10 ಗುಂಟೆ ಜಾಗ ಕೊಡಲು ಒಪ್ಪಿದರೇ ಬಾಲಣ್ಣ ಮೊಮ್ಮಗ? ಕೆ.ಮಂಜು ಬಳಿ ದುಡ್ಡು ಬೇಡ ಎಂದರೇ?
ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿದ್ದ ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಸ್ಮಾರಕವನ್ನು ರಾತ್ರೋ ರಾತ್ರಿ ಕೆಡವಲಾಗಿತ್ತು. ಇದು ಸಾಹಸ ಸಿಂಹ ವಿಷ್ಣುವರ್ಧನ್ ಅವರ ಅಭಿಮಾನಿಗಳ ಆಕ್ರೋಶಕ್ಕೂ ಕಾರಣವಾಗಿತ್ತು. ಹಲವು ವರ್ಷಗಳಿಂದ ವಿಷ್ಣುವರ್ಧನ್ ಅವರ ಅಂತ್ಯ ಸಂಸ್ಕಾರ ಎಲ್ಲಿ ನಡೆದಿದೆಯೋ ಅಲ್ಲಿಯೇ ಸ್ಮಾರಕ ಆಗಬೇಕು ಎಂದು ಅಭಿಮಾನಿಗಳು ಹೋರಾಟ ನಡೆಸುತ್ತಲೇ ಇದ್ದರು. ಆದರೆ, ಸ್ಮಾರಕವನ್ನೇ ಉರುಳಿಸಿದ್ದು ಅವರ ಭಾವನೆಗಳಿಗೆ ಧಕ್ಕೆಯುಟ್ಟು ಮಾಡಿದೆ.
ವಿಷ್ಣುವರ್ಧನ್ ಅಭಿಮಾನಿಗಳ ಸಂಘಟನೆಗಳು ಈ ವಿಚಾರವಾಗಿ ಹೋರಾಟ ಮಾಡುತ್ತಿವೆ. ಆದರೆ, ಎಲ್ಲಾ ವಿಷ್ಣುದಾದನ ಸಂಘಟನೆಗಳು ಒಟ್ಟಿಗೆ ಸೇರಿ ಹೋರಾಟಕ್ಕೆ ಮುಂದಾಗುತ್ತಿಲ್ಲ. ಈಗಲೂ ಕೂಡ ಅದೇ ನಡೆಯುತ್ತಿದೆ. ನಿನ್ನೆ ವೀರಕಪುತ್ರ ಶ್ರೀನಿವಾಸ್ ಪತ್ರಿಕಾಗೋಷ್ಠಿ ನಡೆಸಿ, ಕಿಚ್ಚ ಸುದೀಪ್ ಸ್ಮಾರಕಕ್ಕೆ ಜಾಗ ಖರೀದಿ ಮಾಡಿದ್ದಾರೆಂದು ಹೇಳಿದ್ದರು. ಇಂದು ಕೆ.ಮಂಜು ಜೊತೆ ಮತ್ತೊಂದು ಸಂಘಟನೆಗೆ ಅಧ್ಯಕ್ಷರಾದ ರಾಜು ಗೌಡ ಅವರು ಕಾಣಿಸಿಕೊಂಡಿದ್ದಾರೆ.

ಇತ್ತ ವೇದಿಕೆ ಮೇಲೆ ಭಾವುಕರಾಗಿದ್ದ ಕೆ.ಮಂಜು ಅಭಿಮಾನ್ ಸ್ಟುಡಿಯೋದಲ್ಲಿಯೇ ಸ್ಮಾರಕ ಆಗಬೇಕು ಎಂದು ಮತ್ತೊಮ್ಮೆ ಆಗ್ರಹಿಸಿದ್ದಾರೆ. ಈ ಸಂಬಂಧ ಮತ್ತೆ ಹಿರಿಯ ನಟ ಬಾಲಕೃಷ್ಣ ಅವರ ಮೊಮ್ಮಗ ಕಾರ್ತಿಕ್ ಅವರೊಂದಿಗೆ ಮಾತಾಡಿದ್ದಾಗಿ ಹೇಳಿದ್ದಾರೆ. 10 ಗಂಟೆ ಜಾಗ ಕೊಡುವುದಕ್ಕೆ ಒಪ್ಪಿದ್ದು, ಸಮಯ ಕೇಳಿದ್ದಾರೆಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಈ ಮೂಲಕ ನಿರ್ಮಾಪಕ ಕೆ.ಮಂಜು ಹೇಳಿಕೆ ಅಭಿಮಾನಿಗಳಲ್ಲಿ ಮತ್ತೆ ಗೊಂದಲ ಮೂಡಿಸುವಂತಾಗಿದೆ.
