ನಾದ ಬ್ರಹ್ಮ ಹಂಸಲೇಖ ಬ್ರಾಹ್ಮಣ ದ್ವೇಷಿಯೇ? ಗುರುಗಳ ಬಗ್ಗೆ ವಿ.ಮನೋಹರ್ ಹೇಳಿದ್ದೇನು?
ನಾದಬ್ರಹ್ಮ ಹಂಸಲೇಖ ಇತ್ತೀಚೆಗೆ ಅವರ ಸಂಗೀತಕ್ಕಿಂತ ಹೆಚ್ಚಾಗಿ ವಿವಾದಗಳಿಂದಲೇ ಸುದ್ದಿಯಾಗುತ್ತಿದ್ದಾರೆ. ಅವರು ಆಡುವ ಮಾತುಗಳು ವಿವಾದಕ್ಕೆ ಎಡೆ ಮಾಡಿಕೊಡುತ್ತಿವೆ. ಈ ಸಂಬಂಧ ರಾಜ್ಯದಲ್ಲಿ ಆಕ್ರೋಶ ವ್ಯಕ್ತವಾಗಿದ್ದ ಸಾಕಷ್ಟು ಉದಾಹರಣೆಗಳು ಇವೆ. ಹಂಸಲೇಖ ಪೇಜಾವರ ಶ್ರೀಗಳ ಬಗ್ಗೆ ಆಡಿದ ಮಾತುಗಳು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಇದು ಹಂಸಲೇಖರನ್ನು ಪೊಲೀಸ್ ಠಾಣೆ ಮೆಟ್ಟಿಲು ಏರುವಂತೆ ಮಾಡಿತ್ತು. ಇದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.
ಇನ್ನೊಂದು ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯ ಬಗ್ಗೆ ಹಂಸಲೇಖ ಟೀಕೆ ಮಾಡಿದಾಗಲೂ ವಿವಾದ ಏರ್ಪಟ್ಟಿತ್ತು. ಇನ್ನೊಂದು ಕಡೆ ಜೈನ ಧರ್ಮದ ಕುರಿತು ಹಂಸಲೇಖ ಅವರ ಹೇಳಿಕೆ ಕೂಡ ಕಾಂಟ್ರವರ್ಸಿಗೆ ಕಾರಣವಾಗಿತ್ತು. ಹೀಗಾಗಿ ಕೆಲವರು ಹಂಸಲೇಖ ಅವರನ್ನೂ ಟೀಕೆ ಗುರಿ ಮಾಡಿದ್ದೂ ಇದೆ. ಪೇಜಾವರ ಶ್ರೀ ಕುರಿತ ಹೇಳಿಕೆ ವಿವಾದಕ್ಕೆ ತಿರುಗಿದ ಬಳಿಕ ಹಂಸಲೇಖ ಬ್ರಾಹ್ಮಣ ದ್ವೇಷಿ ಎಂದೇ ಪ್ರಚಾರ ಮಾಡಲಾಗಿತ್ತು. ಈ ಬಗ್ಗೆ ಅವರ ಶಿಷ್ಯ ಹಾಗೂ ಸಂಗೀತ ನಿರ್ದೇಶಕ ವಿ. ಮನೋಹರ್ ಶ್ರೀಗಂಧ ಟಿವಿ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಭದಲ್ಲಿ ಪ್ರತಿಕ್ರಿಯೆ ಹೇಳಿದ್ದಾರೆ. ಅದರದ್ದೊಂದು ಝಲಕ್ ಇಲ್ಲಿದೆ.

ಹಂಸಲೇಖ ಬ್ರಾಹ್ಮಣ ದ್ವೇಷಿ ಆಗಿದ್ದರೇ..
"ಹಂಸಲೇಖ ಗುರುಗಳ ಮೇಲೆ ತಪ್ಪು ಅಭಿಪ್ರಾಯವಿದೆ. ಹಂಸಲೇಖ ಗುರುಗಳು ಬ್ರಾಹ್ಮಣ ದ್ವೇಷಿ ಅಂತ ಒಂದು ಆಪಾದನೆಯಿದೆ. ಬ್ರಾಹ್ಮಣ ದ್ವೇಷಿ ಆಗಿದ್ದರೆ, ಅವರು ಬೆಳೆಸಿದ್ದು ಯಾರನ್ನ? ಎಲ್‌ಎನ್ ಶಾಸ್ತ್ರಿ, ಹೇಮಂತ್, ನಂದಿತಾ, ಚಂದ್ರಿಕಾ ಗುರುರಾಜ್, ಮಂಜುಳಾ ಗುರುರಾಜ್, ರಾಜೇಶ್ ಕೃಷ್ಣನ್ ಇವರೆಲ್ಲರೂ ಬ್ರಾಹ್ಮಣರೇ. ಹಾಗಿದ್ದಿದ್ದರೆ ಶುದ್ರರನ್ನೇ ಹುಡುಕುತ್ತಿದ್ದರು. ಅವರು ಯಾವತ್ತೂ ಜಾತಿ ಭೇದ ಮಾಡಿದವರು ಅಲ್ಲ." ಎಂದು ವಿ.ಮನೋಹರ್ ಈ ಸಂದರ್ಶನದಲ್ಲಿ ಹೇಳಿದ್ದಾರೆ.
