"ಸುದೀಪ್ ಅವರು ನನ್ನ ಪರ ಮಾತಾಡಿದ್ದು ಖುಷಿ ಆಯ್ತು.. ಅವರು ದೊಡ್ಡವರು"; ಹಯಗ್ರೀವ ಧನ್ವೀರ್
ಸ್ಯಾಂಡಲ್‌ವುಡ್‌ನಲ್ಲಿ ಎಲ್ಲವೂ ಸರಿಯಾಗಿಲ್ಲ. ಒಂದು ಕಡೆ ಪ್ಯಾನ್ ಇಂಡಿಯಾ ಸಿನಿಮಾಗಳು ಸದ್ದು ಮಾಡುತ್ತಿದ್ದರೆ, ಇನ್ನೊಂದು ಕಡೆ ಸ್ಮಾಲ್ ಬಜೆಟ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಗೆಲ್ಲುವುದಕ್ಕೆ ಪರದಾಡುತ್ತಿವೆ. ಈ ಮಧ್ಯೆ ಕನ್ನಡ ಚಿತ್ರರಂಗದಲ್ಲಿ ಇರುವ ಕೆಲವೇ ಕೆಲವು ಸೂಪರ್‌ಸ್ಟಾರ್‌ಗಳ ಮಧ್ಯೆ ವೈಮನಸ್ಸು ಇದೆ ಅನ್ನೋ ಅಭಿಪ್ರಾಯವಿದೆ.
ಇನ್ನು ಕನ್ನಡ ಚಿತ್ರರಂಗಕ್ಕೆ ಅಂತಲೇ ವರ್ಷಕ್ಕೆ ಒಂದು ಇಲ್ಲವೇ ಎರಡು ಸಿನಿಮಾಗಳನ್ನು ಮಿಸ್ ಇಲ್ಲದೇ ಕೊಡುತ್ತಿದ್ದ ದರ್ಶನ್ ಜೈಲಿನಲ್ಲಿದ್ದಾರೆ. ಹೀಗಾಗಿ ಸಿಂಗಲ್ ಸ್ಕ್ರೀನ್‌ಗಳು ಸೊರಗಿವೆ. ಈ ಮಧ್ಯೆ ದರ್ಶನ್ ಹಾಗೂ ಕಿಚ್ಚ ಸುದೀಪ್ ಅಭಿಮಾನಿಗಳು ಪರಿಸ್ಪರ ಕಿತ್ತಾಡುತ್ತಿದ್ದಾರೆ. ಇನ್ನೊಂದು ಕಡೆ ಕೆಲವರು ಚಿತ್ರರಂಗದ ಬಗ್ಗೆ ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ.

ಈ ಮಧ್ಯೆ ದರ್ಶನ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಧನ್ವೀರ್ ತಮ್ಮ ಸಿನಿಮಾ 'ಹಯಗ್ರೀವ' ಪ್ರಚಾರದಲ್ಲಿ ನಿರತರಾಗಿದ್ದಾರೆ. ಈ ವೇಳೆ ದರ್ಶನ್ ಬಗ್ಗೆ, ಕಿಚ್ಚ ಸುದೀಪ್ ಬಗ್ಗೆ ಹಾಗೂ ವಿಜಯಲಕ್ಷ್ಮಿ ದರ್ಶನ್ ಅವರ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ. ಅದರಲ್ಲೂ ದರ್ಶನ್ ಹಾಗೂ ಸುದೀಪ್ ನಡುವಿನ ವೈಮನಸ್ಸು ಹಾಗೂ ದರ್ಶನ್ 'ಡೆವಿಲ್' ಸಿನಿಮಾವನ್ನು ಪತ್ನಿ ವಿಜಯಲಕ್ಷ್ಮಿ ಫಸ್ಟ್ ಡೇ ಫಸ್ಟ್ ಶೋ ಯಾಕೆ ನೋಡಿದ್ರು? ಅನ್ನೋದನ್ನು ಬಾಸ್ ಟಿವಿಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ. ಆ ಸಂದರ್ಶನದ ಒಂದು ಝಲಕ್ ಇಲ್ಲಿದೆ.
