75 ಲಕ್ಷ ರೂ. ಕಳೆದುಕೊಂಡಿದ್ದ ವ್ಯಥೆ ಹಂಚಿಕೊಂಡ ನವರಸನಾಯಕ ಜಗ್ಗೇಶ್
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿ, ಅಭಿಮಾನಿಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡುವ ಮೂಲಕ ಅವರ ಕುತೂಹಲಗಳನ್ನು ತಣಿಸುತ್ತಿರುವ ಕೆಲವೇ ನಟರಲ್ಲಿ ಜಗ್ಗೇಶ್ ಒಬ್ಬರು. ತಮ್ಮ ಸಿನಿಮಾ ಬದುಕಿನ ಅನುಭವಗಳನ್ನು ಅವರು ಹಂಚಿಕೊಳ್ಳುತ್ತಿರುತ್ತಾರೆ. ಅಭಿಮಾನಿಗಳು ಎಲ್ಲಿಂದಲೋ ಹಳೆಯ ಫೋಟೊಗಳನ್ನು, ವಿಚಾರಗಳನ್ನು ಕೆದಕಿ ಪ್ರಸ್ತಾಪಿಸಿದಾಗ ಅದರ ಹಿಂದಿನ ರೋಚಕ ಇತಿಹಾಸ, ಘಟನೆಗಳನ್ನು ಜಗ್ಗೇಶ್ ತೆರೆದಿಡುತ್ತಿದ್ದಾರೆ.
2002ರಲ್ಲಿ ಜಗ್ಗೇಶ್ ಮತ್ತು ಅವರ ಪತ್ನಿ ಪರಿಮಳಾ ಜಗ್ಗೇಶ್, 'ಮೇಕಪ್' ಎಂಬ ಸಿನಿಮಾ ನಿರ್ಮಿಸಿದ್ದರು. ಸಿಂಗೀತಂ ಶ್ರೀನಿವಾಸ್ ನಿರ್ದೇಶಿಸಿದ್ದ ಚಿತ್ರದಲ್ಲಿ ಜಗ್ಗೇಶ್ 'ದೊಡ್ಡಮ್ಮ'ನ ಪಾತ್ರಕ್ಕೆ ಸ್ತ್ರೀ ವೇಷ ತೊಟ್ಟಿದ್ದರು. ಲೈಲಾ ಪಟೇಲ್ ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಚಿತ್ರ ಸದ್ದು ಮಾಡಿದ್ದರೂ, ಜಗ್ಗೇಶ್ ಹೂಡಿದ್ದ ಬಂಡವಾಳ ವಾಪಸ್ ಕೂಡ ಬಂದಿರಲಿಲ್ಲ. ಮುಂದೆ ಓದಿ...

ನಷ್ಟದಿಂದಾಗಿ ಮನೆ ಮಾರಿದ್ದು
ಮೇಕಪ್ ಚಿತ್ರ ಬಿಡುಗಡೆಯಾಗಿದ್ದ ಸಂದರ್ಭದ ಜಾಹೀರಾತುಗಳನ್ನು ಹಂಚಿಕೊಂಡಿರುವ ಜಗ್ಗೇಶ್, 'ಸಿನಿಮಾ ನಿರ್ಮಿಸಿ ಅನುಭವಿಸಿದ ನಷ್ಟದ ಬಗ್ಗೆ ಹೇಳಿದ್ದಾರೆ. ಆ ಸಮಯದಲ್ಲಿಯೇ 75 ಲಕ್ಷ ರೂ ನಷ್ಟ ಉಂಟಾಗಿತ್ತು. ಅದನ್ನು ತೀರಿಸಲು ಮಾರಿದ್ದ ಮನೆ ಈಗ 35 ಕೋಟಿ ರೂ. ಬೆಲೆ ಬಾಳುತ್ತದೆ ಎಂದು ಜಗ್ಗೇಶ್ ತಿಳಿಸಿದ್ದಾರೆ.

ಪ್ರತಿಭೆ ನಿರೂಪಿಸುವ ಬಯಕೆ
ಕನ್ನಡಿಗರಿಗೆ ವಿಭಿನ್ನ ಚಿತ್ರ ನೀಡಬೇಕು ಹಾಗೂ ಹೊರ ರಾಜ್ಯಗಳಿಗೂ ನನ್ನ ಪ್ರತಿಭೆಯನ್ನು ನಿರೂಪಿಸಬೇಕು ಎಂಬ ಬಯಕೆಯಿಂದ ನನ್ನ ಸ್ವಂತ ಬಂಡವಾಳ ಹಾಕಿ ಬಹಳ ನಂಬಿಕೆಯಿಂದ ಮಾಡಿದ ಚಿತ್ರ 'ಮೇಕಪ್' ಎಂದು ಜಗ್ಗೇಶ್ ತಿಳಿಸಿದ್ದಾರೆ.

