ಕೋಳಿ ಫಾರಂನಲ್ಲಿ ವಾಚ್‌ಮ್ಯಾನ್ ಆಗಿದ್ದರೇ ಗೋಲ್ಡನ್ ಸ್ಟಾರ್ ಗಣೇಶ್? ಜಗ್ಗೇಶ್ ವೇದಿಕೆ ಮೇಲೆ ಹೇಳಿದ್ದೇನು?
ಗೋಲ್ಡನ್ ಸ್ಟಾರ್ ಗಣೇಶ್ ಕನ್ನಡ ಚಿತ್ರರಂಗದಲ್ಲಿ ಅತೀ ಹೆಚ್ಚು ಸಿನಿಮಾಗಳನ್ನು ಮಾಡುತ್ತಿರುವ ನಟ. ಶಿವಣ್ಣ ಬಿಟ್ಟರೆ, ಎರಡನೇ ಸ್ಥಾನದಲ್ಲಿ ಇರೋದೇ ಗಣೇಶ್. 'ಕೃಷ್ಣಂ ಪ್ರಣಯ ಸಖಿ' ಸಿನಿಮಾದ ಯಶಸ್ಸಿನ ಬಳಿಕ ಗಣೇಶ್ ಕೈಯಲ್ಲಿ ಕಮ್ಮಿ ಅಂದರೂ ಐದು ಸಿನಿಮಾಗಳು ಇವೆ. ಒಂದೊಂದು ಸಿನಿಮಾವೂ ವಿಭಿನ್ನ. ಕನ್ನಡ ಚಿತ್ರರಂಗ ಕಷ್ಟದಲ್ಲಿರುವ ಸಮಯದಲ್ಲೂ ಗಣೇಶ್ ಬಹುಬೇಡಿಕೆಯ ನಟನಾಗಿದ್ದಾರೆ.
ಗಣೇಶ್ ಈ ಮಟ್ಟಕ್ಕೆ ಬೆಳೆಯುವುದಕ್ಕೆ ಕಮ್ಮಿ ಕಷ್ಟ ಪಟ್ಟಿಲ್ಲ. ಗಣೇಶ್ ಗೋಲ್ಡನ್ ಸ್ಟಾರ್ ಆಗುವುದಕ್ಕೂ ಮುನ್ನ ಬೇರೆ ಬೇರೆ ಚಿಕ್ಕ ಪುಟ್ಟ ಕೆಲಸಗಳನ್ನು ಮಾಡಿದ್ದಾರೆ. ಆರ್ಕೆಸ್ಟ್ರಾದಲ್ಲಿ ಹಾಡಿದ್ದಾರೆ. ವೇದಿಕೆ ಮೇಲೆ ಡ್ಯಾನ್ಸ್ ಮಾಡಿದ್ದಾರೆ. ಕಾಮಿಡಿ ಟೈಂನಲ್ಲಿ ನಿರೂಪಕನಾಗಿ ಕೆಲಸ ಮಾಡಿದ್ದಾರೆ. ಇವೆಲ್ಲವನ್ನೂ ಸಾಕಷ್ಟು ಬಾರಿ ವೇದಿಕೆಗಳ ಮೇಲೆ ಹಂಚಿಕೊಂಡಿದ್ದಾರೆ. ಆದ್ರೀಗ ನವರಸ ನಾಯಕ ಜಗ್ಗೇಶ್ ಇನ್ನೂ ಕೆಲವು ಸೀಕ್ರೆಟ್‌ಗಳನ್ನು ರಿವೀಲ್ ಮಾಡಿದ್ದಾರೆ.

ಇತ್ತೀಚೆಗೆ ಅಪ್ಪಂದಿರ ದಿನಾಚರಣೆಯಂದು ಒಂದೇ ವೇದಿಕೆ ಮೇಲೆ ಗಾಯಕ ರಾಜೇಶ್ ಕೃಷ್ಣನ್, ಪ್ರಜ್ವಲ್ ದೇವರಾಜ್, ಸಾಹಿತಿ ನಾಗೇಂದ್ರ ಪ್ರಸಾದ್, ಬಿಜೆಪಿ ಮುಖಂಡ ಆರ್.ಅಶೋಕ್ ಜೊತೆ ನವರಸ ನಾಯಕ ಜಗ್ಗೇಶ್ ಕೂಡ ವೇದಿಕೆಯನ್ನು ಹಂಚಿಕೊಂಡಿದ್ದರು. ಈ ವೇಳೆ ಗೋಲ್ಡನ್ ಸ್ಟಾರ್ ಗಣೇಶ್ ಕೋಳಿ ಫಾರಂನಲ್ಲಿ ವಾಚ್‌ಮ್ಯಾನ್ ಆಗಿ ಕೆಲಸ ಮಾಡಿ ಪ್ರತಿಭೆಯಿಂದಲೇ ಬೆಳೆದ ನಟ ಎಂದು ಜಗ್ಗೇಶ್ ಹೇಳಿದ್ದಾರೆ.
