'ಬಲರಾಮನ ದಿನಗಳು' ಸಿನಿಮಾ 'ಆ ದಿನಗಳು ಪಾರ್ಟ್ 2'ನಾ?; "ಶುರು ಶುರು.." ಎನ್ನುತ್ತಾ ಸಿಹಿಗಾಳಿ ಬೀಸಿತೇ?
ಇದೂವರೆಗೂ ರಿಲೀಸ್ ಆದ ಕಲ್ಟ್ ಸಿನಿಮಾಗಳ ಪಟ್ಟಿಯಲ್ಲಿ ಕೆ.ಎಂ ಚೈತನ್ಯ ನಿರ್ದೇಶನದ 'ಆ ದಿನಗಳು' ಕೂಡ ಒಂದು. ಲವ್ ಸ್ಟೋರಿಯಲ್ಲಿ ಬಂದು ಹೋಗುವ ಭೂಗತ ಲೋಕವನ್ನು ಸೆನ್ಸಿಟಿವ್ ಆಗಿ ತೋರಿಸಿದ ಸಿನಿಮಾವಿದು. ಅಂಡರ್‌ವರ್ಲ್ಡ್ ಕಥೆಯನ್ನು ಅತಿಯಾದ ಹಿಂಸೆ ಇಲ್ಲದೆಯೂ ತೋರಿಸಬಹುದು ಎಂಬುವುದನ್ನು ಸಾಬೀತು ಮಾಡಿದ ಸಿನಿಮಾ. ಹೀಗಾಗಿ ಇಂದಿಗೂ 'ಆ ದಿನಗಳು' ಅದೆಷ್ಟೋ ಸಿನಿ ಪ್ರೇಮಿಗಳ ಫೇವರಿಟ್ ಸಿನಿಮಾ.
ಕೆ.ಎಂ.ಚೈತನ್ಯ ನಿರ್ದೇಶಿಸಿದ ಈ ಸಿನಿಮಾ ಕನ್ನಡದ ಅತ್ಯುತ್ತಮ ಸಿನಿಮಾಗಳಲ್ಲೊಂದು. ಅಲ್ಲಿಂದ ಮತ್ತೆ ಅಂಡರ್‌ವರ್ಲ್ಡ್ ಕಥೆಗಳ ಕಡೆಗೆ ಮುಖ ಮಾಡಿರಲಿಲ್ಲ. ಆದ್ರೀಗ 'ಆ ದಿನಗಳು' ಸಿನಿಮಾವನ್ನು ನೆನಪಿಸುವಂತಹ ಟೈಟಲ್ ಅನ್ನೇ ಇಟ್ಕೊಂಡು 'ಬಲರಾಮನ ದಿನಗಳು' ಕಥೆ ಹೇಳುವುದಕ್ಕೆ ಹೊರಟಿದ್ದಾರೆ. ಈ ಸಿನಿಮಾ ಬಿಡುಗಡೆ ಸಿದ್ಧವಾಗಿ ಈಗಾಗಲೇ ಪ್ರಚಾರವನ್ನು ಶುರು ಮಾಡಿದೆ.

