"ಚಿತ್ರರಂಗ ಯಾವುದೋ ಒಂದು ಗುಂಪಲ್ಲ.. ಯಾರೊಬ್ಬರದ್ದೂ ಅಲ್ಲ.. ಎಲ್ಲರದ್ದು" - ಡಾಲಿ ಧನಂಜಯ್
ನಟರಾಕ್ಷಸ ಡಾಲಿ ಧನಂಜಯ್ ಕಷ್ಟ ಪಟ್ಟು ಚಿತ್ರರಂಗದಲ್ಲಿ ನೆಲೆ ಕಂಡುಕೊಂಡಿರೋ ನಟ. ಚಿತ್ರರಂಗಕ್ಕೆ ಕಾಲಿಟ್ಟಾಗ ಅವರೂ ಏಳು ಬೀಳುಗಳನ್ನು ಕಂಡಿದ್ದಾರೆ. ಅವಮಾನಗಳನ್ನು ಸಹಿಸಿಕೊಂಡಿದ್ದಾರೆ. ಸತತ ಸೋಲಿನ ಬಳಿಕ ಛಲ ಬಿಡದೆ ಗೆದ್ದು ತೋರಿಸಿದ್ದಾರೆ. ಹೀಗಾಗಿ ಚಿತ್ರರಂಗದಲ್ಲಿ ಆಸರೆ ಬಯಸಿ ಬರುವವರಿಗೆ ಬೆನ್ನೆಲುಬಾಗಿ ನಿಂತಿದ್ದಾರೆ.
ಇತ್ತೀಚೆಗೆ ಡಾಲಿ ಧನಂಜಯ್ 'ಕ್ಷೇತ್ರಪತಿ' ಸಿನಿಮಾದ ಪ್ರೀ ರಿಲೀಸ್ ಈವೆಂಟ್‌ಗೆ ಅತಿಥಿಯಾಗಿ ಹೋಗಿದ್ದರು. ಯುವ ಪ್ರತಿಭೆ ನವೀನ್ ಶಂಕರ್ ಸಿನಿಮಾಗಳಿಗೆ ಮೊದಲಿನಿಂದಲೂ ಬೆಂಬಲ ನೀಡುತ್ತಲೇ ಬಂದಿರೋ ಡಾಲಿಗೆ ಈ ಬಾರಿ ಕೂಡ ಸಿನಿಮಾ ನೋಡುವಂತೆ ಪ್ರೇಕ್ಷಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಕ್ರೇತ್ರಪತಿ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಮಾತಾಡುವಾಗ ಚಿತ್ರರಂಗದ ಬಗ್ಗೆ, ಅಲ್ಲಿನ ಗುಂಪುಗಳ ಬಗ್ಗೆ ಮನ ಬಿಚ್ಚಿ ಮಾತಾಡಿದ್ದಾರೆ. ಹಾಗೇ ಯುವ ಪ್ರತಿಭೆಗಳು ಅವರಿಗೆ ಬೆಂಬಲ ನೀಡುವುದರ ಬಗ್ಗೆನೂ ಧನಂಜಯ್ ಖಡಕ್ ಆಗಿ ಮಾತಾಡಿದ್ದಾರೆ. ಅದರ ಸಾರಾಂಶ ಇಲ್ಲಿದೆ.
