"ಭಾಷೆಯಿಂದ ನಾವು, ನಮ್ಮಿಂದ ಭಾಷೆ ಅಲ್ಲ": ಪರೋಕ್ಷವಾಗಿ ಸೋನು ನಿಗಂ ಟಾಂಗ್ ಕೊಟ್ಟರೇ ಗಣೇಶ್?
ಗೋಲ್ಡನ್ ಸ್ಟಾರ್ ಗಣೇಶ್ ಮತ್ತೊಮ್ಮೆ ಕನ್ನಡ ಭಾಷೆಯ ಬಗ್ಗೆ ವೇದಿಕೆಯೊಂದರಲ್ಲಿ ಮಾತಾಡಿದ್ದಾರೆ. ಈ ಹಿಂದೆ 'ಪಿನಾಕ' ಸಿನಿಮಾದ ವೇಳೆನೂ ಕನ್ನಡ ಭಾಷೆಯ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದರು. ಈಗ ಮತ್ತೊಮ್ಮೆ ಭಾಷೆಯ ಬಗ್ಗೆ ಓಪನ್ ಆಗಿ ಮಾತಾಡಿದ್ದಾರೆ. 'ನಿದ್ರಾದೇವಿ ನೆಕ್ಸ್ಟ್ ಡೋರ್' ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಗೋಲ್ಡನ್ ಸ್ಟಾರ್ ಭಾಗವಹಿಸಿದ್ದರು. ಈ ವೇಳೆ ಭಾಷೆಯ ಬಗ್ಗೆ ಮಾತಾಡಿದ್ದಾರೆ.
"ಭಾಷೆಯಿಂದ ನಾವು.. ನಮ್ಮಿಂದ ಭಾಷೆ ಅಲ್ಲ" ಎಂದು ಹೇಳಿರುವ ಗೋಲ್ಡನ್ ಸ್ಟಾರ್ ಗಣೇಶ್ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ವಿಡಿಯೋವನ್ನು ನೋಡಿದ ಬಳಿಕ ನೆಟ್ಟಿಗರು ಸೋನು ನಿಗಂಗೆ ತಿರುಗೇಟು ಕೊಟ್ಟರೇ? ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಅಸಲಿಗೆ 'ನಿದ್ರಾದೇವಿ ನೆಕ್ಸ್ಟ್ ಡೋರ್' ಗೋಲ್ಡನ್ ಸ್ಟಾರ್ ಗಣೇಶ್ ಏನು ಹೇಳಿದ್ದಾರೆ? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.

ಇತ್ತೀಚೆಗೆ ಗೋಲ್ಡನ್ ಸ್ಟಾರ್ ಗಣೇಶ್ 'ನಿದ್ರಾದೇವಿ ನೆಕ್ಸ್ಟ್ ಡೋರ್' ಸಿನಿಮಾದ ಸುದ್ದಿಗೋಷ್ಠಿಗೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಆ ವೇಳೆ ಪ್ರವೀಣ್ ಶೆಟ್ಟಿ, ರಿಶಿಕಾ ನಾಯಕ್, ಶೈನ್ ಶೆಟ್ಟಿ, ಶ್ರುತಿ ಹರಿಹರನ್ ನಟಿಸಿರುವ ಈ ಸಿನಿಮಾ ರೊಮ್ಯಾಂಟಿಕ್ ಹಾಡೊಂದನ್ನು ರಿಲೀಸ್ ಮಾಡಲಾಯ್ತು. ನಕುಲ್ ಅಭ್ಯಂಕರ್ ಸಂಗೀತ ನಿರ್ದೇಶಿಸಿದ "ನೀ ನನ್ನ.." ಎನ್ನುವ ಹಾಡಿನ ಬಗ್ಗೆ ಗಣೇಶ್ ವೇದಿಕೆ ಮೇಲೆ ಮಾತಾಡುವಾಗ ಭಾಷೆಯ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಕೊನೆಯಲ್ಲಿ ಸೋನು ನಿಗಂಗೆ ತಿರುಗೇಟು ಕೊಟ್ಟರೇ? ಎಂಬ ಪ್ರಶ್ನೆ ಕೂಡ ಎದ್ದಿದೆ.
