"ಲೂನಾದಲ್ಲಿ ಓಡಾಡುತ್ತಿರೋನನ್ನ ಲ್ಯಾಂಬೊರ್ಗಿನಿವರೆಗೂ ಕೂರಿಸಿದ್ದಾರೆ, ಇನ್ನೇನು ಬೇಕು"; ದರ್ಶನ್
ರೈತರ ದಿನದ ಅಂಗವಾಗಿ 'ಕಾಟೇರ' ಸಿನಿಮಾದ ಈವೆಂಟ್ ಅನ್ನು ಮಂಡ್ಯದಲ್ಲಿ ಹಮ್ಮಿಕೊಳ್ಳಲಾಗಿತ್ತು. ಅದ್ದೂರಿಯಾಗಿ ನಡೆದ ಈ ಇವೆಂಟ್‌ನಲ್ಲಿ ಕಾಟೇರ ಸಿನಿಮಾದಲ್ಲಿ ನಟಿಸಿದ ಬಹುತೇಕ ಎಲ್ಲಾ ಕಲಾವಿದರು ಭಾಗಿಯಾಗಿದ್ದರು.
ದರ್ಶನ್ ಜೊತೆಗೆ ಸುಮಲತಾ ಅಂಬರೀಶ್, ಶ್ರುತಿ, ಪದ್ಮಾವಾಸಂತಿ, ಅವಿನಾಶ್ ಸೇರಿದಂತೆ ಕನ್ನಡ ಚಿತ್ರರಂಗದ ಹಿರಿಯ ಕಲಾವಿದರು ಭಾಗವಹಿಸಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಕಾಟೇರ' ಸಿನಿಮಾ ಬಗ್ಗೆ, ರೈತರ ಬಗ್ಗೆ ಆಡಿದ ಮಾತಿಗೆ ಮಂಡ್ಯ ಜನತೆ ಶಿಳ್ಳೆಗಳನ್ನು ಹಾಕಿದ್ದಾರೆ.

ಇದೇ ಕಾರ್ಯಕ್ರಮದಲ್ಲಿ ದರ್ಶನ್ ಮತ್ತೆ ನಾನು ಮಾಡೋದು ಕನ್ನಡ ಸಿನಿಮಾ ಅಂತ ಪುನರುಚ್ಚರಿಸಿದ್ದಾರೆ. ಇಷ್ಟೇ ಅಲ್ಲದೆ ಲೂನಾದಲ್ಲಿ ಓಡಾಡುತ್ತಿರೋನನ್ನು ಲ್ಯಾಂಬೊರ್ಗಿನಿವರೆಗೂ ಕರೆದುಕೊಂಡು ಹೋಗಿ ಕೂರಿಸಿದ್ದಾರೆ. ಇದಕ್ಕಿಂತ ಇನ್ನೇನು ಬೇಕು ಎಂದು ಹೇಳಿದ್ದಾರೆ. ಮಂಡ್ಯ ಇವೆಂಟ್‌ನಲ್ಲಿ ದರ್ಶನ್ ಮಾತಿನ ಝಲಕ್ ಇಲ್ಲಿದೆ.
"ಸಿನಿಮಾದಲ್ಲಿ ಕೆಲಸ ಮಾಡಿರೋ ಪ್ರತಿಯೊಬ್ಬ ಕಲಾವಿದನಿಂದ ಹಿಡಿದು ತಂತ್ರಜ್ಞ ಪ್ರತಿಯೊಬ್ಬರ ಶ್ರಮ ಇಲ್ಲಿದೆ. ಇದು ಯಾವುದೇ ಆಡಂಬರದ ಸಿನಿಮಾ ಅಲ್ಲ. ಈಗಲೇ ಹೇಳಿಬಿಡುತ್ತೇನೆ. ಇವತ್ತು ನಾವು ಕೇಳುವುದಕ್ಕೆ ಬಂದಿರೋದು ಇಷ್ಟೇನೆ. ನಾನು ಅವತ್ತು ಹೇಳ್ತಿರೋದು. ಇವತ್ತು ಹೇಳ್ತಿರೋದು ಅದೇನೆ. ಈ ಹಸಿರು ಶಾಲ್‌ಗೆ ಎಷ್ಟು ಪವರ್ ಇದೆ ಅಂತ ತೋರಿಸುವುದಕ್ಕೆ ಬಂದಿರೋದು." ಎಂದು ವೇದಿಕೆ ದರ್ಶನ್ ಹೇಳಿದ್ದಾರೆ.
