'ಜೈಲರ್', 'ಭೋಳಾ ಶಂಕರ್'ಗೆ ಹೆಚ್ಚು ಥಿಯೇಟರ್.. 3 ಕನ್ನಡ ಸಿನಿಮಾಗಳ ಶೋ ಕಡಿತ.. ಆಕ್ರೋಶ!
ಕನ್ನಡ ಚಿತ್ರರಂಗಕ್ಕೆ ಕೊನೆಯದಾಗಿ ದೊಡ್ಡ ಸಕಸ್ಸ್ ಅಂತ ಕೊಟ್ಟಿದ್ದು 'ಕಾಂತಾರ'. ಅಲ್ಲಿಂದ ಸುಮಾರು ಆರೇಳು ತಿಂಗಳು ಸ್ಯಾಂಡಲ್‌ವುಡ್‌ಗೆ ದೊಡ್ಡ ಯಶಸ್ಸು ಅಂತೇನು ಸಿಕ್ಕಿಲ್ಲ. ಥಿಯೇಟರ್‌ಗೆ ಜನರೇ ಬರುತ್ತಿಲ್ಲ ಅಂತ ನಿರ್ಮಾಪಕರು, ವಿತರಕರು, ಪ್ರದರ್ಶಕರು ಗೋಳಾಡುತ್ತಿದ್ದರು. ಈ ವೇಳೆ ಮತ್ತೆ ಚಿತ್ರಮಂದಿರಕ್ಕೆ ಕನ್ನಡದ ಪ್ರೇಕ್ಷಕರನ್ನು ಬರುವಂತಾಯ್ತು.
ಹೊಸಬರೇ ಸೇರಿ ನಿರ್ಮಿಸಿದ್ದ 'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ರಿಲೀಸ್ ಆಗುತ್ತಿದ್ದಂತೆ ಚಿತ್ರಮಂದಿರಗಳು ತುಂಬಿ ತುಳುಕಿದ್ದವು. ಮತ್ತೆ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರುವುದಕ್ಕೆ ಶುರು ಮಾಡಿದ್ದರು. ಇದರೊಂದಿಗೆ 'ಕೌಸಲ್ಯ ಸುಪ್ರಜಾ ರಾಮ', 'ಆಚಾರ್ & ಕೋ' ಅಂತಹ ಸಿನಿಮಾಗಳು ಸದ್ದು ಮಾಡಿದ್ದವು.

ಇನ್ನೇನು ಸ್ಯಾಂಡಲ್‌ವುಡ್ ಮತ್ತೆ ಟ್ರ್ಯಾಕ್‌ಗೆ ಬರುತ್ತಿದೆ ಅನ್ನುವಾಗಲೇ ಕನ್ನಡದ ಈ ಮೂರು ಸಿನಿಮಾಗಳಿಗೆ ಥಿಯೇಟರ್ ಸಮಸ್ಯೆ ಎದುರಾಗಿದೆ. ಅದಕ್ಕೆ ಕಾರಣ ಸಿಂಪಲ್.. ಪರಭಾಷೆಯ ಸಿನಿಮಾಗಳು. ಕನ್ನಡ ಸಿನಿಮಾಗಳ ಶೋ ಖಡಿತಗೊಳಿಸಿ 'ಜೈಲರ್', 'ಭೋಳಾ ಶಂಕರ್' ಅಂತಹ ಸಿನಿಮಾಗಳಿಗೆ ಹೆಚ್ಚು ಶೋ ಕೊಟ್ಟಿದ್ದಾರೆ. ಪರಭಾಷೆಯ ಬಿಗ್ ಬಜೆಟ್ ಸಿನಿಮಾಗಳಿಗೇ ಹೆಚ್ಚು ಥಿಯೇಟರ್‌ಗಳು, ಸ್ಕ್ರೀನ್‌ಗಳು ಸಿಕ್ಕಿವೆ ಅಂತ ಚಿತ್ರತಂಡ ಅಸಮಧಾನ ಹೊರ ಹಾಕುತ್ತಿದ್ದಾರೆ.