ವೇದಿಕೆ ಮೇಲೆ ನವರಸ ನಾಯಕ ಜಗ್ಗೇಶ್ ಮಾತುಗಳು ಜನರನ್ನು ನಗೆಗಡಲಲ್ಲಿ ತೇಲಿಸಿದ್ದವು. ತಮ್ಮಂತೆಯೇ ಗೋಲ್ಡನ್ ಸ್ಟಾರ್ ಗಣೇಶ್ ಕೂಡ ಕಷ್ಟದಿಂದಲೇ ಬೆಳೆದು ಬಂದಿದ್ದಾರೆ. ಚಿತ್ರರಂಗದಲ್ಲಿ ಅವರ ಮಾರ್ಗ ಸುಲಭದ್ದಾಗಿರಲಿಲ್ಲ ಎಂದು ನವರಸ ನಾಯಕ ಜಗ್ಗೇಶ್ ಈ ವೇದಿಕೆ ಮೇಲೆ ಹೇಳಿದ್ದಾರೆ. ಗಣೇಶ್ ಹೇಗೆ ಹಂತ ಹಂತವಾಗಿ ಬೆಳೆದು ಬಂದರು ಅನ್ನೋದನ್ನು ಹಾಸ್ಯಾಸ್ವದವಾಗಿ ವಿವರಿಸಿದ ವಿಡಿಯೋ ಈಗ ವೈರಲ್ ಆಗುತ್ತಿದೆ.

"ಗಣೇಶನ ಬಗ್ಗೆ ಹೇಳಬೇಕು. ಅವನು ನನ್ನ ಪ್ರತಿರೂಪ ಇದ್ದಂತೆ. ಹೇಗೆ ಅಂದರೆ, ಅವನು ಕೂಡ ನನ್ನ ಹಾಗೆ ಹಳ್ಳಿಯಿಂದ ಬಂದವನು. ಅವನು ಹಾಗೇ ಬೆಳೆದುಕೊಂಡು ಬಂದವನು. ಹಾಗೇ ಅವನೂ ಸಿನಿಮಾ ಕನಸು ಕಂಡವನು. ಹಂತ ಹಂತವಾಗಿ ಬೆಳೆದವನು. ನನ್ನಂತೆ ತಂದೆ ತಾಯಿಯನ್ನು ವಿಶೇಷವಾಗಿ ಪೂಜಿಸಿ, ಚೆನ್ನಾಗಿ ನೋಡಿಕೊಂಡವನು. ಅಡಕಮಾರನಹಳ್ಳಿಯಲ್ಲಿ ಯಾವುದೋ ಗ್ಯಾರೇಜೋ, ಕೋಳಿಫಾರಂನಲ್ಲೋ ವಾಚ್‌ಮ್ಯಾನ್ ಕೆಲಸ ಮಾಡಿ, ತನ್ನ ಟ್ಯಾಲೆಂಟ್‌ನಿಂದ ಎಲ್ಲಾ ಹೆಣ್ಣು ಮಕ್ಕಳಿಗೆ ಹುಳ ಬಿಡುತ್ತಿದ್ದಾನೆ. ಬಹಳ ಬ್ಯೂಟಿಫುಲ್ ಫೆಲೋ ಅವನು. ಲವ್ ಸ್ಟೋರಿಗಳನ್ನು ಸಖತ್ ಆಗಿ ಮಾಡುತ್ತಾನೆ. ಅವನ ವಯಸ್ಸಿಗೆ ಹೋಗಬೇಕು ಅಂತ ತುಂಬಾನೇ ಆಸೆಯಿದೆ." ಎಂದು ನಟ ಗಣೇಶ್ ಹಾದಿಯನ್ನು ಮೆಚ್ಚಿ ಹೊಗಳಿದ್ದಾರೆ.
