"ಸಿನಿಮಾ ನೋಡಿದ್ಮೇಲೆ ಪ್ರೇಮ್ ನಾನ್ಸೆನ್ಸ್ ಕಣಯ್ಯ ನೀನು ಅಂದ್ರೆ ಒಪ್ಪಿಕೊಳ್ತೀನಿ"; 'ಕೆಡಿ' ಸಾಂಗ್ ಬಗ್ಗೆ ಪ್ರೇಮ್ ಪ್ರತಿಕ್ರಿಯೆ
ವಿವಾದ ವಿಲ್ಲದೇ ಜೋಗಿ ಪ್ರೇಮ್ ಸಿನಿಮಾ ರಿಲೀಸ್ ಆಗೋದೇ ಇಲ್ಲ ಅಂತ ಕಾಣಿಸುತ್ತಿದೆ. ಪ್ರತಿ ಸಿನಿಮಾದಂತೆ 'ಕೆಡಿ ದಿ ಡೆವಿಲ್' ಸಿನಿಮಾ ಕೂಡ ಕಾಂಟ್ರವರ್ಸಿಯ ಸುಳಿಗೆ ಸಿಲುಕಿದೆ. ಇತ್ತೀಚೆಗೆ ಬಿಡುಗಡೆಯಾದ ಇದೇ ಸಿನಿಮಾ ನಾಲ್ಕನೇ ಹಾಡು "ಸರಸೆ ನಿನ್ನ ಸೆರಗ.." ಈಗ ವಿವಾದದ ಕೇಂದ್ರ ಬಿಂದು. ಈ ಹಾಡು ರಿಲೀಸ್ ಆದಲ್ಲಿಂದ ಜೋಗಿ ಪ್ರೇಮ್ ವಿರುದ್ಧ ಟೀಕೆಗಳ ಮಹಾಪೂರವೇ ಹರಿದು ಬರುತ್ತಿದೆ.
'ಕೆಡಿ ದಿ ಡೆವಿಲ್' ಸಿನಿಮಾದ ಪ್ರಮುಖ ಸನ್ನಿವೇಶದಲ್ಲಿ ಬರುವ ಹಾಡಿದು ಎಂದು ಚಿತ್ರತಂಡ ಹೇಳಿಕೊಂಡಿದೆ. ಇದು ಸಿನಿಮಾದಲ್ಲಿ ಬಂದು ಹೋಗುವ ಐಟಂ ಸಾಂಗ್. ಅರ್ಜುನ್ ಜನ್ಯ ಕಂಪೋಸ್ ಮಾಡಿರುವ ಈ ಹಾಡಿಗೆ ಸಾಹಿತ್ಯ ಬರೆದಿದ್ದು ಸ್ವತ: ಜೋಗಿ ಪ್ರೇಮ್ ಅವರೇ. ಈ ಹಿಂದೆ "ಬೇಡುವೆನು ವರವನ್ನು.." ಅಂತ ಎದೆಗೆ ನಾಟುವ ಸಾಹಿತ್ಯ ನೀಡಿದ್ದ ಪ್ರೇಮ್ ಈಗ ಇಂತಹ ಅಶ್ಲೀಲ ಹಾಡನ್ನು ಬರೆಯುವುದು ಬೇಕಿತ್ತೇ? ಅನ್ನೋದು ಎಲ್ಲರ ಪ್ರಶ್ನೆ.

"ಸರಸೆ ನಿನ್ನ ಸೆರಗ.." ಹಾಡು ರಿಲೀಸ್ ಆದಲ್ಲಿಂದ ಸೋಶಿಯಲ್ ಮೀಡಿಯಾಗಳಲ್ಲಿ ಜೋಗಿ ಪ್ರೇಮ್ ಅನ್ನು ರೋಸ್ಟ್ ಮಾಡುತ್ತಿದ್ದಾರೆ. ಇಷ್ಟೆಲ್ಲ ನಡೆಯುತ್ತಿದ್ದರೂ ಪ್ರೇಮ್ ಪ್ರತಿಕ್ರಿಯೆ ನೀಡಿರಲಿಲ್ಲ. ಈಗ ಕೊನೆಗೂ ಸಿನಿಮಾದ ಹಾಡಿನ ಬಗ್ಗೆ ಮಾಧ್ಯಮಗಳಿಗೆ ಕ್ಲಾರಿಟಿಯನ್ನು ಕೊಟ್ಟಿದ್ದಾರೆ. ಈ ಹಾಡಿನ ಉದ್ದೇಶವೇನು? ದ್ವಂದ್ವ ಅರ್ಥ ಕೊಡುವ ಸಾಲುಗಳನ್ನು ಬರೆದಿದ್ದೇಕೆ? ಅನ್ನೋದಕ್ಕೆ ಉತ್ತರ ಕೊಟ್ಟಿದ್ದಾರೆ.
