'ಜನನಾಯಗನ್' ರೀತಿ 'ಕೆಡಿ'ಗೂ ಎದುರಾಯ್ತು ಸೆನ್ಸಾರ್ ಕಂಟಕ; ರಿವೈಸಿಂಗ್ ಕಮಿಟಿ ಅಂಗಳದಲ್ಲಿ ಪ್ರೇಮ್ ಸಿನಿಮಾ
KVN ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣದ 'ಕೆಡಿ' ಸಿನಿಮಾ ಬಿಡುಗಡೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಇನ್ನು ಬಿಡುಗಡೆಗೆ ಎರಡು ವಾರಗಳು ಇರುವುದರಿಂದ 'ಕೆಡಿ'ಗೆ ಸೆನ್ಸಾರ್ ಪ್ರಕ್ರಿಯೆ ಆರಂಭ ಆಗಿದೆ. ಈ ಹಂತದಲ್ಲಿ ಕೆವಿಎನ್ ಪ್ರೊಡಕ್ಷನ್ಸ್‌ಗೆ ಮತ್ತೊಂದು ಸಮಸ್ಯೆ ಎದುರಾಗಿದೆ. 'ಜನ ನಾಯಗನ್'ಗೆ ಸೆನ್ಸಾರ್ ಸಮಸ್ಯೆ ಎದುರಾದಂತೆ 'ಕೆಡಿ'ಗೂ ಎದುರಾಗುವ ಸಾಧ್ಯತೆಯಿದೆ ಎಂದು ಹೇಳಾಗುತ್ತಿದೆ.
ಜೋಗಿ ಪ್ರೇಮ್ ನಿರ್ದೇಶನದಲ್ಲಿ ಧ್ರುವ ಸರ್ಜಾ, ರೀಷ್ಮಾ ನಾಣಯ್ಯ, ಸಂಜಯ್ ದತ್, ಶಿಲ್ಪಾ ಶೆಟ್ಟಿ ಹಾಗೂ ರವಿಚಂದ್ರನ್ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಕೆಡಿ' ಇದೇ ತಿಂಗಳ 30ರಂದು ರಿಲೀಸ್ ಆಗಲಿದೆ. ಅದಕ್ಕೂ ಮುನ್ನ 'ಕೆಡಿ'ಗೆ ಸೆನ್ಸಾರ್ ಪ್ರಕ್ರಿಯೆ ನಡೆಯಬೇಕಿದೆ. ಈ ಹಂತದಲ್ಲಿ ಮತ್ತೆ ಸೆನ್ಸಾರ್ ಮಂಡಳಿಯಿಂದ ಕಂಟಕ ಎದುರಾಗಿದೆ ಎಂದು ಕೆವಿಎನ್ ಪ್ರೊಡಕ್ಷನ್ಸ್ ಮೂಲಗಳಿಂದ ತಿಳಿದು ಬಂದಿದೆ.

'ಕೆಡಿ' ಸಿನಿಮಾವನ್ನು ಈಗಾಗಲೇ ಪ್ರಾದೇಶಿಕ ಸೆನ್ಸಾರ್ ಮಂಡಳಿ ವೀಕ್ಷಿಸಿದೆ. ಅಲ್ಲದೆ ಸಿನಿಮಾದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ, ಎ ಸರ್ಟಿಫಿಕೆಟ್ ಕೊಟ್ಟಿತ್ತು. ಆದರೂ, ಮುಂಬೈನಲ್ಲಿರುವ ಕೇಂದ್ರ ಸೆನ್ಸಾರ್ ಮಂಡಳಿ, ಯಾರ ಅರಿವಿಗೂ ತರದೇ ರಿವೈಸಿಂಗ್ ಕಮಿಟಿಗೆ ಕಳುಹಿಸಿದೆ ಎಂದು ಹೇಳಲಾಗುತ್ತಿದೆ. 'ಜನ ನಾಯಗನ್' ನಂತಯೇ 'ಕೆಡಿ'ಗೂ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗುತ್ತಿದೆ.
ದಳಪತಿ ವಿಜಯ್ ನಟನೆಯ 'ಜನ ನಾಯಗನ್' ಸಿನಿಮಾ ಸಂಕ್ರಾಂತಿ ಹಬ್ಬಕ್ಕೆ ರಿಲೀಸ್ ಆಗಬೇಕಿತ್ತು. ಆದರೆ, ಸೆನ್ಸಾರ್ ಮಂಡಳಿ ಕೆಲವು ದೃಶ್ಯಗಳನ್ನು ತೆಗೆಯುವಂತೆ ಆಕ್ಷೇಪಣೆ ವ್ಯಕ್ತಪಡಿಸಿತ್ತು. ಇದನ್ನು ಪ್ರಶ್ನೆ ಮಾಡಿ ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆ ಕೋರ್ಟ್ ಮೆಟ್ಟಿಲೇರಿತ್ತು. ಬಳಿಕ ಈ ಪ್ರಕರಣವನ್ನು ಸುಪ್ರೀ ಕೋರ್ಟ್‌ವರೆಗೂ ತೆಗೆದುಕೊಂಡು ಹೋಗಲಾಗಿತ್ತು. ಈ ಪ್ರಕ್ರಿಯೆಯಲ್ಲಿ ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಸೆನ್ಸಾರ್ ಮಂಡಳಿ ನಡುವೆ ಜಟಾಪಟಿ ನಡೆಯುತ್ತಲೇ ಇತ್ತು. ಕೊನೆಗೂ ಕೆವಿಎನ್ ಪ್ರೊಡಕ್ಷನ್ ಒಂದು ನಿರ್ಧಾರಕ್ಕೆ ಬಂದು ಕೇಸ್ ಅನ್ನು ಹಿಂತೆಗದುಕೊಂಡಿತ್ತು.
ಈಗ ಇದೇ ನಿರ್ಮಾಣ ಸಂಸ್ಥೆಯ 'ಕೆಡಿ ದಿ ಡೆವಿಲ್' ಸಿನಿಮಾಗೂ ಇಂತಹದ್ದೇ ಸಮಸ್ಯೆ ಎದುರಾಗಿದೆ. ಪ್ರಾದೇಶಿಕ ಸೆನ್ಸಾರ್ ಮಂಡಳಿ ಈಗಾಗಲೇ ಸಿನಿಮಾವನ್ನು ನೋಡಿ ಕೆಲವು ದೃಶ್ಯಗಳನ್ನು ತೆಗೆಯುವಂತೆ ಹೇಳಿತ್ತು. ಹಾಗೇ ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದ "ಸೆರಗು ಸರಿಸೆ.." ಹಾಡಿನ ಎರಡು ಸಾಲುಗಳನ್ನು ಬದಲಿಸುವಂತೆ ಸೂಚನೆ ನೀಡಿ, ಸಿನಿಮಾ ಎ ಸರ್ಟಿಫಿಕೇಟ್ ನೀಡಿತ್ತು. ಆದರೆ, ಅದನ್ನು ಮುಂಬೈನಲ್ಲಿರುವ ಕೇಂದ್ರ ಸೆನ್ಸಾರ್ ಮಂಡಳಿ ಒಪ್ಪಿಕೊಂಡಿಲ್ಲ. ಬದಲಿಗೆ ರಿವೈಸಿಂಗ್ ಕಮಿಡಿಗೆ ವರ್ಗಾವಣೆ ಮಾಡಿದೆ.