75 ಲಕ್ಷ ರೂ. ಕಳೆದುಕೊಂಡೆ
ಆದರೆ ಆ ಸಿನಿಮಾ ನಿರ್ಮಿಸಿ ದೌರ್ಭಾಗ್ಯದಿಂದ 2002ರಲ್ಲಿಯೇ 75 ಲಕ್ಷ ರೂ. ಕಳೆದುಕೊಂಡಿದ್ದೆ. ಆ ಸಾಲ ತೀರಿಸಲು ಅಂದು ಮಾರಿದ ಮನೆ ಇಂದು 35 ಕೋಟಿ ರೂ ಆಸ್ತಿ. ಅದನ್ನು ಕೊಂಡಿದ್ದ ನನ್ನ ಮಿತ್ರನಿಗೆ ಇಂದು 16 ಲಕ್ಷ ರೂ ಬಾಡಿಗೆ ಬರುತ್ತಿದೆ. ಕಥೆ ವ್ಯಥೆ ಎಂಮದು ಜಗ್ಗೇಶ್ ನೋವು ಹಂಚಿಕೊಂಡಿದ್ದಾರೆ.

ದೇವರು ಕಲಿಸಿದ ಪಾಠ
ಅದು ಬ್ಯಾಡ್ ಲಕ್ ಅಲ್ಲ. ಹೊಸ ಜೀವನ ಅರಿಯಲು ದೇವರು ಕಲಿಸಿದ ಬಹುದೊಡ್ಡ ಪಾಠ. ನಾನು ಕಳೆದುಕೊಂಡಿದ್ದನ್ನೆಲ್ಲಾ ಅದೇ ವರ್ಷ ಸಂಪಾದಿಸಿದೆ. ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ, ಕಾಸಿದ್ದವನೇ ಬಾಸ್ ಚಿತ್ರಗಳು ಮರಳಿ ಕೊಟ್ಟವು. ಅನುಭವ ಪಾಠ ಕಲಿಸುತ್ತದೆ. ಎಲ್ಲ ಸಿನಿಮಾದ ವರ್ಗದವರಿಗೂ ಶ್ರಮಿಕರಿಗೂ ಪಾಠ ಹೇಳುವಷ್ಟು ನಾನು ಸಮರ್ಥನಾಗಿದ್ದೇನೆ. ಆಗದು ಎಂದು ಕೈಕಟ್ಟಿ ಕೂರುವ ಜಾಯಮಾನ ನನ್ನದಲ್ಲ ಎಂದು ಹೇಳಿದ್ದಾರೆ.

ಆ ಕಾಲಕ್ಕೆ ದೊಡ್ಡ ಬಜೆಟ್
ಚಿತ್ರ ವಿಫಲವಾಗಿರಲಿಲ್ಲ. ಆ ಕಾಲಕ್ಕೆ ಅದು ಸೂಪರ್ ಹಿಟ್. ಅದು ಗಳಿಸಿದ್ದು 70 ಲಕ್ಷ ರೂ. ಆದರೆ ನಾನು ಬಂಡವಾಳ ಹೂಡಿದ್ದು 1.52 ಕೋಟಿ ರೂ. ಆ ಕಾಲಘಟ್ಟಕ್ಕೆ ಅದು ನಂಬಲಾಗದ ಬಜೆಟ್. ಸಿಂಗೀತಂ ಅವರು ಕಮಲ ಹಾಸನ್ ಮತ್ತು ಡಾ. ರಾಜ್ ಕುಮಾರ್ ಅವರಿಗೆ ನಿರ್ದೇಶನ ಮಾಡಿದ್ದವರು. ನಾನು ಅಂದು ಹೂಡಿದ್ದ ಬಂಡವಾಳ ನೋಡಿ ಚಿತ್ರರಂಗ ಆಶ್ಚರ್ಯಪಟ್ಟುಕೊಂಡಿತ್ತು. ಇಂದಿನ ಬಿಲ್ಡಪ್ ಬಜೆಟ್‌ಗಳನ್ನು ಅಂದೇ ಮಿಲಾಯಿಸಿ ಬದುಕಿದ ಜನ್ಮ ನನ್ನದು ಎಂದು ತಿಳಿಸಿದ್ದಾರೆ.


Click it and Unblock the Notifications











