ಅಭಿ 'ಬ್ಯಾಡ್ ಮ್ಯಾನರ್ಸ್' ಎಲ್ಲಾ ಹಕ್ಕುಗಳು ಜಯಣ್ಣ ಪಾಲು: ₹35 ಕೋಟಿಗೆ ಸೇಲ್.. ಹೇಗಾಯ್ತು?
ಸ್ಯಾಂಡಲ್‌ವುಡ್‌ನ ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಎರಡನೇ ಸಿನಿಮಾ ಬಿಡುಗಡೆ ಸಜ್ಜಾಗಿದೆ. ಸುಮಾರು ಎರಡು ವರ್ಷಗಳಿಂದ ನಿರ್ಮಾಣ ಹಂತದಲ್ಲಿದ್ದ ಸಿನಿಮಾವನ್ನು ರಿಲೀಸ್ ಮಾಡೋಕೆ ದುನಿಯಾ ಸುರಿ ನಿರ್ಧರಿಸಿದ್ದಾರೆ. ಈ ಸಿನಿಮಾವನ್ನು ಸುಧೀರ್ ಕೆ ಎಂ ನಿರ್ಮಾಣ ಮಾಡಿದ್ದರು.
'ಬ್ಯಾಡ್ ಮ್ಯಾನರ್ಸ್' ಎರಡು ಕಾರಣಗಳಿಗೆ ಸದ್ದು ಮಾಡುತ್ತಿದೆ. ಒಂದು ದುನಿಯಾ ಸೂರಿ ನಿರ್ದೇಶನ. ಇನ್ನೊಂದು ಅಭಿಷೇಕ್ ಅಂಬರೀಶ್ ಎರಡನೇ ಸಿನಿಮಾ. ಈ ಎರಡೂ ಕಾರಣಗಳಿಗೆ 'ಬ್ಯಾಡ್ ಮ್ಯಾನರ್ಸ್' ಮೇಲೆ ಎಲ್ಲರ ಕಣ್ಣಿದೆ. ಈ ಮಧ್ಯೆ ಇದೇ ಸಿನಿಮಾದ ವ್ಯವಹಾರದ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ದೊಡ್ಡ ಮಾತುಗಳು ಕೇಳಿ ಬರುತ್ತಿವೆ.

ದುನಿಯಾ ಸೂರಿ ನಿರ್ದೇಶನ ಅಂದರೆ ಆ ಸಿನಿಮಾಗೊಂದು ಧಮ್ ಇರುತ್ತೆ. ರಾ ಎಲಿಮೆಂಟ್‌ಗಳನ್ನು ತೆರೆಮೇಲೆ ತರುವ ಸೂರಿ ಸಿನಿಮಾಗೆ ಅವರದ್ದೇ ಆದ ಅಭಿಮಾನಿಗಳು ಇದ್ದಾರೆ. ಹೀಗಾಗಿ ಬಿಡುಗಡೆಗೂ ಮುನ್ನವೇ 'ಬ್ಯಾಡ್ ಮ್ಯಾನರ್ಸ್' ಭಾರೀ ಮೊತ್ತಕ್ಕೆ ಸೇಲ್ ಆಗಿದೆ ಎಂದು ಫಿಲ್ಮಿಬೀಟ್‌ಗೆ ಬಲ್ಲ ಮೂಲಗಳು ತಿಳಿಸಿವೆ.
ಇತ್ತೀಚೆಗೆ 'ಬ್ಯಾಡ್ ಮ್ಯಾನರ್ಸ್' ತಂಡ ಹೊಸ ಪೋಸ್ಟರ್ ಒಂದನ್ನು ರಿಲೀಸ್ ಮಾಡಿದೆ. ಇದರಲ್ಲಿ ಜಯಣ್ಣ ಫಿಲ್ಮ್ಸ್‌ಗೆ ಮಾರಾಟ ಮಾಡಿರುವ ಎಲ್ಲಾ ಹಕ್ಕುಗಳನ್ನು ಪಟ್ಟಿಯನ್ನೇ ರಿವೀಲ್ ಮಾಡಲಾಗಿದೆ. ಇದರಲ್ಲಿ ವರ್ಲ್ಡ್‌ವೈಡ್ ನೆಗೆಟಿವ್, ಡಬ್ಬಿಂಗ್, ಟಿವಿ ಮತ್ತು ಡಿಜಿಟಲ್ ರೈಟ್ಸ್ ಹಾಗೂ ವಿತರಣೆ ಹಕ್ಕ ಜಯಣ್ಣ ಫಿಲ್ಮ್ಸ್ ಪಾಲಾಗಿದ್ದನ್ನು ನಮೂದಿಸಲಾಗಿದೆ.
ಅಷ್ಟಕ್ಕೂ 'ಬ್ಯಾಡ್ ಮ್ಯಾನರ್ಸ್' ವ್ಯವಹಾರ ಹೇಗೆ ಆಗಿದೆ ಅನ್ನೋದು ಮಾಹಿತಿನೂ ಫಿಲ್ಮಿಬೀಟ್‌ಗೆ ಲಭ್ಯವಾಗಿದೆ. ನಿರ್ಮಾಪಕ ಸುಧೀರ್ ಕೆ ಎಂ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಿರ್ಮಾಪಕರಾಗಿ ನಿರ್ಮಾಣ ಮಾಡಿದ್ದಾರೆ. ಆದರೆ, ಈಗಾಗಲೇ ಚಿತ್ರರಂಗದಲ್ಲಿ ದುಡಿದಿರೋ ಇವರಿಗೆ ಜಯಣ್ಣ ಹಾಗೂ ಆಪ್ತರು ನೆರವಿಗೆ ಬಂದಿದ್ದಾರೆ. ನಿರ್ಮಾಪಕ, ಜಯಣ್ಣ ಹಾಗೂ ಆಪ್ತರು ಕೂತು ನಡೆಸಿದ ಮಾತುಕತೆಯಲ್ಲಿ ದೊಡ್ಡ ಮೊತ್ತಕ್ಕೆ ಎಲ್ಲಾ ಹಕ್ಕುಗಳನ್ನು ಖರೀದಿ ಮಾಡಲು ಜಯಣ್ಣ ಒಪ್ಪಿದ್ದಾರೆ.

