ಆಂಜನೇಯ.. ರಾಮಾಂಜನೇಯ.. ಗಣೇಶ-ಕೃಷ್ಣ: 'ತೋತಾಪುರಿ 2' ಪೋಸ್ಟರ್‌ನಲ್ಲಿ ಹಿಂದೂ ದೇವತೆಗಳ್ಯಾಕೆ?
ನವರಸ ನಾಯಕ ಜಗ್ಗೇಶ್ ಅಭಿನಯದ 'ತೋತಾಪುರಿ' ಸಿನಿಮಾ ಗೊತ್ತೇ ಇದೆ. ಈ ಸಿನಿಮಾ ಮಾಡುವಾಗಲೇ ಪಾರ್ಟ್ 2 ಬರುತ್ತೆ ಅಂತಾನೂ ಹೇಳಿದ್ದರು. ನಿರ್ದೇಶಕ ವಿಜಯ್ ಪ್ರಸಾದ್ ಒಮ್ಮೆಗೆ 'ತೋತಾಪುರಿ'ಯ ಎರಡೂ ಪಾರ್ಟ್‌ಗಳನ್ನೂ ಒಟ್ಟಿಗೆ ಚಿತ್ರೀಕರಿಸುದಾಗಿಯೂ ಹೇಳಿದ್ದರು.
ಹೀಗಾಗಿ 'ತೋತಾಪುರಿ' ಪಾರ್ಟ್ 1 ಬಂದ ಕೆಲವೇ ದಿನಗಳಲ್ಲಿ ಮತ್ತೊಂದು ಪಾರ್ಟ್ ರಿಲೀಸ್ ಆಗಬಹುದೇನೋ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಅದ್ಯಾಕೋ ಆಗಲಿಲ್ಲ. ನಿರೀಕ್ಷೆ ಮಾಡಿದ್ದಕ್ಕಿಂತ ಸ್ವಲ್ಪ ಸಮಯವನ್ನೇ ತೆಗೆದುಕೊಂಡಿತ್ತು.

ನವರಸ ನಾಯಕ ಅಭಿಮಾನಿಗಳು ಕಾದಿದ್ದಕ್ಕೂ ಒಂದು ಸಿಹಿ ಸುದ್ದಿ ಸಿಕ್ಕಿದೆ. ಜಗ್ಗೇಶ್ ನಟಿಸಿರುವ 'ತೋತಾಪುರಿ 2' ಅನ್ನು ರಿಲೀಸ್ ಮಾಡೋಕೆ ನಿರ್ಮಾಪಕ ಸುರೇಶ್ ನಿರ್ಧರಿಸಿದ್ದಾರೆ. ಅದಕ್ಕಾಗಿ ಈಗಿನಿಂದಲೇ ನಿಧಾನವಾಗಿ ಪ್ರಚಾರ ಆರಂಭ ಆಗಿದೆ. ಆದರೆ, ಈ ಪ್ರಚಾರ ಕೊಂಚ ವಿಭಿನ್ನವಾಗಿದೆ.
ಮೊದಲ ದಿನ ಆಂಜನೇಯನ ಪೋಸ್ಟರ್ ರಿಲೀಸ್ ಮಾಡಲಾಗಿತ್ತು. ಎರಡನೇ ದಿನ ರಾಮ ಹಾಗೂ ಆಂಜನೇಯನ ಪೋಸ್ಟರ್. ಹಾಗೇ ಮೂರನೇ ದಿನ ಗಣೇಶ ಹಾಗೂ ಕೃಷ್ಣನ ಪೋಸ್ಟರ್ ರಿಲೀಸ್ ಮಾಡಲಾಗಿತ್ತು. ಅಸಲಿಗೆ 'ತೋತಾಪುರಿ 2' ತಂಡ ಹೀಗೆ ದಿನಕ್ಕೊಂದು ಪೋಸ್ಟರ್ ಬಿಟ್ಟು ಕುತೂಹಲ ಮೂಡಿಸುತ್ತಿದ್ದಾರೆ.
'ತೋತಾಪುರಿ-2' ಸಿನಿಮಾದ ಈ ಪೋಸ್ಟರ್ ಎಲ್ಲೆಡೆ ವೈರಲ್ ಆಗಿತ್ತು. ಈ ಪೋಸ್ಟರ್‌ಗಳಿಂದಾಗಿ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗುವಂತೆ ಮಾಡಿದೆ. ಕಾಮಿಡಿ ಸಿನಿಮಾವಾದರೂ ಧಾರ್ಮಿಕ ಹಿನ್ನೆಲೆಯಲ್ಲಿ ಪೋಸ್ಟರ್‌ಗಳನ್ನು ಹರಿ ಬಿಡುತ್ತಿರುವ ಹಿನ್ನೆಲೆಯಾದರೂ ಏನು ಎಂಬ ಬಗ್ಗೆ ಕುತೂಹಲ ಮೂಡಿದೆ. ಈ ರಹಸ್ಯವನ್ನು ಹಾಗೇ ಕಾಪಾಡಿಕೊಂಡಿದೆ.