ಬ್ರಾಹ್ಮಣ ದ್ವೇಷಿ ಅಂತ ಶುರುವಾಗಿದ್ದು ಎಲ್ಲಿಂದ?
"ಬ್ರಾಹ್ಮಣ ದ್ವೇಷಿ ಅಂತ ಯಾಕೆ ಶುರುವಾಯ್ತು ಅಂದರೆ, ಪ್ರೇಮಲೋಕ, ರಣಧೀರ, ಸೂಪರ್ ಹಿಟ್ ಆದ ಸಮಯದಲ್ಲಿ ಕೆಲವು ಸಂಪ್ರದಾಯವಾದಿಗಳು ಶುರು ಮಾಡಿದರು. ಅವರನ್ನು ಬ್ರಾಹ್ಮಣರು ಅಂತ ಹೇಳಬಾರದು ಸಂಪ್ರದಾಯವಾದಿಗಳು ಎನ್ನಬೇಕು. ನೋಡಿ ಆ ಕಾಲದಲ್ಲಿ ಎಂತಹವರು ಇದ್ದರು. ಚಿ. ಉದಯಶಂಕರ್, ಆರ್ ಎನ್ ಜಯಗೋಪಾಲ್, ಕು.ರಾ. ಸೀತಾರಾಮ ಶಾಸ್ತ್ರಿ, ಎಂ.ಎನ್ ವ್ಯಾಸರಾವ್, ವಿಜಯ ನಾರಸಿಂಹ, ಹುಣಸೂರು ಕೃಷ್ಣಮೂರ್ತಿಗಳು ಎಲ್ಲ ನಮ್ಮವರು ಎಂತೆಂಥಾ ಸಾಹಿತ್ಯ ಬರೀತಾರೆ. ಇವನು ಬಂದು ಎಲ್ಲಾ ಹಾಳು ಮಾಡಿಬಿಟ್ಟ ಅಂತ ಶುರು ಮಾಡಿದರು. ಅದು ಹಂಸಲೇಖ ಅವರ ಕಿವಿಗೆ ಬಿತ್ತು. ಅಲ್ಲಿಂದ ಸಂಪ್ರದಾಯವಾದಿಗಳ ವಿರೋಧಿಯಾಗಿದ್ದಾರೇ ವಿನ: ಬ್ರಾಹ್ಮಣ ವಿರೋಧಿ ಯಾವತ್ತೂ ಆಗಿರಲಿಲ್ಲ." ಎನ್ನುತ್ತಾರೆ ವಿ.ಮನೋಹರ್.

ಬ್ರಾಹ್ಮಣರೂ ಹಂಸಲೇಖ ವಿರೋಧಿಗಳಲ್ಲ
"ಎಷ್ಟೋ ಮಂದಿ ಬ್ರಾಹ್ಮಣ ಅರ್ಚಕರು, ಬ್ರಾಹ್ಮಣರ ಗಣ್ಯ ವ್ಯಕ್ತಿಗಳು ಹಂಸಲೇಖ ಗುರುಗಳ ಸ್ಟುಡಿಯೋಗೆ ಬಂದು ಸಿಹಿ ಕೊಟ್ಟು, ಕೆಲವೊಮ್ಮೆ ಪ್ರಸಾದ ಕೊಟ್ಟು ಆಶೀರ್ವಾದ ಮಾಡಿ ಹೋದವರು ಇದ್ದಾರೆ. ನಂಜನಗೂಡು ದೇವಸ್ಥಾನದಲ್ಲಿ ಅರ್ಚಕರು ಹಂಸಲೇಖ ಗುರುಗಳನ್ನು ಬಹಳ ಗೌರವದಿಂದ ನೋಡುತ್ತಾರೆ. ಬ್ರಾಹ್ಮಣರು ಹಂಸಲೇಖ ವಿರೋಧಿಗಳಲ್ಲ. ಹಂಸಲೇಖ ಕೂಡ ಬ್ರಾಹ್ಮಣ ವಿರೋಧಿಯಲ್ಲ. ಇದು ಮಧ್ಯದಲ್ಲಿ ಕೆಲವು ಸಂಪ್ರದಾಯವಾದಿಗಳ ಪಿತೂರಿ." ಎಂದು ವಿ.ಮನೋಹರ್ ಆರೋಪಿಸಿದ್ದಾರೆ.
ಪೇಜಾವರ ಶ್ರೀ ಬಗೆಗಿನ ಮಾತನ್ನ ಯಾರೂ ಒಪ್ಪಿರಲಿಲ್ಲ
"ಸಂಪ್ರದಾಯವಾದಿಗಳು ಕಾಯುತ್ತಿದ್ದರು. ಆಗ ಪೇಜಾವರ ಶ್ರೀಗಳ ವಿವಾದ ಸಿಕ್ಕಿತು. ಅದೂ ಒಂದು ಪ್ರಗತಿ ಪರ ಸಭೆಯಲ್ಲಿ ಗುರುಗಳು ಹೇಳಿದಂತಹ ಮಾತು. ಆ ಮಾತನ್ನು ಯಾರೂ ಒಪ್ಪಿರಲಿಲ್ಲ, ಒಪ್ಪುತ್ತಿರಲಿಲ್ಲ, ಖಂಡಿಸಿದರು. ಗೌರವ ರೀತಿಯಲ್ಲಿ ಖಂಡಿಸುವುದು ಬೇರೆ, ಉಡುಪಿ ಮಠದವರು ಪೇಜಾವರ ಶ್ರೀಗಳ ಬಗ್ಗೆ ಗುರುಗಳು ಹೇಳಿದ್ದನ್ನು ಎಲ್ಲಾ ಕೃಷ್ಣನಿಗೆ ಬಿಟ್ಟಿದ್ದೀವಿ. ಎಲ್ಲಾ ಭಗವಂತನೇ ನೋಡಿಕೊಳ್ಳುತ್ತಾನೆ ಅಂದರು. ಅವರಂತಹ ದೊಡ್ಡ ವ್ಯಕ್ತಿ ಆ ಮಾತನ್ನು ಹೇಳಬಾರದು ಅಂತಾನೂ ಹೇಳಿದರು. ಪ್ರತಾಪ್ ಸಿಂಹ ಅವರೂ ಅದನ್ನೇ ಹೇಳಿದರು. ಆದರೆ, ಅವಕಾಶವಾದಿಗಳು ಇದ್ದರಲ್ಲ ಅವರು ಕೆಟ್ಟದಾಗಿ ಶುರು ಮಾಡಿದರು." ಎನ್ನುತ್ತಾರೆ.
ಮೋದಿ, ಜೈನ ಧರ್ಮದ ಬಗ್ಗೆನೂ ವಿವಾದ
"ಮೋದಿ ಬಗ್ಗೆ ಮಾತಾಡಿದಾಗಲೂ ವಿವಾದ ಆಯ್ತು. ಮತ್ತೆ ಅವಕಾಶಕ್ಕಾಗಿ ಕಾಯುತ್ತಿದ್ದವರಿಗೆ ಜೈನ ಧರ್ಮದ ವಿವಾದ ಬಂತು. ಯಾವುದೋ ಕಾರ್ಯಕ್ರಮಕ್ಕೆ ಬಂದವರಿಗೆ ಒಬ್ಬ ಪ್ರಶ್ನೆ ಕೇಳಿದ. ಜೈನ ಧರ್ಮದಲ್ಲಿ 24 ಜನ್ಮ ಇದೆಯಂತೆ ಹೌದಾ ಸರ್ ಅಂತ ಕೇಳಿದ. ಅವರಿಗೆ 24 ಜನ್ಮ ಅಲ್ಲ, ತೀರ್ಥಂಕರರು ಇರೋದು ಅಂತ ಗೊತ್ತಿದೆ. ಅವರು ಸಿಟ್ಟಿನಲ್ಲಿ 24 ಜನ್ಮ ಇರೋದು ಬುಲ್‌ಶಿಟ್. ಅಲ್ಲಿ ಇರೋದು 24 ತೀರ್ಥಂಕರರು ಅಂತ ಹೇಳಿ ಹೋದರು. ಆ ವಿಡಿಯೋದಲ್ಲಿ ಜೈನ ಧರ್ಮದಲ್ಲಿ ಇರೋದು 24 ತೀರ್ಥಂಕರರು ಹಾಗೂ ತಿಳಿದುಕೊಂಡು ಮಾತಾಡಿ ಅನ್ನೋದನ್ನು ಕಟ್ ಮಾಡಿದ್ದಾರೆ" ಎಂದು ವಿ.ಮನೋಹರ್ ಅಸಮಧಾನ ಹೊರ ಹೇಳಿದ್ದಾರೆ. ಹೀಗಾಗಿ ಹಂಸಲೇಖ ಯಾರ ದ್ವೇಷಿಯೂ ಅಲ್ಲ ಎನ್ನುವುದನ್ನು ಹೇಳಿದ್ದಾರೆ.
