ಗೊಂದಲಕ್ಕೆ ತೆರೆ ಎಳೆದ ಕೆವಿಎನ್; ಜೋಗಿ ಪ್ರೇಮ್-ದರ್ಶನ್ ಸಿನಿಮಾ ಅನೌನ್ಸ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರ್ತ್‌ಡೇಯಂದು ಸಾಲು ಸಾಲು ಸಿನಿಮಾಗಳು ಅನೌನ್ಸ್ ಆಗುತ್ತವೆ. ಅದರಲ್ಲೂ ಜೋಗಿ ಪ್ರೇಮ್ ಹಾಗೂ ದರ್ಶನ್ ಕಾಂಬಿನೇಷನ್ ಸಿನಿಮಾ ಕೂಡ ಒಂದಾಗಿತ್ತು. ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೂ ಮುನ್ನವೇ ಜೋಗಿ ಪ್ರೇಮ್ ಸಿನಿಮಾಗೆ ದರ್ಶನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಕೆವಿಎನ್ ಸಂಸ್ಥೆ ಈ ಸಿನಿಮಾವನ್ನು ನಿರ್ಮಾಣ ಮಾಡುವುದು ಅಂತಾಗಿತ್ತು. ಬಳಿಕ ಕೆವಿಎನ್‌ಗೆ ದರ್ಶನ್ ಹಣ ಹಿಂತಿರುಗಿಸಿದ್ದಾರೆ ಅನ್ನೋ ಮಾತು ಕೇಳಿ ಬಂದಿದ್ದವು.
ದರ್ಶನ್ ಕೂಡ ಇತ್ತೀಚೆಗಷ್ಟೇ ವಿಡಿಯೋ ಮೂಲಕ ಎರಡು ಸಿನಿಮಾಗಳ ಅಡ್ವಾನ್ಸ್ ಮೊತ್ತವನ್ನು ಹಿಂತಿರುಗಿಸಿದ್ದಕ್ಕೆ ಕಾರಣ ನೀಡಿದ್ದರು. ಸೂರಪ್ಪ ಬಾಬು ಹಾಗೂ ಕೆವಿಎನ್ ಪ್ರೊಡಕ್ಷನ್‌ಗೆ ಅಡ್ವಾನ್ಸ್ ಹಣವನ್ನು ಹಿಂತಿರುಗಿಸಿದ್ದಾಗಿ ಹೇಳಿದ್ದರು. ಆದರೆ, ಪ್ರೇಮ್ ಜೊತೆ ಸಿನಿಮಾ ಮಾಡುವುದು ಗ್ಯಾರಂಟಿ ಎಂದಿದ್ದರು. ನಿರೀಕ್ಷೆಯಂತೆ ದರ್ಶನ್ ಹಾಗೂ ಜೋಗಿ ಪ್ರೇಮ್ ಸಿನಿಮಾ ಹುಟ್ಟುಹಬ್ಬದಂದು ಅನೌನ್ಸ್ ಆಗಿದೆ.

ಆದರೆ, ಇಲ್ಲೊಂದು ಟ್ವಿಸ್ಟ್ ಇದೆ. ಅದೇನಪ್ಪಾ ಅಂದ್ರೆ, ದರ್ಶನ್ ಹಾಗೂ ಜೋಗಿ ಪ್ರೇಮ್ ಕಾಂಬಿನೇಷನ್‌ಗೆ ಕೆವಿಎನ್ ಸಂಸ್ಥೆಯೇ ಹಣ ಹೂಡಿಕೆ ಮಾಡುತ್ತಿದೆ. ಜೋಗಿ ಪ್ರೇಮ್ ಈಗಾಗಲೇ ಅನೌನ್ಸ್‌ಮೆಂಟ್ ಟೀಸರ್ ಅನ್ನು ರಿಲೀಸ್ ಮಾಡಿದ್ದು ಅದರಲ್ಲಿ ಕೆವಿಎನ್ ಸಂಸ್ಥೆಯ ಹೆಸರು ಕೂಡ ಇದೆ. ದರ್ಶನ್ ಹುಟ್ಟು ಹಬ್ಬದಂದೇ ಈ ಖುಷಿ ವಿಷಯವನ್ನು ದರ್ಶನ್ ಅಭಿಮಾನಿಗಳೊಂದಿಗೆ ಪ್ರೇಮ್ ಹಂಚಿಕೊಂಡಿದ್ದಾರೆ.
ದರ್ಶನ್ ಹಾಗೂ ಜೋಗಿ ಪ್ರೇಮ್ ಸಿನಿಮಾ ಮಾಡಬೇಕು ಅನ್ನೋದು ರಕ್ಷಿತಾ ಕನಸು. ಹೀಗಾಗಿ ಇಬ್ಬರೂ ಕಾಂಬಿನೇಷನ್‌ನಲ್ಲಿ ಸಿನಿಮಾ ಮಾಡುತ್ತೇವೆ ಎಂದು ದರ್ಶನ್ ಹೇಳಿಕೊಂಡಿದ್ದರು. ಆದರೆ, ಬೇರೆ ನಿರ್ಮಾಣ ಸಂಸ್ಥೆಯೊಂದಿಗೆ ಈ ಸಿನಿಮಾ ಮಾಡಬಹುದೆಂದು ಎಲ್ಲರೂ ನಿರೀಕ್ಷೆ ಮಾಡಿದ್ದರು. ಆದ್ರೀಗ ಬರ್ತ್‌ಡೇ ದಿನ ಜೋಗಿ ಪ್ರೇಮ್ ಎಲ್ಲಾ ಸಂಗತಿಗಳಿಗೆ ಟ್ವಿಸ್ಟ್ ಕೊಟ್ಟು ಸಿನಿಮಾವನ್ನು ಅನೌನ್ಸ್ ಮಾಡಿದ್ದಾರೆ.
ಎಲ್ಲಕ್ಕಿಂತ ಹೆಚ್ಚಾಗಿ ದರ್ಶನ್ ಈ ಅನೌನ್ಸ್‌ಮೆಂಟ್ ಟೀಸರ್‌ಗೆ ದರ್ಶನ್ ಧ್ವನಿಯನ್ನು ನೀಡಿದ್ದಾರೆ. ಅದರಲ್ಲಿ "ನನ್ನ ಕೊನೆಯ ಉಸಿರು ಇರುವವರೆಗೂ ಈ ಭೂಮಿ ಮೇಲೆ ನಿನ್ನ ಒಂದು ಹನಿ ರಕ್ತಾನೂ ಸೋಗೋದಕ್ಕೆ ನಾನು ಬಿಡಲ್ಲ" ಎಂದು ಡೈಲಾಗ್ ಬಿಟ್ಟಿದ್ದು ಫ್ಯಾನ್ಸ್‌ಗೆ ಕಿಕ್ ಕೊಟ್ಟಿದೆ. ಇದೇ ವಿಡಿಯೋದಲ್ಲಿ ಜೈ ಶ್ರೀರಾಮ್ ಅನ್ನೋ ಹಿನ್ನೆಲೆ ಧ್ವನಿ ಕೂಡ ಇದೆ. ಇದರ ಜೊತೇನೆ ಗದೆ, ಅರಮನೆ, ಎರಡು ಸೈನ್ಯಗಳ ಮುಖಾಮುಖಿಯನ್ನು ಸಾಂಕೇತಿಕವಾಗಿ ತೋರಿಸಲಾಗಿದೆ. ಹೀಗಾಗಿ ಈ ಸಿನಿಮಾ ಐತಿಹಾಸಕವೋ, ಮಹಾಯುದ್ಧವೋ? ಯಾವ ಹಿನ್ನೆಲೆ ಇಟ್ಟುಕೊಂಡು ಸಿನಿಮಾ ಮಾಡಿದ್ದಾರೆ ಅನ್ನೋದು ಕುತೂಹಲವನ್ನು ಕೆರಳಿಸಿದೆ.

