಕ್ಟರ್ ಫೈನಲ್ ಮಾಡಿದ್ರೆ ಆಗ್ತಿತ್ತು. ಈಗ ಮಾನಿಟರ್ ಇದೆ. ಯಾವನೋ ಫ್ರೆಂಡ್ ಬಂದು ಒನ್ಸ್ ಮೋರ್ ಅಂದರೂ ಮಾಡುತ್ತೇವೆ. ಮಾನಿಟರ್ ಅಷ್ಟೊಂದು ಬದಲಾವಣೆಯನ್ನು ತಂದಿದೆ. ಅದರಿಂದ ಮುಂದಕ್ಕೆ ಹೋಗುತ್ತಿದ್ದೇವೆ. ಆದರೂ ಅದರಿಂದ ಕಷ್ಟ ಆಗುತ್ತಿದೆ. ನಾನು ವರ್ಷಕ್ಕೆ ಎರಡು ಸಿನಿಮಾ ಮಾಡೋಕೆ ಟ್ರೈ ಮಾಡ್ತೀನಿ. ಆದರೆ, ಸೆಟ್ಟು ಹಾಕೋದು, ಅದೂ ಇದು ಅಂತ ಸ್ವಲ್ಪ ಸಮಯ ಹಿಡಿಯುತ್ತೆ." ಎಂದು ಪ್ರತಿಕ್ರಿಯಿಸಿದ್ದಾರೆ.
ಹಾಗೇ 25 ವರ್ಷಗಳ ಸಿನಿಮಾ ಜರ್ನಿಯ ವೇಳೆ ಸೋಶಿಯಲ್ ಮೀಡಿಯಾದಲ್ಲಿ ಅಪ್ಪನ ಹೆಸರು ಉಳಿಸಿಬಿಟ್ಟೆ ಕಣಯ್ಯ ಅಂತ ಟ್ರೆಂಡ್ ಆಗುತ್ತಿದೆ. ಈ ಬಗ್ಗೆನೂ ಪ್ರಶ್ನೆ ಮಾಡಲಾಗಿತ್ತು. ಆಗ "ನಮ್ಮ ಅಪ್ಪ ಇದ್ದಿದ್ದರೆ ಪಕ್ಕದಲ್ಲಿ ನಿಲ್ಲಿಸಿಕೊಂಡು ಮಾತಾಡುತ್ತಿದ್ದೆ. ಈಗ ಅವಯ್ಯ ಇಲ್ವಲ್ಲ. ಸುಮ್ಮನೆ ಯಾಕೆ ಮಾತಾಡೋಣ" ಎಂದು ದರ್ಶನ್ ಪ್ರತಿಕ್ರಿಯೆ ನೀಡಿದ್ದಾರೆ.


Click it and Unblock the Notifications