ಯಾರಿಗೂ ನೋವಾಗುವ ಹಾಗೆ ಬರೆದಿಲ್ಲ
'ಕೆಡಿ ದಿ ಡೆವಿಲ್' ಸಿನಿಮಾದ ಹಾಡಿನ ವಿವಾದದ ಬಗ್ಗೆ ಪಬ್ಲಿಕ್ ಟಿವಿಗೆ ಜೋಗಿ ಪ್ರೇಮ್ ಪ್ರತಿಕ್ರಿಯೆ ನೀಡಿದ್ದಾರೆ. ಆ ವೇಳೆ ಈ ಹಾಡನ್ನು ಹೇಗೆ ಬರೆದರು ಅನ್ನೋದನ್ನು ರಿವೀಲ್ ಮಾಡಿದ್ದಾರೆ. "ಇದು ಧ್ವಂದ್ವ ಅರ್ಥ ಅಂತ ಬರೋದಿಲ್ಲ. ನಾನು ಸಾಂಗ್ ಬರೆಯುವಾಗ ಯಾರಿಗೂ ನೋವಾಗುವ ಹಾಗೆ ಬರೋದಿಲ್ಲ. ನನ್ನ ಹಾಡುಗಳನ್ನು ನೀವು ನೋಡಿರುತ್ತೀರ. ಕರಿಯ ಸಿನಿಮಾದಿಂದ ಹಾಡುಗಳನ್ನು ಬರೆದುಕೊಂಡು ಬಂದಿದ್ದೇನೆ. ಜಗತ್ತಿಗೆ ಬುದ್ದಿನೂ ಹೇಳುತ್ತೇನೆ. ತುಂಬಾ ಎಮೋಷನ್ಸ್ ಅನ್ನೂ ಕನೆಕ್ಟ್ ಮಾಡುತ್ತೇನೆ. ಸ್ವಾಮಿ ಜೀವನ ಹೀಗೆ ಇದೆ ಅಂತಾನೂ ಹೇಳುತ್ತೇನೆ. ಈ ಹಾಡನ್ನು ಬರೆಯುವಾಗ ಒಂದು ಬಾಟಲ್ ಹಾಗೂ ಉಪ್ಪಿನಕಾಯಿ ಇಟ್ಕೊಂಡು ಬರೆದಿದ್ದು" ಎಂದು ಜೋಗಿ ಪ್ರೇಮ್ ಹೇಳಿದ್ದಾರೆ.
ಮೊದಲೇ ಬಾಟಲ್ ಬಂದ್ರೆ ಥ್ರಿಲ್ ಇರೋಲ್ಲ
ಇದೇ ಬಾಟಲ್ ಅನ್ನು ಪದವನ್ನು ಮೊದಲೇ ಯಾಕೆ ರಿವೀಲ್ ಮಾಡಿಲ್ಲ ಅನ್ನೋದನ್ನೂ ಹೇಳಿಕೊಂಡಿದ್ದಾರೆ. "ಈ ಹಾಡಿನ ಕೊನೆಯಲ್ಲಿ ಬಾಟಲ್ ಇದೆ ನೋಡಿ. ಆರಂಭದಲ್ಲಿಯೇ ಬಾಟಲ್ ಅನ್ನ ಮೇಲೆ ಎತ್ತಿ ಅಂದಾಗ ಆ ಸಾಂಗ್‌ಗೆ ಥ್ರಿಲ್ ಇರೋದಿಲ್ಲ. ಅದರಲ್ಲಿ ಕೆಟ್ಟದ್ದು ಏನೂ ಇಲ್ಲ. ಕೊನೆಯಲ್ಲಿ ಬರುತ್ತೆ ನೋಡಿ. ಒಂದು ಸಾಹಿತ್ಯವನ್ನು ಹೀಗೆ ಬರೆಯಬೇಕು ಅಂತೇನು ಇಲ್ವಲ್ಲ. ಪ್ರತಿಯೊಂದು ಸನ್ನಿವೇಶಕ್ಕೂ ತಕ್ಕಂತೆ ಹಾಡನ್ನು ಬರೆಯುತ್ತೇವೆ." ಎನ್ನುತ್ತಾರೆ.