'ಬಲರಾಮನ ದಿನಗಳು' ಸಿನಿಮಾದ "ಶುರು ಶುರು.." ಮೆಲೋಡಿ ರೊಮ್ಯಾಂಟಿಕ್ ಸಾಂಗ್ ರಿಲೀಸ್ ಆಗಿದೆ. ಜಯಂತ್ ಕಾಯ್ಕಿಣಿ ಸಾಹಿತ್ಯ ರಚಿಸಿದ್ದು, ಸಂಜಿತ್ ಹೆಗ್ಡೆ ಹಾಡಿದ್ದಾರೆ. ಈ ಹಾಡು ಸಿನಿಪ್ರಿಯರಿಗೆ ಮಧುರ ಅನುಭವವನ್ನು ಕೊಡುತ್ತಿದೆ. ವಿಶೇಷ ಅಂದರೆ, ಈ ಹಾಡನ್ನು ರಜನಿಕಾಂತ್ 'ಕಬಾಲಿ'ಗೆ ಟ್ಯೂನ್ ಹಾಕಿದ್ದ ತಮಿಳಿನ ಮ್ಯೂಸಿಕ್ ಡೈರೆಕ್ಟರ್ ಸಂತೋಷ್ ನಾರಾಯಣನ್ ಸಂಗೀತ ನೀಡಿದ್ದಾರೆ. ಸದ್ಯ ಈ ಹಾಡುಗಳು ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಈ ಹಾಡು ನೋಡಿದ ಬಳಿಕ 'ಬಲರಾಮನ ದಿನಗಳು', 'ಆ ದಿನಗಳು' ಸಿನಿಮಾದ ಪಾರ್ಟ್ 2 ಇರಬಹುದಾ? ಎಂಬ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಅದಕ್ಕೆ ನಿರ್ದೇಶಕ ಕೆ. ಚೈತನ್ಯ ಸ್ಪಷ್ಟತೆಯನ್ನೂ ನೀಡಿದ್ದಾರೆ.
ಇನ್ನೊಂದು ವಿಶೇಷ ಅಂದರೆ, ಪದ್ಮಾವತಿ ಜಯರಾಮ್ ಮತ್ತು ಶ್ರೇಯಸ್ ಬಂಡವಾಳ ನಿರ್ಮಾಣ ಮಾಡಿರುವ ಈ ಸಿನಿಮಾ ಟೈಗರ್ ವಿನೋದ್ ಪ್ರಭಾಕರ್ ಅವರ 25ನೇ ಚಿತ್ರ. ಹೀಗಾಗಿ ಈ ಸಿನಿಮಾವನ್ನು ಬಿಗ್ ಬಜೆಟ್‌ನಲ್ಲಿಯೇ ನಿರ್ಮಾಣ ಮಾಡಲಾಗುತ್ತಿದೆ. ವಿನೋದ್ ಪ್ರಭಾಕರ್‌ಗೆ ನಾಯಕಿಯಾಗಿ ಪ್ರಿಯಾ ಆನಂದ್ ಇದ್ದಾರೆ. ಇವರೊಂದಿಗೆ ಅವಿನಾಶ್, ಅತುಲ್ ಕುಲಕರ್ಣಿ, ಆಶಿಶ್ ವಿದ್ಯಾರ್ಥಿ, ವಿನಯ್ ಗೌಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನು 'ಬಲರಾಮನ ದಿನಗಳು' ಹಾಡಿನ ಬಗ್ಗೆ, ಇದು 'ಆ ದಿನಗಳು ಪಾರ್ಟ್ 2' ಹೌದಾ? ಅಲ್ವಾ? ಅನ್ನೋದಕ್ಕೆ ಸ್ಪಷ್ಟತೆ ಕೊಟ್ಟಿದ್ದಾರೆ. "ಶುರು ಶುರು ಹಾಡಿನ ಮೂಲಕ ಸಿನಿಮಾ ಪ್ರಚಾರ ಶುರು ಆಗಿದೆ. ಇದು ಆ ದಿನಗಳು ಸಿನಿಮಾದ ಪಾರ್ಟ್-2 ಅಲ್ಲ. ಬಲರಾಮನ ದಿನಗಳು ಸಿನಿಮಾ ಒಂದು ಕಾಲ್ಪನಿಕ ಕಥೆ. ನಿರ್ಮಾಪಕರಾದ ಶ್ರೇಯಸ್ ಮತ್ತು ಪದ್ಮಾವತಿ ಅವರು ವಿನೋದ್ ಪ್ರಭಾಕರ್‌ಗೆ ಆ ದಿನಗಳು ಚಿತ್ರದ ಮಾದರಿಯಲ್ಲಿ ಸಿನಿಮಾ ಮಾಡಬೇಕು ಎಂದು ಹೇಳಿದರು. ಇದೊಂದು ಗ್ಯಾಂಗ್‌ಸ್ಟರ್ ಸಿನಿಮಾ" ಎಂದು ನಿರ್ದೇಶಕ ಕೆ.ಎಂ ಚೈತನ್ಯ ಹೇಳಿದ್ದಾರೆ.