ಇದೇ ವೇದಿಕೆ ಮೇಲೆ ರೈತರಿಗೆ ದರ್ಶನ್ ಸಲಹೆ ಕೂಡ ನೀಡಿದ್ದಾರೆ. ಜಮೀನನ್ನು ಮಾರಿಕೊಳ್ಳಬೇಡಿ ಎಂದಿದ್ದಾರೆ. "ಇವತ್ತು ರೈತರ ದಿನಾಚರಣೆ. ಇವತ್ತು ಹೇಳ್ತೀನಿ ರೈತರನ್ನು ಅಯ್ಯೋ ಪಾಪ ಅಂತ ಹೇಳಬೇಡಿ. ಅವರಿಗೆ ಸಿಂಪತಿ ಬೇಕಾಗಿಲ್ಲ. ನ್ಯಾಯವಾದ ಬೆಲೆ ಕೊಟ್ಟುಬಿಟ್ಟರೆ ಸಾಕು. ರೈತ ಎಷ್ಟು ಮುಖ್ಯ ಆಗ್ತಾನೆ ಅಂದರೆ, ಇವತ್ತು ಯಾರೆಲ್ಲ ಜಾಗ ಹಿಡಿದುಕೊಂಡಿದ್ದೀರ. ಅದಕ್ಕೆ ಇವತ್ತು ಕೋಟಿಗಟ್ಟಲೆ ಬೆಲೆ ಬಂದಿದೆ. ದಯವಿಟ್ಟು ಮಾರಿಕೊಳ್ಳುವುದಕ್ಕೆ ಹೋಗಬೇಡಿ. ಇವತ್ತು ಜಾಗಗಳನ್ನು ಮಾರಿಕೊಂಡರೆ, ನಾಳೆ ಜಾಗಗಳು ಸಿಗೋದಿಲ್ಲ ಅಣ್ಣ. ಅಕ್ಕಿ ಬೆಳೆಯೋಕೆ ಅಲ್ಲ. ಗೆಡ್ಡೆ ಗೆಣಸು ಬೆಳೆಯುವುದಕ್ಕೂ ಜಾಗ ಇರೋದಿಲ್ಲ." ಎಂದಿದ್ದಾರೆ.
ಇದೇ ಸಂದರ್ಭದಲ್ಲಿ ಎಲ್ಲಿವರೆಗೂ ನಿಮ್ಮನ್ನು ರಂಜಿಸುವುದಕ್ಕೆ ಆಗುತ್ತೋ ಅಲ್ಲಿವರೆಗೂ ನಟನೆ ಮಾಡುತ್ತೇನೆ ಎಂದು ಹೇಳಿದ್ದಾರೆ. "ಆಯ್ತು 56 ಸಿನಿಮಾ ಆಯ್ತು. ನಮಗೂ ವಯಸ್ಸು ಆಗುತ್ತಿದೆ. ಹೌದು ಒಪ್ಪಿಕೊಳ್ಳೋಣ. ನನಗೆ 47 ವರ್ಷ ಆಗೋಯ್ತು. ಇವತ್ತು ನಮ್ಮ ಚಿತ್ರರಂಗದ ದೊಡ್ಡ ದೊಡ್ಡ ಕಲಾವಿದರು. ನಮ್ಮ ಹೀರೊಗಳು, ನಮ್ಮ ಕನ್ನಡ ಚಿತ್ರರಂಗದ ಹೀರೊಗಳು ಇಲ್ಲಿಗೆ ಬಂದು ಹಾರೈಸಿದ್ದಕ್ಕೆ ಚಿರಋಣಿ ಅಂತ ಹೇಳ್ತೀನಿ. ಅಷ್ಟು ಅಲ್ಲದೆ ಇಡೀ ಮಂಡ್ಯ ಜನತೆಗೆ ಒಂದೇ ಮಾತು. ಇದು ರಾಜಕೀಯವಾಗಿ ಅಲ್ಲ ಬೇಜಾರು ಮಾಡಿಕೊಳ್ಳಬೇಡಿ. ಚಿತ್ರರಂಗದಲ್ಲಿ ಅಲ್ಲ. ಯಾರೇ ಏನೇ ಹೇಳಿದರೂ ಕೂಡ ನಾವು ಕೋಪ ಮಾಡಿಕೊಳ್ಳಲ್ಲ. ಬೇಜಾರು ಮಾಡಿಕೊಳ್ಳಲ್ಲ. ನೊಂದುಕೊಳ್ಳಲ್ಲ. ಸಿನಿಮಾ ಅಷ್ಟೇ ಮಾಡುತ್ತೇವೆ." ಎಂದು ಪಂಚ್ ಡೈಲಾಗ್ ಬಿಟ್ಟಿದ್ದಾರೆ.
"ಅದು ಅಪ್ಪಟ ಕನ್ನಡ ಸಿನಿಮಾ ಅಷ್ಟೇನೆ ನಾನು ಮಾಡೋದು. ಸಾಕು ಚೆನ್ನಾಗಿದ್ದೀನಿ. ತುಂಬಾ ಹೆಮ್ಮೆಯಿಂದ ಹೇಳುತ್ತೇನೆ. ಒಬ್ಬ ಲೂನಾದಲ್ಲಿ ಓಡಾಡುತ್ತಿರೋನನ್ನ ಲ್ಯಾಂಬೊರ್ಗಿನಿವರೆಗೂ ಕೂರಿಸಿದ್ದಾರೆ. ಇದಕ್ಕಿಂತ ಇನ್ನೇನು ಬೇಕು. ಹೊರಗಡೆ ಹೋದ ತಕ್ಷಣ ಏನು ಚಾಪರ್ ಕೊಡ್ತಾರಾ? ಅಲ್ಲಿ ಕೊಡೋದು ಅದನ್ನೇ." ಎಂದು ಕನ್ನಡ ಸಿನಿಮಾ ಮಾತ್ರ ಮಾಡುತ್ತೇನೆ ಎಂದು ದರ್ಶನ್ ಹೇಳಿದ್ದಾರೆ.


Click it and Unblock the Notifications











