15 ವರ್ಷಗಳ ಬಳಿಕ ನಗಿಸಲು ಸಜ್ಜಾದ ಜಗ್ಗೇಶ್-ಗುರುಪ್ರಸಾದ್; ಶಿವರಾತ್ರಿಗೆ 'ರಂಗನಾಯಕ'ನ ಥಿಯೇಟರ್ ಪ್ರವೇಶ
ಹಾಸ್ಯ ಪ್ರಿಯರು ಈ ಜೋಡಿಯನ್ನು ಬಹಳಾನೇ ಮಿಸ್ ಮಾಡಿಕೊಂಡಿದ್ದರು. ನವರಸ ಜಗ್ಗೇಶ್ ಹಾಗೂ ಗುರುಪ್ರಸಾದ್ ಒಟ್ಟಿಗೆ ಸೇರಿ ಸಿನಿಮಾ ಮಾಡಬಾರದಾ? ಅಂತ ಹಿಡಿಶಾಪ ಹಾಕಿದವರೂ ಇದ್ದಾರೆ. ಆದರೆ, ಇವರಿಬ್ಬರೂ ಮತ್ತೆ ಒಂದಾಗಿ ಸಿನಿಮಾ ನೋಡೋಕೆ ವರ್ಷಗಳೇ ಹಿಡಿದು ಬಿಡ್ತು.
'ಮಠ' ಹಾಗೂ 'ಎದ್ದೇಳು ಮಂಜುನಾಥ' ಸಿನಿಮಾ ನೋಡಿ ಎಂಜಾಯ್ ಮಾಡಿದ್ದ ಪ್ರೇಕ್ಷಕರು ಕಾದೂ ಕಾದು ಸೈಲೆಂಟ್ ಆಗಿದ್ದರು. ಇದೇ ಐದಾರು ವರ್ಷಗಳ ಹಿಂದೆ ಮತ್ತೆ ಒಂದಾಗಿ ಸಿನಿಮಾ ಮಾಡೋಕೆ ಈ ಜೋಡಿ ನಿರ್ಧಾರ ಮಾಡಿತ್ತು. 2019ರಲ್ಲಿ 'ರಂಗನಾಯಕ' ಸಿನಿಮಾ ಅನೌನ್ಸ್ ಆಯ್ತು. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಸಿನಿಮಾ ಸೆಟ್ಟೇರುವುದು ತಡವಾಯ್ತು.

ಅಲ್ಲಿಗೆ ಮತ್ತೆ 'ರಂಗನಾಯಕ'ನ ಬಗ್ಗೆ ಚಿಕ್ಕದೊಂದು ಸುಳಿವು ಕೂಡ ಇರಲಿಲ್ಲ. ಜಗ್ಗೇಶ್ ಕೂಡ ಈ ಬಗ್ಗೆ ಬಾಯಿ ಬಿಡಲಿಲ್ಲ. ಗುರುಪ್ರಸಾದ್ ಬಾಯಿ ಬಿಟ್ರು ನಂಬೋ ಹಾಗೆ ಇರಲಿಲ್ಲ. ಹೀಗಾಗಿ 'ರಂಗನಾಯಕ'ನ ಕಥೆ ಅಲ್ಲಿಗೆ ಮುಗಿದೇ ಹೋಯ್ತು ಅಂದುಕೊಂಡರು. ಆಗಲೇ ಒಂದಿಷ್ಟು ಮಂದಿ ಬೈಕೊಂಡಿದ್ದೂ ಇದೆ. ಮತ್ತೆ ಈ ಪ್ರಾಜೆಕ್ಟ್‌ಗೆ 2021ರಲ್ಲಿ ಜೀವಬಂದ್ಬಿಡ್ತು.
ನಿರ್ದೇಶಕ ಗುರುಪ್ರಸಾದ್ ಸಿನಿಮಾಗೆ ಹೆಚ್ಚು ಬಜೆಟ್ ಬೇಕಿಲ್ಲ. ಅದ್ಧೂರಿ ಲೋಕೇಶನ್ ಬೇಕಾಗಲ್ಲ. ಆದರೆ, 'ರಂಗನಾಯಕ'ನನ್ನು ಹೆಚ್ಚು ಪಾಲು ಸೆಟ್ಟಿನಲ್ಲೇ ತೋರಿಸುತ್ತೇನೆ ಅಂದಿದ್ದರು. ಅದಕ್ಕೆ ಸೆಟ್ಟು, ಅದೂ ಇದೂ ಅಂತ ಇನ್ನೊಂದಿಷ್ಟು ದಿನ ಹಿಡಿತು. ಮಧ್ಯದಲ್ಲಿ ಬ್ರೇಕ್, ಎಲೆಕ್ಷನ್, ಬೇರೆ ಸಿನಿಮಾ ಅಂತ ಒಂದಿಷ್ಟು ದಿನ ಕಳೆದು ಹೋಯ್ತು.