ಇದೇ ವೇದಿಕೆಯಲ್ಲಿ ಪ್ರಜ್ವಲ್ ದೇವರಾಜ್ ನೋಡಿ ಅವರ ತಂದೆಯೊಂದಿಗಿನ ತಮ್ಮ ಒಡನಾಟವನ್ನು ಮೆಲುಕು ಹಾಕಿದ್ದಾರೆ. "ದೇವರಾಜ್ ಮಗನ ಬಗ್ಗೆ ನಾನು ಏನು ಹೇಳಲಿ. ಅವನ ಅಪ್ಪ ನಾನು ಕೆವಿ ರಾಜು ಮನೆಯೊಳಗೆ ಕೂತುಕೊಂಡಿದ್ದರೆ. ಆ ಯಪ್ಪ ಮುಖಕ್ಕೆ ಉಗಿಯೋನು. ಬಾಯಿಗೆ ಬಂದಂಗೆ ಬೈಯ್ಯೋನು. ಇವರ ಅಪ್ಪನನ್ನು ಬೈಯ್ಯುತ್ತಿರಲಿಲ್ಲ. ಇವರ ಅಪ್ಪ ಬಾರಿ ಗಂಭೀರ. ಮುಖವನ್ನು ಯಾವಾಗಲೂ ಗಂಭೀರವಾಗಿ ಇಟ್ಟುಕೊಳ್ಳುತ್ತಿದ್ದರು. ಕೆವಿ ರಾಜು ಮೂತ್ರ ವಿಸರ್ಜನೆಗೆ ಹೋದಾಗ ನಾನು ಸ್ಟ್ರಿಪ್ಟ್ ಎತ್ತಿ ನೋಡುತ್ತಿದ್ದೆ. ನನ್ನ ಹೆಸರೇ ಇರುತ್ತಿರಲಿಲ್ಲ. ಯಾವ ಪಿಕ್ಚರ್ ನೋಡಿದರೂ ಇವರ ಅಪ್ಪನ ಹೆಸರೇ ಇರೋದು. ನಾನು ಅವರ ಅಪ್ಪ ಬಂದಾಗ ಮೇಲಿಂದ ಕೆಳಗಿನ ತನಕ ನೋಡುತ್ತಿದ್ದೆ. ಅಷ್ಟು ಕೋಪ ನನಗೆ. ಇವರ ಅಪ್ಪ ಎಂತಹ ಅದ್ಭುತ ನಟ ಅಂದರೆ, ಗೆಟಪ್ ಚೇಂಜ್ ಮಾಡಿದರೆ ಸಾಕು. ಪೊಲೀಸ್ ಅಂದರೆ ಪೊಲೀಸ್. ರೌಡಿ ಅಂದರೆ ರೌಡಿ. ಅಂತಹ ಅದ್ಭುತ ನಟ." ಎಂದು ಹೇಳಿ ಜಗ್ಗೇಶ್ ನಗೆಗಡಲಲ್ಲಿ ತೇಲಿಸಿದ್ದಾರೆ.
ದೇವರಾಜ್ ಬಗ್ಗೆ ಹೇಳುತ್ತಲೇ ಪ್ರಜ್ವಲ್ ಇನ್ನೂ ಫಾದರ್ ಆಗಿಲ್ಲ ಎಂದು ಕಾಲೆಳೆದಿದ್ದಾರೆ. "ಎಲ್ಲಾ ಸರಿ ಅವನ ಕ್ಯಾರೆಕ್ಟರ್. ಫಂಕ್ಷನ್‌ಗೊಂದು ಬರುವುದಿಲ್ಲ. ಆದರೆ, ಅವನ ಮಗ ಹಾಗಾಗ ಬಾರದು. ನೋಡಿ ಇವರು ಮದುವೆ ಆಗಿದ್ದಾನೆ. ಇನ್ನೂ ಫಾದರ್ ಆಗಿಲ್ಲ. ಎಲ್ಲಾ ಸೇರಿ ಬುದ್ಧಿ ಹೇಳಿ. ಮುಂದಿನ ವರ್ಷ ಅವನ ಕೈಯಲ್ಲಿ ಕಾರ್ಯಕ್ರಮ ಮಾಡಿಸುತ್ತೇನೆ." ಎಂದು ಜಗ್ಗೇಶ್ ಹಾಸ್ಯ ಚಟಾಕಿ ಹಾರಿಸಿದ್ದಾರೆ.


Click it and Unblock the Notifications











