3 ವಾರಗಳ ಹಿಂದೆ ಎಲ್ಲವೂ ಸರಿಯಿತ್ತಾ? ನಿವೇದಿತಾ ಗೌಡಗೆ ಚಂದನ್ ಶೆಟ್ಟಿ ಮಾಡಿದ ಪೋಸ್ಟ್‌ನಲ್ಲಿ ಏನಿತ್ತು?
ಕನ್ನಡ ಚಿತ್ರರಂಗದ ಕ್ಯೂಟ್ ಜೋಡಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ. ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಈ ಜೋಡಿ ವೀಕ್ಷಕರ ಅಚ್ಚು ಮೆಚ್ಚಿನ ಜೋಡಿಯಾಗಿತ್ತು. ರಿಯಾಲಿಟಿ ಶೋನಿಂದ ಹೊರ ಬರುತ್ತಿದ್ದಂತೆ ಕನ್ನಡ ರ್‍ಯಾಪರ್ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಇಬ್ಬರ ಲವ್ ಸ್ಟೋರಿ ರಿವೀಲ್ ಆಗಿತ್ತು.
ಯುವ ದಸರಾ ವೇದಿಕೆ ಮೇಲೆ ನೆರೆದಿದ್ದ ಜನರ ಮುಂದೆ ನಿವೇದಿತಾ ಗೌಡಗೆ ಕನ್ನಡ ರ್‍ಯಾಪರ್ ಚಂದನ್ ಶೆಟ್ಟಿ ಪ್ರಪೋಸ್ ಮಾಡಿದ್ದರು. ಇದು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು. ಈ ಮೂಲಕ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಇಬ್ಬರೂ ಸುದ್ದಿಯಾಗಿದ್ದರು. ನಾಲ್ಕು ವರ್ಷಗಳ ಹಿಂದೆ ಎರಡೂ ಕುಟುಂಬದ ಒಪ್ಪಿಗೆ ಮೇರೆಗೆ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.

ಆಗಾಗ ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮೂಲಕ ಪ್ರತ್ಯಕ್ಷ ಆಗುತ್ತಿದ್ದರು. ಆದ್ರೀಗ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಇಬ್ಬರೂ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಆದರೆ, ಕೇವಲ ಮೂರು ವಾರಗಳ ಹಿಂದಷ್ಟೇ ನಿವೇದಿತಾ ಗೌಡಗೆ ವಿಶ್ ಮಾಡಿ ಚಂದನ್ ಶೆಟ್ಟಿ ಪೋಸ್ಟ್ ಮಾಡಿದ್ದರು. 6 ದಿನಗಳ ಹಿಂದಷ್ಟೇ ಒಟ್ಟಿಗೆ ಕಾಣಿಸಿಕೊಂಡಿದ್ದರು.
ಹೌದು, ಚಂದನ್ ಶೆಟ್ಟಿ ವಿಚ್ಛೇದನದ ಸುದ್ದಿ ಹಬ್ಬುವುದಕ್ಕೆ ಕೇವಲ ಮೂರು ವಾರಗಳ ಹಿಂದಷ್ಟೇ ಒಂದು ಪೋಸ್ಟ್ ಮಾಡಿದ್ದರು. ಇಬ್ಬರೂ ಜೊತೆಗೆ ನಿಂತಿರುವ ಫೋಟೊವನ್ನು ಹಂಚಿಕೊಂಡು ನಿವೇದಿತಾಗೆ "ಹ್ಯಾಪಿ ಬರ್ತ್‌ಡೇ ಲವ್" ಎಂದು ಬರೆದುಕೊಂಡಿದ್ದರು. ಅದು ಈ ಜೋಡಿ ಮದುವೆ ಬಳಿಕ ತೆಗೆಸಿಕೊಂಡ ಫೋಟೊ ಆಗಿತ್ತು. ಇಬ್ಬರ ಅಭಿಮಾನಿಗಳು ಈ ಫೋಟೊವನ್ನು ನೋಡಿ "ದೇವರು ನಿಮಗೆ ಯಶಸ್ಸು, ಆಯಸ್ಸು, ಆರೋಗ್ಯ ಕೊಟ್ಟು ಕಾಪಾಡಲಿ" ಎಂದು ಹಾರೈಸಿದ್ದರು. ಆ ಬಳಿಕ ಚಂದನ್ ಶೆಟ್ಟಿ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೋಗೆ ಸಂಬಂಧಿಸಿದ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದರು.
