ಸಂಜಯ್ ಲೀಲಾ ಬನ್ಸಾಲಿ ಸಂಸ್ಥೆಗೆ ಜೋಗಿ ಪ್ರೇಮ್ ಸಿನಿಮಾ ಮಾಡೋದು ಫಿಕ್ಸ್; ಹೀರೋ ಯಾರು?
ಸ್ಯಾಂಡಲ್‌ವುಡ್‌ನ ಶೋ ಮ್ಯಾನ್ ಜೋಗಿ ಪ್ರೇಮ್ ಬಾಲಿವುಡ್ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಅನ್ನೋ ಸುದ್ದಿ ಓಡಾಡುತ್ತಿತ್ತು. ಅದನ್ನೀಗ ಖುದ್ದಾಗಿ ಸ್ವತ: ಪ್ರೇಮ್ ಅವರೇ ಕನ್ಫರ್ಮ ಮಾಡಿದ್ದಾರೆ. ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟಿಸುತ್ತಿರುವ 'ಕೆಡಿ' ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿರುವ ಪ್ರೇಮ್, ಈ ಸಿನಿಮಾ ಮುಗಿದ ಕೂಡಲೇ ಬಾಲಿವುಡ್‌ಗೆ ಪಯಣ ಬೆಳೆಸುತ್ತಿದ್ದಾರೆ.
ಪ್ರೇಮ್‌ಗೆ ಪರಭಾಷೆಯಿಂದ ಆಫರ್ ಬರೋದು ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಹಲವು ಸಿನಿಮಾಗಳಿಗೆ ಆಫರ್ ಬಂದಿದೆ. ಆದರೆ, ಅದ್ಯಾವುದನ್ನೂ ಒಪ್ಪಿಕೊಂಡಿರಲಿಲ್ಲ. ಅದನ್ನು ಹಲವು ಬಾರಿ ಸ್ವತ: ಪ್ರೇಮ್ ಈ ಹಿಂದೆನೇ ಹೇಳಿಕೊಂಡಿದ್ದರು. ಆದ್ರೀಗ ಬಾಲಿವುಡ್ ಸಿನಿಮಾ ನಿರ್ದೇಶನ ಮಾಡುವುದಕ್ಕೆ ನಿರ್ಧರಿಸಿ ನಿಂತಿದ್ದಾರೆ. ಸದ್ಯ ಸ್ಕ್ರೀಪ್ಟ್ ವರ್ಕ್ ಕೂಡ ನಡೆಯುತ್ತಿದೆ.

ಬಾಲಿವುಡ್‌ನ ಲೆಜೆಂಡರಿ ಡೈರೆಕ್ಟರ್ ಸಂಜಯ್ ಲೀಲಾ ಬನ್ಸಾಲಿ ಅಂತಹವರೇ ಪ್ರೇಮ್ ಕರೆದು ಸಿನಿಮಾ ಮಾಡುವಂತೆ ಕೇಳಿ ಕೊಂಡಿರೋದು ವಿಶೇಷ. ಅಷ್ಟಕ್ಕೂ ಸಂಜಯ್ ಲೀಲಾ ಬನ್ಸಾಲಿಗೆ ಪ್ರೇಮ್ ಸಿಕ್ಕಿದ್ದೇಗೆ? ಸಿನಿಮಾದ ಹೀರೋ ಯಾರು? ಸಲ್ಮಾನ್ ಖಾನ್ ಸಿನಿಮಾಗೆ ಆಫರ್ ಬಂದಿದ್ದರೂ ಯಾಕೆ ಒಪ್ಪಲಿಲ್ಲ? ಈ ಎಲ್ಲಾ ಸಂಗತಿಗಳನ್ನು ಜೋಗಿ ಪ್ರೇಮ್ ರಿವೀಲ್ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.