"ಯಾರು ಏನೇ ಹೇಳಬಹುದು. ಅಂತ್ಯಕ್ರಿಯೆ ಆದ ಮಹಾನ್ ಜಾಗದಲ್ಲಿಯೇ ಸ್ಮಾರಕ ಆಗಬೇಕು. ನಾವು ಬೇರೆ ಏನೋ ಮಾಡುತ್ತೇವೆ ಅಂದ್ಕೊಂಡಿದ್ದರೆ ಬೇರೆ ಮಾತು. ನಾವು ಹೇಳುವುದು ಇಷ್ಟೇ. 10 ಕುಂಟೆ ಜಾಗಕೊಡಿ ಎಂದು ಕಾರ್ತಿಕ್ ಹತ್ತಿರ ಹೇಳಿದಾಗ, ನನಗೆ ಒಂದು ವಾರ ಸಮಯ ಕೊಡಿ ಎಂದು ಕೇಳಿದ್ದಾರೆ. ಕಾರ್ತಿಕ್ ಅವರಿಗೆ ನಾನು ಮನವಿ ಮಾಡುತ್ತೇನೆ. ನಮ್ಮ ಹಿಂದೆ ತುಂಬಾನೇ ಜನ ಇದ್ದಾರೆ. ಅಂಬರೀಶ್, ರಾಕ್‌ಲೈನ್ ವೆಂಕಟೇಶ್ ಸೇರಿ ದೊಡ್ಡವರು ತೆಗೆದುಕೊಂಡಿದ್ದ ನಿರ್ಧಾರವಿದು" ಎಂದು ಕೆ.ಮಂಜು ಮನವಿ ಮಾಡಿಕೊಂಡಿದ್ದಾರೆ.
ಇವೇ ವೇಳೆ ಕೆ.ಮಂಜು ಬರೀ ಮಾತಾಡುತ್ತಾರೆ ಎಂದು ಟೀಕಿಸಿದವರಿಗೂ ಟಾಂಗ್ ಕೊಟ್ಟಿದ್ದಾರೆ. "ಯಾರೋ ನನಗೆ ಹೇಳಿದರು. ಮಂಜು ಅವರು ಬರೀ ಮಾತಾಡಿಬಿಡುತ್ತಾರೆ. ಬರೀ ಒಂದು ಕೋಟಿ ಎರಡು ಕೋಟಿ ಕೇಳಿದರು ಅಷ್ಟೇ ಅಂತಾರೆ. ನಾನು ಕೇಳಿದ್ದರ ಹಿಂದೆ ನಮ್ಮ ಚಿತ್ರರಂಗದ ದೊಡ್ಡ ಶಕ್ತಿಗಳು ಇದೆ. ಅವರು ನೀವು ಮುಂದೆ ಹೋಗಿ, ಅವರು ಏನು ಕೇಳುತ್ತಾರೋ ಅದನ್ನು ಕೊಡೋಣ ಅಂತಾನೂ ಹೇಳಿದ್ದಾರೆ. ಅದರಲ್ಲಿ ಕಲಾವಿದರು ಹಾಗೂ ನಿರ್ಮಾಪಕರು ಇದ್ದಾರೆ." ಎಂದು ಕೆ.ಮಂಜು ಹೇಳಿದ್ದಾರೆ.
