ಹಠ ಬಿಡದ ಕಮಲ್.. ಪಟ್ಟು ಬಿಡದ ಕನ್ನಡಿಗರು.. ಅಡಕತ್ತರಿಯಲ್ಲಿ 'ಥಗ್ ಲೈಫ್'; ಮುಂದೇನು?
ಕನ್ನಡ ಭಾಷೆಯ ಬಗ್ಗೆ ತಮಿಳು ನಟ ಕಮಲ್ ಹಾಸನ್ ವಿವಾದಾತ್ಮಕ ಹೇಳಿಕೆ ಬಗ್ಗೆ ಪರ, ವಿರೋಧ ಚರ್ಚೆ ಮುಂದುವರೆದಿದೆ. ಕಮಲ್ ಹಾಸನ್ ಈ ಬಗ್ಗೆ ಸ್ಪಷ್ಟನೆ ಕೊಡುವ ಪ್ರಯತ್ನ ಮಾಡಿದ್ದಾರೆ. ಶಿವರಾಜ್‌ಕುಮಾರ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಆದರೆ ಕಮಲ್ ಕ್ಷಮೆ ಕೇಳಲೇಬೇಕು ಎಂದು ಕನ್ನಡಪರ ಸಂಘಟನೆಗಳು ಪಟ್ಟು ಹಿಡಿದಿವೆ.
ಕಮಲ್ ಹಾಸನ್ ಹಾಗೂ ಶಿವಣ್ಣನ ಸ್ಪಷ್ಟನೆಗೆ ಕನ್ನಡ ಪರ ಸಂಘಟನೆಗಳು ಒಪ್ಪುತ್ತಿಲ್ಲ. ಕಮಲ್ ಹಾಸನ್ ಕ್ಷಮೆ ಕೇಳದ ಹೊರತು ಅವರ 'ಥಗ್ ಲೈಫ್' ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಮತ್ತೆ ಎಚ್ಚರಿಕೆ ಕೊಟ್ಟಿದ್ದಾರೆ. ಹಾಗಾಗಿ ವಿವಾದ ತಣ್ಣಗಾಗುವ ಸುಳಿವು ಸಿಗುತ್ತಿಲ್ಲ. ಈಗಾಗಲೇ ಕನ್ನಡ ಚಿತ್ರರಂಗದ ಗಣ್ಯರು ಈ ಬಗ್ಗೆ ಮಾತನಾಡುತ್ತಿದ್ದಾರೆ. ಕಮಲ್ ಹಾಸನ್ ಹೇಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ.

ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್, ಬರಗೂರು ರಾಮಚಂದ್ರಪ್ಪ, ಟಿ. ಎಸ್ ನಾಗಾಭರಣ, ನಟರಾದ ಜಗ್ಗೇಶ್, ಚೇತನ್ ಅಹಿಂಸಾ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಕಮಲ್ ಹಾಸನ್ ಭಾಷೆಗಳ ಇತಿಹಾಸದ ಬಗ್ಗೆ ತಿಳಿದುಕೊಂಡಿಲ್ಲ. ಸುಮ್ಮನೆ ಮಾತನಾಡಬೇಕು ಎಂದು ಮಾತನಾಡಿದ್ದಾರೆ. ಅವರ ಹೇಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ. ಕನ್ನಡ ಭಾಷೆ ಹುಟ್ಟಿದ್ದು ತಮಿಳಿನಿಂದ ಅಲ್ಲ ಎಂದು ಒತ್ತಿ ಹೇಳುತ್ತಿದ್ದಾರೆ.
ಕನ್ನಡ ಪರ ಸಂಘಟನೆಗಳು ತಮ್ಮ ಪ್ರತಿಭಟನೆ ಮುಂದುವರೆಸಿವೆ. ಇಂದು(ಮೇ 29) ಕೂಡ ಕರವೇ ಕಾರ್ಯಕರ್ತರು ಫಿಲ್ಮ್ ಚೇಂಬರ್ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಕಮಲ್ ಹಾಸನ್ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಆಕ್ರೋಶ ಹೊರ ಹಾಕಿದ್ದಾರೆ. ಕಮಲ್ ತಮ್ಮ ಹೇಳಿಕೆ ಹಿಂಪಡೆಯಬೇಕು, ಕ್ಷಮೆ ಕೇಳಲೇಬೇಕು ಎಂದು ಆಗ್ರಹಿಸಿದ್ದಾರೆ.

ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡಿರುವ ಕಮಲ್ ಹಾಸನ್ "ಪ್ರೀತಿಯಿಂದ ಹೇಳಿದ್ದಕ್ಕೆ ನಾನು ಕ್ಷಮೆ ಕೇಳುವುದಿಲ್ಲ. ರಾಜಕೀಯ ಮುಖಂಡರು ಭಾಷೆಯ ಬಗ್ಗೆ ಮಾತಾಡುವುದಕ್ಕೆ ಯೋಗ್ಯರಲ್ಲ. ಅದರಲ್ಲಿ ನಾನೂ ಕೂಡ ಸೇರಿಕೊಂಡಿದ್ದೇನೆ. ತಮಿಳುನಾಡು ತುಂಬಾನೇ ಅಪರೂಪದ ರಾಜ್ಯ. ಇಲ್ಲಿ ಮೆನನ್ ಮುಖ್ಯಮಂತ್ರಿಯಾಗಿದ್ದಾರೆ, ರೆಡ್ಡಿ ಸಿಎಂ ಆಗಿದ್ದಾರೆ. ಕನ್ನಡಿಗ ಕೂಡ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಚೆನ್ನೈನಲ್ಲಿ ನಾನು ಸಮಸ್ಯೆಗೆ ಸಿಕ್ಕಿಕೊಂಡಾಗ ಕರ್ನಾಟಕ ನನ್ನ ಪರವಾಗಿ ನಿಂತಿತ್ತು" ಎಂದಿದ್ದಾರೆ.
ತಮಿಳಿನಿಂದ ಹುಟ್ಟಿದ್ದು ಕನ್ನಡ ಎಂದು ಕಮಲ್ ಹಾಸನ್ ಹೇಳಿಕೆ ಕೊಟ್ಟಾಗ ಶಿವಣ್ಣ ಕೂಡ ಎದುರಿಗೆ ಕೂತಿದ್ದರು. ಅವರು ಯಾಕೆ ಮಾತನಾಡಲಿಲ್ಲ ಎಂದು ಕೆಲವರು ಕೇಳಿದ್ದರು. ಕಾರ್ಯಕ್ರಮವೊಂದರಲ್ಲಿ ಭಾಗಿ ಆಗಿದ್ದ ಶಿವಣ್ಣ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ಕಮಲ್ ಹಾಸನ್ ಕೂಡ ಕನ್ನಡಕ್ಕೆ ಗೌರವ ಕೊಡುತ್ತಾರೆ. ನಮ್ಮ ಫ್ಯಾಮಿಲಿ ಬಗ್ಗೆಯೂ ಗೌರವ ಇದೆ. ನಾವು ಅವರನ್ನು ನೋಡಿ ಬೆಳೆದವರು, ನಾನು ಅವರ ಅಭಿಮಾನಿ. ಕಂಡಿತ ಈ ವಿಚಾರವನ್ನು ಹೇಗೆ ಸರಿಪಡಿಸಿಕೊಳ್ಳಬೇಕೋ ಅವ್ರು ಸರಿಪಡಿಸಿಕೊಳ್ಳುತ್ತಾರೆ. ನಮ್ಮನ್ನು ಕಾರ್ಯಕ್ರಮಕ್ಕೆ ಕರೆದಾಗ ಗೌರವದಿಂದ ಹೋಗಿದ್ದೇನೆ. ಅದು ಏನಾಯ್ತೋ ನಮಗೂ ಗೊತ್ತಿಲ್ಲ. ಕನ್ನಡಕ್ಕಾಗಿ ನಾವು ಹೋರಾಡುತ್ತೇವೆ, ಬೇಕಿದ್ದರೆ ಸಾಯುತ್ತೇವೆ" ಎಂದು ನಟ ಶಿವರಾಜ್‌ಕುಮಾರ್ ಹೇಳಿದ್ದಾರೆ.
ಕಮಲ್ ಹಾಸನ್ ನಟನೆಯ 'ಥಗ್ ಲೈಫ್' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಗೆ ಸಜ್ಜಾಗಿದೆ. ಹಿಂದಿ ಹಾಗೂ ತೆಲುಗಿಗೆ ಸಿನಿಮಾ ಡಬ್ ಆಗಿದೆ. ಕನ್ನಡಕ್ಕೆ ಡಬ್ ಆಗಿಲ್ಲ. ಮಣಿರತ್ನಂ ನಿರ್ದೇಶನದ ಸಿನಿಮಾ ಆಗಿರುವುದರಿಂದ ಬಹಳ ನಿರೀಕ್ಷೆಯಿದೆ. ಮುಂದಿನ ವಾರವೇ ಸಿನಿಮಾ ತೆರೆಗೆ ಬರಬೇಕಿದೆ. ಈಗಾಗಲೇ ಸಿನಿಮಾ ಪ್ರಚಾರ ಜೋರಾಗಿ ನಡೀತಿದೆ. ಕರ್ನಾಟಕದಲ್ಲಿ ಕೂಡ ಕಮಲ್ ಹಾಸನ್ ಸಿನಿಮಾಗಳು ಒಳ್ಳೆ ಗಳಿಕೆ ಮಾಡುತ್ತವೆ. ಇದೀಗ ವಿವಾದದಿಂದ ರಾಜ್ಯದಲ್ಲಿ ಸಿನಿಮಾ ಬಿಡುಗಡೆಗೆ ಅಡ್ಡಿ ಏರ್ಪಡುವ ಸುಳಿವು ಸಿಗುತ್ತಿದೆ.
