ಸಂಕಷ್ಟದಲ್ಲಿ ಸಿಲುಕಿರುವ ಗರ್ಭಿಣಿಗೆ ಸಹಾಯಮಾಡಲು ಮಿಡಿದ ಜಗ್ಗೇಶ್
ಕೊರೊನಾ ವೈರಸ್ ಭೀತಿ ಚಿತ್ರರಂಗಕ್ಕೂ ತಟ್ಟಿದೆ. ಈಗಾಗಲೇ ಅನೇಕ ನಟ ನಟಿಯರು ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ಮುನ್ನೆಚ್ಚರಿಕೆ ವಹಿಸಿ ಎಂಬ ಸಂದೇಶ ರವಾನಿಸುತ್ತಿದ್ದಾರೆ. ಇತ್ತ ಚಿತ್ರೋದ್ಯಮದ ಚಟುವಟಿಕೆಗಳು ಬಹುತೇಕ ಸ್ಥಗಿತಗೊಂಡಿದ್ದು, ಸಿನಿಮಾ ಶೂಟಿಂಗ್‌ಗಳು ಕೂಡ ಸಂಪೂರ್ಣವಾಗಿ ಬಂದ್ ಆಗುವ ಸಾಧ್ಯತೆ ಇದೆ.
ಕೊರೊನಾ ವೈರಸ್‌ನಿಂದ ಉಳಿದ ಉದ್ಯಮಗಳಂತೆ ಚಿತ್ರೋದ್ಯಮ ಕೂಡ ತೊಂದರೆಗೆ ಒಳಗಾಗಿದೆ. ನಮ್ಮ ಆರೋಗ್ಯದ ಬಗ್ಗೆ ಜಾಗೃತಿ ವಹಿಸುವುದರ ಜತೆಗೆ ಹೊರ ದೇಶದಲ್ಲಿರುವ ಭಾರತೀಯರ ಸುರಕ್ಷತೆಯೂ ಚಿಂತೆಗೆ ಕಾರಣವಾಗಿದೆ. ಇಟಲಿಯ ರೋಮ್‌ನಲ್ಲಿ ಬೆಂಗಳೂರು ಮೂಲದ ಗರ್ಭಿಣಿಯೊಬ್ಬರು ಸಿಲುಕಿಕೊಂಡಿದ್ದು, ಅವರ ರಕ್ಷಣೆಗೆ ಸಹಾಯ ಮಾಡುವಂತೆ ನವರಸನಾಯಕ ಜಗ್ಗೇಶ್, ಸರ್ಕಾರವನ್ನು ಕೋರಿದ್ದಾರೆ. ಈ ಬಗ್ಗೆ ಅವರು ಸುದೀರ್ಘ ಟ್ವೀಟ್ ಮಾಡಿದ್ದಾರೆ.
ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಮಾನ್ಯ ಶ್ರೀರಾಮುಲು ಹಾಗು ಸಂತೋಷ್ ಜೀ ದಯಮಾಡಿ ಈ ಹೆಣ್ಣು ಮಗಳಿಗೆ ಸಹಾಯಮಾಡಿ ಎಂದು ಕೋರಿದ್ದಾರೆ.

ಕನಿಕರವಾಗುತ್ತಿದೆ
'ಇದು ಕರ್ನಾಟಕ ಸರ್ಕಾರ ಮತ್ತು ಭಾರತ ಸರ್ಕಾರಕ್ಕೆ ಮಾಡುತ್ತಿರುವ ಮನವಿ. ಬೆಂಗಳೂರು ಮೂಲದ ಗರ್ಭಿಣಿ ಸಹೋದರಿಯೊಬ್ಬರು ರೋಮ್ ನಲ್ಲಿ ಒದ್ದಾಡುತ್ತಿದ್ದಾರೆ. ಆಕೆಯ ಪರಿಚಯ ನನಗಿಲ್ಲ. ಆದರೆ ಅವರ ಬಗ್ಗೆ ಈಗ ನಿಜಕ್ಕೂ ಆಕೆಯ ಬಗ್ಗೆ ಕನಿಕರವುಂಟಾಗುತ್ತಿದೆ.
ಏಳು ದಿನ ಕಾಯಬೇಕು ಎಂದಿದೆ ಸರ್ಕಾರ
ಆಕೆಗೆ ಇಂದು ನೋವು ಕಾಣಿಸಿಕೊಂಡಿರುವುದರಿಂದ ಭಾರತಕ್ಕೆ ಮರಳಿ ಬರಬೇಕು ಎಂದು ಆಕೆ ಬಯಸಿದ್ದಾರೆ. ಆದರೆ ಈ ಪ್ರಕ್ರಿಯೆಗೆ ಒಪ್ಪಿಗೆ ಸಿಗಲು ಕನಿಷ್ಠ 7 ದಿನ ಕಾಯಬೇಕು ಎಂದು ಸರ್ಕಾರ ತಿಳಿಸಿದೆ''ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