'ನಿದ್ರಾದೇವಿ ನೆಕ್ಸ್ಟ್ ಡೋರ್' ಸಿನಿಮಾದ ಈ "ನೀ ನನ್ನ.." ಎನ್ನುವ ಹಾಡನ್ನು ಸೋನು ನಿಗಂ ಹಾಡಿದ್ದಾರೆ. ಈ ಹಾಡನ್ನು ಈಗ ಇಟ್ಟುಕೊಳ್ಳಬೇಕಾ? ತೆಗೆದು ಹಾಕಬೇಕಾ? ಎನ್ನುವ ಪ್ರಶ್ನೆ ಚಿತ್ರತಂಡದ ಮುಂದಿದೆ. ಈ ಹಿಂದೆ ಬೆಂಗಳೂರಿನಲ್ಲಿ ಸಂಗೀತ ಕಾರ್ಯಕ್ರಮವನ್ನು ನೀಡುವಾಗ ಸೋನು ನಿಗಂ ಕನ್ನಡಿಗರ ಮೇಲೆ ಕಿಡಿಕಾರಿದ್ದರು. ಭಯೋತ್ಪಾದಕ ಚಟುವಟಿಕೆಗೆ ಕನ್ನಡಿಗರ ಹೊಣೆ ಮಾಡುವ ಅರ್ಥದಲ್ಲಿ ಸೋನು ನಿಗಂ ಮಾತಾಡಿದ್ದರು. ಅಲ್ಲಿಂದ ಕನ್ನಡಿಗರ ಕೆಂಗಣ್ಣಿಗೆ ಗಾಯಕ ಸೋನು ನಿಗಂ ಗುರಿಯಾಗಿದ್ದರು.
ಸೋನು ನಿಗಂ ಈ ವಿವಾದಗಳನ್ನು ಮೈ ಮೇಲೆ ಎಳೆದುಕೊಳ್ಳುತ್ತಿದ್ದಂತೆ ಕನ್ನಡ ಚಿತ್ರರಂಗ ಸೋನು ನಿಗಂ ಅವರಿಂಗ ಹಾಡನ್ನು ಹಾಡಿಸದೇ ಇರುವ ನಿರ್ಧಾರವನ್ನು ತೆಗೆದುಕೊಂಡಿತ್ತು. ಈ ವಿವಾದ ಬಳಿಕ 'ನಿದ್ರಾದೇವಿ ನೆಕ್ಸ್ಟ್ ಡೋರ್' ಸಿನಿಮಾದಲ್ಲಿ ಹಾಡಿರುವ ಸೋನು ನಿಗಂ ಹಾಡನ್ನು ಉಳಿಸಿಕೊಳ್ಳಬೇಕಾ? ಬೇಡವೇ? ಎನ್ನುವ ಪ್ರಶ್ನೆ ಮಧ್ಯೆ "ನೀ ನನ್ನ.." ಎನ್ನುವ ಸಾಂಗ್ ರಿಲೀಸ್ ಆಗಿದೆ. ಈ ಹಾಡನ್ನು ಸೋನು ನಿಗಂ ಅವರೇ ಹಾಡಿದ್ದಾರೆ. ಈ ಹಾಡು ರಿಲೀಸ್ ಆದ ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ವೇದಿಕೆ ಮೇಲೆ ಭಾಷೆಯ ಬಗ್ಗೆ ಮಾತಾಡಿದ್ದಾರೆ.