ಈಗ್ಯಾಪ್‌ನಲ್ಲೇ 'ರಂಗನಾಯಕ' ಸಿನಿಮಾ ಮುಗಿದಿದೆ ಅನ್ನೋ ಖಬರ್ ಬಂದಿದೆ. ಅದಕ್ಕಿಂತಲೂ ಖುಷಿ ವಿಷಯ ಏನಪ್ಪಾ ಅಂದ್ರೆ, ಗುರುಪ್ರಸಾದ್ ರಿಲೀಸ್ ಡೇಟ್ ಅನ್ನೂ ಅನೌನ್ಸ್ ಮಾಡಿದ್ದಾರೆ. ಹಾಗಾಗಿ ಹಾಸ್ಯ ಪ್ರಿಯರಲ್ಲಿ ಮತ್ತೆ ಲವಲವಿಕೆ ಎದ್ದು ಕಾಣುತ್ತಿದೆ. ಗುರುಪ್ರಸಾದ್ ಹಿಂದೊಂದು ಸಿನಿಮಾದಲ್ಲಿ ಹೇಳಿದ ಡೇಟ್‌ಗೆ ರಿಲೀಸ್ ಮಾಡಿಲ್ಲ ಅಂದ್ರೆ ನೇಣಿಗೆ ಹಾಕಿ ಅಂತ ಪೋಸ್ಟರ್ ಬಿಟ್ಟಿದ್ರು. ಆದರೂ, ಆ ಡೇಟ್‌ಗೆ ರಿಲೀಸ್ ಆಗಿರಲಿಲ್ಲ.
ಆದರೆ, ಈ ಬಾರಿ ಹಾಗೆಲ್ಲ ಆಗಲ್ಲ ಅನ್ನೋ ಸುದ್ದಿ ಏನೋ ಇದೆ. ಶಿವರಾತ್ರಿ ಹಬ್ಬಕ್ಕೆ ಅಂದರೆ, ಮಾರ್ಚ್ 8ಕ್ಕೆ ಅದ್ಧೂರಿಯಾಗಿ 'ರಂಗನಾಯಕ'ನಿಗೆ ಥಿಯೇಟರ್ ಪ್ರವೇಶ ಮಾಡಿಸಬೇಕು ಅಂತ ಪಟ್ಟು ಹಿಡಿದು ಕೂತಿದ್ದಾರೆ. ಈ ಕಾರಣಕ್ಕೆ ಶಿವನ ಜಪ ಮಾಡುತ್ತಲೇ ಹೊಟ್ಟೆ ಹುಣ್ಣಾಗಿಸುವಷ್ಟು ಈ ಜೋಡಿ ನಗಿಸುವುದಕ್ಕೆ ತೀರ್ಮಾನ ಮಾಡಿದೆ. ಜಗ್ಗೇಶ್ ಕಾಮಿಡಿ ಮ್ಯಾನರಿಸಂಗೆ ಗುರುಪ್ರಸಾದ್ ಆಕ್ಷನ್ ಕಟ್ ಹೇಳಿದ್ರೆ, ಅನೂಪ್ ಸಿಳೀನ್ ಸಂಗೀತವಿದೆ. ಹೀಗಾಗಿ ಡಬಲ್ ಮನರಂಜನೆ ಅಂತೂ ಫಿಕ್ಸ್.
'ರಂಗನಾಯಕ'ನ ಮೇಲೆ ಯಾಕಿಷ್ಟು ನಿರೀಕ್ಷೆ ಅಂತ ವಿಶೇಷವಾಗಿ ಹೇಳಬೇಕಿಲ್ಲ. 'ಎದ್ದೇಳು ಮಂಜುನಾಥ' ಸಿನಿಮಾ ತೆರೆಕಂಡು 15 ವರ್ಷಗಳ ಬಳಿಕ ಈ ಜೋಡಿಯ ಸಿನಿಮಾ ರಿಲೀಸ್ ಆಗುತ್ತಿದೆ. ಹೀಗಾಗಿ ಸ್ವಲ್ಪ ನಿರೀಕ್ಷೆ ಹೆಚ್ಚು. ಇದರೊಂದಿಗೆ ಈ ಸಿನಿಮಾ ರಾಜಕೀಯ ವಿಡಂಬನಾತ್ಮಕ ಸಿನಿಮಾ ಅಂತ ಗುರುಪ್ರಸಾದ್ ಅವರೇ ಹೇಳಿಕೊಂಡಿದ್ದಾರೆ. ಅಲ್ಲದೆ ಜಗ್ಗೇಶ್ ಅವರೇ ಬೇಕು ಅಂತ 10 ವರ್ಷಗಳಿಂದ ಈ ಸ್ಕ್ರಿಪ್ಟ್ ಇಟ್ಕೊಂಡು ಕಾದಿದ್ದ ನಿರ್ದೇಶಕರ ಆಸೆನೂ ಇಡೇರಿದೆ. ಹಾಗಿದ್ರೆ ಶಿವರಾತ್ರಿ ಹಬ್ಬಕ್ಕೆ ಹೊಟ್ಟೆ ಹಿಡ್ಕೊಂಡು ನಗೋಕೆ ರೆಡಿಯಾಗಿ.


Click it and Unblock the Notifications