ಇತ್ತ ನಿವೇದಿತಾ ಗೌಡ ಕೂಡ ಕೇವಲ ಆರು ದಿನಗಳ ಹಿಂದಷ್ಟೇ 'ಕೋಟಿ' ಸಿನಿಮಾ ಬಗ್ಗೆ ವಿಶ್ ಮಾಡಿದ್ದರು. ಇವರ ಪಕ್ಕದಲ್ಲಿ ಚಂದನ್ ಶೆಟ್ಟಿ ಕೂಡ ಇದ್ದರು. ಅಷ್ಟರಲ್ಲೇ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಇಬ್ಬರು ವಿಚ್ಚೇದನಕ್ಕೆ ಮುಂದಾದರೇ? ಅಥವಾ ಅದಕ್ಕೂ ಮುನ್ನವೇ ಇಬ್ಬರೂ ಈ ನಿರ್ಧಾರಕ್ಕೆ ಬಂದಿದ್ದರೇ? ಅನ್ನೋ ಅನುಮಾನ ಮೂಡಿದೆ.
ಸದ್ಯಕ್ಕೀಗ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಇಬ್ಬರ ವಿಚ್ಛೇದನದ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಈಗಾಗಲೇ ಮಾಧ್ಯಮಗಳಲ್ಲಿ ಇಬ್ಬರು ವಿಚ್ಛೇದನಕ್ಕೆ ಮುಂದಾಗಿದ್ದಕ್ಕೆ ಕಾರಣವನ್ನೂ ಬಿತ್ತರಿಸುತ್ತಿದ್ದಾರೆ. ಕೆಲವು ಕಡೆಗಳಲ್ಲಿ ಇಬ್ಬರೂ ಫ್ಯಾಮಿಲಿ ಪ್ಲಾನಿಂಗ್‌ನಲ್ಲಿ ಇಬ್ಬರ ನಡುವೆ ಭಿನ್ನಾಭಿಪ್ರಾಯ ಎದ್ದಿದ್ದ ಹಿನ್ನೆಲೆಯಲ್ಲಿ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.
ಇನ್ನು ಕೆಲವು ಮಾಧ್ಯಮಗಳಲ್ಲಿ ವೃತ್ತಿ ಬದುಕಿಗಾಗಿ ಇಬ್ಬರೂ ಬೇರೆಯಾಗುವುದಕ್ಕೆ ನಿರ್ಧರಿಸಿದ್ದಾರೆ ಎಂದು ವರದಿಗಳಾಗುತ್ತಿವೆ. ಒಟ್ನಲ್ಲಿ ಸ್ಯಾಂಡಲ್‌ವುಡ್‌ನ ಕ್ಯೂಟ್ ಜೋಡಿ ಎನಿಸಿಕೊಂಡಿದ್ದ ನಿವೇದಿತಾ ಹಾಗೂ ಚಂದನ್ ಶೆಟ್ಟಿ ಇಬ್ಬರೂ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡುತ್ತಿರುವ ಸುದ್ದಿ ಸದ್ದು ಮಾಡುತ್ತಿದೆ. ಆದರೆ, ಈ ಬಗ್ಗೆ ಚಂದನ್ ಶೆಟ್ಟಿ ಆಗಲಿ, ನಿವೇದಿತಾ ಆಗಲಿ ಇದೂವರೆಗೂ ಅಧಿಕೃತ ಮಾಹಿತಿ ನೀಡಿಲ್ಲ.


Click it and Unblock the Notifications