"ಇದೆಲ್ಲದಕ್ಕೂ ಕಾರಣ ಅಸೂಯೆ. ಯೂಟ್ಯೂಬ್‌ನಲ್ಲಿ ಏನಾಗಿದೆ ಎಂದರೆ, ಏನೂ ಗೊತ್ತಿಲ್ಲದೆ ಇದ್ದವನು, ಅವನಿಗೆ ಇತಿಹಾಸ ಗೊತ್ತಾಗುವುದು ಬೇಡ. ಅವರನು ಯಾರನ್ನಾದರೂ ಅಟ್ಯಾಕ್ ಮಾಡಬೇಕು. ಆ ಧೋರಣೆ ಇಲ್ಲಿ ಜಾಸ್ತಿಯಾಗಿದೆ. ನಾನು ಎಲ್ಲರನ್ನೂ ಕೇಳುತ್ತೇನೆ. ಎಲ್ಲರನ್ನೂ ಬೈಯ್ಯುತ್ತೇನೆ ಅನ್ನುವ ಮನಸ್ಥಿತಿಯಿದೆ. ರಶ್ಮಿಕಾ ಮಂದಣ್ಣ ಇರಬಹುದು ಮತ್ತೊಬ್ಬರು ಇರಬಹುದು. ಕಮೆಂಟ್‌ಗಳನ್ನು ಹಾಕುವುದಕ್ಕೆ ಶುರು. ಯಾಕೆ ಅವರನ್ನೇ ಅಟ್ಯಾಕ್ ಮಾಡುತ್ತಾರೆಂದರೆ, ಅಲ್ಲೊಂದು ಮೈಲೇಜ್ ತೆಗೆದುಕೊಳ್ಳುತ್ತಾರೆ." ಎಂದು ವಿ. ಮನೋಹರ್ ಅಭಿಪ್ರಾಯ ಪಟ್ಟಿದ್ದಾರೆ.
ನಾದ ಬ್ರಹ್ಮ ಅಂತ ಯಾಕೆ ಹೇಳಬಾರದು?
"ಇನ್ನೊಂದು ವಿಷಯ ಬರುತ್ತೆ. ಅವರಿಗೆ ನಾದಬ್ರಹ್ಮ ಹೇಗೆ ಅಂತ. ನಾದ ಅಂದರೆ ಏನು? ಸಂಗೀತದ ಶಬ್ಧ. ಒಂದು ಸೌಂಡ್,ಇನ್ನೊಂದು ಮ್ಯೂಸಿಕಲ್ ಸೌಂಡ್. ಇದರಲ್ಲಿ ಮ್ಯೂಸಿಕಲ್ ಸೌಂಡ್ ಅಂದರೆ ನಾದ. ಹಂಸಲೇಖ ಗುರುಗಳು ಒಂದು ಟ್ರೆಂಡ್ ಅನ್ನೇ ಬದಲಾಯಿಸಿದವರು. ನಾದವನ್ನೇ ಬದಲಾಯಿಸಿದವರು. ಬ್ರಹ್ಮ ಅಂದರೆ, ಸೃಷ್ಟಿಕರ್ತ. ಒಂದು ಸಂಗೀತ ಸೌಂಡ್ ಅನ್ನೇ ಬದಲಾಯಿಸಿದಂತಹ ಸೃಷ್ಟಿಕರ್ತನನ್ನು ನಾದಬ್ರಹ್ಮ ಅಂತ ಕರೆಯುವುದರಲ್ಲಿ ತಪ್ಪೇನಿದೆ? ಅದು ಅವರಿಗೆ ಅಭಿಮಾನಿಗಳು ಕೊಟ್ಟ ಬಿರುದು. ಅವರು ಇಟ್ಟುಕೊಂಡಿದ್ದಲ್ಲ. ಅವರು ಯಾವುದೇ ಬಿರುದು ಇಟ್ಟುಕೊಂಡವರಲ್ಲ. ಯಾವುದನ್ನೂ ಕೇರ್ ಎಂದವರಲ್ಲ. ಕನ್ನಡಿಗರಿಗೆ ಕೆಲಸ ಕೊಡಿಸಬೇಕು. ತಮ್ಮ ಗುರಿ ಸಾಧಿಸಬೇಕು ಅಂತಿದ್ದವರು." ಎಂದು ವಿ. ಮನೋಹರ್ ಹೇಳಿದ್ದಾರೆ.
