ದರ್ಶನ್ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರಾ? ಇದರ ಆಧಾರದ ಮೇಲೆ ಜಾಮೀನು ಸಿಗಬಹುದಾ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತೆ ಜೈಲು ಸೇರಿ ಹೆಚ್ಚು ಕಡಿಮೆ ಒಂದು ತಿಂಗಳ ಮೇಲಾಗುತ್ತಿದೆ. ಯಾವುದೇ ರೀತಿ ಐಷಾರಾಮಿ ಸೌಲಭ್ಯಗಳನ್ನು ನೀಡಬಾರದೆಂದು ತಾಕೀತು ಮಾಡಿ ಜಾಮೀನನ್ನು ರದ್ದು ಮಾಡಿತ್ತು. ಸದ್ಯ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಟ್ರಯಲ್ ನಡೆಯುತ್ತಿರುವುದರಿಂದ ಅಲ್ಲಿವರೆಗೂ ದರ್ಶನ್‌ಗೆ ಜಾಮೀನು ಸಿಗುವುದು ಅನುಮಾನವೆಂದೇ ಹೇಳಲಾಗುತ್ತಿದೆ. ಇಂದು (ಸೆಪ್ಟೆಂಬರ್ 9) ಕೂಡ ವಿಚಾರಣೆ ನಡೆದಿತ್ತು. ಈ ವೇಳೆ ನ್ಯಾಯಾಧೀಶರ ಮುಂದೆ ದರ್ಶನ್ ಮಾಡಿಕೊಂಡ ಮನವಿ ಎಲ್ಲರನ್ನೂ ಬೆಚ್ಚಿಬೀಳಿಸಿದೆ.
ವಿಡಿಯೋ ಕಾನ್ಫರೆನ್ಸ್ ಮೂಲಕ ದರ್ಶನ್ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ನ್ಯಾಯಾಧೀಶರ ಮುಂದೆ ಜೈಲಿನಲ್ಲಿ ತನ್ನನ್ನು ಕೂಡಿ ಹಾಕಿದ್ದಾರೆ. ಜೈಲಿಗೆ ಬಂದಲ್ಲಿಂದ ಬಿಸಿಲು ನೋಡಿಲ್ಲ. ಕೈಗಳಲ್ಲೆಲ್ಲ ಫಂಗಸ್ ಬಂದಿದೆ. ಬಟ್ಟೆಗಳು ವಾಸನೆ ಬರುತ್ತಿವೆ. ಹೀಗಾಗಿ ಜೈಲಿನಲ್ಲಿ ಬದುಕುವುದಕ್ಕೆ ಆಗುವುದಿಲ್ಲ. ದಯವಿಟ್ಟು ನನ್ನೊಬ್ಬನಿಗೆ ವಿಷ ಕೊಡಲು ಆದೇಶ ಕೊಡಿ ಎಂದು ಕೇಳಿಕೊಂಡರು. ಇದು ಈಗ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.

ಕೆಲವರು ದರ್ಶನ್ ಆಡಿದ ಈ ಮಾತುಗಳನ್ನು ಮತ್ತೊಂದು ನಾಟಕ ಎಂದು ಹೇಳುತ್ತಿದ್ದಾರೆ. ಇನ್ನು ಕೆಲವರು ದರ್ಶನ್ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ ಎಂದು ವಾದ ಮಾಡುತ್ತಿದ್ದಾರೆ. ಹಾಗಿದ್ದರೆ, ಆರೋಪಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರೆ ಜಾಮೀನು ಸಿಗಬಹುದೇ? ದರ್ಶನ್ ಆಡಿದ ಈ ಮಾತುಗಳು ಅವರು ಖಿನ್ನತೆಗೆ ಒಳಗಾಗಿದ್ದಾರೆ ಎನ್ನುವುದನ್ನು ಸೂಚಿಸುತ್ತವೆಯೇ? ಮಾನಸಿಕ ತಜ್ಞರು ಹಾಗೂ ವಕೀಲರು ಈ ಬಗ್ಗೆ ಏನು ಹೇಳುತ್ತಾರೆ?
ಮುಂದೆ ಓದಿ
ಜೈಲಿನಲ್ಲಿ ದರ್ಶನ್ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರಾ?
ವಿಷ ಕೇಳಿದ್ದು ಮಾನಸಿಕ ಖಿನ್ನತೆ ಒಳಾಗಿರುವ ಸಂಕೇತವೇ?
ಮಾನಸಿಕ ಖಿನ್ನತೆ ಆಧಾರದ ಮೇಲೆ ಜಾಮೀನು ಸಿಗುತ್ತಾ?
ಮಾನಸಿಕ ತಜ್ಞರು-ವಕೀಲರು ಏನು ಹೇಳುತ್ತಾರೆ?