ಗೆಳೆಯ ನವೀನ್ ಶಂಕರ್‌ಗೆ ಸಪೋರ್ಟ್
'ಗುಲ್ಟು' ಸಿನಿಮಾದ ಹೀರೊ ನವೀನ್ ಶಂಕರ್ ಸ್ಯಾಂಡಲ್‌ವುಡ್‌ನಲ್ಲಿ ಗಮನ ಸೆಳೆಯುತ್ತಿರುವ ನಟ. ವಿಭಿನ್ನ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಈ ನಟನ ಮತ್ತೊಂದು ಸಿನಿಮಾವೇ 'ಕ್ಷೇತ್ರಪತಿ'. ಈ ಸಿನಿಮಾ ಈಗಾಗಲೇ ಟೀಸರ್ ಹಾಗೂ ಟ್ರೈಲರ್‌ನಿಂದ ಗಮನ ಸೆಳೆಯುತ್ತಿದೆ. ನವೀನ್ ಶಂಕರ್ ರಗಡ್ ಪಾತ್ರದ ಬಗ್ಗೆ ಚರ್ಚೆಯಾಗುತ್ತಿದೆ. ಇದೇ ವಾರ ಸಿನಿಮಾ ರಿಲೀಸ್ ಆಗುತ್ತಿರೋದ್ರಿಂದ ಪ್ರೀ ರಿಲೀಸ್ ಈವೆಂಟ್ ವಸಿಷ್ಠ ಸಿಂಹ, ನೀನಾಸಂ ಸತೀಶ್, ನಾಗಭೂಷಣ್ ಹಾಗೂ ಧನಂಜಯ್ ಅತಿಥಿಯಾಗಿ ಬಂದಿದ್ದರು. ಈ ವೇಳೆ ಧನಂಜಯ್ ಚಿತ್ರರಂಗ ಯಾರೊಬ್ಬರದ್ದಲ್ಲ. ಎಲ್ಲರದ್ದು ಎಂದು ಹೇಳಿದ್ದಾರೆ. ಅದರ ಒಂದು ಝಲಕ್ ಇಲ್ಲಿದೆ.

"ಚಿತ್ರರಂಗ ಯಾರೊಬ್ಬರದ್ದಲ್ಲ.. ಎಲ್ಲರದ್ದು"
ಧನಂಜಯ್ 'ಕ್ಷೇತ್ರಪತಿ' ಹೀರೊ ನವೀನ್ ಶಂಕರ್ ಆರಂಭದ ದಿನಗಳ ಬಗ್ಗೆ ಮಾತಾಡುತ್ತಿದ್ದರು. ಈ ವೇಳೆ ಚಿತ್ರರಂಗ ಹಾಗೂ ಅಲ್ಲಿರುವ ಗುಂಪಿನ ಬಗ್ಗೆ ಮಾತಾಡಿದ್ದಾರೆ. "ಚಿತ್ರರಂಗ ಯಾವುದೋ ಒಂದು ಗುಂಪಲ್ಲ. ಚಿತ್ರರಂಗ ಯಾರೊಬ್ಬರದ್ದೂ ಅಲ್ಲ. ಚಿತ್ರರಂಗ ಎಲ್ಲರದ್ದು. ಯಾರು ಬೇಕಾದರೂ ಬರಬಹುದು. ಮುಂದಿನ ಐದು ವರ್ಷಗಳಲ್ಲಿ ಇನ್ನೂ ತುಂಬಾ ಪ್ರತಿಭೆಗಳು ಬರುತ್ತವೆ. ತುಂಬಾ ಜನ ಹೀರೊಗಳು ಬರುತ್ತಾರೆ. ಇನ್ನೊಂದಿಷ್ಟು ಕಲಾವಿದರು ಬರುತ್ತಾರೆ. ನಿರ್ದೇಶಕರು ಬರುತ್ತಾರೆ. ಅಷ್ಟು ಚೆನ್ನಾಗಿ ಚಿತ್ರರಂಗ ಓಪನ್ ಆಗಿದೆ." ಎಂದು ಡಾಲಿ ಧನಂಜಯ್ ಹೇಳಿದ್ದಾರೆ.
