'ರಾಗಿಣಿ IPS 2'ಗೆ ಜಗ್ಗೇಶ್ ಪುತ್ರರು ಆಕ್ಷನ್ ಕಟ್; ನಿರ್ದೇಶಕರಾಗಿ ಎಂಟ್ರಿ
ಭಾರತೀಯ ಚಿತ್ರರಂಗದಲ್ಲಿ ಜಂಟಿಯಾಗಿ ನಿರ್ದೇಶನ ಮಾಡೋದು ಹೊಸದೇನು ಅಲ್ಲ. ಬಾಲಿವುಡ್‌ನಲ್ಲಿ ಜಂಟಿ ನಿರ್ದೇಶಕರು ಸಿಕ್ಕಾಪಟ್ಟೆ ಹೆಸರು ಮಾಡಿದ್ದಾರೆ. ಆದರೆ, ಕನ್ನಡದಲ್ಲಿ ಜಂಟಿಯಾಗಿ ನಿರ್ದೇಶನ ಮಾಡಿದ ಉದಾಹರಣೆಯಿದೆ. ದೊರೈ-ಭಗವಾನ್ ಜೋಡಿ ಕನ್ನಡ ಚಿತ್ರರಂಗಕ್ಕೆ ಅದೆಷ್ಟು ಯಶಸ್ವಿ ಸಿನಿಮಾಗಳನ್ನು ನೀಡಿತ್ತು. ಆದರೆ, ಇತ್ತೀಚೆಗೆ ಕನ್ನಡದಲ್ಲಿ ಈ ಟ್ರೆಂಡ್ ಅನ್ನು ನೋಡಿರಲಿಲ್ಲ.
ಈಗ ಮತ್ತೆ ಕನ್ನಡದಲ್ಲಿ ಜಂಟಿ ನಿರ್ದೇಶನದ ಟ್ರೆಂಡ್ ಅನ್ನು ನವರಸ ನಾಯಕ ಜಗ್ಗೇಶ್ ಪುತ್ರರು ಶುರು ಮಾಡುತ್ತಿದ್ದಾರೆ. ಜಗ್ಗೇಶ್ ಪುತ್ರರಾದ ಗುರುರಾಜ್ ಹಾಗೂ ಯತೀಶ್ ಇಬ್ಬರೂ ಜಂಟಿಯಾಗಿ ಸಿನಿಮಾವನ್ನು ನಿರ್ದೇಶನ ಮಾಡುವುದಕ್ಕೆ ಮುಂದಾಗಿದ್ದಾರೆ. ಇವರ ಸಿನಿಮಾಗೆ ರಾಗಿಣಿ ನಾಯಕಿ. ಅವರ ಸಿನಿಮಾದ ಹೆಸರು 'ರಾಗಿಣಿ IPS 2'. ಈ ಹಿಂದೆ ತೆರೆಕಂಡು ಸದ್ದು ಮಾಡಿದ್ದ 'ರಾಗಿಣಿ IPS' ಸಿನಿಮಾದ ರಿಮೇಕ್ ಇದು.

ಇತ್ತೀಚೆಗೆ 'ರಾಗಿಣಿ' ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಆ ವಿಶೇಷ ದಿನದಂದೇ ಜಗ್ಗೇಶ್ ಪುತ್ರರಿಬ್ಬರು ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಇನ್ನಿಂಗ್ಸ್ ಶುರು ಮಾಡುತ್ತಿದ್ದಾರೆ. ಭರ್ಜರಿ ಯಶಸ್ಸು ಕಂಡಿರುವ 'ರಾಗಿಣಿ ಐಪಿಎಸ್' ಸಿನಿಮಾದ ಮುಂದುವರಿದ ಭಾಗ 'ರಾಗಿಣಿ ಐಪಿಎಸ್ 2' ನಿರ್ದೇಶನಕ್ಕೆ ಕೈ ಹಾಕಿದ್ದಾರೆ.