2003ರಲ್ಲಿ ಜೋಗಿ ಪ್ರೇಮ್ 'ಕರಿಯ' ಸಿನಿಮಾವನ್ನು ದರ್ಶನ್‌ಗೆ ನಿರ್ದೇಶನ ಮಾಡಿದ್ದರು. ಬೆಂಗಳೂರಿನ ರೌಡಿಗಳ ಕಥೆಯನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿತ್ತು. ಈ ಸಿನಿಮಾ ಮೊದಲ ರಿಲೀಸ್‌ನಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ, ಎರಡನೇ ಬಾರಿಗೆ ಮತ್ತೆ ರಿಲೀಸ್ ಮಾಡಲಾಗಿತ್ತು. ಆಗ ಜನರು ಚಿತ್ರಮಂದಿರಕ್ಕೆ ಬಂದು ಸಿನಿಮಾವನ್ನು ನೋಡಿ ಗೆಲ್ಲಿಸಿದ್ದರು. ಆದರೆ, ಈ ಸಿನಿಮಾ ಬಳಿಕ ಪ್ರೇಮ್ ಮತ್ತು ದರ್ಶನ್ ಮತ್ತೆ ಒಟ್ಟಿಗೆ ಸಿನಿಮಾ ಮಾಡಲೇ ಇಲ್ಲ.
ಈಗ ಸುಮಾರು 22 ವರ್ಷಗಳ ಬಳಿಕ ದರ್ಶನ್ ಹಾಗೂ ಜೋಗಿ ಪ್ರೇಮ್ ಇಬ್ಬರೂ ಮತ್ತೆ ಒಟ್ಟಿಗೆ ಸಿನಿಮಾ ಮಾಡುವುದಕ್ಕೆ ಮುಂದೆ ಬಂದಿದ್ದಾರೆ. ಈ ಬಾರಿ ದರ್ಶನ್‌ಗಾಗಿ ಯಾವ ರೀತಿಯ ಕಥೆಯನ್ನು ಹೆಣೆದಿದ್ದಾರೆ ಅನ್ನೋದು ಅಭಿಮಾನಿಗಳಲ್ಲಿ ಕುತೂಹಲವನ್ನು ಕೆರಳಿಸಿದೆ. ಮಾಸ್ ಹೀರೋ ದರ್ಶನ್‌ಗೆ ಹೆಣೆದ ಕತೆ ಹೇಗಿದೆ? ಯಾವಾಗ ಈ ಸಿನಿಮ ಆರಂಭ ಆಗುತ್ತೆ? ಸಿನಿಮಾ ಟೈಟಲ್ ಏನು? ಅನ್ನೋದೆಲ್ಲವೂ ಸದ್ಯಕ್ಕೆ ಪ್ರಶ್ನೆಗಳಾಗಿಯೇ ಉಳಿದುಕೊಂಡಿವೆ. ಇವೆಲ್ಲದಕ್ಕೂ ಮುಂದಿನ ದಿನಗಳಲ್ಲಿ ಉತ್ತರ ಸಿಗಬಹುದು.


Click it and Unblock the Notifications











