ಅಮ್ಮನ ಕನಸು ಈಡೇರಿಸಿದ Jr.NTR;ಬಾಳೆ ಎಲೆ ಮುಂದೆ ಊಟಕ್ಕೆ ಕೂತ ದಿಗ್ಗಜರ ಬಗ್ಗೆ ನೆಟ್ಟಿಗರ ಕಮೆಂಟ್ ಏನು?
ಯಂಗ್ ಟೈಗರ್ ಜೂನಿಯರ್ ಎನ್‌ಟಿಆರ್ ಉಡುಪಿಯ ಶ್ರೀಕೃಷ್ಣ ಮಠಕ್ಕೆ ಭೇಟಿ ಕೊಟ್ಟಿದ್ದಾರೆ. ಜೂ.ಎನ್‌ಟಿಆರ್ ಜೊತೆಯಲ್ಲಿ ಅವರ ತಾಯಿ ಹಾಗೂ ಕುಟುಂಬ ಕೂಡ ಇತ್ತು. ವಿಶೇಷ ಅಂದರೆ, ಈ ತೆಲುಗು ನಟನೊಂದಿಗೆ 'ಕೆಜಿಎಫ್' ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ 'ಕಾಂತಾರ'ದ ರಿಷಬ್ ಶೆಟ್ಟಿ ಕೂಡ ಸಾಥ್ ನೀಡಿದ್ದಾರೆ.
ಉಡುಪಿ ಶ್ರೀಕೃಷ್ಣ ಮಠದ ಮುಂದ ಜೂ.ಎನ್‌ಟಿಆರ್ ತನ್ನ ತಾಯಿಯೊಂದಿಗೆ ಹಾಗೂ ಪ್ರಶಾಂತ್ ನೀಲ್, ರಿಷಬ್ ಶೆಟ್ಟಿ ಜೊತೆ ಇರುವ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಅಮ್ಮನ ಹುಟ್ಟುಹಬ್ಬಕ್ಕೆ ಇನ್ನು ಎರಡು ದಿನ ಬಾಕಿ ಇರುವಂತೆ ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿ ಕೊಟ್ಟಿದ್ದಕ್ಕೂ ಒಂದು ಕಾರಣವಿದೆ.

ಉಡುಪಿ ಶ್ರೀಕೃಷ್ಣ ಮಠಕ್ಕೆ ಜೂ.ಎನ್‌ಟಿಆರ್ ಅಮ್ಮ ಕರೆದುಕೊಂಡು ಬಂದಿದ್ದ ಹಿಂದೊಂದು ಕಾರಣವಿದೆ. ಅವರ ಅಮ್ಮ ಕುಂದಾಪುರ ಮೂಲದವರಾಗಿದ್ದರಿಂದ ಉಡುಪಿ ಶ್ರೀಕೃಷ್ಣ ಮಠಕ್ಕೆ ಮಗನೊಂದಿಗೆ ಬರಬೇಕು ಅಂತ ಆಸೆ ಪಟ್ಟಿದ್ದರಂತೆ. ಆ ಆಸೆಯನ್ನು ಜೂ.ಎನ್‌ಟಿಆರ್ ಇಂದು (ಆಗಸ್ಟ್ 31) ಈಡೇರಿಸಿದ್ದಾರೆ. ಈ ವೇಳೆ ತೆಗೆಸಿಕೊಂಡ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
"ಇದು ನನ್ನ ಅಮ್ಮನ ಕನಸಾಗಿತ್ತು. ಅವರ ಹುಟ್ಟೂರು ಕುಂದಾಪುರಕ್ಕೆ ನನ್ನನ್ನು ಕರೆದುಕೊಂಡು ಉಡುಪಿ ಶ್ರೀಕೃಷ್ಣ ಮಠದಲ್ಲಿ ದರ್ಶನ ಮಾಡಿಸಬೇಕು ಎಂಬ ಆಸೆ ಕೊನೆಗೂ ಈಡೇರಿದೆ. ಇದು ಅವರ ಹುಟ್ಟುಹಬ್ಬಕ್ಕೆ (ಸೆಪ್ಟೆಂಬರ್ 2) ಇನ್ನು ಎರಡು ದಿನಗಳು ಇರುವುದಕ್ಕೂ ಮುನ್ನ ನೆರವೇರಿದೆ. ಇದನ್ನು ನಾನು ಅವರಿಗೆ ಕೊಡುತ್ತಿರುವ ಬೆಸ್ಟ್ ಗಿಫ್ಟ್" ಎಂದು ಜೂ.ಎನ್‌ಟಿಆರ್ ಫೋಟೋಗಳನ್ನು ಶೇರ್ ಮಾಡಿ ಬರೆದುಕೊಂಡಿದ್ದಾರೆ.
