"ಅಪ್ಪ ಏನೂ ಬಿಟ್ಟಿಲ್ಲ.. ಮಗ ಏನೂ ಮುಟ್ಟಿಲ್ಲ"; ಮಗನಿಗೆ ವೇದಿಕೆ ಮೇಲೆ ಕೆ.ಮಂಜು ಟಕ್ಕರ್!
ಕನ್ನಡ ಚಿತ್ರರಂಗದ ಹಿರಿಯ ಹಾಗೂ ಅನುಭವಿ ನಿರ್ಮಾಪಕರಲ್ಲಿ ಒಬ್ಬರು ಕೆ.ಮಂಜು. ಇದ್ದಿದ್ದು ಇದ್ದಂಗೆ ಹೇಳುವ ನೇರ ನುಡಿಯ ನಿರ್ಮಾಪಕ ಅಂತಲೇ ಸ್ಯಾಂಡಲ್‌ವುಡ್‌ಗೆ ಇವರು ಚಿರಪರಿಚಿತ. ಸುಮಾರು 45ಕ್ಕೂ ಅಧಿಕ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಡಾ.ವಿಷ್ಣುವರ್ಧನ್ ಅವರಿಂದ ಹಿಡಿದು ಯಶ್‌ವರೆಗೂ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಇಷ್ಟು ದಿನ ಸೂಪರ್‌ಸ್ಟಾರ್‌ಗಳಿಗೆ ಸಿನಿಮಾ ನಿರ್ಮಾಣ ಮಾಡಿದ್ದ ಕೆ.ಮಂಜು ಈಗ ತಮ್ಮ ಪುತ್ರ ಶ್ರೇಯಸ್‌ಗಾಗಿ ಸಿನಿಮಾ ಮಾಡುತ್ತಿದ್ದಾರೆ. ಪುತ್ರ ಶ್ರೇಯಸ್ ಅನ್ನು ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರಿಸಲು ಪಣತೊಟ್ಟಿದ್ದಾರೆ. ಸದ್ಯ ಶ್ರೇಯಸ್ ನಟನೆಯ ವಿಷ್ಣುಪ್ರಿಯ ಸಿನಿಮಾವನ್ನು ಕೆ ಮಂಜು ಅವರೇ ನಿರ್ಮಾಣ ಮಾಡಿದ್ದಾರೆ.

ಇತ್ತೀಚೆಗೆ 'ವಿಷ್ಣುಪ್ರಿಯ' ಸಿನಿಮಾ ಹಾಡೊಂದನ್ನು ರಿಲೀಸ್ ಮಾಡಿದ್ದರು. ಈ ವೇಳೆ ತಮ್ಮ ಪುತ್ರನಿಗೆ ಕೆ.ಮಂಜು ತಮ್ಮದೇ ಸ್ಟೈಲ್‌ನಲ್ಲಿ ಬುದ್ದಿಮಾತುಗಳನ್ನು ಹೇಳಿದ್ದಾರೆ. ವೇದಿಕೆ ಮೇಲೆ ಎಲ್ಲರ ಎದುರು ಹಿಂದೆ ಮುಂದೆ ನೋಡದೆ ಪುತ್ರ ಶ್ರೇಯಸ್ ಬದುಕಿನ ಪಾಠ ಮಾಡಿದ್ದಾರೆ. ಅದರ ಝಲಕ್ ಇಲ್ಲಿದೆ.
"ನಾನು ಆಟೋ ಡ್ರೈವರ್, ಇವತ್ತು ಪ್ರಡ್ಯೂಸರ್"
ಕೆ.ಮಂಜು ಸಿನಿಮಾಗೆ ಕಾಲಿಡುವುದಕ್ಕೂ ಮುನ್ನ ಆಟೋ ಟ್ರೈವರ್ ಆಗಿದ್ದರು. ಅಲ್ಲಿಂದ ಮಗನಿಗೆ ಬದುಕಿನ ಪಾಠ ಹೇಳುವುದಕ್ಕೆ ಶುರುವಿಟ್ಟುಕೊಂಡಿದ್ದರು. "ನನ್ನನ್ನು ಸ್ಟ್ರೈಟ್ ಫಾರ್ವರ್ಡ್ ಅಂತ ಎಲ್ಲರೂ ಬೈತಾರೆ. ಅದಕ್ಕೆಲ್ಲ ನಾನು ಕೇರ್ ಮಾಡೋದಿಲ್ಲ. ನಾನು ಯಾರಿಂದಲೋ ಸಾಲ ತಂದು, ಬಸ್ಕಿ ಹೊಡೆದು ಮಾಡಿದ್ದು ನನ್ನ ಲೈಫ್‌ನಲ್ಲೇ ಇಲ್ಲ. ಒಂದು ಕಾಲದಲ್ಲಿ ನಾನು ಆಟೋ ಡ್ರೈವರ್, ಇವತ್ತು ಪ್ರಡ್ಯೂಸರ್. ನನ್ನನ್ನು ಯಾರೂ ಶೇಕ್ ಮಾಡುವುದಕ್ಕೆ ಆಗುವುದಿಲ್ಲ." ಎಂದು ನಿರ್ಮಾಪಕ ಕೆ.ಮಂಜು ಹೇಳಿದ್ದಾರೆ.
"ಹಳೇ ಲವ್‌ಗಳು ನೆನಪಿಗೆ ಬರುತ್ತವೆ"
ಇದೇ ವೇದಿಕೆ ಮೇಲೆ ಸಿನಿಮಾ ಬಗ್ಗೆ ಹೇಳುವಾಗ, ತಮ್ಮ ಹಳೇ ಲವ್‌ಗಳನ್ನು ನೆನಪಿಸಿಕೊಳ್ಳುವುದನ್ನು ಮರೆಯಲಿಲ್ಲ. "ಈ ಸಿನಿಮಾದ ಪೋಸ್ಟರ್ ನೋಡಿದಾಗ ಮೂರು ನಾಲ್ಕು ಹಳೇ ಲವ್‌ಗಳು ನೆನಪಿಗೆ ಬರುತ್ತವೆ. ನಾನು ಆಟೋ ಓಡಿಸುತ್ತಿದೆ. ಆಟೋ ಡ್ರೈವರ್‌ಗೆ ಹೆಣ್ಣು ಕೊಡುತ್ತಾರಾ ಹೋಗು ಅನ್ನೋರು. ಇವತ್ತು ಎಲ್ಲಾ ಫೋನ್ ಮಾಡ್ತಾರೆ. ನಿನ್ನ ಮದುವೆ ಆಗಿದ್ದರೆ ಚೆನ್ನಾಗಿತ್ತು ಅಂತ. ಇವಾಗಲೂ ಬನ್ನಿ ಅಂತ ಹೇಳ್ತೀನಿ. ಇವತ್ತು ಹೇಳ್ತಾರೆ ಮಂಜು ಅವರೇ ಮಿಸ್ ಮಾಡಿಕೊಂಡ್ವಿ ಅಂತ. ನಾನಂತೂ ಖಾಲಿ ಇದ್ದೀನಿ ಅಂತ ಹೇಳಿದ್ದೀನಿ." ಎಂದು ಕೆ.ಮಂಜು ವೇದಿಕೆ ಮೇಲೆ ಹಾಸ್ಯ ಚಟಾಕಿ ಹಾರಿಸಿದ್ದಾರೆ.

