Jaggesh: ಶಿವಣ್ಣನ ದೊಡ್ಡತನ ನೆನಪಿಸಿಕೊಂಡ ನವರಸ ನಾಯಕ ಜಗ್ಗೇಶ್.. ಇದು ನಿಜಕ್ಕೂ ದೊಡ್ಮನೆಯ ವಿಚಾರ!
ವರನಟ ಡಾ ರಾಜ್‌ಕುಮಾರ್ ಕನ್ನಡದ ಆಸ್ತಿ. ಅವರ ಮನೆಯ ಸದಸ್ಯರೆಲ್ಲಾ ಇಂದಿಗೂ ಅಣ್ಣಾವ್ರು ಮತ್ತು ಪಾರ್ವತಮ್ಮ ರಾಜ್ಕುಮಾರ್ ನಂಬಿ ನಡೆದಿದ್ದ ಮೌಲ್ಯಗಳನ್ನೇ ಅನುಸರಿಸಿ ಮುಂದುವರೆಸಿಕೊಂಡು ಹೋಗ್ತಿದ್ದಾರೆ. ಅದಕ್ಕೇ ಬಹುಶಃ ಜನ ಇಂದಿಗೂ ಅವರನ್ನೆಲ್ಲಾ ಪ್ರೀತಿ ಮತ್ತು ಗೌರವದಿಂದ ದೊಡ್ಮನೆಯವರು ಎನ್ನುವುದು.
ಈಗ ಈ ದೊಡ್ಮನೆಯ ಹಿರಿಯ ಪುತ್ರ ಶಿವರಾಜ್‌ಕುಮಾರ್ ಕುರಿತಾಗಿ ಇದುವರಗೆ ಯಾರಿಗೂ ತಿಳಿದಿರದ ವಿಚಾರವೊಂದನ್ನು ನವರಸನಾಯಕ ಜಗ್ಗೇಶ್ ರಿವೀಲ್ ಮಾಡಿದ್ದಾರೆ. ತಮ್ಮ ಹೊಸಾ ಚಿತ್ರ ತೋತಾಪುರಿ 2 ಟ್ರೇಲರ್ ರಿಲೀಸ್ ಬಗ್ಗೆ ಮಾತನಾಡುತ್ತಾ ಜಗ್ಗೇಶ್ ಈ ಅಪರೂಪದ ಸಂದರ್ಭವೊಂದನ್ನು ವಿವರಿಸಿದ್ದಾರೆ.

ಸ್ನೇಹದ ಬಗ್ಗೆ ವಿವರಿಸುತ್ತಾ ಜಗ್ಗೇಶ್ ಮಾತನ್ನು ಶುರುಮಾಡಿದ್ದಾರೆ. ತುಂಬಾ ಪುಣ್ಯ ಮಾಡಿದ್ರೆ ಮಾತ್ರ ಒಳ್ಳೆ ಸ್ನೇಹಿತರು ಸಿಗ್ತಾರಂತೆ. ಬಹುಶಃ ನಾನು ಆ ಪುಣ್ಯ ಮಾಡಿದ್ದೀನಿ ಅನ್ಸುತ್ತೆ ಎನ್ನುತ್ತಾರೆ ಈ ಕಲಾವಿದ. ಯಾಕಂದ್ರೆ, ತನ್ನ ನೆಚ್ಚಿನ ಡಾ. ರಾಜ್ ಅಂದ್ರೆ ಜಗ್ಗೇಶ್ ಅವರ ಪಾಲಿನ 'ರಾಜಣ್ಣ'ನ ಮಗ ಶಿವರಾಜ್‌ಕುಮಾರ್ ತನ್ನ ಸ್ನೇಹಿತನಾಗಿರೋದು ತನ್ನ ಪುಣ್ಯ ಅನ್ನೋದು ಅವರ ಅಭಿಪ್ರಾಯ.
ಶಿವಣ್ಣ ಹಾಗೂ ಜಗ್ಗೇಶ್ ಎಂದೂ ಮರೆಯದ ಸಹಾಯವೊಂದನ್ನು ಮಾಡಿದ್ದಾರಂತೆ. ಆಗಿನ್ನೂ ಯಶಸ್ವಿ ನಾಯಕನಾಗಿ ಜಗ್ಗೇಶ್ ಬೆಳೆದಿರಲಿಲ್ಲ. ಚಿತ್ರರಂಗದಲ್ಲಿ ಕಾಲೂರಲು ಪರದಾಡುತ್ತಿದ್ದ ಕಾಲವದು. ಅವಕಾಶಗಳು ಕೂಡಾ ಅಷ್ಟೇನೂ ಇರಲಿಲ್ಲ. ಅಂಥಾ ಸಂದರ್ಭವೊಂದರಲ್ಲಿ ಶಿವರಾಜ್‌ಕುಮಾರ್ ಬಳಿ ತೆರಳಿದ ಜಗ್ಗೇಶ್, "ನಿಮ್ಮ ಜೊತೆ ನಟಿಸೋಕೆ ಒಂದು ಅವಕಾಶ ಕೊಡಿಸಿ ಎಂದು ಕೇಳಿದ್ದರಂತೆ."