ಹಾಗೇ ಇದನ್ನು ಸಾಧ್ಯವಾಗುವುದಕ್ಕೆ ನೆರವಾದವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. "ವಿಜಯ್ ಕಿರಂಗಂದೂರು ಸರ್, ನನ್ನ ಆತ್ಮೀಯ ಸ್ನೇಹಿತ ಪ್ರಶಾಂತ್ ನೀಲ್ ನನ್ನೊಂದಿಗೆ ಬಂದು ಇದನ್ನು ಸಾಧ್ಯವಾಗಿಸಿದ್ದಾರೆ. ಹಾಗೇ ಮತ್ತೊಬ್ಬ ಗೆಳೆಯ ರಿಷಬ್ ಶೆಟ್ಟಿಯವರಿಗೆ ವಿಶೇಷವಾದ ಧನ್ಯವಾದಗಳನ್ನು ಹೇಳುತ್ತೇನೆ. ಅವರ ಉಪಸ್ಥಿತಿ ಹಾಗೂ ಬೆಂಬಲ ನಿಜಕ್ಕೂ ಸ್ಪೆಷಲ್ ಆಗಿತ್ತು" ಎಂದು ಜೂ.ಎನ್‌ಟಿಆರ್ ಹೇಳಿದ್ದಾರೆ.
ಜೂ.ಎನ್‌ಟಿಆರ್ ಈ ಫೋಟೋಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಂತೆ ಅಭಿಮಾನಿಗಳು ನಟನನ್ನು ಗುಣಗಾನ ಮಾಡುತ್ತಿದ್ದಾರೆ. ಜೂನಿಯರ್ ಎನ್‌ಟಿಆರ್ ಸರಳತೆಯನ್ನು ಕೊಂಡಾಡುತ್ತಿದ್ದಾರೆ. ಹಾಗೇ ಜೂ.ಎನ್‌ಟಿಆರ್, ಪ್ರಶಾಂತ್ ನೀಲ್ ಹಾಗೂ ರಿಷಬ್ ಶೆಟ್ಟಿಯನ್ನು ಒಂದೇ ಫ್ರೇಮ್‌ನಲ್ಲಿ ನೋಡಿ ಖುಷಿ ಪಟ್ಟಿದ್ದಾರೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಅದರಲ್ಲೂ ಮೂವರು ಬಾಳೆ ಎಲೆ ಮುಂದೆ ಊಟಕ್ಕೆ ಕೂತಿರುವ ಫೋಟೋಗೆ ಸಖತ್ ಕಾಮೆಂಟ್ ಬಂದಿದೆ. "ಒಂದೇ ಫ್ರೇಮ್‌ನಲ್ಲಿ ಮೂವರು ಲೆಜೆಂಡ್‌ಗಳು" ಎಂದು ಒಬ್ಬರು ಕಾಮೆಂಟ್ ಮಾಡಿದ್ದರೆ, ಇನ್ನೊಬ್ಬರು "ಕಾಂತಾರ 2 ನಲ್ಲಿ ಜೂ.ಎನ್‌ಟಿಆರ್ ಅವರದ್ದು ಅತಿಥಿ ಪಾತ್ರ" ಎಂದು ಗೆಸ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಜೂ.ಎನ್‌ಟಿಆರ್‌ಗೆ ಕರ್ನಾಟಕದ ನಂಟು ಇದೆ. ಅವರ ತಾಯಿ ಕುಂದಾಪುರದವರಾಗಿದ್ದರಿಂದ ಕನ್ನಡವನ್ನು ಸಲೀಸಾಗಿ ಮಾತಾಡುತ್ತಾರೆ. ಹೀಗಾಗಿ ಕನ್ನಡಿಗರಿಗೂ ತೀರ ಹತ್ತಿರವೆನಿಸಿದ್ದಾರೆ.


Click it and Unblock the Notifications