ಕನ್ನಡ ಸಿನಿಮಾಗಳಿಗೆ ಥಿಯೇಟರ್ ಇಲ್ಲ
ಪರಭಾಷೆಯ ಸೂಪರ್‌ಸ್ಟಾರ್ ಸಿನಿಮಾಗಳು ರಿಲೀಸ್ ಆಗುತ್ತಿದೆ ಅಂದರೆ ಮುಗೀತು. ಕನ್ನಡದ ಸಿನಿಮಾಗಳಿಗೆ ಥಿಯೇಟರ್‌ಗಳೇ ಸಿಗುವುದಿಲ್ಲ. ಹಲವು ವರ್ಷಗಳಿಂದ ಕನ್ನಡದ ನಿರ್ಮಾಪಕರು ಇಂತಹದ್ದೊಂದು ಸಮಸ್ಯೆ ಎದುರಿಸುತ್ತಲೇ ಬರುತ್ತಿದ್ದಾರೆ. ಈಗ ಮತ್ತದೇ ಸಮಸ್ಯೆ ಎದುರಾಗಿದೆ. ಕನ್ನಡದಲ್ಲಿ ಜನಮನ್ನಣೆ ಗಳಿಸಿರುವ ಮೂರು ಸಿನಿಮಾಗಳಿಗೆ ಶೋ ಸಿಗದೆ ಪರದಾಡುವಂತಹ ಸ್ಥಿತಿ ನಿರ್ಮಾಣ ಆಗಿದೆ. ಮೂರು ಸಿನಿಮಾಗಳ ತಂಡ ಮಲ್ಟಿಪ್ಲೆಕ್‌ನಲ್ಲಿ ಹೆಚ್ಚು ಸ್ಕ್ರೀನ್ ಕೊಡಲು ಹೋರಾಟ ಮಾಡುವಂತ ಸ್ಥಿತಿ ನಿರ್ಮಾಣ ಆಗಿದೆ.

'ಜೈಲರ್','ಭೋಳಾ ಶಂಕರ್' ಹೆಚ್ಚು ಥಿಯೇಟರ್
ಸೂಪರ್‌ಸ್ಟಾರ್ ರಜನಿಕಾಂತ್ ಹಾಗೂ ಮೆಗಾಸ್ಟಾರ್ ಚಿರಂಜೀವಿ ಇಬ್ಬರ ಸಿನಿಮಾಗಳಿಗೂ ಬೇಡಿಕೆ ಇದೆ. ಆದರೆ, ಕನ್ನಡ ಸಿನಿಮಾಗಳನ್ನು ತೆಗೆದು ಪರಭಾಷೆಯ ಸಿನಿಮಾಗಳನ್ನು ಪ್ರದರ್ಶನ ಮಾಡಿದರೇ ಕನ್ನಡ ಚಿತ್ರರಂಗ ಬೆಳೆಯೋದು ಹೇಗೆ? ಅನ್ನೋದು ನಿರ್ಮಾಪಕರ ವಾದ. "ಕಂಟೆಂಟ್ ಅನ್ನೇ ನಂಬಿಕೊಂಡು ಸಿನಿಮಾ ಮಾಡಿದ್ದೇವೆ. ಮೊದಲ ಎರಡು ವಾರ ಸಿನಿಮಾ ಉತ್ತಮ ಪ್ರದರ್ಶನ ಕಂಡಿದೆ. ಆದರೆ, ಮೂರನೇ ವಾರದ ಹೊತ್ತಿಗೆ ಶೋಗಳ ಸಂಖ್ಯೆ ಗಣನೀಯವಾಗಿ ಇಳಿಕೆ ಆಗಿದೆ. ನಮ್ಮ ಸಿನಿಮಾಗಿಂತ ಜೈಲರ್, ಭೋಳಾ ಶಂಕರ್‌ಗೆ ಹೆಚ್ಚು ಶೋ ಕೊಟ್ಟಿದ್ದಾರೆ. ಹೀಗೆ ಆದರೆ, ಕನ್ನಡ ಸಿನಿಮಾಗಳು ಉಳಿಯುತ್ತಾ? ಮತ್ತೊಂದು ಸಿನಿಮಾ ಮಾಡುವುದಕ್ಕೆ ಧೈರ್ಯಾ ಆದರೂ ಹೇಗೆ ಬರುತ್ತೆ?" ಅಂತ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ನಿರ್ಮಾಪಕ ವರುಣ್ ಗೌಡ ಆಕ್ರೋಶ ಹೊರಹಾಕಿದ್ದಾರೆ.