ವಿಡಿಯೋ ಸಾಂಗ್ ನೋಡಿದಾಗ ಅರ್ಥ ಸಿಗುತ್ತೆ
'ಕೆಡಿ'ಯ ವಿವಾದಾತ್ಮಕ ಹಾಡನ್ನು ಸಿನಿಮಾದಲ್ಲಿ ನೋಡಿದಾಗ ಅರ್ಥ ಸಿಗುತ್ತೆ. ಈಗ ಬರೀ ಲಿರಿಕಲ್ ಸಾಂಗ್ ಅನ್ನು ರಿವೀಲ್ ಮಾಡಿದ್ದೇವೆ. ಅದನ್ನು ವಿಜ್ಯೂವಲ್ ಸಮೇತ ನೋಡಿದಾಗ ಏನೂ ಅನಿಸೋದಿಲ್ಲ ಅನ್ನೋದು ಅನ್ನೋದು ಪ್ರೇಮ್ ವಾದ. "ಈ ಹಾಡಿನಲ್ಲಿ ತಲೆ ಮೇಲೆ ಬಾಟಲ್ ಇಟ್ಕೊಂಡು ಡ್ಯಾನ್ಸ್ ಮಾಡುತ್ತಾಳೆ. ಆ ದೃಶ್ಯವನ್ನು ನೋಡುವಾಗ ಇದರ ಮೀನಿಂಗ್ ಗೊತ್ತಾಗುತ್ತೆ. ಹಾಡು ಬರುವುದಕ್ಕೆ ಮುನ್ನವೇ ಈ ರೀತಿ ವರ್ತಿಸಿದಾಗ ಯಾಕೆ ಹೀಗೆ ಮಾಡುತ್ತಿದ್ದಾರೆ ಅಂತ ನನಗೆ ಅನಿಸುತ್ತೆ. ತುಂಬಾನೇ ಕೆಟ್ಟದಾಗಿ ಹಾಡುಗಳನ್ನು ಬರೆದಿದ್ದಾರೆ. ಒಂದು ಹೆಣ್ಣನ್ನು ವರ್ಣನೆ ಮಾಡುವಾಗ ಅಶ್ಲೀಲವಾಗಿ ವರ್ಣನೆ ಮಾಡಲೇ ಬಾರದು. ತುಂಬಾನೇ ಮುದ್ದಾಗಿ ಕವಿಗಳು ವರ್ಣಿಸುತ್ತಾರೆ. ಇಲ್ಲಿ ನಾನು ಏನು ಮಾಡಿದ್ದೀನಿ. ಬಾಟಲ್ ಅನ್ನು ಇಟ್ಕೊಂಡು ಸಾಂಗ್ ಮಾಡಿದ್ದೀನಿ. ಬರೀ ಸಾಹಿತ್ಯವನ್ನು ಕೇಳಿಕೊಂಡು ಹೀಗೆ ವಿರೋಧಿಸುತ್ತಿದ್ದಾರೆ. ಈ ದೃಷ್ಠಿಕೋನ ನನಗೆ ಅರ್ಥ ಆಗುತ್ತಿಲ್ಲ." ಎಂದಿದ್ದಾರೆ.
ನಟಿಯನ್ನು ಟಚ್ ಕೂಡ ಮಾಡಲ್ಲ
ಇಷ್ಟೇ ಅಲ್ಲದೆ ಈ ಹಾಡಿನಲ್ಲಿ ನಟಿಯನ್ನು ಕೆಟ್ಟದಾಗಿ ತೋರಿಸಿಲ್ಲ. ನಟಿಯನ್ನು ಟಚ್ ಕೂಡ ಮಾಡಿಸುವುದಿಲ್ಲ ಎಂದು ಪ್ರೇಮ್ ಹೇಳಿದ್ದಾರೆ. "ಈ ಸಿನಿಮಾವನ್ನು ಇಡೀ ಕುಟುಂಬ ಕೂತು ನೋಡಬಹುದು. ಈ ಹಾಡಿನಲ್ಲಿ ಆ ನಟಿಯನ್ನು ಎಳೆದಾಡುವುದು ಆಗಬಹುದು. ಅದು-ಇದೂ ಏನೂ ಇಲ್ಲ. ಟಚ್ ಕೂಡ ಮಾಡುವುದಿಲ್ಲ. ಇತರ ಸಿನಿಮಾ ಮಾಡಿದ್ದೀನಿ. ಒಂದು ಹುಡುಗ-ಹುಡುಗಿ ಲವ್ ಮಾಡ್ತಿದ್ದಾರೆ ಅಂದಾಗಲೇ ಟಚ್ ಮಾಡಿಸುವುದಿಲ್ಲ. ಇವತ್ತು ಕೂಡ ಐಟಂ ಸಾಂಗ್ ಅಂದಕೂಡಲೇ ತಬ್ಬಿಕೊಳ್ಳೋದು, ಎಳೆದಾಡೋದು ಇವೆಲ್ಲ ಮಾಡುವುದೇ ಇಲ್ಲ. ಸಿನಿಮಾ ನೋಡಿ ಆದ್ಮೇಲೆ ಹಾಡಿನ ಬಗ್ಗೆ ಮಾತಾಡಿದರೆ ಓಕೆ. ಪ್ರೇಮ್ ನಾನ್ಸೆನ್ಸ್ ಕಣಯ್ಯ ನೀನು ಅಂದರೆ ಒಪಪ್ಪಿಕೊಳ್ಳುತ್ತೇನೆ." ಎಂದಿದ್ದಾರೆ.


Click it and Unblock the Notifications