ಇಟಲಿ ಸುರಕ್ಷಿತವಾಗಿಲ್ಲ
''ಇಟಲಿಯಲ್ಲಿ ಪರಿಸ್ಥಿತಿ ತೀರಾ ಅಪಾಯಕಾರಿಯಾಗಿರುವುದರಿಂದ, ಗರ್ಭಿಣಿ ಮಹಿಳೆಗೆ ವಿದೇಶಿ ನೆಲಕ್ಕಿಂತ ತಾಯ್ನಾಡು ಹೆಚ್ಚು ಸುರಕ್ಷಿತ. ಹೆರಿಗೆ ನೋವಿನ ಕಾರಣ ಆಕೆ ಆಸ್ಪತ್ರೆಗೆ ಅಲ್ಲಿ ದಾಖಲಾದರೆ ಸದ್ಯ ಇಟಲಿಯ ಆಸ್ಪತ್ರೆಗಳು ಆಕೆಗೆ ಸುರಕ್ಷಿತವಾಗಿಲ್ಲ'' ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಅವರು ಭಾರತಕ್ಕೆ ಬರಬೇಕು
''ಹೀಗಾಗಿ ಸರ್ಕಾರ ಕೂಡಲೇ ಮಧ್ಯಪ್ರವೇಶ ಮಾಡಿ ಭಾರತಕ್ಕೆ ಆ ಗರ್ಭಿಣಿ ಸುರಕ್ಷಿತವಾಗಿ ವಾಪಸ್ ತಲುಪುವಂತೆ ಮಾಡಬೇಕು. ಆಕೆ ಭಾರತದಲ್ಲಿ ಪ್ರತ್ಯೇಕವಾಗಿ ಇರಲು ಬಯಸಿದ್ದಾರೆಯೇ ವಿನಾ, ಇಟಲಿಯಲ್ಲಿ ಕೊನೆಯುಸಿರೆಳೆಯಲು ಸಿದ್ಧರಿಲ್ಲ'' ಎಂದು ಜಗ್ಗೇಶ್ ತಿಳಿಸಿದ್ದಾರೆ.
ನಮ್ಮ ಸರ್ಕಾರದ ಮೇಲೆ ನಮಗೆ ನಂಬಿಕೆ ಇದೆ. ಅದರ ಸತತ ಪ್ರಯತ್ನಗಳನ್ನು ಶ್ಲಾಘಿಸುತ್ತೇವೆ. ಆದರೆ ಇದು ಅತ್ಯಂತ ಮಹತ್ವದ ಆದ್ಯತೆಯಾಗಬೇಕಿದೆ ಎಂದು ಹೇಳಿದ್ದಾರೆ.

ಸುಷ್ಮಾ ಸ್ವರಾಜ್‌ರನ್ನು ಮಿಸ್ ಮಾಡಿಕೊಳ್ಳುತ್ತೇನೆ
ಮಾಜಿ ವಿದೇಶಾಂಗ ಸಚಿವೆ ದಿವಂಗತ ಸುಷ್ಮಾ ಸ್ವರಾಜ್ ಅವರನ್ನೂ ಜಗ್ಗೇಶ್ ಇದೇ ವೇಳೆ ನೆನಪಿಸಿಕೊಂಡಿದ್ದಾರೆ. ''ಈ ಸಮಯದಲ್ಲಿ ನಾನು ಸುಷ್ಮಾ ಸ್ವರಾಜ್ ಅವರನ್ನು ನಿಜಕ್ಕೂ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅವರಿಗೆ ಒಂದೇ ಒಂದು ಟ್ವೀಟ್ ಮಾಡಿದ್ದರೆ ಸಾಕಿತ್ತು'' ಎಂದು ನಟ ಜಗ್ಗೇಶ್ ಹೇಳಿದ್ದಾರೆ.
ಜಗ್ಗೇಶ್ ಮನವಿಗೆ ಸ್ಪಂದಿಸಿರುವ ಆರೋಗ್ಯ ಸಚಿವ ಬಿ.ಶ್ರೀರಾಮುಲು ''ಈ ಬಗ್ಗೆ ಗಮನ ಹರಿಸುತ್ತೇವೆ'' ಎಂದು ಟ್ವೀಟಿಸಿದ್ದಾರೆ.


Click it and Unblock the Notifications