"ದೇವರು ಲೆಕ್ಕ ಸರಿಯಾಗಿ ಇಟ್ಟಿದ್ದರೆ ಸಾಕು"
ರೇಣುಕಾಸ್ಟಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿ ಜೈಲು ಸೇರಿರುವ ದರ್ಶನ್ ಪರ ಧನ್ವೀರ್ ನಿಂತಿದ್ದಾರೆ. ಪ್ರತಿಯೊಂದು ಹಂತದಲ್ಲಿಯೂ ಧನ್ವೀರ್ ಸಾಥ್ ಕೊಟ್ಟಿದ್ದರು. ಆ ಬಗ್ಗೆ ಧನ್ವೀರ್ ಪ್ರತಿಕ್ರಿಯೆ ನೀಡಿದ್ದಾರೆ. "ನನಗೆ ಎಲ್ಲಾ ಬರುತ್ತೆ ಅಂತ ಗೊತ್ತಿದ್ದೇ ತಲೆ ಕೆಡಿಸಿಕೊಂಡು ನಿಂತಿದ್ವಿ. ಎಲ್ಲಾ ತಲೆಗೆ ಹಾಕೊಂಡು ಮೀಡಿಯಾ ಮುಂದೆ ಕೂತಿರುತ್ತಾರಲ್ಲ. ಅಂತಹ ಮಕ್ಕಳು ನಾವಲ್ಲ. ನಾವು ಎಲ್ಲದಕ್ಕೂ ರೆಡಿ. ಒಬ್ಬ ವ್ಯಕ್ತಿಯನ್ನು ಇಷ್ಟಪಡುತ್ತೇವೆ ಅಂದರೆ, ಅದು ಎಂತಹದ್ದೇ ಬರಲಿ, ಸಾಯುವತನಕ ಬಿಡುವುದಿಲ್ಲ. ಪೊಲೀಸ್ ಅದೂ ಇದು ಏನೇನೋ ನಡೀತು. ನಾನು ತಲೆ ಕೆಡಿಸಿಕೊಂಡಿಲ್ಲ. ಇವೆಲ್ಲ ಬರುತ್ತೆ ಅಂತ ಯೋಚನೆ ಮಾಡಿಕೊಂಡು ಮನೆಯಲ್ಲಿ ಕೂರುವುದಕ್ಕೆ ಆಗುತ್ತಾ? ಮೇಲೊಬ್ಬ ಇದ್ದಾನೆ. ದೇವರು ಲೆಕ್ಕ ಸರಿಯಾಗಿ ಇಟ್ಟಿದ್ದರೆ ಸಾಕು." ಎಂದು ಧನ್ವೀರ್ ಹೇಳಿದ್ದಾರೆ.

"ಸುದೀಪ್ ದೊಡ್ಡೋರು"
ದರ್ಶನ್ ಪರ ನಿಂತಿದ್ದಕ್ಕೆ ಧನ್ವೀರ್ ಬಗ್ಗೆ ಕಿಚ್ಚ ಸುದೀಪ್ ಮೆಚ್ಚುಗೆ ಮಾತುಗಳನ್ನು ಆಡಿದ್ದರು. ಆ ಬಗ್ಗೆನೂ ಪ್ರತಿಕ್ರಿಯೆ ನೀಡಿದ್ದಾರೆ. "ಯಾವ ಸ್ಟಾರ್ ವಾರ್ ಕೂಡ ಇಲ್ಲ. ಇದು ಆಗದೇ ಇರೋರು ಕೂತ್ಕೊಂಡು ಮಾಡುವ ಕೆಲಸ ಅಷ್ಟೇ. ಅವರವರು ಚೆನ್ನಾಗಿಯೇ ಇರುತ್ತಾರೆ. ಮಧ್ಯದಲ್ಲಿ ಇರುತ್ತಾರಲ್ಲ ಅವರು ಮಾಡುವ ಕೆಲಸ ಅಷ್ಟೇ. ಸುದೀಪ್ ಅವರು ನನ್ನ ಪರ ವಹಿಸಿಕೊಂಡು ಮಾತಾಡಿದ್ದು ಖುಷಿ ಆಯ್ತು. ದೊಡ್ಡೋರು ಅಂತ ಯಾಕೆ ಹೇಳ್ತಾರೆ ಅಂದರೆ, ಅವರಿಗೆ ಗೊತ್ತಿರುತ್ತೆ. ಏನು? ಎತ್ತ ಅಂತ. ಅದಕ್ಕೆ ದೊಡ್ಡ ಮಾತುಗಳನ್ನು ಆಡುತ್ತಾರೆ. ಕೆಲವು ಕೈಯಲ್ಲಿ ಆಗದೇ ಇರೋರು ಇರುತ್ತಾರೆ ಗೊತ್ತಾ? ಅವರು ಆಡೋ ಮಾತುಗಳು ಇವು. ಅವರು ಏನು ಹೇಳಿದ್ರು ಹೇಳಿ. ಅದು ನಮಗೆ ಖುಷಿ ಆಯ್ತು. ಅಂತಹ ಮಾತು ಆಡಬೇಕು. ಅದನ್ನು ಬಿಟ್ಟು ಎಲ್ಲೋ ಕೂತು ಮಾತಾಡುತ್ತಾರಲ್ಲ, ಅದು ನೋಡಿ ಕಲೀಬೇಕು. ಅಂತಹ ದೊಡ್ಡ ಮನುಷ್ಯ ಹಾಗೇ ಮಾತಾಡಿರಬೇಕಾದರೆ, ಇವರು ಯಾವ ಲೆಕ್ಕ." ಎಂದು ಧನ್ವೀರ್ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.