ಜಗ್ಗೇಶ್ ಹೀಗೆ ಕೇಳಿದ್ದೇ ತಡ, ಮರುಮಾತನಾಡದೇ ಶಿವಣ್ಣ ಕೂಡಲೇ ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರ ಜೊತೆ ಮಾತನಾಡಿ ತಾವು ನಟಿಸುತ್ತಿದ್ದ 'ರಣರಂಗ' ಚಿತ್ರದಲ್ಲಿ ಒಂದು ಪಾತ್ರವನ್ನು ಕೊಡಿಸೇ ಬಿಟ್ರಂತೆ. ಶಿವಣ್ಣ ಮತ್ತು ಜಗ್ಗೇಶ್ ಜೊತೆಯಾಗಿ ನಟಿಸಿದ ಮೊಟ್ಟಮೊದಲ ಚಿತ್ರ 'ರಣರಂಗ'.
ಅವು ಜಗ್ಗೇಶ್ ಪಾಲಿನ ಕಷ್ಟದ ದಿನಗಳು. ಅಂಥಾ ಸಂದರ್ಭದಲ್ಲಿ ಕೇವಲ ಒಂದು ರಿಕ್ವೆಸ್ಟ್‌ಗೆ ಇಷ್ಟೊಂದು ಬೆಲೆ ಕೊಟ್ಟು ತಮ್ಮದೇ ಚಿತ್ರದಲ್ಲಿ ಶಿವಣ್ಣ ಅವಕಾಶ ಕೊಡಿಸಿದ್ದು ನಾನು ಎಂದಿಗೂ ಮರೆಯಲಾರದ ವಿಚಾರ ಎಂದು ಜಗ್ಗೇಶ್ ಭಾವುಕರಾಗಿ ನೆನಪಿಸಿಕೊಂಡಿದ್ದಾರೆ.
ಅಂದು ಆರಂಭವಾದ ಇವರಿಬ್ಬರ ಸ್ನೇಹ ಇಂದಿಗೂ ಮುಂದುವರೆದಿದೆ. ಈ ಸ್ನೇಹ ಎಂದಿಗೂ ಬೆಲೆಕಟ್ಟಲಾರದ್ದು ಎಂದು ನೆನೆಪಿಸಿಕೊಂಡಿದ್ದಾರೆ ಜಗ್ಗೇಶ್. ರಣರಂಗ 1988ರಲ್ಲಿ ಬಿಡುಗಡೆಯಾದ ಆಕ್ಷನ್ ಸಿನಿಮಾ. ವಿ ಸೋಮಶೇಖರ್ ನಿರ್ದೇಶಿಸಿ ಶಿವರಾಜ್‌ಕುಮಾರ್ ನಾಯಕನಾಗಿ ನಟಿಸಿರುವ ಚಿತ್ರ ಇದು. ಈ ಚಿತ್ರದಲ್ಲಿ ಸುಧಾರಾಣಿ, ತಾರಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು ಹಂಸಲೇಖ ಸಂಗೀತ ನೀಡಿದ್ದಾರೆ. ರಣರಂಗ ಚಿತ್ರದ ಮೂಲಕ ಹಂಸಲೇಖ ಮತ್ತು ಶಿವರಾಜ್‌ಕುಮಾರ್ ಕೂಡಾ ಮೊಟ್ಟಮೊದಲ ಬಾರಿಗೆ ಒಂದೇ ಚಿತ್ರದಲ್ಲಿ ಕೆಲಸ ಮಾಡಿದ್ದರು.
ಈ ಚಿತ್ರದ ನಂತರ ಈ ಜೋಡಿ ಅನೇಕ ಚಿತ್ರಗಳಲ್ಲಿ ಸೂಪರ್ ಹಿಟ್ ಹಾಡುಗಳನ್ನು ಕೊಟ್ಟಿದೆ. ಈ ಚಿತ್ರದ ಹಿಂದೆ ಹೀಗೊಂದು ಸ್ನೇಹದ ಕತೆಯೂ ಇದೆ ಅನ್ನೋದು ಬಹುತೇಕರಿಗೆ ಗೊತ್ತಿರ್ಲಿಲ್ಲ. ಜಗ್ಗೇಶ್ ಈ ವಿಚಾರವನ್ನು ತಿಳಿಸೋದ್ರ ಮೂಲಕ ಶಿವಣ್ಣನ ವಿಶಾಲ ಹೃದಯಕ್ಕೆ ಮತ್ತೊಂದು ನಿದರ್ಶನ ಕೊಟ್ರು.


Click it and Unblock the Notifications