" ಯೂಟ್ಯೂಬ್‌ನಲ್ಲಿ ಕೆಲವರು ಕಾಪಿ ಮಾಡಿದ ಹಾಡು, ಕದ್ದ ಹಾಡು ಅಂತ ಟೀಕೆ ಮಾಡಿದ್ದಾರೆ. ಮೂರು ಸಾವಿರ ಹಾಡಿನಲ್ಲಿ ಇವರಿಗೆ ಜಾಲಾಡಿ ಸಿಕ್ಕಿದ್ದು 20 ಹಾಡು. ಹಂಸಲೇಖ ಸರ್ ನೂರಾರು ರೀಮೆಕ್ ಸಿನಿಮಾಗಳನ್ನು ಮಾಡಿದ್ದಾರೆ. ರಾಮಾಚಾರಿ, ಹಳ್ಳಿ ಮೇಷ್ಟ್ರು, ಅಂದರೆ 350 ಸಿನಿಮಾದಲ್ಲಿ 100 ಸಿನಿಮಾಗಳಾದರೂ ರೀಮೆಕ್. ಅದರಲ್ಲಿ ಇಳಯರಾಜ ಮಾಡಿದ ಹಾಡುಗಳಿಗಿಂತ ಚೆನ್ನಾಗಿ ಮಾಡಿ ಗೆದ್ದವರು. ಉದಾಹರಣೆಗೆ ತಮಿಳಿನ ಚಿನ್ನತಂಬಿ ಸಿನಿಮಾದ ಹಾಡನ್ನು ಮೀರಿಸಿ ರಾಮಾಚಾರಿ ಚಿತ್ರದ ಹಾಡುಗಳು ಹಿಟ್ ಆದವು. ಒಂದು ಟ್ಯೂನ್ ಅನ್ನೂ ತಮಿಳಿನಿಂದ ಕಾಪಿ ಮಾಡಿಲ್ಲ. 20 ಹಾಡುಗಳು ಇವರಿಗೆ ಸಿಕ್ಕಿದೆ. ಅದಕ್ಕೆ ಕಾರಣ ಹೇಳುತ್ತೇನೆ. ಎಸ್‌ಪಿ ಸಾಂಗ್ಲಿಯಾನ ಸಿನಿಮಾದ ನಿರ್ದೇಶಕ ನಂಜುಂಡಪ್ಪ. ಅದು ಅವರ ಕೊನೆಯ ಸಿನಿಮಾ ಆಗಿತ್ತು. ಎಸ್‌ಪಿ ಸಾಂಗ್ಲಿಯಾನ ಕಂಪೋಸಿಂಗ್‌ನಲ್ಲಿ ನಾನು ಇದ್ದೆ. ಆಗ ನಿರ್ದೇಶಕರು ನನಗೆ ತಮಿಳಿನ ಒಂದು ಹಾಡು ಇಷ್ಟ ಎಂದರು. ಆಗ ನಿರ್ದೇಶಕ ಒತ್ತಾಯಕ್ಕೆ ಕಾಡು ನೋಡ ಹೋದೆ, ಕವಿತೆಯೊಡನೆ ಬಂದೆ ಅಂತ ಒಂದು ಹಾಡು ಮಾಡಿದರು. ಯಾರೇ ಬಂದೂ ಕ್ಯಾಸೆಟ್ ತರಬೇಡ. ಚೆನ್ನಾಗಿ ಹಾಡು ಮಾಡಿಕೊಡುತ್ತೇನೆ ಎಂದು ಹೇಳುತ್ತಿದ್ದರು. ಆದರೆ, ಪ್ರೇರಣೆ ಇಟ್ಟುಕೊಂಡು ಮಾಡಿದ್ದು ಇದೆ." ಎಂದು ವಿ ಮನೋಹರ್ ಹೇಳಿದ್ದಾರೆ.


Click it and Unblock the Notifications