ಜೈಲಿನಲ್ಲಿರುವ ಆರೋಪಿ ಅಥವಾ ಖೈದಿ ಮಾನಸಿಕ ಖಿನ್ನತೆಗೆ ಒಳಗಾದರೆ, ಜೈಲಾಧಿಕಾರಿಗಳು ಏನು ಮಾಡುತ್ತಾರೆ? ಯಾಕಂದ್ರೆ, ಮಾನಸಿಕ ಖಿನ್ನತೆಗೆ ಒಳಗಾದವರು ಜೈಲಿನಲ್ಲಿಯೇ ಆತ್ಮ*ಹತ್ಯೆಯಂತಹ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಈಗ ದರ್ಶನ್ ಕೂಡ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರಾ? ವಿಷ ಕೇಳಿದ್ದು ಖಿನ್ನತೆಯ ಗುಣಲಕ್ಷಣವೇ? ಈ ಪ್ರಶ್ನೆಗೆ ಮಾನಸಿಕ ತಜ್ಞರು ಹಾಗೂ ಜಾಮೀನು ಸಿಗುವ ಬಗ್ಗೆ ವಕೀಲರು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ದರ್ಶನ್ ಖಿನ್ನತೆಯಿಂದ ಬಳಲುತ್ತಿದ್ದಾರಾ?
ದರ್ಶನ್ ವಿಷ ಕೊಡಲು ಅನುಮತಿ ಕೊಡಿ ಎಂದು ನ್ಯಾಯಾಧೀಶರನ್ನು ಕೇಳಿರೋದು ಹೊರಗಡೆ ಚರ್ಚೆಯಾಗುತ್ತಿದೆ. ಈ ಬಗ್ಗೆ ಮಾನಸಿಕ ತಜ್ಞರು ಅಭಿಪ್ರಾಯ ಹೀಗಿದೆ. ಎಂ ಪವರ್ ಬಿಟ್ಸ್ ಪಿಲಾನಿ, ಗೋವಾದ (M power BITS PILANI GOA), ಹಿರಿಯ ಕ್ಲಿನಿಕಲ್ ಸೈಕಾಲಜಿಸ್ಟ್, ಹಯಾಶ್ ಟಿನೋಥ್ ಫಿಲ್ಮಿಬೀಟ್ ಕನ್ನಡದ ಜೊತೆ ಪ್ರತಿಕ್ರಿಯೆಯನ್ನು ಹಂಚಿಕೊಂಡಿದ್ದಾರೆ.

"ದರ್ಶನ್ ನ್ಯಾಯಾಲಯದಲ್ಲಿ 'ವಿಷ' ಕೇಳಿದ ಘಟನೆ ಅವರಲ್ಲಿರುವ ಮಾನಸಿಕ ಒತ್ತಡದ ಸೂಚನೆಯಾಗಿರಬಹುದು. ಮಾನಸಿಕ ಹಾಗೂ ಸುತ್ತಮುತ್ತಲಿನ ಪರಿಸರದ ಒತ್ತಡಗಳು ಒಟ್ಟೊಟ್ಟಿಗೆ ಸೇರಿಕೊಂಡಾಗ ಆ ವ್ಯಕ್ತಿಯ ಮನಸ್ಥಿತಿ ತೀವ್ರವಾಗಿ ಕುಸಿಯಬಹುದು. ಅವರ ಮಾತುಗಳಲ್ಲಿ ನಿರಾಶೆಯ ಸುಳಿವು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಇದು ಖಿನ್ನತೆಯ ಪ್ರಮುಖ ಲಕ್ಷಣಗಳಲ್ಲೊಂದು" ಎಂದು ಹೇಳುತ್ತಾರೆ.
ಹಾಗೇ ದರ್ಶನ್ ಮಾನಸ್ಥಿತಿಯನ್ನು ಅವಲೋಕಿಸಿದ್ದಾರೆ. " ಜೈಲಿನಲ್ಲಿ ವ್ಯಕ್ತಿ ತನ್ನ ಕಷ್ಟಗಳು ಶಾಶ್ವತ, ಇನ್ನು ಬದಲಿಸಲು ಸಾಧ್ಯವಿಲ್ಲ. ಈ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನಂಬುವುದಕ್ಕೆ ಪ್ರಾರಂಭಿಸಿರಬಹುದು. ಇದಕ್ಕೆ ಜೈಲಿನ ವಾತಾವರಣ, ಬೆಳಕಿನ ಕೊರತೆ ಹಾಗೂ ಒಂಟಿತನ ಎಲ್ಲವೂ ಸೇರಿ ನಿರಾಶೆಯನ್ನು ದುಪ್ಪಟ್ಟು ಮಾಡಿರುವ ಸಾಧ್ಯತೆಯಿದೆ. ಇಂತಹ ಪರಿಸ್ಥಿತಿಯಲ್ಲಿ 'ವಿಷ ಕೊಡಿ' ಎಂದು ಕೇಳಿದ್ದು, ನಾಟಕೀಯ ಎನ್ನುವುದಕ್ಕಿಂತ ಖಿನ್ನತೆ ದೃಷ್ಟಿಯಿಂದಲೂ ಒಮ್ಮೆ ನೋಡಬೇಕಾಗುತ್ತೆ" ಎಂದು ಸೀನಿಯರ್ ಕ್ಲಿನಿಕಲ್ ಸೈಕಾಲಜಿಸ್ಟ್, ಹಯಾಶ್ ಟೀನೋಥ್ ಫಿಲ್ಮಿಬೀಟ್‌ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಇನ್ನು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರೆ, ನ್ಯಾಯಾಲಯ ಜಾಮೀನಿ ನೀಡುತ್ತಾ? ಈ ಬಗ್ಗೆನೂ ಚರ್ಚೆಯಾಗುತ್ತಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಹಿರಿಯ ವಕೀಲರಾಗಿರುವ ಸಂಕೇತ್ ಅವರು ಟಿವಿ5 ಜೊತೆಗಿನ ಚರ್ಚೆ ವೇಳೆ ಹೆಚ್ಚಿನ ಮಾಹಿತಿ ಹೊರ ಹಾಕಿದ್ದಾರೆ.