"ದ್ವೇಷಿಸುವುದಕ್ಕಿಂತ ಮುನ್ನ ಯೋಚಿಸಿ"
"ಇದು ತುಂಬಾ ಒಳ್ಳೊಳ್ಳೆ ಪ್ರತಿಭೆಗಳು ಬರೋ ಸಮಯವಿದು. ಯಾರಿಗಾದರೂ ತೊಂದರೆ ಕೊಡುವುದಕ್ಕೆ ಮುಂಚೆ, ಯಾರನ್ನಾದರೂ ದ್ವೇಷಿಸುವುದಕ್ಕೂ ಮುಂಚೆ ಒಂದೇ ಒಂದು ಬಾರಿ ಯೋಚನೆ ಮಾಡಿ. ನಿಮ್ಮ ಹಾಗೇ ಅವರು ಯಾರದ್ದೋ ತಂದೆ ತಾಯಿ ಮಕ್ಕಳಾಗಿರುತ್ತಾರಲ್ಲ. ಆದರೆ ಸಪೋರ್ಟ್ ಮಾಡಿ. ಇಲ್ಲ ಅಂದರೆ ಸುಮ್ಮನಿದ್ದು ಬಿಡಬೇಕು." ಪರೋಕ್ಷವಾಗಿ ದ್ವೇಷವನ್ನು ಹರಡುತ್ತಿರುವವರಿಗೆ ಡಾಲಿ ಧನಂಜಯ್ ತಿರುಗೇಟು ನೀಡಿದ್ದಾರೆ.
ನವೀನ್ ಸಿನಿಮಾ ಬಗ್ಗೆ ಗುಣಗಾನ
ಧನಂಜಯ್ ಚಿತ್ರರಂಗದಲ್ಲಿ ನೆಲೆಯೂರಲು ಕಷ್ಟಪಡುತ್ತಿದ್ದ ಕಾಲದಲ್ಲೇ ನವೀನ್ ಶಂಕರ್ ಪರಿಚಯಕ್ಕೆ ಬಂದಿದ್ದರು. ಅಲ್ಲಿಂದ ಇಬ್ಬರ ಸ್ನೇಹ ಇಲ್ಲಿವರೆಗೂ ಬೆಳೆದುಕೊಂಡು ಬಂದಿದೆ. ಆ ದಿನಗಳನ್ನು ನೆನೆಯುತ್ತಾ.. ನವೀನ್ ಹಾಗೂ ಕಷ್ಟದ ದಿನಗಳನ್ನು ನೆನೆದಿದ್ದಾರೆ. "ಗುಲ್ಟು ಸಿನಿಮಾ ಬಂತು. ತುಂಬಾ ಚೆನ್ನಾಗಿ ಮಾಡಿದ್ರು ನಿರ್ದೇಶಕರು. ನವೀನ ಒಬ್ಬರ ನಟನಾಗಿ ನೋಡಿ ತುಂಬಾ ಖುಷಿ ಆಯ್ತು. ನಾವು ನೋಡಿದ್ದಂತ ನಟ ನಮ್ಮ ಹಾಗೇ ಯಾವುದೋ ಹಳ್ಳಿಯಿಂದ ಬಂದು ಮಂಡ್ಯದ ಯಾವುದೋ ಹಳ್ಳಿ, ಹಾಸನದ ಹತ್ತಿರ ಯಾವುದೋ ಹಳ್ಳಿ, ಅರಸೀಕೆರೆ ಹತ್ತಿರ ಯಾವುದೋ ಹಳ್ಳಿ, ಉತ್ತರ ಕರ್ನಾಟಕದ ಹತ್ತಿರ ಯಾವುದೋ ಹಳ್ಳಿ, ಕೊಳ್ಳೆಗಾಲದ ಹತ್ತಿರ ಯಾವುದೋ ಹಳ್ಳಿ. ಹೀಗೆ ಊರು ಬಿಟ್ಟು ಊರಿಗೆ ಬಂದು ಏನೋ ಪ್ರಯತ್ನ ಪಡುತ್ತಿರುತ್ತೇವೆ. ಹಾಗೇ ಒಂದು ಪ್ರತಿಭೆ ಬಂತು ಅಂತ." ಎಂದು ಧನಂಜಯ್ ಹೇಳಿದ್ದಾರೆ.


Click it and Unblock the Notifications