ಕಳೆದ ವರ್ಷದಿಂದಲೇ ಜೋಗಿ ಪ್ರೇಮ್ ಬಾಲಿವುಡ್ ಸಿನಿಮಾ ಬಗ್ಗೆ ಸುದ್ದಿಯಾಗುತ್ತಿತ್ತು. 'ಕೆಡಿ'ಗೆ ಬಾಲಿವುಡ್‌ನಿಂದ ಅದ್ಯಾವಾಗ ಸಂಜಯ್ ದತ್, ಶಿಲ್ಪಾ ಶೆಟ್ಟಿ, ನೂರಾ ಫತೇಹಿ ಅಂತಹ ಕಲಾವಿದರು ಎಂಟ್ರಿ ಕೊಟ್ಟರೋ ಅಲ್ಲಿಂದಲೇ ಇಂತಹದ್ದೊಂದು ಸುದ್ದಿ ಹೊರಬಿದ್ದಿತ್ತು. ಆದರೆ, ಜೋಗಿ ಪ್ರೇಮ್ ಮಾತ್ರ ಈ ವಿಷಯವನ್ನು ಕನ್ಫರ್ಮ್ ಮಾಡಿರಲಿಲ್ಲ. ಕೊನೆಗೂ ಚೊಚ್ಚಲ ಬಾಲಿವುಡ್ ಸಿನಿಮಾ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

"ನಮ್ಮ ಸುಪ್ರಿತ್ ಅವರೆಲ್ಲ ಬಾಂಬೆಯಲ್ಲಿ ಕೆಡಿ ಫುಟೇಜ್ ಎಲ್ಲಾ ತೋರಿಸಿದ್ದಾರೆ. ಕೆಡಿ ಬ್ಯುಸಿನೆಸ್ ನಡೆಯುತ್ತಿರುತ್ತೆ. ಅಲ್ಲಿ ನೋಡಿಬಿಟ್ಟಿದ್ದಾರೆ. ಅಲ್ಯಾರೋ ಹೋಗಿ ಸಂಜಯ್ ಸರ್‌ಗೆ ಹೇಳಿದ್ದಾರೆ. ಅದನ್ನು ನೋಡಿ ನನಗೆ ಕೇಳಿದರು. ನನಗೆ ಒಂದು ಸಿನಿಮಾ ಡೈರೆಕ್ಟ್ ಮಾಡುತ್ತೀರಾ ಅಂತ. ನೋಡೋಣ ನಾನು ಟ್ರೈ ಮಾಡುತ್ತೇನೆ. ಇಂಡಿಯನ್ ಸಿನಿಮಾದ ಲೆಜೆಂಡ್‌ಗಳಲ್ಲಿ ಒಬ್ಬರು. ಅವರ ಮುಂದೆ ನಾವು ಚಿಕ್ಕವರು. ನೋಡೋಣ ಏನು ಮಾಡುವುದಕ್ಕೆ ಸಾಧ್ಯ ಅಂತ." ಎಂದು ನಿರ್ದೇಶಕ ಜೋಗಿ ಪ್ರೇಮ್ ಗ್ಯಾರಂಟಿ ನ್ಯೂಸ್ ಯೂಟ್ಯೂಬ್ ಚಾನೆಲ್‌ಗೆ ಹೇಳಿದ್ದಾರೆ.
ಜೋಗಿ ಪ್ರೇಮ್ ಕೆಡಿ ಜೊತೆ ಜೊತೆನೇ ಬಾಲಿವುಡ್ ಸಿನಿಮಾ ಸ್ಕ್ರೀಪ್ಟ್ ಕೂಡ ನಡೆಯುತ್ತಿದೆ. ಸದ್ಯ ತಮ್ಮ ಕೈಯಲ್ಲಿ ಮೂರು ಪ್ರಾಜೆಕ್ಟ್‌ಗಳಿದ್ದು, 'ಕೆಡಿ' ಮುಗಿಯುತ್ತಿದ್ದಂತೆ ಯಾವ ಪ್ರಾಜೆಕ್ಟ್ ಕೈಗೆತ್ತಿಕೊಳ್ಳುತ್ತಾರೆ ಅನ್ನೋದನ್ನು ರಿವೀಲ್ ಮಾಡಲಿದ್ದಾರೆ. ಇದೇ ವೇಳೆ ಸಂಜಯ್ ಲೀಲಾ ಬನ್ಸಾಲಿ ಪ್ರಾಜೆಕ್ಟ್ ಒಪ್ಪಿಕೊಳ್ಳುವುದಕ್ಕೂ ಮುನ್ನ ಸಲ್ಮಾನ್ ಖಾನ್ ಸಿನಿಮಾಗೆ ಆಫರ್ ಬಂದಿತ್ತಂತೆ. ಅದನ್ನು ಜೋಗಿ ಪ್ರೇಮ್ ಒಪ್ಪಿಕೊಳ್ಳಲಿಲ್ಲ.