"ಜೈಲಿನಲ್ಲಿ ಪ್ರತ್ಯೇಕವಾದ ವೈದ್ಯರ ತಂಡ ಇರುತ್ತೆ. ಅಲ್ಲಿ ಸೈಕಾಲಜಿಸ್ಟ್ ಕೂಡ ಇರುತ್ತಾರೆ. ಸಾಮಾನ್ಯವಾಗಿ ಜೈಲಿಗೆ ಹೋದವರಿಗೆ ಖಿನ್ನತೆ ಉಂಟಾಗಿರುತ್ತೆ. ಅದರಲ್ಲೂ ನಾನು ಏನೇ ಮಾಡಿದರೂ ಜೈಲಿಗೆ ಕಳಿಸುವುದಕ್ಕೆ ಆಗೋದಿಲ್ಲ ಎಂದುಕೊಂಡವರಿಗೆ ಜಾಸ್ತಿ ಖಿನ್ನತೆ ಆಗಿರುತ್ತೆ. ಯಾರೂ ನನ್ನನ್ನು ಮುಟ್ಟುವುದಕ್ಕೆ ಆಗಲ್ಲ. ಜೈಲಿಗೆ ಕಳಿಸುವುದಕ್ಕೆ ಆಗಲ್ಲ. ಟಚ್ ಮಾಡುವುದಕ್ಕೆ ಆಗಲ್ಲ ಅನ್ನೋರಿಗೆ ಮಾನಸಿಕ ಖಿನ್ನತೆ ಜಾಸ್ತಿಯಾಗಿರುತ್ತೆ." ಎಂದು ಹಿರಿಯ ವಕೀಲರಾದ ಸಂಕೇತ್ ಅಭಿಪ್ರಾಯ ಪಟ್ಟಿದ್ದಾರೆ.
ಜೈಲಿನಲ್ಲಿಇರುವ ಮಾನಸಿಕ ಖಿನ್ನತೆಯಿಂದ ಬಳಲುವುದು ಸಾಮಾನ್ಯ. ಅದಕ್ಕೆ ಜೈಲಿನಲ್ಲಿಯೇ ಸೌಲಭ್ಯಗಳು ಇರುತ್ತವೆ. ಒಂದು ವೇಳೆ ಸಮಸ್ಯೆ ಉಲ್ಬಣಿಸಿದರೆ ಮಾತ್ರ ಕೋರ್ಟ್ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೆ ಎಂದು ಹೇಳುತ್ತಾರೆ. "ಜೈಲಿನಲ್ಲಿ ಇಂತಹ ಸ್ಥಿತಿಯಲ್ಲಿ ಇರುವವರಿಗೆ ಚಿಕಿತ್ಸೆ ನೀಡುವುದಕ್ಕೆಂದೇ ವೈದ್ಯರು ಇರುತ್ತಾರೆ. ಅಲ್ಲಿ ಮೆಡಿಸನ್‌ಗಳು ಇರುತ್ತವೆ. ಹೆಚ್ಚಿನ ಚಿಕಿತ್ಸೆ ಬೇಕಾದಾಗ ಸಂಬಂಧಪಟ್ಟ ಆಸ್ಪತ್ರೆ ಜೊತೆ ಸಂಪರ್ಕ ಇಟ್ಟುಕೊಂಡು ಚಿಕಿತ್ಸೆ ಕೊಡಿಸಲಾಗುತ್ತೆ. ಆದರೆ, ಇವರು ಬಳಲುತ್ತಿರುವ ರೋಗ ಆಗಲಿ, ಸಮಸ್ಯೆ ಆಗಲಿ ಎಲ್ಲೂ ಪರಿಹಾರವಿಲ್ಲದಿದ್ದಾಗ ಅಥವಾ ಇವರು ಹೆಚ್ಚಿನ ಚಿಕಿತ್ಸೆಗೆ ಬೇರೆ ಕಡೆಗೆ ಹೋಗುತ್ತೇನೆ ಎಂದಾಗ ಕೋರ್ಟ್ ಸೂಕ್ತ ನಿರ್ಧಾರವನ್ನು ತೆಗೆದುಕೊಳ್ಳುತ್ತೆ." ಎಂದು ವಕೀಲರಾದ ಸಂಕೇತ್ ಅವರು ಹೇಳಿದ್ದಾರೆ.


Click it and Unblock the Notifications











