Vishnuvardhan: "ನಾಗರಹಾವು ತಮಿಳು ರಿಮೇಕ್‌ನಲ್ಲಿ ಜಯಲಲಿತಾ ನಟಿಸಲು ಒಪ್ಪಲೇ ಇಲ್ಲ" ಕಾರಣ ವಿಷ್ಣುದಾದ!
ಸಾಹಸ ಸಿಂಹ ವಿಷ್ಣುವರ್ಧನ್ ವೃತ್ತಿ ಬದುಕಿಗೆ ಮಹತ್ವದ ತಿರುವು ಕೊಟ್ಟ ಸಿನಿಮಾ 'ನಾಗರ ಹಾವು'. ವಿಷ್ಣುದಾದ ನಟಿಸಿದ ಯಾವುದೇ ಸಿನಿಮಾವನ್ನು ಬೇಕಾದರೂ ಮರೆಯಬಹುದು. ಆದರೆ, ಅದೆಷ್ಟೇ ವರ್ಷಗಳಾದರೂ ನಾಗರಹಾವು ಮರೆಯೋದಕ್ಕೆ ಸಾಧ್ಯವೇ ಇಲ್ಲ. ಇದು ಕನ್ನಡ ಚಿತ್ರರಂಗದ ಎವರ್ ಗ್ರೀನ್ ಸಿನಿಮಾಗಳ ಪಟ್ಟಿಯಲ್ಲಿ ಶಾಶ್ವತವಾಗಿ ಉಳಿಯುವ ಸಿನಿಮಾ.
ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ 'ನಾಗರಹಾವು' ಸಿನಿಮಾದಲ್ಲಿ ರಾಮಾಚಾರಿಯಾಗಿ ವಿಷ್ಣುವರ್ಧನ್ ನಟಿಸಿದ್ದರು. ಅಂದಿನ ಕಾಲಕ್ಕೆ ಆಂಗ್ರಿ ಯಂಗ್‌ಮ್ಯಾನ್ ಲುಕ್ ಕೊಟ್ಟ ವಿಷ್ಣುವರ್ಧನ್ ಸಿನಿಮಾ ಪ್ರೇಕ್ಷಕರು ಕಳೆದೇ ಹೋಗಿದ್ದರು. ಸಿನಿಮಾ ಭಾರತದಾದ್ಯಂತ ಸದ್ದು ಮಾಡಿತ್ತು. ಅದೇ ಸಿನಿಮಾವನ್ನು ತಮಿಳಿಗೆ ರಿಮೇಕ್ ಮಾಡುವುದಕ್ಕೆ ಮುಂದಾಗಿದ್ದರು.

ಆ ವೇಳೆ ಹೀರೊಯಿನ್ ಪಾತ್ರಕ್ಕೆ ಜಯಲಲಿತಾರನ್ನು ಕೇಳಿದ್ದರು. ಅಂದಿನ ಕಾಲಕ್ಕೆ ಟಾಪ್ ಹೀರೊಯಿನ್ ಆಗಿದ್ದ ಜಯಲಲಿತಾ ನಿರ್ದೇಶಕರಿಗೆ ವಿಷ್ಣುದಾದ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ಬಳಿಕ 'ನಾಗರ ಹಾವು' ತಮಿಳು ರಿಮೇಕ್‌ನಲ್ಲಿ ನಟಿಸುವುದಿಲ್ಲ ಎಂದು ಹೇಳಿದ್ದರು. ಅಸಲಿಗೆ ಜಯಲಲಿತಾ ಹೀಗಂದಿದ್ದು ಯಾಕೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ವಿಷ್ಣುದಾದ ಹೇಳಿದ ಕಥೆಯೇನು?
ವಿಷ್ಣುದಾದನ ಫೇವರಿಟ್ ನಿರ್ದೇಶಕರಲ್ಲಿ ಪಿ ವಾಸು ಕೂಡ ಒಬ್ಬರು. ಜಯಸಿಂಹ, ಆಪ್ತಮಿತ್ರ, ಆಪ್ತರಕ್ಷಕದಂತಹ ಮೆಗಾ ಹಿಟ್ ಸಿನಿಮಾಗಳನ್ನು ವಿಷ್ಣುದಾದಗಾಗಿ ನಿರ್ದೇಶಿಸಿದ್ದಾರೆ. ಇದೇ ನಿರ್ದೇಶಕ ನಾಗರಹಾವು ತಮಿಳು ರಿಮೇಕ್‌ನಲ್ಲಿ ಯಾಕೆ ನಟಿಸಲಿಲ್ಲ ಅನ್ನೋದನ್ನು ಈ ಹಿಂದೆ ರಿವೀಲ್ ಮಾಡಿದ್ದರು. ಒಂದು ವೇಳೆ 'ನಾಗರ ಹಾವು' ತಮಿಳು ರಿಮೇಕ್‌ನಲ್ಲಿ ವಿಷ್ಣುದಾದ ನಟಿಸಿದ್ದರೆ, ಜಯಲಲಿತಾ ಹೀರೊಯಿನ್ ಆಗಿರುತ್ತಿದ್ದರು ಅನ್ನೋದನ್ನು ರಿವೀಲ್ ಮಾಡಿದ್ದರು.
ತಮಿಳು ನಾಗರಹಾವಿನ ಕಥೆಯೇನು?
"ನಾಗರಹಾವು ಸಿನಿಮಾ ಮಾಡಿದೆ. ಆ ಮೇಲೆ ತಮಿಳಿನಲ್ಲಿ ಸಿನಿಮಾ ಮಾಡಬೇಕು ಅಂತ ರೈಟ್ಸ್ ತೆಗೆದುಕೊಂಡರು. ಆಗ ಜಯಲಲಿತಾ ಅವರು ಟಾಪ್ ಹೀರೊಯಿನ್ ಆಗಿದ್ದರು. ಆಗ ಆ ಸಿನಿಮಾದಲ್ಲಿ ನಟಿಸಬೇಕು ಅಂತ ಜಯಲಲಿತಾ ಅವರಿಗೆ ಕೇಳಲಾಗಿತ್ತು. ಆಗ ಜಯಲಲಿತಾ ಆ ಹುಡುಗ ನಟಿಸಿದರೆ, ನಾನು ನಟಿಸುತ್ತೇನೆ. ಅವರು ಇಲ್ಲದಿದ್ದರೆ ನಾನು ಮಾಡೋದಿಲ್ಲ ಎಂದಿದ್ದರು. ಕೊನೆಗೂ ಜಯಲಲಿತಾ ಆ ಸಿನಿಮಾದಲ್ಲಿ ನಟಿಸಲಿಲ್ಲ. ಈ ಮಾತನ್ನು ವಿಷ್ಣು ಸರ್ ಖುದ್ದಾಗಿ ನನ್ನ ಬಳಿ ಹೇಳಿದ್ರು." ಎಂದು ಪಿ ವಾಸು ಆ ಘಟನೆಯನ್ನು ನೆನಪಿಸಿಕೊಂಡಿದ್ದರು.

