ಸಿನಿಮಾ ಕಾರ್ಮಿಕರ ಹೊಸ ವೇತನ: ಕೆ.ಮಂಜು ಅಧ್ಯಕ್ಷತೆಯ ಸಮಿತಿಯಿಂದ ವಾಣಿಜ್ಯ ಮಂಡಳಿಗೆ ವರದಿ!
ಪ್ರತಿ ಮೂರು ವರ್ಷಗಳಿಗೊಮ್ಮೆ ಸಿನಿಮಾ ಕಾರ್ಮಿಕರ ವೇತನ ಪರಿಷ್ಕರಣೆಯಾಗುತ್ತೆ. ಆದರೆ, ಕೊರೊನಾ ಸಮಯದಿಂದ ವೇತನ ಪರಿಷ್ಕರಣೆಯಾಗಿರಲಿಲ್ಲ. ಹೀಗಾಗಿ ನಿರ್ಮಾಪಕ ಕೆ.ಮಂಜು ಅಧ್ಯಕ್ಷತೆಯಲ್ಲಿ 36ಕ್ಕೂ ಅಧಿಕ ಮಂದಿಯನ್ನು ಒಳಗೊಂಡ ಸಮತಿ ಸಿನಿಮಾ ಕಾರ್ಮಿಕರ ವೇತನ ಪರಿಷ್ಕರಣೆ ಬಗ್ಗೆ ವರದಿ ಸಿದ್ಧಪಡಿಸಿದೆ.
ನಿರ್ಮಾಪಕ ಕೆ ಮಂಜು ಅಧ್ಯಕ್ಷತೆಯ ಈ ಸಮಿತಿ ಆ ವರದಿಯನ್ನು ಈಗಾಗಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘಕ್ಕೆ ಹಸ್ತಾಂತರ ಮಾಡಿದೆ. ಸಮಿತಿ ಸೂಚಿಸಿರುವ ವರದಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘ ಒಪ್ಪಿಗೆ ಸೂಚಿಸಿದೆ.

ಕನ್ನಡ ಚಿತ್ರರಂಗದ ನಿರ್ಮಾಪಕರಿಗೆ ಹೊರೆ ಎನಿಸಿದರೂ ಸಿನಿಮಾ ಕಾರ್ಮಿಕರಿಗೆ ನೆರವಾಗಬೇಕು ಎನ್ನುವ ದೃಷ್ಟಿಯಲ್ಲಿ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲಾಗಿದೆ. ಅಲ್ಲದೆ ಹೊಸ ವೇತನವನ್ನು ಪರಿಷ್ಕರಣೆ ಮಾಡಲಾಗಿದೆ.
"36ಕ್ಕೂ ಹೆಚ್ಚು ನಿರ್ಮಾಪಕರನ್ನು ಒಳಗೊಂಡ ವೇತನ ಪರಿಷ್ಕರಣೆ ಸಮಿತಿಯನ್ನು ನಿರ್ಮಾಪಕ ಕೆ ಮಂಜು ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿತ್ತು. ಮೂರು ತಿಂಗಳ ಕಾಲ ಹಲವು ಹಂತಗಳಲ್ಲಿ ಸಭೆಗಳನ್ನು ನಡೆಸುವ ಜತೆಗೆ ಹಲವರ ಅಭಿಪ್ರಾಯಗಳನ್ನು ಸಂಗ್ರಹಿಸಿ ನೀಡಿರುವ ವೇತನ ಪರಿಷ್ಕರಣಾ ವರದಿ ಅತ್ಯಂತ ಸಮಂಜಸವಾಗಿದೆ. ರಜೆ ಹಾಗೂ ಹಬ್ಬದ ದಿನಗಳಲ್ಲಿ ಕೆಲಸ ಮಾಡಿದರೆ ಸಂಬಳದ (ದಿನದ ವೇತನ) ಜೊತೆಗೆ ಹೆಚ್ಚುವರಿ ಕೆಲಸದ ಬಾಟಾ (ದಿನದ ಕೂಲಿ), ಪ್ರಯಾಣದ ಬಾಟಾ ವೇತನದಲ್ಲಿ ಅರ್ಧ ಮಾತ್ರ ಕಡಿತ ಮಾಡಲಾಗಿದೆ. ಆದರೂ ಪೂರ್ತಿ ಬಾಟಾ ಕೋಡಲೇ ಬೇಕು ಎಂದು ಪಟ್ಟು ಹಿಡಿದಿರುವುದು ಸರಿಯಲ್ಲ.