ಇನ್ನು ವಿವಾದದ ಬಗ್ಗೆ ಖ್ಯಾತ ನಿರ್ದೇಶಕ ಬರಗೂರು ರಾಮಚಂದ್ರಪ್ಪ ಹೇಳಿಕೆ ನೀಡಿದ್ದಾರೆ. "ಕಮಲಹಾಸನ್ ಅವರು ಕನ್ನಡ ಭಾಷೆಯು ತಮಿಳು ಭಾಷೆಯಿಂದ ಹುಟ್ಟಿದೆ ಎಂದು ಹೇಳಿರುವುದು ಅಸಂಬದ್ಧ. ಕನ್ನಡ ಭಾಷೆಯು ಕ್ರಿಸ್ತ ಪೂರ್ವ ಮೂರನೇ ಶತಮಾನದಲ್ಲೇ ಬಳಕೆಯಲ್ಲಿ ಇತ್ತು ಎಂದು ಕೆಲವು ಸಂಶೋಧಕರು ಹೇಳಿದ್ದಾರೆ. ಯಾವುದೇ ಕಾರಣಕ್ಕೂ ತಮಿಳು ಭಾಷೆಯಿಂದ ಕನ್ನಡ ಹುಟ್ಟಿಲ್ಲ. ಅಧ್ಯಯನವಿಲ್ಲದ ಬೀಸು ಹೇಳಿಕೆಗಳನ್ನು ಕೊಡುವುದು ತಪ್ಪು. ಇಂತಹ ಹೇಳಿಕೆಗಳಿಂದ ಭಾಷಿಕರ ನಡುವೆ ವೈಷಮ್ಯ ಹುಟ್ಟಿಸುವುದು ಕಮಲ ಹಾಸನ್ ಅವರಿಗೆ ಶೋಭೆ ತರುವುದಿಲ್ಲ. ಇದು ಖಂಡನೀಯ. ಅವರು ತಪ್ಪನ್ನು ಒಪ್ಪಿಕೊಳ್ಳಬೇಕು. ಕನ್ನಡವು ತಮಿಳು ಮೂಲವೂ ಅಲ್ಲ ಸಂಸ್ಕೃತ ಮೂಲವೂ ಅಲ್ಲ. ಸ್ವತಂತ್ರ ದ್ರಾವಿಡ ಭಾಷೆ ಎನ್ನುವುದು ಭಾಷಾ ವಿಜ್ಞಾನಿಗಳ ಸ್ಪಷ್ಟ ಅಭಿಪ್ರಾಯ" ಎಂದಿದ್ದಾರೆ.
ಹಿರಿಯ ನಟ ಅಶೋಕ್ ಕೂಡ ಕಮಲ್ ಹಾಸನ್ ಹೇಳಿಕೆ ತಪ್ಪು ಎಂದಿದ್ದಾರೆ. ಫಿಲ್ಮಿಬೀಟ್ ಕನ್ನಡ ಜೊತೆ ಈ ಬಗ್ಗೆ ಅವರು ಪ್ರತಿಕ್ರಿಯಿಸಿದ್ದಾರೆ. "ಕಮಲ್ ಹಾಸನ್ ಭಾಷಾ ಪಂಡಿತರಲ್ಲ. ಅವ್ರಿಗೆ ಈ ವಿಷಯ ಏನು ಗೊತ್ತು. ಅವ್ರು ಸಿನಿಮಾಗೆ ಸಂಬಂಧಪಟ್ಟಂತೆ ಮಾತನಾಡಬೇಕು. ಭಾಷೆಗೆ ಸಂಬಂಧಿಸಿದಂತೆ ಅಲ್ಲ. ಇದೆಲ್ಲಾ ಸೂಕ್ಷ್ಮ ವಿಚಾರಗಳು, ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ತಿಳಿದುಕೊಂಡು ಮಾತನಾಡಬೇಕು, ಕಮಲ್ ಹೇಳಿಕೆ ತಪ್ಪು. ಅವರದ್ದು ಹಠಮಾರಿ ಗುಣ, ಎದುರಿಸಲಿ ಬಿಡಿ" ಎಂದು ಹೇಳಿದ್ದಾರೆ.


Click it and Unblock the Notifications