ಇದೇ ಅಭಿಮಾನಿಗಳು ನಡುವೆ ಒಮ್ಮತವಿಲ್ಲ. ವಿಷ್ಣುವರ್ಧನ್ ಅವರ ಬಗ್ಗೆ ಅಭಿಮಾನವಿದ್ದರೆ ಮಾತಾಡಬಾರದು. ಕಾರ್ತಿಕ್ ಅವರೊಂದಿಗೆ ಮಾತಾಡಿದ್ದು, ಐದು ದಿನಗಳ ಬಳಿಕ ಏನು ನಿರ್ಧಾರ ಅನ್ನೋದು ಗೊತ್ತಾಗುತ್ತೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. "ಇವತ್ತು ಅಭಿಮಾನಿಗಳು ಒಬ್ಬೊಬ್ಬರು ಒಂದೊಂದು ರೀತಿ ಮಾತಾಡುತ್ತಾರೆ. ವಿಷ್ಣುವರ್ಧನ್ ಅವರಿಗೆ ಎಲ್ಲಾ ಚಿತ್ರರಂಗದಲ್ಲೂ ಗೌರವವಿದೆ. ಆ ಗೌರವ ಇದ್ದರೆ ಸುಮ್ಮನೆ ಏನೇನೋ ಮಾತಾಡಬೇಡಿ. ಅಭಿಮಾನ್ ಸ್ಟುಡಿಯೋದ ಕಾರ್ತಿಕ್ ಅವರನ್ನು ಕೇಳಿಕೊಂಡಿದ್ದೀನಿ. ಕಾರ್ತಿಕ್ ಅವರು ಐದು ದಿನ ಸಮಯ ತೆಗೆದುಕೊಂಡಿದ್ದಾರೆ. ನನಗೂ ವಿಷ್ಣು ಸರ್ ಬಗ್ಗೆ ಅಭಿಮಾನವಿದೆ. ನಾನು ಏನೋ ಮಾಡುತ್ತೇನೆ ಎಂದು ಹೇಳಿದ್ದಾರೆ. ನಾವ್ಯಾಕೆ ಇಷ್ಟು ದಿನ ಮುಂದೆ ಬಂದಿಲ್ಲ ಅಂದರೆ, ಈ ಸೇನೆ, ಆ ಸೇನೆ ಅಂತ ಓಡಾಡುತ್ತಿದ್ದಾರೆ. ಆದರೆ, ಒಂದೇ ಸೇನೆ ಇರೋದು. ಅದು ವಿಷ್ಣು ಸೇನೆ" ಎಂದಿದ್ದಾರೆ ಕೆ.ಮಂಜು.
ಇದೇ ವೇಳೆ ಕಾರ್ತಿಕ್ ಹಣ ಎಲ್ಲ ಬೇಡ ಎಂದು ಹೇಳಿದ್ದಾರೆಂದು ಸಂಚಲನ ಸೃಷ್ಟಿಸಿದ್ದಾರೆ. "ಕಾರ್ತಿಕ್‌ಗೆ ದಯವಿಟ್ಟು 10 ಗುಂಟೆ ಜಾಗ ಕೊಡಿ ಎಷ್ಟು ದುಡ್ಡಾಗುತ್ತೋ ಅಷ್ಟು ಕೊಡುತ್ತೇನೆ ಎಂದು ಕೇಳಿಕೊಂಡೆ. ಅದಕ್ಕೆ ಅವರು ದಯವಿಟ್ಟು ದುಡ್ಡು ಬೇಡ ಅಣ್ಣ. ಪ್ರೀತಿಯಿಂದ ಮಾಡಿಕೊಡುತ್ತೇನೆ ಎಂದು ಹೇಳಿದ್ದಾರೆ." ಎಂದು ಕೆ.ಮಂಜು ಹೇಳಿದ್ದು, ಅಭಿಮಾನಿಗಳು ಗೊಂದಲಕ್ಕೆ ಬೀಳುವಂತಾಗಿದೆ.


Click it and Unblock the Notifications











