'ನಮ್ಮ ರಕ್ಷಿತ್ ಶೆಟ್ಟಿ ಕನ್ನಡದ ಆಮಿರ್ ಖಾನ್'- ಜಗ್ಗೇಶ್
'777 ಚಾರ್ಲಿ' ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾಗೆ ದೇಶಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಈ ಸಿನಿಮಾ ಕರ್ನಾಟಕದಲ್ಲಿ ಕುಟುಂಬ ಸಮೇತ ಹೋಗಿ ಸಿನಿಮಾ ನೋಡುತ್ತಿದ್ದಾರೆ. ಇನ್ನು ಉಳಿದ ಭಾಷೆಗಳಲ್ಲಿ ದಿನದಿಂದ ದಿನಕ್ಕೆ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚಾಗುತ್ತಿದೆ.
ರಕ್ಷಿತ್ ಶೆಟ್ಟಿ ಹಾಗೂ ಚಾರ್ಲಿ ಸಂಬಂಧ ಪ್ರೇಕ್ಷಕರಿಗೆ ಇಷ್ಟವಾಗುತ್ತಿದೆ. ಅದರಲ್ಲೂ ಪ್ರಾಣಿ ಪ್ರಿಯರಿಗೆ '777 ಚಾರ್ಲಿ' ತುಂಬಾನೇ ಇಷ್ಟ ಆಗಿದೆ. ಸೆಲೆಬ್ರೆಟಿಗಳಿಂದ ಹಿಡಿದು, ಸಿನಿಪ್ರಿಯರಿಗೆ ಈ ಸಿನಿಮಾ ಭಾವನಾತ್ಮಕವಾಗಿ ಕನೆಕ್ಟ್ ಆಗಿದೆ. ಈ ಕಾರಣಕ್ಕೆ ಮೌತ್ ಪಬ್ಲಿಸಿಟಿಯಿಂದಲೇ ಸಿನಿಮಾ ಸದ್ದು ಮಾಡುವುದಕ್ಕೆ ಆರಂಭಿಸಿದೆ.
'777 ಚಾರ್ಲಿ ಸಿನಿಮಾವನ್ನು ಸಿ ಎಂ ಬಸವರಾಜ ಬೊಮ್ಮಾಯಿ ನೋಡಿ ಕಣ್ಣೀರು ಹಾಕಿದ್ದರು. ಇದೇ ವೇಳೆ ಇವರೊಂದಿಗೆ ಸಿನಿಮಾ ನೋಡಿದ ನವರಸ ನಾಯಕ ಜಗ್ಗೇಶ್ ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ರಕ್ಷಿತ್ ಶೆಟ್ಟಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

ಕನ್ನಡದ ಆಮಿರ್ ಖಾನ್ ಯಾರು?
ಶ್ವಾನ ಚಾರ್ಲಿ ಹಾಗೂ ರಕ್ಷಿತ್ ಶೆಟ್ಟಿಯ ಬಾಂಧವ್ಯ ಸಿನಿಮಾದಲ್ಲಿ ಭಾವನಾತ್ಮಕವಾಗಿ ಹಿಡಿದಿಟ್ಟಿದೆ. ರಕ್ಷಿತ್ ಹಾಗೂ ಚಾರ್ಲಿ ಜುಗಲ್‌ಬಂಧಿಗೆ ಪ್ರೇಕ್ಷಕರು ಚಪ್ಪಾಳೆ ತಟ್ಟಿದ್ದಾರೆ. ಅದರಂತೆ ಜಗ್ಗೇಶ್ ಕೂಡ ಶ್ವಾನ ಪ್ರಿಯರು. ಈ ಕಾರಣಕ್ಕೆ ನವರಸ ನಾಯಕನಿಗೂ ಈ ಸಿನಿಮಾ ತುಂಬಾನೇ ಇಷ್ಟ ಆಗಿದೆ. ಅದಕ್ಕೆ ರಕ್ಷಿತ್ ಶೆಟ್ಟಿ ಕನ್ನಡದ ಆಮಿರ್ ಖಾನ್ ಬಿರುದು ಕೊಟ್ಟಿದ್ದಾರೆ. " ನಾನು ಒಂದೇ ಒಂದು ಮಾತು ಹೇಳುವುದಕ್ಕೆ ಇಷ್ಟ ಪಡುತ್ತೇನೆ. ನಮ್ಮ ರಕ್ಷಿತ್ ಶೆಟ್ಟಿ ಕನ್ನಡದ ಆಮಿರ್ ಖಾನ್." ಎಂದು ಸಿನಿಮಾ ನೋಡಿದ ಬಳಿಕ ಹೇಳಿಕೆ ನೀಡಿದ್ದರು.
ಒನ್ ಅಂಡ್ ಓನ್ಲಿ ರಕ್ಷಿತ್
"ರಕ್ಷಿತ್ ಶೆಟ್ಟಿ ಒಂದು ಅದ್ಭುತವಾದ ಪ್ರಯೋಗವನ್ನು ಈ ಸಿನಿಮಾದಲ್ಲಿ ಮಾಡಿದ್ದಾನೆ. ಬಹುಶ: ಯಾರದ್ದೇ ಕಲ್ಲು ಹೃದಯವೂ ಕೂಡ ಈ ಚಿತ್ರವನ್ನು ನೋಡಿದರೆ, ಕರಗಿ ಹೋಗುತ್ತಾರೆ. ನಾನು ನನ್ನ ಕರಿಯರ್‌ನಲ್ಲಿ ಎರಡು ಅನಿಮಲ್ ಸಿನಿಮಾ ನೋಡಿದ್ದೇನೆ. ಇಂದು ಇಂಗ್ಲಿಷ್. ಈತರ ಒಂದು ಸಿನಿಮಾ ಮಾಡಬಹುದಾ? ಅಂತ ನಾನು ನಿರೀಕ್ಷೆ ಮಾಡಿದ್ದೆ. ಅದು ಒನ್ ಅಂಡ್ ಓನ್ಲಿ ರಕ್ಷಿತ್ ಶೆಟ್ಟಿ ಮಾಡಿದ್ದಾನೆ. ಯಾರು ಪ್ರಾಣಿ ಪ್ರೇಮಿಗಳಿದ್ದಾರೋ ಅವರಿಗೆ ಈ ಚಿತ್ರ ತುಂಬಾನೇ ಕಾಡುತ್ತೆ." ಎಂದು ಸಿನಿಮಾ ಬಗ್ಗೆ ಮಾತಾಡಿದ್ದಾರೆ.