"ಟೀಸರ್ ಲಾಂಚ್ ಆದಾಗ ಮೊದಲನೇ ದಿನಾನೇ ಸಲ್ಮಾನ್ ಖಾನ್ ಅವರ ಸಿನಿಮಾ ಮಾಡುವಂತೆ ಕೇಳಿದರು. ಸಾಜಿದ್ ನಾಡಿಯದ್ವಾಲ ಕಂಪನಿ ನಿಮಗೆ ಗೊತ್ತಿರಬೇಕು. ಸಿಕಂದರ್ ಸಿನಿಮಾ ನಡೀತಿದೆ. ಮುಂಬೈನ ಬಿಗ್ ಪ್ರೊಡಕ್ಷನ್ ಕಂಪನಿಯವರು ಕೇಳಿದರು. ಸಡನ್ ಆಗಿ ಕಥೆ ರೆಡಿ ಮಾಡಿ ಸಿನಿಮಾ ಮಾಡುವುದಕ್ಕೆ ಟೈಮ್ ಬೇಕಾಗಿತ್ತು ನನಗೆ. ಬೇರೆ ಯಾವುದಾದರೂ ಮಾಡಿಕೊಳ್ಳಿ. ನಾನು ಕೆಡಿ ಶೂಟಿಂಗ್‌ನಲ್ಲಿ ಇದ್ದೀನಿ. ಇಲ್ಲಿ ಬೇರೆ ಕಮಿಟ್ಮೆಂಟ್‌ಗಳಿವೆ ಬಿಟ್ಬಿಡಿ ಅಂತ ಹೇಳಿದ್ದೆ." ಎಂದು ಇದೇ ಯೂಟ್ಯೂಬ್ ಚಾನೆಲ್ ಸಂದರ್ಶನದ ವೇಳೆ ಹೇಳಿದ್ದಾರೆ.
ಇನ್ನು ಪ್ರೇಮ್ ಚೊಚ್ಚಲ ಬಾಲಿವುಡ್ ಸಿನಿಮಾಗೆ ಹೀರೋ ಯಾರು? ಈ ಪ್ರಶ್ನೆ ಅಂತೂ ಕಾಡದೆ ಇರುವುದಿಲ್ಲ. ಸದ್ಯ ಅದನ್ನು ಪ್ರೇಮ್ ಇನ್ನೂ ರಿವೀಲ್ ಮಾಡಿಲ್ಲ. ಈ ಹಿಂದೆ ವರದಿಯಾಗಿದ್ದನ್ನು ನೋಡುವುದಾದಲೇ ಸಂಜಯ್ ಲೀಲಾ ಬನ್ಸಾಲಿ 'ರೌಡಿ ರಾಥೋಡ್ 2' ಸಿನಿಮಾ ಮಾಡುವುದಕ್ಕೆ ನಿರ್ಧರಿಸಿದ್ದು, ಅಕ್ಷಯ್ ಕುಮಾರ್, ಶಾಹಿದ್ ಕಪೂರ್, ಟೈಗರ್ ಶ್ರಾಫ್ ಜೊತೆ ಮಾತುಕತೆ ನಡೆಯುತ್ತಿದೆ ಎಂದು ವರದಿಯಾಗಿತ್ತು. ಇವರಿಗೆ ಪ್ರೇಮ್ ಯಾರಿಗಾದರೂ ಒಬ್ಬರಿಗೆ ಆಕ್ಷನ್ ಕಟ್ ಹೇಳಬಹುದು.


Click it and Unblock the Notifications