"ಸಿನಿಮಾ ಗೆಲ್ಲಿಸುತ್ತೀನಿ ಅಂದ್ರೆ 25 ಕೋಟಿ ಹಾಕ್ತೀನಿ"
"ಶ್ರೇಯಸ್‌ಗೆ ತುಂಬಾ ಜನ ಫ್ರೆಂಡ್ಸ್ ಇದ್ದಾರೆ. ಏನೋ ನಿಮ್ಮ ಅಪ್ಪ ಕಾಸನ್ನೇ ಖರ್ಚು ಮಾಡುವುದಿಲ್ಲ ಅಂತಾರೆ. ಅವರಿಗೆ ದುಡ್ಡಿನ ಬೆಲೆ ಗೊತ್ತಿಲ್ಲ. ಅವರ ಅಪ್ಪನ ದುಡ್ಡು ಕಳೀಬೇಕು ಅಂತ ಎಷ್ಟೋ ಜನ ಫ್ರೆಂಡ್ಸ್ ಇದ್ದಾರೆ. ನಿಮ್ಮ ಅಪ್ಪನಮ್ಮ 10-15 ಕೋಟಿ ಹಾಕಿಸು ಅಂತಾರೆ. ನಾಳೆ ಬೆಳಗ್ಗೆ 25 ಕೋಟಿ ಖರ್ಚು ಮಾಡ್ತೀನಿ. ನಾಳೆ ಬೆಳಗ್ಗೆ ಸಿನಿಮಾ ಗೆಲ್ಲಿಸುತ್ತೇನೆ ಯಾರಾದರೂ ಬಂದು ಹೇಳಲಿ. ಸಿನಿಮಾ ಗೆದ್ದರೇನೆ ಆಟ. ದುಡ್ಡು ಖರ್ಚು ಮಾಡಿದರೆ ಸಿನಿಮಾ ಅಲ್ಲ." ಎಂದು ನಿರ್ಮಾಪಕ ಕೆ.ಮಂಜು ಹೇಳಿದ್ದಾರೆ.
"ಅಪ್ಪ ಏನೂ ಬಿಟ್ಟಿಲ್ಲ.. ಮಗ ಏನೂ ಮುಟ್ಟಿಲ್ಲ"
"ಇವರ ಅಪ್ಪ ಏನೂ ಬಿಟ್ಟಿಲ್ಲ. ಇವನೂ ಏನೂ ಮುಟ್ಟಿಲ್ಲ. ಏನ್ರೀ ಹೇಳೋಣ. ಆಡು ಮುಟ್ಟದ ಸೊಪ್ಪಿಲ್ಲ ಅವರ ಅಪ್ಪ. ಇವನು ಸೊಪ್ಪು ಬಿಟ್ಟರೆ ಏನೂ ಮುಟ್ಟಿಲ್ಲ. ನಮ್ಮಪ್ಪ ಸಿನಿಮಾ ರಿಲೀಸ್ ಮಾಡಲ್ಲ ಅಂತ ಹೇಳಿಕೊಂಡು ಓಡಾಡುತ್ತಾನೆ. ನನಗೆ ರಿಲೀಸ್ ಮಾಡೋದು ಗೊತ್ತಿದೆ. ಈ ಸಿನಿಮಾ ಗೆದ್ದೇ ಗೆಲ್ಲುತ್ತೆ." ಎಂದು ಕೆ ಮಂಜು ಮಗನಿಗೆ ತಮ್ಮದೇ ಶೈಲಿಯಲ್ಲಿ ಟಕ್ಕರ್ ಕೊಟ್ಟಿದ್ದಾರೆ.


Click it and Unblock the Notifications