ಗುರುರಾಜ್ ಹಾಗೂ ಯತಿರಾಜ್ ಜಗ್ಗೇಶ್ ನಿರ್ದೇಶಕರಾಗಿ ಚಿತ್ರರಂಗಕ್ಕೆ ರೀ-ಎಂಟ್ರಿ ಕೊಡುತ್ತಿದ್ದು, ಈ ಸಿನಿಮಾವನ್ನು ಕೆ.ಮಂಜು ಹಾಗೂ ರಾಗಿಣಿ ವೆಂಚರ್ಸ್ ಜಂಟಿಯಾಗಿ ನಿರ್ಮಾಣಕ್ಕೆ ಹೈ ಹಾಕಿದೆ. ರಾಗಿಣಿ ಅವರ ಹುಟ್ಟುಹಬ್ಬದ ದಿನ ಈ ಸಿನಿಮಾ ಅನೌನ್ಸ್ ಆಗಿದ್ದು, ರಾಗಿಣಿ ಹಾಗೂ ಜಗ್ಗೇಶ್ ಪುತ್ರರಾದ ಗುರುರಾಜ್ ಹಾಗೂ ಯತೀಶ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
"ರಾಗಿಣಿ ಐಪಿಎಸ್ ಜನಪ್ರಿಯ ಚಿತ್ರ. ರಾಗಿಣಿ ಅವರ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು. ಈಗ ಆ ಚಿತ್ರದ ಮುಂದುವರಿದ ಭಾಗ "ರಾಗಿಣಿ ಐಪಿಎಸ್ ೨" ಚಿತ್ರವನ್ನು ಆರಂಭಿಸುತ್ತಿದ್ದೇವೆ. ನಾವಿಬ್ಬರು 2019 ರಿಂದಲೂ ನಿರ್ದೇಶನಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇವೆ. ನಟನೆಯೇ ಬೇರೆ. ನಿರ್ದೇಶನವೇ ಬೇರೆ. ನಿರ್ದೇಶನಕ್ಕೆ ತಯಾರಿ ಅಗತ್ಯ. ರಾಗಿಣಿ ಅವರು ಈಗಾಗಲೇ ಜನಪ್ರಿಯ ನಟಿ ಹಾಗೂ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟಿಯೂ ಹೌದು. ಅವರ ಚಿತ್ರ ನಿರ್ದೇಶನ ಮಾಡುವುದು ಅಷ್ಟು ಸುಲಭವಲ್ಲ. ರಾಗಿಣಿ ಐಪಿಎಸ್ ೨, ರಾಗಿಣಿ ಐಪಿಎಸ್ ಸಿನಿಮಾದ ಮುಂದುವರಿದ ಭಾಗ. ಕಥೆ ಕೂಡ ಆ ಚಿತ್ರದ ಕಥೆ ಎಲ್ಲಿ ಕೊನೆಯಾಗಿತ್ತೊ, ಅಲ್ಲಿಂದಲೇ ಮುಂದುವರೆಯುತ್ತದೆ" ಎಂದು ನಿರ್ದೇಶಕರಾದ ಗುರುರಾಜ್ ಹಾಗೂ ಯತಿರಾಜ್ ತಿಳಿಸಿದ್ದಾರೆ.
ಹುಟ್ಟುಹಬ್ಬದ ದಿನದಂದೇ ಹೊಸ ಸಿನಿಮಾ ಅನೌನ್ಸ್ ಆಗಿದ್ದಕ್ಕೆ ರಾಗಿಣಿ ಕೂಡ ಥ್ರಿಲ್ ಆಗಿದ್ದಾರೆ. "ನಾನು ಚಿತ್ರರಂಗಕ್ಕೆ ಬಂದ ದಿನದಿಂದಲೂ ಮಾಧ್ಯಮದವರು ನೀಡುತ್ತಿರುವ ಸಹಕಾರ ಅಪಾರ. ಹಾಗಾಗಿ ನನ್ನ ನೂತನ ಚಿತ್ರದ ಘೋಷಣೆಯನ್ನು ನನ್ನ ಹುಟ್ಟುಹಬ್ಬದ ದಿನ ಮಾಧ್ಯಮದವರ ಉಪಸ್ಥಿತಿಯಲ್ಲೇ ಮಾಡುತ್ತಿದ್ದೇವೆ. ಕೆ.ಮಂಜು ಅವರು ನಿರ್ಮಾಣಕ್ಕೆ ಜೊತೆಯಾಗಿದ್ದಾರೆ. ಹಾಗೇ ಜಗ್ಗೇಶ್ ಪುತ್ರರಾದ ಗುರುರಾಜ್-ಯತಿರಾಜ್ ನಿರ್ದೇಶಿಸುತ್ತಿರುವುದು ಖುಷಿಯಾಗಿದೆ" ಎಂದು ನಟಿ ರಾಗಿಣಿ ದ್ವಿವೇದಿ ಸಂತಸ ವ್ಯಕ್ತಪಡಿಸಿದ್ದಾರೆ.
"ನಾನು ನಾಯಕಿಯಾಗಿ ರಾಗಿಣಿ ಅವರು ಬಂದ ದಿನದಿಂದಲೂ ಅವರನ್ನು ಬಲ್ಲೆ. ಉತ್ತಮ ನಟಿ ಅವರು. ಇತ್ತೀಚೆಗೆ ರಾಗಿಣಿ ಅವರು ಫೋನ್ ಮಾಡಿ ನಿಮಗೆ ಕಥೆ ಹೇಳಲು ನಿರ್ದೇಶಕರು ಬರುತ್ತಿದ್ದಾರೆ ಅಂತ ಹೇಳಿದರು. ಯಾರು ಎಂದು ಹೇಳಲಿಲ್ಲ. ಆನಂತರ ನನ್ನ ಆತ್ಮೀಯ ಸ್ನೇಹಿತರಾದ ಜಗ್ಗೇಶ್ ಅವರ ಮಕ್ಕಳಾದ ಗುರುರಾಜ್ - ಯತಿರಾಜ್ ಬಂದು ರಾಗಿಣಿ ಐಪಿಎಸ್ 2 ಸಿನಿಮಾದ ಕಥೆ ಹೇಳಿದರು. ಕಂಟೆಂಟ್ ಚೆನ್ನಾಗಿದೆ. ರಾಗಿಣಿ ವೆಂಚರ್ಸ್ ನಿರ್ಮಾಣಕ್ಕೆ ಜೊತೆಯಾಗಿದ್ದಾರೆ. ಆದಷ್ಟು ಬೇಗ ಚಿತ್ರಕ್ಕೆ ಚಾಲನೆ ಸಿಗಲಿದೆ" ಎಂದರು ನಿರ್ಮಾಪಕ ಕೆ.ಮಂಜು.


Click it and Unblock the Notifications