"ಏಳುಮಲೆಯ ಮಡಿಲಲ್ಲಿ ಎದೆ ನಡುಗಿಸಿದ ಪ್ರೇಮಕಥೆ"; 'ಕಾಟೇರ' ಬಳಿಕ ತರುಣ್ ಸುಧೀರ್ ಹೊಸ ಸಿನಿಮಾ ಘೋಷಣೆ!
'ಕಾಟೇರ' ಸಿನಿಮಾ ಬಳಿಕ ಮದುವೆ ಸಂಭ್ರಮದಲ್ಲಿದ್ದ ತುರುಣ್ ಸುಧೀರ್ ಮತ್ತೆ ಸಿನಿಮಾ ಕೆಲಸಕ್ಕೆ ಮರಳಿದ್ದಾರೆ. 'ಕಾಟೇರ' ಸಿನಿಮಾ ಬಳಿಕ ದರ್ಶನ್‌ಗಾಗಿ ಮತ್ತೊಂದು ಸಿನಿಮಾ ಮಾಡುವ ತಯಾರಿಯಲ್ಲಿ ಇದ್ದರು. ಈ ಮಧ್ಯೆ ಹೊಸ ಸಿನಿಮಾವನ್ನು ತರುಣ್ ಸುಧೀರ್ ಘೋಷಣೆ ಮಾಡಿದ್ದಾರೆ. ವಿವಾಹ ಬಳಿಕ ಅನೌನ್ಸ್ ಮಾಡಿದ ಮೊದಲ ಸಿನಿಮಾವಿದು. ಜಸ್ಟ್ ಸಿನಿಮಾ ಘೋಷಣೆ ಮಾಡಿ ಸಿನಿಪ್ರಿಯರ ಕುತೂಹಲವನ್ನು ಹೆಚ್ಚಿಸಿದ್ದಾರೆ.
ತಮ್ಮ ಸಿನಿಮಾದ ಪೋಸ್ಟರ್ ಅನ್ನು ರಿಲೀಸ್ ಮಾಡಿದ್ದು, "ಏಳುಮಲೆಯ ಮಡಿಲಲ್ಲಿ ಎದೆ ನಡುಗಿಸಿದ ಪ್ರೇಮಕಥೆ" ಎಂದು ಕ್ಯಾಪ್ಟನ್ ಕೊಟ್ಟಿದ್ದಾರೆ. ಹಾಗಂತ ತರುಣ್ ಸುಧೀರ್ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿಲ್ಲ. ಇನ್ನೂ ಟೈಟಲ್ ಅನೌನ್ಸ್ ಮಾಡದ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇವರೊಂದಿಗೆ 'ಕಾಟೇರ' ಸಿನಿಮಾದಲ್ಲಿ ಸಹಾಯಕರಾಗಿ ಕೆಲಸ ಮಾಡಿದ್ದ ಪುನೀತ್ ರಂಗಸ್ವಾಮಿ ಈ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ತರುಣ್ ಸುಧೀರ್ ತಮ್ಮ ಹೊಸ ಸಿನಿಮಾದ ಬಗ್ಗೆ ಫಿಲ್ಮಿಬೀಟ್ ಕನ್ನಡ ಜೊತೆ ಕೆಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ನೈಜ ಘಟನೆಯನ್ನು ಆಧರಿಸಿ ಈ ಸಿನಿಮಾದ ಕಥೆಯನ್ನು ಹೆಣೆಯಲಾಗಿದೆ. ಇನ್ನೂ ಹೆಸರಿಡದ ಈ ಸಿನಿಮಾ ಬಗ್ಗೆ ತರುಣ್ ಸುಧೀರ್ ಹೇಳಿದ್ದೇನು? ಲವ್ ಸ್ಟೋರಿನಾ? ಆಕ್ಷನ್ ಸಿನಿಮಾನಾ? ಯಾವ ಕ್ಯಾಟಗರಿಗೆ ಈ ಸಿನಿಮಾ ಸೇರುತ್ತೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.
ಯಾರಿಗೂ ಗೊತ್ತಿರದ ಪ್ರೇಮಕಥೆ
ಸಿನಿಮಾ ಅನೌನ್ಸ್ ಮಾಡಿ ಅವರೇ ಸುಳಿವು ಕೂಡ ಕೊಟ್ಟಿದ್ದಾರೆ. "ಏಳುಮಲೆಯ ಮಡಿಲಲ್ಲಿ ಎದೆ ನಡುಗಿಸಿದ ಪ್ರೇಮಕಥೆ" ಎಂದು ಹೇಳಿದ್ದಾರೆ. " ಇದು ಎಲ್ಲರಿಗೂ ಗೊತ್ತಿರುವ ನೈಜ ಘಟನೆ. ಆದರೆ, ಈ ಘಟನೆಯ ಹಿಂದೊಂದು ಯಾರಿಗೂ ಗೊತ್ತಿರದ ಪ್ರೇಮಕಥೆಯಿದೆ. ಇದನ್ನು ತೆರೆಮೇಲೆ ತರುವುದಕ್ಕೆ ಹೊರಟಿದ್ದೇವೆ. ಪುನೀತ್ ರಂಗಸ್ವಾಮಿ ಹೇಳಿದ ಈ ಕಥೆ ಇಷ್ಟು ಆಯಿತು. ಹೀಗಾಗಿ ನಿರ್ಮಾಣ ಮಾಡುವುದಕ್ಕೆ ಮುಂದಾಗಿದ್ದೇವೆ" ಎಂದು ತರುಣ್ ಸುಧೀರ್ ಫಿಲ್ಮಿಬೀಟ್ ಕನ್ನಡಕ್ಕೆ ಹೇಳಿದ್ದಾರೆ.