"ಸಾಂಗ್ ಕೇಳಿದ ಬಹಳ ಚೆನ್ನಾಗಿದೆ. ತುಂಬಾನೇ ಮೆಲೋಡಿಯಾಗಿದೆ. ಈ ಹಾಡು ಕೇಳಬೇಕಾದರೆ ಅಂದ್ಕೊಂಡೆ ಈ ಪ್ರಶ್ನೆಯನ್ನು ಕೇಳಬೇಕಲ್ಲ ಒಂದು ಸಾರಿ ಅನಿಸಿತ್ತು. ಪ್ರಾಮಾಣಿಕವಾಗಿ ನಾನಿದ್ದರೂ ಇದನ್ನು ಕೇಳಬೇಕಾದ ಪ್ರಶ್ನೆಯೇ. ನಮ್ಮಿಂದ ಅಲ್ಲ ಭಾಷೆ. ಭಾಷೆಯಿಂದ ನಾವು. ಭಾಷೆ ಉಳಿದರಷ್ಟೇ ನಾವು ಉಳಿಯೋದು. ಭಾಷೆನೇ ಇಲ್ಲಾ ಅಂದರೆ ನಾವು ಏನು ಮಾಡುವುದಕ್ಕೆ ಆಗುತ್ತೆ. ನಮ್ಮ ಭಾಷೆಗೆ ಎಷ್ಟು ದೊಡ್ಡ ಇತಿಹಾಸವಿದೆ. ಅದರಿಂದ ನಾವು ಅಷ್ಟೇ. ನಮ್ಮಂತಹವರು ಸಾವಿರಾರು ಜನ ಬಂದು ಹೋಗುತ್ತಾರೆ. ಉಳಿಯೋದು ಭಾಷೆ ಒಂದೇನೆ. ಭಾಷೆಯನ್ನು ಬೆಳೆಸುತ್ತೇವೆ ಅನ್ನೋದು ಅಲ್ಲ. ಇರೋ ಭಾಷೆಯನ್ನು ಉಳಿಸಿದರೆ, ಅದೇ ಧನ್ಯ. ಹಾಗಾಗಿ ನಿರ್ಮಾಪಕರು ಹೇಳಿದರು ಈ ಬಗ್ಗೆ ಯೋಚನೆ ಮಾಡುತ್ತೇವೆ ಅಂತ. ಪಟ್ ಅಂತ ಹೇಳಿಬಿಡಬೇಕು. ಯೋಚನೆ ಏನಿಲ್ಲ. ಚೇಂಜ್ ಮಾಡುತ್ತೇವೆ ಅಂತ. ಭಾಷೆ ಮುಖ್ಯ." ಎಂದು ಗೋಲ್ಡನ್ ಸ್ಟಾರ್ ಗಣೇಶ್ ವೇದಿಕೆ ಮೇಲೆ 'ನಿದ್ರಾದೇವಿ ನೆಕ್ಸ್ಟ್ ಡೋರ್' ತಂಡಕ್ಕೆ ಗಣೇಶ್ ಸಲಹೆ ನೀಡಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಒಂದೇ ಏಟಿಗೆ ಎರಡು ಹಕ್ಕಿಯನ್ನು ಹೊಡೆದರು ಎಂದು ಹೇಳುತ್ತಿದ್ದಾರೆ. ಕನ್ನಡ ಭಾಷೆಯ ಬಗ್ಗೆ ಸೊಕ್ಕಿನಿಂದ ಮಾತಾಡಿದ್ದ ಗಾಯಕ ಸೋನು ನಿಗಂ ಹಾಗೂ ಕಮಲ್ ಹಾಸನ್ ಇಬ್ಬರಿಗೂ ತಿರುಗೇಟು ಕೊಟ್ಟಿದ್ದಾರೆ. ಹೆಸರೇ ಎತ್ತದೆ ಪರೋಕ್ಷವಾಗಿ ತಿರುಗೇಟು ಕೊಟ್ಟಿದ್ದಾರೆಂದು ಗೋಲ್ಡನ್ ಸ್ಟಾರ್ ಗಣೇಶ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