ಕೌಸಲ್ಯ, ಆಚಾರ್ ಕಥೆಯೇನು ಬೇರೆಯಿಲ್ಲ
ಮಲ್ಟಿಪ್ಲೆಕ್ಸ್‌ನಲ್ಲಿ ಶಶಾಂಕ್ ನಿರ್ದೇಶಿಸಿದ 'ಕೌಸಲ್ಯ ಸುಪ್ರಜಾ ರಾಮ'ಗೂ ಸ್ಕ್ರೀನ್‌ಗಳನ್ನು ಕೊಟ್ಟಿಲ್ಲ. ಒಂದೇ ವಾರಕ್ಕೆ ಸಿನಿಮಾ ತೆಗೆದು ಪರಭಾಷೆಯ ಸಿನಿಮಾಗಳನ್ನು ಹಾಕಿದ್ದಾರೆ. ಈ ಸಂಬಂಧ ನಿರ್ದೇಶಕ ಶಶಾಂಕ್, ಸಿನಿಮಾದ ನಾಯಕ ಡಾರ್ಲಿಂಗ್ ಕೃಷ್ಣ, ನಿರ್ಮಾಪಕ ಬಿಸಿ ಪಾಟೀಲ್ ಫಿಲ್ಮ್ ಚೇಂಬರ್‌ಗೆ ದೂರನ್ನು ನೀಡಿದ್ದರು. ಆದರೂ ಪ್ರಯೋಜನವಾಗಿಲ್ಲ. ಇತ್ತ ಪಿಆರ್‌ಕೆ ನಿರ್ಮಾಣದ 'ಆಚಾರ್ & ಕೋ' ಉತ್ತಮ ರಿವ್ಯೂ ಸಿಕ್ಕಿದ್ದರೂ, ದೊಡ್ಡ ಸಿನಿಮಾಗಳ ಎದುರು ಮಂಕಾಗಿದೆ. " ಇದು ಇವತ್ತಿನ ಸಮಸ್ಯೆ ಅಲ್ಲ. ಹಲವು ವರ್ಷಗಳಿಂದ ಈ ಪ್ರಬ್ಲಮ್ ಇದೆ. ಚಿತ್ರರಂಗ ಹಾಗೂ ಸರ್ಕಾರ ಎರಡೂ ಸೇರಿದರೆ ಈ ಸಮಸ್ಯೆ ಪರಿಹಾರ ಸಿಗುತ್ತೆ. ಪರಭಾಷೆಯ ಸಿನಿಮಾಗಳಿಗೆ ಕರ್ನಾಟಕದ ಕಲೆಕ್ಷನ್ ಬೋನಸ್ ಇದ್ದಂತೆ. ಆದರೆ, ನಮಗೆ ಇಲ್ಲಿಂದ ರೆವೆನ್ಯೂ ಬರಬೇಕು. ಹೀಗಾಗಿ ವಿತರಕರು, ಪ್ರದರ್ಶಕರು ಎಲ್ಲವೂ ಯೋಚನೆ ಮಾಡಬೇಕು. ಬರೀ ಲಾಭ ಅಷ್ಟೇ ನೋಡಿದರೆ, ಚಿತ್ರರಂಗ ಮುಂದಕ್ಕೆ ಹೋಗುವುದು ಹೇಗೆ?" ಎನ್ನುತ್ತಾರೆ 'ಕೌಸಲ್ಯ ಸುಪ್ರಜಾ ರಾಮ' ಚಿತ್ರದ ನಿರ್ದೇಶಕ ಶಶಾಂಕ್.
ಹೆಚ್ಚು ಶೋಗಳು ಬೇಕು
'ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ' ಸಿನಿಮಾಗೆ ಮೊದಲೆರಡು ವಾರದಲ್ಲಿ 280 ಸ್ಕ್ರೀನ್ ಸಿಕ್ಕಿತ್ತು. ಆದ್ರೀಗ 10 ಸ್ಕ್ರೀನ್‌ಗೆ ಬಂದು ನಿಂತಿದೆ. ಹಾಗೇ 'ಕೌಸಲ್ಯ ಸುಪ್ರಜಾ ರಾಮ' ಸಿನಿಮಾಗೆ ಬೆಂಗಳೂರಿನ ಮಲ್ಟಿಪ್ಲೆಕ್ಸ್‌ನಲ್ಲಿ ಮೊದಲ 90 ಶೋ ಕೊಟ್ಟಿದ್ದರು. ಅಷ್ಟೇ ಶೋ ಈ ವಾರವೂ ಬೇಕು ಅನ್ನೋದು ಚಿತ್ರತಂಡದ ಒತ್ತಾಯ. ಆದ್ರೀಗ 50 ಶೋ ನೀಡಲಾಗಿದೆ. ಆ ಎಲ್ಲಾ ಶೋಗಳಿಗೂ ಪ್ರೇಕ್ಷಕರಿಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ವೀಕೆಂಡ್‌ನಲ್ಲಿ ಹೌಸ್‌ಪುಲ್ ಪ್ರದರ್ಶನ ಕಾಣುತ್ತಿವೆ. ಹೀಗಾಗಿ ಹಲವು ವರ್ಷಗಳಿಂದ ಎದುರಾಗಿರೋ ಈ ಸಮಸ್ಯೆಗೆ ಚಿತ್ರರಂಗ ಒಗ್ಗಟಾಗಿ ಪರಿಹಾರ ಕಂಡುಕೊಳ್ಳಬೇಕಾದ ಅಗತ್ಯವಿದೆ.


Click it and Unblock the Notifications











