ಉಗ್ರಾವತಾರ ತಾಳಿದ ಜಿಂಕೆಮರಿ ಶ್ವೇತಾ; ಬೆನ್ನಿ ಮೋಷನ್ ಪೋಸ್ಟರ್ ನೋಡಿದ್ರಾ?
ಒಂದು ಕಾಲದಲ್ಲಿ ಈ ನಟಿ ಸ್ಯಾಂಡಲ್‌ವುಡ್‌ನಲ್ಲಿ 'ಜಿಂಕೆಮರಿ'. ಒಂದೇ ಒಂದು ಸಿನಿಮಾ ನಟಿ ನಂದಿತಾ ಶ್ವೇತಾ ಅವರ ಬದುಕನ್ನೇ ಬದಲಿಸಿತ್ತು. ಯುವ ಬಾಯಲ್ಲಿ "ಜಿಂಕೆಮರಿ ನಾ.." ಅನ್ನೋ ಹಾಡು ಫೇಮಸ್ ಆಗಿತ್ತು. ಸಿನಿಮಾ ಸೂಪರ್ ಹಿಟ್ ಆಯ್ತು. ಲೂಸ್ ಮಾದ ಯೋಗಿ ನಾಯಕನಾಗಿ ನಟಿಸಿದ್ದ 'ನಂದ ಲವ್ಸ್ ನಂದಿತಾ' ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಹೊಸ ಟ್ರೆಂಡ್ ಹುಟ್ಟಾಕಿತ್ತು.
ನಟಿ ಶ್ವೇತಾ ಈ ಸಿನಿಮಾದಲ್ಲಿ ನಂದಿತಾ ಪಾತ್ರದಲ್ಲಿ ಮಿಂಚಿದ್ದರು. 'ನಂದ ಲವ್ಸ್ ನಂದಿತಾ' ಸಿನಿಮಾದಿಂದ ಸಿಕ್ಕಿದ್ದ ಫೇಮ್‌ನಿಂದ ಅವರ ಹೆಸರಿಗೆ ತಮ್ಮ ಮೊದಲ ಸಿನಿಮಾದ ಪಾತ್ರದ ಹೆಸರು ನಂದಿತಾವನ್ನು ಸೇರಿಕೊಂಡರು. ಹೀಗಾಗಿ ನಂದಿತಾ ಶ್ವೇತಾ ಆಗಿ ಜನಪ್ರಿಯರಾದರು. ಆದರೆ, ಕನ್ನಡ ಮತ್ತೆ ಸಿನಿಮಾ ಮಾಡುವುದಕ್ಕೆ ಹೋಗಿರಲಿಲ್ಲ. ಇವರಿಗೆ ತಮಿಳಿನಲ್ಲಿ ಹೆಚ್ಚು ಅವಕಾಶಗಳು ಸಿಕ್ಕಿದ್ದವರು. ಹೀಗಾಗಿ ಕನ್ನಡಿಗರು ಇವರ ಸಿನಿಮಾವನ್ನು ನೋಡುವುದಕ್ಕೆ ಸಾಧ್ಯವಾಗಿಲ್ಲ.

ಬಹಳ ವರ್ಷಗಳ ಬಳಿಕ ಮತ್ತೆ ನಂದಿತಾ ಶ್ವೇತಾ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಅದೂ ಮಾಸ್ ಅವತಾರ ಹೊತ್ತು ಗ್ರ್ಯಾಂಡ್ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಸಂಕ್ರಾಂತಿ ಹಬ್ಬದ ಈ ಶುಭ ಸಂದರ್ಭದಲ್ಲಿ ಶ್ವೇತಾ ನಟನೆಯ 'ಬೆನ್ನಿ' ಸಿನಿಮಾ ಮೋಷನ್ ಪೋಸ್ಟರ್ ರಿಲೀಸ್ ಮಾಡಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಅಂದ್ಹಾಗೆ 'ಬೆನ್ನಿ' ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿರೋದು ಶ್ರೀಲೇಶ್ ಎಸ್ ನಾಯರ್. ಈ ಹಿಂದೆ ವಿನಯ್ ರಾಜ್‌ಕುಮಾರ್ ನಿರ್ದೇಶನದ 'ಪೆಪೆ' ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಈಗ 'ಬೆನ್ನಿ' ಮೂಲಕ ಮಹಿಳಾ ಪ್ರಧಾನ ಕಥೆಯನ್ನು ಹೇಳೋದಿಕ್ಕೆ ಹೊರಟಿದ್ದಾರೆ. ಬಹುಭಾಷಾ ನಟಿ ಕನ್ನಡದ ಜಿಂಕೆ ಮರಿ ನಂದಿತಾ ಶ್ವೇತಾ ನಾಯಕಿಯಾಗಿ ಕಮ್ ಬ್ಯಾಕ್ ಮಾಡಿತ್ತಿದ್ದಾರೆ. ಈ ಸಿನಿಮಾ ಮೋಷನ್ ಪೋಸ್ಟರ್ ಈಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಸಂಕ್ರಾಂತಿ ಹಬ್ಬದ ಸಂಭ್ರಮದಂದು ರಿಲೀಸ್ ಮಾಡಿದ 'ಬೆನ್ನಿ' ಸಿನಿಮಾದ ಮೋಷನ್ ಪೋಸ್ಟರ್‌ನಲ್ಲಿ ಶ್ವೇತಾ ಕಂಪ್ಲೀಟ್ ವೈಲೆಂಟ್ ಲುಕ್ ಕೊಟ್ಟಿದ್ದಾರೆ. ಬೆನ್ನಿಯ ಉಗ್ರಾವತಾರ ಕಂಡು ಪ್ರೇಕ್ಷಕರೇ ಕನ್ಫ್ಯೂಸ್ ಆಗಿದ್ದಾರೆ. ಇವ್ರೇನಾ ಜಿಂಕೆಮರಿ ನಂದಿತಾ ಶ್ವೇತಾ ಅಂತ ಅಭಿಮಾನಿಗಳು ಗೊಂದಲಕ್ಕೆ ಬಿದ್ದಿದ್ದಾರೆ. ಅಂದ್ಹಾಗೆ, ಇದೊಂದು ಮಹಿಳಾ ಪ್ರಧಾನ ಸಿನಿಮಾ ಆಗಿರುವುದರಿಂದ ಶ್ವೇತಾಗೆ ಕನ್ನಡದಲ್ಲಿ ಮತ್ತೊಂದು ಸಕ್ಸಸ್ ಸಿಗುವ ಎಲ್ಲಾ ಲಕ್ಷಣಗಳು ಇವೆ.
ನಂದಿತಾ ಶ್ವೇತಾ ಅವರೊಂದಿಗೆ 'ಬೆನ್ನಿ' ಸಿನಿಮಾದಲ್ಲಿ ದಕ್ಷಿಣದ ಭಾರತದ ಪ್ರಮುಖ ನಟರು ಅಭಿನಯಿಸುತ್ತಿದ್ದಾರೆ. ಈ ಸಿನಿಮಾ ಕೇವಲ ಕನ್ನಡ ಮಾತ್ರವಲ್ಲ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲೂ ಮೂಡಿ ಬರುತ್ತಿದೆ. ಸಂಡೇ ಸಿನಿಮಾಸ್ ಬ್ಯಾನರ್‌ನಡಿ ರಾಮೇನಹಳ್ಳಿ ಜಗನ್ನಾಥ್ ಈ ಸಿನಿಮಾವನ್ನು ನಿರ್ಮಿಸಿ, ಪ್ರೆಸೆಂಟ್ ಕೂಡ ಮಾಡುತ್ತಿದ್ದಾರೆ. ಸದ್ಯ ಸಿನಿಮಾದ ಪೋಸ್ಟರ್ ಅಂತೂ ಮಸ್ತ್ ಮನರಂಜನೆ ನೀಡುತ್ತಿದೆ.
'ಬೆನ್ನಿ' ಸಿನಿಮಾಗೆ ಸಚಿನ್ ಬಸ್ರೂರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಹಾಗೇ ಗುರುಪ್ರಸಾದ್ ನಾರ್ನಾಡ್ ಕ್ಯಾಮರಾವರ್ಕ್ ಮಾಡುತ್ತಿದ್ದಾರೆ. ಮನು ಶೇಡ್ಗಾರ್ ಹಾಗೂ ರಂಜನ್ ನರಸಿಂಹಮೂರ್ತಿ ಎಡಿಟಿಂಗ್ ಮಾಡುತ್ತಿದ್ದಾರೆ. ಏನೇ ಇದ್ದರೂ ಕನ್ನಡದಲ್ಲಿ ಪ್ರಯೋಗಗಳು ಆಗುತ್ತಿರೋದು ಸಿನಿಮಾ ಪ್ರೇಮಿಗಳಿಗೆ ಸಖತ್ ಕಿಕ್ ಕೊಟ್ಟಿದೆ. ಈ ಸಿನಿಮಾ ಕೂಡ ಅದೇ ಸಾಲಿಗೆ ಸೇರುವ ಎಲ್ಲಾ ಲಕ್ಷಣಗಳು ಎದ್ದು ಕಾಣುತ್ತಿವೆ.


Click it and Unblock the Notifications