ವಿಜಯಲಕ್ಷ್ಮಿ ದರ್ಶನ್ 'ಡೆವಿಲ್' ನೋಡಿದ್ದೇಕೆ?
ದರ್ಶನ್ ಜೈಲಿನಲ್ಲಿದ್ದಾಗ, 'ಡೆವಿಲ್' ಪರ ವಿಜಯಲಕ್ಷ್ಮಿ ನಿಂತಿದ್ದರು. ಅಭಿಮಾನಿಗಳನ್ನು ಹುರಿದುಂಬಿಸಿದ್ದರು. ಅಷ್ಟೇ ಅಲ್ಲದೆ, ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡಿದ್ದೇಕೆ? ಅನ್ನೋದನ್ನು ಧನ್ವೀರ್ ರಿವೀಲ್ ಮಾಡಿದ್ದಾರೆ. "ಅಕ್ಕ ಕೂಡ ಎಷ್ಟೋ ವರ್ಷ ಆಗಿತ್ತಂತೆ ಥಿಯೇಟರ್‌ನಲ್ಲಿ ಸಿನಿಮಾ ನೋಡಿ. ಎಲ್ಲರೂ ಕೂತು ಪ್ಲ್ಯಾನ್ ಮಾಡುವಾಗ ನಡೀರಿ ಅಕ್ಕ ಹೋಗೋಣ ಫಸ್ಟ್ ಡೇ ಫಸ್ಟ್ ಶೋ ಅಂತ ಕರ್ಕೊಂಡು ಹೋದ್ವಿ. ಅಣ್ಣನ ಡಿ ಬಾಸ್ ಬಳಗ ಏನಿದೆ, ಅದಕ್ಕೆ ಧೈರ್ಯ ಅನ್ನೋದು ಈ ಪರಿಸ್ಥಿತಿಯಲ್ಲಿ ಬೇಕು. ಅದಕ್ಕೆ ಪ್ಲ್ಯಾನ್ ಮಾಡಿ, ಅಕ್ಕ ನೀವು ಈಗ ನಿಂತುಕೊಳ್ಳಬೇಕು. ಈ ಸಂದರ್ಭದಲ್ಲಿ ಅವರಿಗೆ ಏನೋ ಒಂದು ಧೈರ್ಯಬೇಕು ಅಂದ್ವಿ. ಅದಕ್ಕೆ ಅವರು ಖುದ್ದಾಗಿ ಬಂದು ಸಿನಿಮಾ ನೋಡಿ ಖುಷಿ ಪಟ್ಟಿದ್ದಾರೆ." ಎಂದಿದ್ದಾರೆ.
ದೇವರ ಇಚ್ಚೆ ಮುಂದೇನಾಗುತ್ತೋ ನೋಡೋಣ
'ವಾಮನ' ಸಿನಿಮಾ ರಿಲೀಸ್ ಆದಾಗ, ದರ್ಶನ್ ಜೈಲಿನಿಂದ ಹೊರ ಬಂದಿದ್ದರು. ಆ ವೇಳೆ ಸಿನಿಮಾಗೆ ಸಪೋರ್ಟ್ ಮಾಡಿದ್ದರು. 'ಹಯಗ್ರೀವ' ರಿಲೀಸ್ ವೇಳೆ ಅವರು ಇಲ್ಲ ಅನ್ನೋ ಬೇಸರದಲ್ಲಿ ಧನ್ವೀರ್ ಇದ್ದಾರೆ. "ನಾನು ಯಾವಾಗ ಫ್ರೀ ಇರುತ್ತೇನೋ ಆಗ ಹೋಗಿ ಮಾತಾಡಿಸಿಕೊಂಡು ಬರುತ್ತೇನೆ. ಒಂದು ಬೇಜಾರು ಏನಂದ್ರೆ, ಹಿಂದಿನ ಸಿನಿಮಾ ಅವರು ಇದ್ದಾಗಲೇ ರಿಲೀಸ್ ಮಾಡಿದ್ವಿ. ಈ ಬಾರಿ ಕಾರಣಾಂತರದಿಂದ ಅವರು ಇಲ್ಲದೇ ಇರಬಹುದು. ಮುಂದಕ್ಕೆ ನೋಡೋಣ. ದೇವರ ಇಚ್ಚೆ. ಒಳ್ಳೆಯದು ಆದರೂ ಆಗಬಹುದು." ಎಂದು ಧನ್ವೀರ್ ಹೇಳಿದ್ದಾರೆ.


Click it and Unblock the Notifications