ನಿರ್ಮಾಪಕರಿಗೆ ಸ್ವಲ್ಪ ಹೊರೆಯಾದರೂ ಈ ಹೊಸ ವೇತನಕ್ಕೆ ಒಪ್ಪಿಕೊಂಡಿದ್ದಾರೆ. ಆದರೂ ಕೆಲವರು ದಿನದ ಬಾಟಾದಲ್ಲಿ ಕಡಿತ ಮಾಡಿದ್ದಾರೆ ಎಂದು ನೆಪ ಒಡ್ಡಿ ಹೊಸ ವೇತನಕ್ಕೆ ವಿರೋಧ ಮಾಡುತ್ತಿದ್ದಾರೆ. ಜತೆಗೆ ಶೂಟಿಂಗ್‌ನಲ್ಲಿರುವ ಸಿನಿಮಾಗಳ ಕೆಲಸಗಳನ್ನು ನಿಲ್ಲಿಸುತ್ತೇವೆ ಎಂದು ಬೆದರಿಸುತ್ತಿದ್ದಾರೆ. ಇದು ಸರಿಯಾದ ನಡೆ ಅಲ್ಲ. ಒಂದು ವೇಳೆ ಈ ಬೆದರಿಕೆ ವರ್ತನೆಗಳು ಮುಂದುವರಿದರೆ ಕಾನೂನು ವ್ಯಾಪ್ತಿಯ ಜೊತೆಗೆ ಚಿತ್ರರಂಗದ ನಿಯಮಗಳ ಪ್ರಕಾರ ನಾವೂ ಕೂಡ ಸೂಕ್ತ ಕ್ರಮ ಕೈಗೊಳ್ಳುತ್ತೇವೆ" ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ ಎಂಎನ್ ಸುರೇಶ್ ಹೇಳಿದ್ದಾರೆ.
"ಕೆ ಮಂಜು ಅವರ ಅಧ್ಯಕ್ಷತೆಯ ವೇತನ ಪರಿಷ್ಕರಣೆ ಸಮಿತಿ ನೀಡಿರುವ ವರದಿಗೆ ನಿರ್ಮಾಪಕರ ಸಂಘದ ಒಪ್ಪಿಗೆ ಇದೆ. ಈಗಿನಿಂದಲೇ ಹೊಸ ವೇತನ ಜಾರಿಯಾಗಲಿದೆ. ಯಾರಾದರೂ ಈ ಹೊಸ ವೇತನವನ್ನು ಉಲ್ಲಂಘಿಸುವುದು ಅಥವಾ ಚಿತ್ರೀಕರಣಕ್ಕೆ ತೊಂದರೆ ಕೊಟ್ಟರೆ ನಿರ್ಮಾಪಕರು ತೆಗೆದುಕೊಳ್ಳುವ ಸ್ವತಂತ್ರ ನಿರ್ಧಾರಗಳಿಂದ ಬರಬಹುದಾದ ಪರಿಣಾಮಗಳನ್ನು ಸಿನಿಮಾ ಕಾರ್ಮಿಕರೇ ಎದುರಿಸಬೇಕಾಗುತ್ತದೆ" ಎಂದು ಕರ್ನಾಟಕ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ತಿಳಿಸಿದ್ದಾರೆ.
"ಮೂರು ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆ ಮಾಡುವುದು ಚಿತ್ರೋದ್ಯಮದ ವಾಡಿಕೆ. ಕೊರೊನಾದಿಂದ ಕಳೆದ ನಾಲ್ಕು ವರ್ಷಗಳಿಂದ ಸಿನಿಮಾ ಕಾರ್ಮಿಕರಿಗೆ ವೇತನ ಪರಿಷ್ಕರಣೆ ಆಗಿಲ್ಲ. ನಿರ್ಮಾಪಕರಿಗೆ ಏನೇ ಕಷ್ಟ ಇದ್ದರೂ ಕಾರ್ಮಿಕರಿಗೆ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಮೂರು ತಿಂಗಳ ಕಾಲ ಕೆಲಸ ಮಾಡಿ 30ಕ್ಕೂ ಹೆಚ್ಚು ಸಭೆ, ಚಿತ್ರರಂಗದ ದಿಗ್ಗಜರ, ಚಿತ್ರೋದ್ಯಮದ ಸಂಘ-ಸಂಸ್ಥೆಗಳ ಅಭಿಪ್ರಾಯಗಳನ್ನು ತೆಗೆದುಕೊಂಡೇ ನಾವು ಹೊಸ ವೇತನ ಪರಿಷ್ಕರಣೆ ಮಾಡಿದ್ದೇವೆ." ಎಂದು ಹೊಸ ವೇತನ ಪರಿಷ್ಕರಣೆ ಸಮಿತಿ ಅಧ್ಯಕ್ಷ ಕೆ ಮಂಜು ಹೇಳಿದ್ದಾರೆ.


Click it and Unblock the Notifications











