'ರಂಗನಾಯಕ'ನ ಬಾಯಲ್ಲಿ ಬಿಗ್ ಬಾಸ್ ಶ್ರುತಿ, ಮೀಟು ಶ್ರುತಿ; ವಿವಾದ ಮೈಮೇಲೆ ಎಳೆದುಕೊಂಡ್ರಾ ಗುರುಪ್ರಸಾದ್ ?
'ಮಠ' ಹಾಗೂ 'ಎದ್ದೇಳು ಮಂಜುನಾಥ'ದಂತಹ ಎವರ್‌ಗ್ರೀನ್ ಸಿನಿಮಾಗಳನ್ನು ನೀಡಿದ ಜೋಡಿ ಜಗ್ಗೇಶ್ ಹಾಗೂ ಗುರುಪ್ರಸಾದ್. ಈ ಜೋಡಿ ಇಂತಹ ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟ ಬಳಿಕ ದೂರವೇ ಉಳಿದಿದ್ದರು. ಐದಾರು ವರ್ಷಗಳ ಹಿಂದೆ ಮತ್ತೆ ಒಂದಾಗಿ ಸಿನಿಮಾ ಮಾಡುವುದಾಗಿ ಸಿನಿಮಾವನ್ನು ಅನೌನ್ಸ್ ಮಾಡಿದ್ದರು. ಅದುವೇ 'ರಂಗನಾಯಕ'. ಸದ್ಯ ಈ ಸಿನಿಮಾದ ಹಾಡೊಂದು ವಿವಾದವನ್ನು ಸೃಷ್ಟಿಸುವ ಹಾಗೆ ಕಾಣುತ್ತಿದೆ.
ನವರಸ ನಾಯಕ ಜಗ್ಗೇಶ್ ಹಾಗೂ ಮಠ ಗುರುಪ್ರಸಾದ್ ಕಾಂಬಿನೇಷನ್ ಅಂದ್ಮೇಲೆ ಆ ಸಿನಿಮಾ ಸಂಚಲನವನ್ನು ಸೃಷ್ಟಿಸುವುದರಲ್ಲಿ ಡೌಟೇ ಇಲ್ಲ. ಈಗ ಬಿಡುಗಡೆಯಾಗಬೇಕಿರುವ ಹಾಡಿನ ತುಣುಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಈ ಹಾಡಿನಲ್ಲಿ ಗುರುಪ್ರಸಾದ್ ಕನ್ನಡ ನಟಿಯರ ಕಾಲೆಳೆದಿದ್ದಾರೆ ಅಂತ ಸುದ್ದಿಯಾಗುತ್ತಿದೆ.

ರಂಗನಾಯಕ ಸಿನಿಮಾದ "ಗಾಳಿ ತಂಗಾಳಿ ಕನ್ನಡ ಮಾತಾಡೇ.." ಅನ್ನೋ ಹಾಡಿನಲ್ಲಿ ಜಗ್ಗೇಶ್ ಬಿಗ್ ಬಾಸ್ ಶ್ರತಿ ಹಾಗೂ ಮೀಟು ಶ್ರುತಿ ಅನ್ನೋ ಹೆಸರನ್ನು ಹೇಳುತ್ತಾರೆ. ಇದು ಹಿರಿಯ ನಟಿ ಶ್ರುತಿ ಹಾಗೂ ಅರ್ಜುನ್ ಸರ್ಜಾ ವಿರುದ್ಧ ಮೀಟು ಆರೋಪ ಮಾಡಿದ್ದ ಶ್ರುತಿ ಹರಿಹರನ್ ಕುರಿತಾಗಿ ಇರಬಹುದಾ? ಅನ್ನೋ ಅನುಮಾನ ಮೂಡಿದೆ.
'ರಂಗನಾಯಕ' ಸಿನಿಮಾದ "ಗಾಳಿ ತಂಗಾಳಿ ಕನ್ನಡ ಮಾತಾಡೇ.." ಮೊದಲ ಹಾಡಿನ ಝಲಕ್ ಅಷ್ಟೇ ಇದು. ಇನ್ನು ಇಡೀ ಹಾಡಿನಲ್ಲಿ ಗುರುಪ್ರಸಾದ್ ಯಾರಿಗೆ ಏನೇನು ಹೇಳಿದ್ದಾರೋ ಗೊತ್ತಿಲ್ಲ. ನಾಳೆ (ಫೆಬ್ರವರಿ 2) ಸಂಜೆ 4 ಗಂಟೆ ಮೇಲೆ ಈ ಹಾಡು ರಿಲೀಸ್ ಆಗುತ್ತಿದೆ. ಆ ಬಳಿಕ ಈ ಹಾಡು ವಿವಾದಕವನ್ನು ಸೃಷ್ಟಿ ಮಾಡಿದರೂ ಅಚ್ಚರಿ ಪಡಬೇಕಿಲ್ಲ.
ಕತ್ತೆಯೊಂದು ಕೂಗುತ್ತಿರವ ದೃಶ್ಯ. ಅದರ ಮುಂದೆ 'ರಂಗನಾಯಕ' ಶ್ರುತಿ.. ಶ್ರುತಿ ಅಂತ ಕರೆಯುವ ದೃಶ್ಯ. ಹಾಗೇ ಬಿಗ್‌ಬಾಸ್ ಶ್ರುತಿ ಹಾಗೂ ಮೀಟು ಶ್ರುತಿ ಅಂತಾನೂ ಹೇಳುತ್ತಾರೆ. ಇದನ್ನು ನೋಡಿ ನಿರ್ದೇಶಕ ಗುರುಪ್ರಸಾದ್ ನಟಿಯರನ್ನ ಕತ್ತೆಗಳಿಗೆ ಹೋಲಿಸಿದ್ರಾ? ಅಂತಾನೂ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಮಾಡುತ್ತಿದ್ದಾರೆ.