"ಬಲರಾಮನ ದಿನಗಳು ಚಿತ್ರಕ್ಕೆ ಆಡಿಯೋ ಕಂಪನಿಯೊಂದು ಗರಿಷ್ಠ ಮೊತ್ತ ನೀಡಿದೆ. ನನ್ನ ವೃತ್ತಿ ಬದುಕಿನ 25 ಸಿನಿಮಾಗಳಲ್ಲಿ ಆಡಿಯೋಗೆ ಗರಿಷ್ಢ ಮೊತ್ತ ನೀಡಿದ ಮೊದಲ ಚಿತ್ರವಿದು. ಜೊತೆಗೆ ಪಾತ್ರವೂ ಚೆನ್ನಾಗಿ ಮೂಡಿ ಬಂದಿದೆ. ನಿರ್ದೇಶಕ ಚೈತನ್ಯ ಕೆಲ ಸನ್ನಿವೇಶಗಳನ್ನು ಕಂಪೋಸ್ ಮಾಡಲು ಅವಕಾಶ ಕೊಟ್ಟಿದ್ದರಿಂದ ನಟಿ ಪ್ರಿಯಾ ಅವರ ಜೊತೆ ಚರ್ಚೆ ಮಾಡಿ ನಟಿಸಿದ್ದೇವೆ " ಎಂದು ವಿನೋದ್ ಪ್ರಭಾಕರ್ ಸಿನಿಮಾ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಟಿ ಪ್ರಿಯಾ ಆನಂದ್ ಹಾಗೂ ಸಂಗೀತ ನಿರ್ದೇಶಕ ಸಂತೋಷ್ ನಾರಾಯಣನ್ ಕೂಡ ಸಿನಿಮಾ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. "ಕನ್ನಡದಲ್ಲಿ ರಾಜ ಕುಮಾರ ಆದ ಬಳಿಕ ಇದು ಐದನೇ ಚಿತ್ರ. ಕನ್ನಡ ಕಲಿಯಲು ಪುನೀತ್ ರಾಜ್ ಕುಮಾರ್ ಕಾರಣ. ಭಾಷೆ ಗೊತ್ತಿದ್ದರೆ ಸನ್ನಿವೇಶಗಳಲ್ಲಿ ಸುಲಭವಾಗಿ ನಟಿಸಲು ಸಾದ್ಯವಾಗುತ್ತದೆ ಎಂದಿದ್ದರು. ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಬಲರಾಮನ ದಿನಗಳು ಚಿತ್ರ ಚೆನ್ನಾಗಿ ಬಂದಿದೆ" ಎಂದು ಪ್ರಿಯಾ ಆನಂದ್ ಹೇಳಿದ್ರೆ, ಸಂತೋಷ್ ನಾರಾಯಣನ್ "ಸುಮಾರು ಒಂದು ಸಾವಿರ ಸಿನಿಮಾಗಳಿಗೆ ಕೆಲಸ ಮಾಡಿದ್ದೇನೆ. ಶುರು ಶುರು ಹಾಡು ಆಗ್ರ 10 ಹಾಡುಗಳಲ್ಲಿ ಒಂದಾಗಲಿದೆ. ಜಯಂತ್ ಕಾಯ್ಕಿಣಿ ಅವರು ಉತ್ತಮ ಸಾಹಿತ್ಯ ನೀಡಿದ್ದಾರೆ" ಎಂದು ಹೇಳಿದ್ದಾರೆ.


Click it and Unblock the Notifications