ರಕ್ಷಿತ್ ಶೆಟ್ಟಿಗೆ ಆಮಿರ್ ಖಾನ್ ಫೇವರಿಟ್
ರಕ್ಷಿತ್ ಶೆಟ್ಟಿ ನ್ಯಾಷನಲ್ ಮೀಡಿಯಾದಲ್ಲಿ ನೀಡಿದ ಸಂದರ್ಶನದಲ್ಲಿ ಆಮಿರ್ ಖಾನ್ ಬಗ್ಗೆ ಹೇಳಿದ್ದಾರೆ. "ಆಮಿರ್ ಖಾನ್ ಅವರನ್ನು ನಾನು ಯಾವಾಗಲೂ ನೋಡುತ್ತಲೇ ಇರುತ್ತೇನೆ. ಅವರನ್ನು ನನ್ನೊಂದಿಗೆ ಹೋಲಿಕೆ ಮಾಡಿಕೊಳ್ಳುತ್ತೇನೆ. ಯಾಕಂದರೆ, ಅವರು ಒಬ್ಬ ರೈಟರ್. ಫಿಲ್ಮ್ ಮೇಕರ್ ಹಾಗೇ ಒಬ್ಬ ನಟ ಕೂಡ. ಅವರು ತಮ್ಮ ಪ್ರತಿಯೊಂದು ಸಿನಿಮಾದಲ್ಲಿಯೂ ಹೊಸದನ್ನು ನೀಡುತ್ತಾರೆ. ಉಳಿದ ಬಾಲಿವುಡ್ ಸಿನಿಮಾಗಳಿಗಿಂತ ಆ ಸಿನಿಮಾ ವಿಭಿನ್ನವಾಗಿರುತ್ತೆ. ನಾನು ಅವರಂತೆಯೇ ಯೋಚನೆ ಮಾಡುತ್ತೇನೆ." ಎಂದು ಇಂಡಿಯಾ. ಕಾಮ್‌ಗೆ ನೀಡಿದ ಸಂದರ್ಶನದಲ್ಲಿ ಮಾತಾಡಿದ್ದರು.

ಚಾರ್ಲಿ ಕಲೆಕ್ಷನ್ ಅದ್ಭುತ
'777 ಚಾರ್ಲಿ' ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್ ಅದ್ಭುತವಾಗಿದೆ. ಕಳೆದ ನಾಲ್ಕು ದಿನಗಳಿಂದ ಬಾಕ್ಸಾಫೀಸ್‌ನಲ್ಲಿ ಸುಮಾರು 28 ಕೋಟಿ ರೂ. ಅಧಿಕ ಗಳಿಕೆ ಕಂಡಿದೆ. ಇದೇ ಬೆನ್ನಲೇ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿಯೂ '777 ಚಾರ್ಲಿ' ಪಿಕಪ್ ಆಗುತ್ತಿದೆ. ಮುಂದಿನ ದಿನಗಳಲ್ಲೂ ಮೌತ್ ಪಬ್ಲಿಸಿಟಿ ವರ್ಕ್‌ಔಟ್ ಆದರೆ, ಕನ್ನಡದ ಮತ್ತೊಂದು ಸಿನಿಮಾ ಬಾಕ್ಸಾಫೀಸ್ ಕ್ಲಿಕ್ ಆದಂತೆ.


Click it and Unblock the Notifications