ಈ ಪೋಸ್ಟರ್‌ಗಳಲ್ಲಿ 'ಸದ್ಯದಲ್ಲೇ ಚಿತ್ರಮಂದಿರದಲ್ಲಿ...' ಎಂಬ ಮಾಹಿತಿಯನ್ನು ಚಿತ್ರತಂಡ ನೀಡುತ್ತಿದೆ. ಸದ್ಯ ವಿಭಿನ್ನ ರೀತಿಯಲ್ಲಿ ಗಮನ ಸೆಳೆಯುವಲ್ಲಿ ಚಿತ್ರತಂಡ ಪ್ರೇಕ್ಷಕರನ್ನು ಸೆಳೆಯುವಲ್ಲಿ ಗೆದ್ದಿದೆ. ಹೊಸತನದಿಂದ ಕೂಡಿರುವ ಈ ಸಿನಿಮಾದ ಪೋಸ್ಟರ್‌ಗಳಲ್ಲಿ ದೇವರ ಫೋಟೊ ಯಾಕೆ? ಸಿನಿಮಾಕ್ಕೂ ಪೋಸ್ಟರ್‌ಗೂ ಇರುವ ನಂಟೇನು..? ಸದ್ಯ ಎದ್ದಿರೋ ಪ್ರಶ್ನೆ.
'ತೋತಾಪುರಿ 2' ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ಕೊನೆಯ ಹಂತದಲ್ಲಿದೆ. ಇದೆಲ್ಲ ಮುಗಿದು ಸದ್ಯದಲ್ಲೇ ಸಿನಿಮಾ ಬಿಡುಗಡೆ ಮಾಡಿ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗುತ್ತಿದೆ. 'ತೋತಾಪುರಿ-1'ರಲ್ಲಿ ಭರಪೂರ ಕಾಮಿಡಿ ಕಚಗುಳಿಯಿಟ್ಟಿದ್ದ ಚಿತ್ರತಂಡ, ಇದೀಗ 'ತೋತಾಪುರಿ-2' ಮೂಲಕ ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸಲು ಮುಂದಾಗಿದೆ.
ವಿಜಯ್ ಪ್ರಸಾದ್ ನಿರ್ದೇಶಿಸಿರುವ ಈ ಸಿನಿಮಾದಲ್ಲಿ ನವರಸ ನಾಯಕ ಜಗ್ಗೇಶ್ ಜೊತೆ ಡಾಲಿ ಧನಂಜಯ್, ದತ್ತಣ್ಣ, ಸುಮನ್ ರಂಗನಾಥ್, ಅದಿತಿ ಪ್ರಭುದೇವ, ವೀಣಾ ಸುಂದರ್, ಹೇಮಾದತ್ ಮುಂತಾದವರು ನಟಿಸಿದ್ದಾರೆ. ಕೆ.ಎ.ಸುರೇಶ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.


Click it and Unblock the Notifications