ಕರ್ನಾಟಕ-ತಮಿಳುನಾಡು ಗಡಿಯಲ್ಲಿನ ಕಥೆ
ಈ ಸಿನಿಮಾ ಕತೆ ಕರ್ನಾಟಕ ಹಾಗೂ ತಮಿಳುನಾಡು ಗಡಿ ಭಾಗದಲ್ಲಿ ನಡೆದಿರುವ ನೈಜ ಘಟನೆಯನ್ನು ಆಧರಿಸಿದ ಕಥೆ. ಹೀಗಾಗಿ ಚಾಮರಾಜನಗರ, ಮಲೆಮಹದೇಶ್ವರ ಬೆಟ್ಟ ಸೇರಿದಂತೆ ತಮಿಳುನಾಡಿನ ಗಡಿ ಭಾಗಗಳಲ್ಲಿ ಈ ಸಿನಿಮಾದ ಚಿತ್ರೀಕರಣವನ್ನು ಮಾಡುತ್ತಿದ್ದಾರೆ. ಇದೊಂದು ಎದು ನಡುಗಿಸುವ ಪ್ರೇಮಕಥೆ ಎಂದು ಹೇಳಿರುವುದರಿಂದ ಲವ್ ಸ್ಟೋರಿ ಜೊತೆ ಥ್ರಿಲ್ ಕೂಡ ಇರುತ್ತೆ ಎಂದು ತರುಣ್ ಸುಧೀರ್ ಭರವಸೆ ಕೊಟ್ಟಿದ್ದಾರೆ.

ತೆರೆಮೇಲೆ ಹೊಸ ಜೋಡಿ
ಈ ನೈಜ ಘಟನೆಯನ್ನು ಆಧರಿಸಿದ ಲವ್ ಸ್ಟೋರಿಗೆ ಹೊಸ ಮುಖಗಳೇ ಬೇಕು ಅಂತ ಚಿತ್ರತಂಡ ನಿರ್ಧರಿಸಿದೆ. ಹೀಗಾಗಿ ಶೀಘ್ರದಲ್ಲಿಯೇ ಆ ಜೋಡಿಯನ್ನು ಕನ್ನಡಿಗರಿಗೆ ಪರಿಚಯಿಸಲಿದೆ ಚಿತ್ರತಂಡ. ಹೊಸಬರಿಗಾಗಿ ಅಟ್ಲಾಂಟಾ ನಾಗೇಂದ್ರ ಅವರ ಜೊತೆ ತರುಣ್ ಸುಧೀರ್ ನಿರ್ಮಾಣಕ್ಕೆ ಇಳಿದಿದ್ದಾರೆ. ಸಿನಿಮಾ ಅನೌನ್ಸ್ ಮಾಡಿದ ಪೋಸ್ಟರ್ ಪ್ರೇಕ್ಷಕರನ್ನು ಸೆಳೆಯುತ್ತಿದ್ದು, ಕುತೂಹಲವನ್ನು ಮೂಡಿಸಿದೆ.
ಶೂಟಿಂಗ್ ಯಾವಾಗ?
ಈ ಸಿನಿಮಾವನ್ನು ಡಿಸೆಂಬರ್ 25ರಿಂದ ಶೂಟಿಂಗ್ ಆರಂಭ ಮಾಡುತ್ತಿದೆ ಚಿತ್ರತಂಡ. ಒಂದೇ ಹಂತದಲ್ಲಿಯೇ ಈ ಸಿನಿಮಾದ ಚಿತ್ರೀಕರಣ ನಡೆಯಲಿದೆ. ಆದಷ್ಟು ಬೇಗ ಸಿನಿಮಾವನ್ನು ಬಿಡುಗಡೆ ಮಾಡುವುದಕ್ಕೆ ಟೀಮ್ ನಿರ್ಧರಿಸಿದೆ. ಈಗಾಗಲೇ ಸಂಪೂರ್ಣವಾಗಿ ಚಿತ್ರತಂಡ ರೆಡಿಯಾಗಿದ್ದು, ಆದಷ್ಟು ಬೇಗ ಶೂಟಿಂಗ್ ಮುಗಿಸುವ ಭರವಸೆಯಲ್ಲಿದೆ ಚಿತ್ರತಂಡ. ಇನ್ನೇನು ಕೆಲವೇ ದಿನಗಳಲ್ಲಿ ಸಿನಿಮಾ ನಾಯಕ ಹಾಗೂ ನಾಯಕಿಯನ್ನು ತರುಣ್ ಸುಧೀರ್ ಕನ್ನಡಿಗರಿಗೆ ಪರಿಚಯಿಸಲಿದ್ದಾರೆ.


Click it and Unblock the Notifications