ವಿಶ್ವದಾದ್ಯಂತ 'ಬ್ಯಾಡ್ ಮ್ಯಾನರ್ಸ್' ನೆಗೆಟಿವ್ ರೈಟ್ಸ್ ಜಯಣ್ಣಗೆ ಸೇರಿದೆ. ಹಾಗೇ ಬೇರೆ ಬೇರೆ ಭಾಷೆಗಳಿಗೆ ಡಬ್ಬಿಂಗ್ ಹಕ್ಕನ್ನು, ಸ್ಯಾಟಲೈಟ್ ಹಾಗೂ ಓಟಿಟಿ ಹಕ್ಕನ್ನು ಎಷ್ಟು ಮೊತ್ತಕ್ಕೆ ಬೇಕಾದರೂ ಜಯಣ್ಣ ಮಾರಾಟ ಮಾಡಿಕೊಳ್ಳಬಹುದು. ಇದರೊಂದಿಗೆ ವಿತರಣೆ ಮಾಡುವ ಹಕ್ಕು ಇವರ ಪಾಲಿಗೆ ಬಂದಿದೆ. ಇವೆಲ್ಲವನ್ನೂ ಸೇರಿ ಸುಮಾರು 35 ಕೋಟಿ ರೂಪಾಯಿಗೆ 'ಬ್ಯಾಡ್ ಮ್ಯಾನರ್ಸ್' ಡೀಲ್ ಆಗಿದೆ ಎಂದು ಮೂಲಗಳಿಂದ ಸಿಕ್ಕಿರೋ ಮಾಹಿತಿ. ಈ ಬಗ್ಗೆ ಜಯಣ್ಣ ಹಾಗೂ ಚಿತ್ರತಂಡ ಅಧಿಕೃತ ಮಾಹಿತಿ ನೀಡಬೇಕಿದೆ.
ಈ ಡೀಲ್ ಪ್ರಕಾರ, ಜಯಣ್ಣ ಎಷ್ಟೇ ಲಾಭ ಮಾಡಿಕೊಂಡರೂ ಅದು ಅವರದ್ದೇ. ಹಾಗೇ ನಷ್ಟ ಆದರೂ ಅದು ಅವರದ್ದೇ ಜವಾಬ್ದಾರಿ. ಒಟ್ನಲ್ಲಿ ಅಭಿಷೇಕ್ ಅಂಬರೀಶ್ ಎರಡನೇ ಸಿನಿಮಾಗೆ ಇಷ್ಟೊಂದು ದೊಡ್ಡ ಮೊತ್ತ ಸಿಕ್ಕಿದ್ದು ಸ್ಯಾಂಡಲ್‌ವುಡ್ ಮಟ್ಟಿಗೆ ಸಾಧನೆಯೇ.. ಯುವ ನಟರ ಸಿನಿಮಾಗಳು ಈ ಮಟ್ಟಕ್ಕೆ ಡೀಲ್ ಆಗಿದ ಉದಾಹರಣೆಗಳಿಲ್ಲ. ಇನ್ನೇನಿದ್ದರೂ ನವೆಂಬರ್ 24ಕ್ಕೆ ಸಿನಿಮಾ ರಿಲೀಸ್ ಆದ್ಮೇಲೆ ಜಯಣ್ಣ ಎಷ್ಟು ಲಾಭ ಮಾಡುತ್ತಾರೆ ಅನ್ನೋದು ಗೊತ್ತಾಗುತ್ತೆ.


Click it and Unblock the Notifications











