ಗಣೇಶ್, ಜಗ್ಗೇಶ್ ಭವಿಷ್ಯ ಇಂದು ನಿಮ್ಮ ಕೈಯಲ್ಲಿ

ಗಣೇಶ್ ಅಭಿನಯದ 'ಮದುವೆಮನೆ' ಚಿತ್ರ ಇಂದು ತೆರೆಗೆ ಅಪ್ಪಳಿಸಲಿದೆ, ಜೊತೆಗೆ ನವರಸನಾಯಕ ಜಗ್ಗೇಶ್ ಅಭಿನಯದ 'ಬಾಡಿಗಾರ್ಡ್' ಚಿತ್ರ ಕೂಡ ಇಂದು ರಿಲೀಸ್ ಆಗಲಿದೆ. ಎರಡೂ ಚಿತ್ರತಂಡಗಳು ತಮ್ಮತಮ್ಮ ಚಿತ್ರದ ಬಗ್ಗೆ ಬಹಳಷ್ಟು ನಿರೀಕ್ಷೆ ಇಟ್ಟು ಕೊಂಡಿವೆ. ಮದುವೆಮನೆ ಚಿತ್ರ ಸ್ವಮೇಕ್ ಆದರೆ, ಬಾಡಿಗಾರ್ಡ್ ಚಿತ್ರ ರಿಮೇಕ್.
ಮದುವೆಮನೆ, ವರ್ಷದ ಹಿಂದೆಯೇ ಚಿತ್ರೀಕರಣ ಮುಗಿಸಿದ್ದರೂ ನಿರ್ಮಾಪಕ ರೆಹಮಾನ್ ವಿಟಮಿನ್ ಎಮ್ ತೊಂದರೆಯಲ್ಲಿದ್ದಿದ್ದರಿಂದ ಚಿತ್ರ ಬಿಡುಗಡೆಯಾಗಿರಲಿಲ್ಲ. ಸುನಿಲ್ ಕುಮಾರ್ ಸಿಂಗ್ ನಿರ್ದೇಶಕರಾಗಿರುವ ಈ ಚಿತ್ರದಲ್ಲಿ ಗಣೇಶ್ ಗೆ ನಾಯಕಿಯಾಗಿ ಶ್ರದ್ದಾ ಆರ್ಯ. ಹಾಸ್ಯ ಪ್ರಧಾನ ಚಿತ್ರಕಥೆಯನ್ನು ಹೊಂದಿರುವ ಈ ಚಿತ್ರ ಹಿಂದಿಯ ದಿಲ್ವಾಲೇ ದುಲ್ಹಾನಿಯಾ ಲೇಜಾಯೆಂಗೆ ಚಿತ್ರದಿಂದ ಸ್ಪೂರ್ತಿಯಾಗಿ ತೆಗೆದಿರೋ ಚಿತ್ರ ಅನ್ನೋದು ಗಾಂಧಿನಗರದಿಂದ ಹೊರ ಬಿದ್ದಿರುವ ಸುದ್ದಿ. ಆದರೆ ಚಿತ್ರತಂಡದ ಪ್ರಕಾರ ಇದು ಸ್ವಮೇಕ್.
ಜಗ್ಗೇಶ್ ಅವರ ಧರ್ಮಪತ್ನಿ ಪರಿಮಳ ನಿರ್ಮಿಸುತ್ತಿರುವ ಚಿತ್ರ ಬಾಡಿಗಾರ್ಡ್. ದಿಲೀಪ್, ನಯನತಾರ ಪ್ರಮುಖ ಭೂಮಿಕೆಯಲ್ಲಿದ್ದ ಮಲಯಾಳಂ ಬಾಡಿಗಾರ್ಡ್ ಚಿತ್ರದ ರಿಮೇಕ್ ಇದು. ಆನಂದ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಪ್ರತಿಭಾನ್ವಿತ ಕಲಾವಿದ ಜಗ್ಗೇಶ್ ಗೆ ನಾಯಕಿಯರುಗಳಾಗಿ ಡೈಸಿ ಶಾ ಮತ್ತು ಸ್ಫೂರ್ತಿ ನಾಯಕಿಯರುಗಳು. ಬಾಕ್ಸ್ ಆಫೀಸ್ ನಲ್ಲಿ ಸದ್ಯ ಟಾಪ್ ಗೇರ್ ನಲ್ಲಿ ಓಡುತ್ತಿರುವ ಸಾರಥಿ ಮತ್ತು ಪರಮಾತ್ಮ ಚಿತ್ರಕ್ಕೆ ಈ ಎರಡೂ ಚಿತ್ರಗಳು ಯಾವ ರೀತಿ ಪೈಪೋಟಿ ನೀಡುತ್ತೆ ಎನ್ನುವುದು ಕುತೂಹಲಕ್ಕೆ ಎಡೆ ಮಾಡಿದೆ.
ಕನ್ನಡ ಕಲಾಪ್ರೇಮಿಗಳು, ಕಲಾರಸಿಕರು ಆದ ಆರು ಕೋಟಿ ಕನ್ನಡಿಗರು ಈ ಎರಡೂ ಚಿತ್ರವನ್ನು ನೋಡಿ, ಆನಂದಿಸಿ, ಹರಸಿರಿ ಎನ್ನುವುದು ಮದುವೆಮನೆ ಮತ್ತು ಬಾಡಿಗಾರ್ಡ್ ಚಿತ್ರತಂಡದ ಕೋರಿಕೆ. ಜೊತೆಗೆ ಕನ್ನಡ ಚಿತ್ರವನ್ನು ಚಿತ್ರರಮಂದಿರದಲ್ಲೇ ನೋಡಿ.. ಕನ್ನಡ ಚಿತ್ರವನ್ನು ಮತ್ತು ಅದನ್ನೇ ನಂಬಿರುವ ಕಲಾವಿದರನ್ನು ಉಳಿಸಿ, ಬೆಳೆಸಿ, ಪ್ರೋತ್ಸಾಹಿಸಿ, ಪೈರೆಸಿ ಅನ್ನೋ ಪೆಡಂಭೂತವನ್ನು ನಿರ್ನಾಮ ಮಾಡಿ ಅನ್ನೋದು ನಮ್ಮ ಸಲಹೆ..
ಮದುವೆಮನೆ ಚಿತ್ರ, ಸ್ವಮೇಕೋ ರಿಮೇಕೋ, ಚಿತ್ರ ಹೇಗಿದೆ ಅನ್ನೋದನ್ನು ನೋಡೋಕೆ ಮತ್ತು ಅದನ್ನು ವಿಮರ್ಶೆ ಮೂಲಕ ತಮಗೆ ತಿಳಿಸಲು ನಮ್ಮ ಸಿನಿಡೆಸ್ಕ್ ಸಹದ್ಯೋಗಿ ಸಿನಿಮಾ ನೋಡಲು ಹೋಗಿದ್ದಾರೆ. ಇಂದು ಸಂಜೆ ನಾಲ್ಕು ಗಂಟೆಯ ನಂತರ ವಿಮರ್ಶೆ ನಿರೀಕ್ಷಿಸಿ..


Click it and Unblock the Notifications