ಸಾಹಸ ಸಿಂಹನಿಗೆ ಬಾಲಚಂದರ್ ಆಫರ್
"ಅದಾದ್ಮೇಲೆ ಬಾಲಚಂದರ್ ಸರ್ ಒಂದರ ಹಿಂದೆ 4 ಸಿನಿಮಾಗಳನ್ನು ತಮಿಳಿನಲ್ಲಿ ಬುಕ್ ಮಾಡಿದ್ರು. ಆ ಆಫರ್ ತೆಗೆದುಕೊಂಡು ವಿಷ್ಣು ಸರ್ ಏನು ಮಾಡಲಿ.. ಸಿನಿಮಾ ಮಾಡಲಾ ಬೇಡವಾ? ಅನ್ನೋ ಗೊಂದಲ. ಪುಟ್ಟಣ್ಣ ಅವರು ಹಾಗೂ ಸಿದ್ಧಲಿಂಗಯ್ಯ ಅವರು ಬೇಡ. ನೀನು ಕನ್ನಡದಲ್ಲೇ ಇರು. ಕರ್ನಾಟಕಕ್ಕೆ ನೀನು ಬೇಕು. ನೀನು ಇಲ್ಲೇ ಆಕ್ಟ್ ಮಾಡು ಅಂದರು. ಅವರು ಬಂದಿದ್ದರೆ. ರಜನಿ, ಕಮಲ್ ಸರ್ ಅಂತೆಯೇ ಇನ್ನೊಬ್ಬ ಸ್ಟಾರ್ ಆಗಿರುತ್ತಿದ್ದರು." ಎಂದು ಪಿ ವಾಸು ರಿವೀಲ್ ಮಾಡಿದ್ದಾರೆ.
ಎಲ್ಲಿಗೆ ಹೋಗಿದ್ರೂ ಆಗಿರುತ್ತಿದ್ರು
"ವಿಷ್ಣು ಸರ್ ಎಲ್ಲೇ ಹೋದರೂ ಸ್ಟಾರ್ ಆಗಿರುತ್ತಿದ್ದರು. ಯಾಕಂದ್ರೆ, ಅವರ ಫೇಸ್, ಪ್ರತಿಭೆ ಎಲ್ಲವೂ ಒಬ್ಬರಲ್ಲೇ ಇತ್ತು. ನಮಗೆ ಕ್ಲೋಸಪ್ ಇಟ್ಟರೆ ಹೊರಗೆ ಬರೋಕೆ ಮನಸ್ಸೇ ಬರೋದಿಲ್ಲ. ಅಷ್ಟು ಸುಂದರವಾಗಿರುತ್ತೆ ಅವರ ಫೇಸ್. ಕೆಲವು ಸೀನ್‌ಗಳಿಗೆ ಯಾಕೆ ಹೀಗೆ ಎಕ್ಸ್‌ಪ್ರೆಷನ್ ಕೊಡುತ್ತಾರೆ ಅನಿಸುತ್ತಿತ್ತು. ಎಡಿಟಿಂಗ್ ಟೇಬಲ್ ಮೇಲೆ ಕೂತಾಗ ಅದರ ಅರಿವಾಗುತ್ತಿತ್ತು." ಎಂದು ಪಿ ವಾಸು ವಿಷ್ಣುವರ್ಧನ್ ಬಗ್ಗೆ ಹೇಳಿದ್ದಾರೆ.


Click it and Unblock the Notifications