ಮುಂಬೈನಲ್ಲಿರುವ ಕೇಂದ್ರ ಸೆನ್ಸಾರ್ ಮಂಡಳಿ ಈ ನಡೆಯನ್ನು ಕೆವಿಎನ್ ಸಂಸ್ಥೆ ಖಂಡಿಸಿದೆ ಎನ್ನಲಾಗಿದೆ. ನಿರ್ಮಾಣ ಸಂಸ್ಥೆ, ನಿರ್ದೇಶಕರು ಹಾಗೂ ಪ್ರಾದೇಶಿಕ ಸೆನ್ಸಾರ್ ಮಂಡಳಿ ಗಮನಕ್ಕೆ ತರದೇ ರಿವೈಸಿಂಗ್ ಕಮಿಟಿ ಬರೆದಿರೋದರಿಂದ ನಿಯಮ ಉಲ್ಲಂಘನೆಯಾಗಿದೆ ಎಂದು ಹೇಳಲಾಗಿದೆ. ಈ ಮೂಲಕ ಕನ್ನಡ ಸಿನಿಮಾಗಳಿಗೆ ಮೇಲೆ ಕೇಂದ್ರ ಸೆನ್ಸಾರ್ ಬೋಡರ್ನಿಂದ ಅನ್ಯಾಯ ಆಗಿದೆ ಎಂದು ನಿರ್ಮಾಣ ಸಂಸ್ಥೆ ಅಭಿಪ್ರಾಯ ಪಟ್ಟಿದೆ ಎಂದು ಹೇಳಲಾಗುತ್ತಿದೆ.
ಸದ್ಯಕ್ಕೀಗ ಜೋಗಿ ಪ್ರೇಮ್ ನಿರ್ದೇಶಿಸಿದ 'ಕೆಡಿ ದಿ ಡೆವಿಲ್' ಸಿನಿಮಾ ರಿವೈಸಿಂಗ್ ಕಮಿಟಿ ಮುಂದಿದೆ. ಇನ್ನು 15 ದಿನಗಳಲ್ಲಿ 'ಕೆಡಿ'ಯ ಸೆನ್ಸಾರ್ ಸಮಸ್ಯೆ ಇತ್ಯರ್ಥ ಆಗುತ್ತಾ? ಇಲ್ಲ 'ಜನ ನಾಯಗನ್'ಗೆ ಆದ ರೀತಿಯೇ ಸಮಸ್ಯೆ ಆಗುತ್ತಾ? ಅನ್ನೋದನ್ನು ಸಿನಿಮಾ ಮಂದಿ ಕಾತರದಿಂದ ಎದುರು ನೋಡುತ್ತಿದ್ದಾರೆ. ಹೀಗಾಗಿ 'ಕೆಡಿ' ಕೂಡ ಸೆನ್ಸಾರ್ ಕಂಟಕವನ್ನು ಎದುರಿಸುತ್ತಿದೆ. ಈಗಾಗಲೇ ಒಂದು ಪೆಟ್ಟು ತಿಂದಿರುವ ಕೆವಿಎನ್ ಸಂಸ್ಥೆ 'ಕೆಡಿ'ಯನ್ನು ಅಂದುಕೊಂಡ ಸಮಯಕ್ಕೆ ರಿಲೀಸ್ ಮಾಡುವಲ್ಲಿ ಯಶಸ್ವಿಯಾಗುತ್ತಾ? ಅನ್ನೋದು ನೋಡಬೇಕಿದೆ.


Click it and Unblock the Notifications