ಅಂದ್ಹಾಗೆ ಗುರುಪ್ರಸಾದ್‌ಗೆ ವಿವಾದಗಳೇನು ಹೊಸತೇನು ಅಲ್ಲ. ಈ ಹಿಂದೆ ಸಾಕಷ್ಟು ವಿವಾದಗಳನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ಈ ಬಾರಿ ಕೂಡ ಹೊಸದೊಂದು ವಿವಾದಕ್ಕೆ ಸಿಲುಕುತ್ತಾರಾ? ಅನ್ನೋ ಪ್ರಶ್ನೆಯಂತೂ ಎದ್ದಿದೆ. ಏನಕ್ಕೂ ನಾಳೆ (ಫೆಬ್ರವರಿ 2) ರಿಲೀಸ್ ಆಗಲಿರುವ ಹಾಡು ಇದೆಲ್ಲವನ್ನು ನಿರ್ಧರಿಸಲಿದೆ. ಈ ಹಾಡಿನಲ್ಲಿ ಜಗ್ಗೇಶ್ ಜೊತೆ ನಿರ್ದೇಶಕ ಯೋಗರಾಜ್ ಭಟ್ ಕೂಡ ಸೇರಿಕೊಂಡಿದ್ದು ಕುತೂಹಲ ಮೂಡಿಸಿದೆ.
ಶಿವರಾತ್ರಿ ಹಬ್ಬಕ್ಕೆ (ಮಾರ್ಚ್ 18) ಸಿನಿಮಾ ಬಿಡುಗಡೆಯಾಗಲಿದೆ. ಇದೇ ದಿನ 'ರಂಗನಾಯಕ' ಚಿತ್ರಮಂದಿರಕ್ಕೆ ಪ್ರವೇಶ ಮಾಡಲಿದ್ದಾನೆ. ಈ ಶಿವರಾತ್ರಿಗೆ 'ರಂಗನಾಯಕ' ಹೊಟ್ಟೆ ಹುಣ್ಣಾಗುವಂತೆ ನಗಿಸುವುದಂತೂ ಗ್ಯಾರಂಟಿ. ಜಗ್ಗೇಶ್ ಹಾಗೂ ಗುರು ಪ್ರಸಾದ್ ಕಾಂಬಿನೇಷನ್ ಅಂದ್ಮೇಲೆ ಹಾಸ್ಯವನ್ನು ನಿರೀಕ್ಷೆ ಮಾಡಬಹುದು. ಇನ್ನು ಅನೂಪ್ ಸಿಳೀನ್ ಟ್ಯೂನ್ ಹಾಕಿದ್ದು, ಸಂಗೀತ ಪ್ರಿಯರಿಗೆ ಇಷ್ಟ ಆಗಬಹುದು. ಅದೇ ಒಂದ್ಮೇಳೆ ವಿವಾದಕ್ಕೆ ಸಿಲುಕಿದರೆ ಏನಾಗುತ್ತೆ ಅನ್ನೋದೇ ಕುತೂಹಲ.


Click it and Unblock the Notifications











