ಕನ್ನಡಿಗರ ಬಗ್ಗೆ ನಾಲಿಗೆ ಹರಿಬಿಟ್ಟು ಬಳಿಕ ಕ್ಷಮೆ ಕೇಳದೇ ನಾಟಕವಾಡಿದ್ದರು ರಜನಿಕಾಂತ್, ಸತ್ಯರಾಜ್!

ಕನ್ನಡ ಭಾಷೆಯ ಬಗ್ಗೆ ತಮಿಳು ನಟ ಕಮಲ್ ಹಾಸನ್ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಆದರೆ ನಾನು ತಪ್ಪು ಮಾಡಿಲ್ಲ, ಕ್ಷಮೆ ಕೇಳಲ್ಲ ಎಂದು ಅವರು ಪದೇ ಪದೆ ಹೇಳುತ್ತಿದ್ದಾರೆ. ಹೇಳಿಕೆ ವಾಪಸ್ ಪಡೆಯದಿದ್ದರೆ ನಿಮ್ಮ ಸಿನಿಮಾಗಳು ಕರ್ನಾಟಕದಲ್ಲಿ ಬಿಡುಗಡೆಯಾಗಲು ಬಿಡಲ್ಲ ಎಂದು ಕನ್ನಡಪರ ಸಂಘಟನೆಗಳು ಎಚ್ಚರಿಕೆ ಕೊಟ್ಟಿವೆ.

ಕಮಲ್ ಹಾಸನ್ ನಟನೆಯ 'ಥಗ್ ಲೈಫ್' ಸಿನಿಮಾ ಮುಂದಿನ ವಾರ ಬಿಡುಗಡೆ ಆಗಬೇಕಿದೆ. ಇಂತಹ ಹೊತ್ತಲ್ಲೇ ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದ್ದು ಎನ್ನುವ ಅವರ ಹೇಳಿಕೆ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ನನ್ನ ಸಿನಿಮಾಗಳನ್ನು ಬ್ಯಾನ್ ಮಾಡಿದರೂ ಪರವಾಗಿಲ್ಲ, ನಾನು ಕ್ಷಮೆ ಕೇಳುವುದಿಲ್ಲ ಎನ್ನುವ ಧಾಟಿಯಲ್ಲಿ ಕಮಲ್ ಮತ್ತೊಮ್ಮೆ ಹೇಳಿಕೆ ನೀಡಿದ್ದಾರೆ. ಕನ್ನಡಿಗರು ಮಾತ್ರ ಪಟ್ಟು ಬಿಡಲು ಸಿದ್ಧರಿಲ್ಲ.

Kamal Haasan kannada row Rajinikanth Sathyaraj s Apology Episodes Resurface

ಕಮಲ್ ಹಾಸನ್ ಮಾತ್ರವಲ್ಲ ಈ ಹಿಂದೆ ಕನ್ನಡಿಗರ ಬಗ್ಗೆ ತಮಿಳು ನಟರಾದ ರಜನಿಕಾಂತ್, ಸತ್ಯರಾಜ್ ಕೂಡ ನಾಲಿಗೆ ಹರಿಬಿಟ್ಟಿದ್ದರು. ರಾಜ್ಯದಲ್ಲಿ ಆಕ್ರೋಶ ಹೆಚ್ಚಾದ ಬಳಿಕ ಎಚ್ಚೆತ್ತುಕೊಂಡು ಕ್ಷಮೆ ಕೇಳಿದ್ದರು. ಆದರೆ ಕಮಲ್ ಹಾಸನ್ ತಮ್ಮ ಹೇಳಿಕೆ ವಾಪಸ್ ಪಡೆಯುವುದಿಲ್ಲ ಎನ್ನುವ ನಡೆಯನ್ನು ತಮಿಳರು ಬೆಂಬಲಿಸುತ್ತಿದ್ದಾರೆ. ನಿಮ್ಮ ನಡೆ ಸರಿಯಿದೆ. ನಿಮ್ಮ ಜೊತೆ ನಾವಿದ್ದೇವೆ ಎಂದು ಹೇಳುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಮಾಡುತ್ತಿದ್ದಾರೆ.

ಹೀಗೆ ಕನ್ನಡಿಗರನ್ನು ಕೆಣಕಿರುವವರಲ್ಲಿ ಕಮಲ್ ಮೊದಲಿಗರಲ್ಲ. "ಭಾರತದ ಕೊನೆಯ ಗೌವರ್ನರ್ ಸಿ. ರಾಜಗೋಪಾಲಾಚಾರಿ ಕೂಡ ತಮಿಳು ಎಲ್ಲಾ ದ್ರಾವಿಡ ಭಾಷೆಗಳ ತಾಯಿ ಎಂದು ಒಂದು ಕಡೆ ಬರೆದಿದ್ದರು. ಬಳಿಕ ಕರ್ನಾಟಕದಲ್ಲಿ ಈ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು. ಆಧಾರ ಕೇಳಿದಾಗ ಕೊಡಲು ಸಾಧ್ಯವಾಗಲಿಲ್ಲ, ಆದರೂ ಮೊಂಡುವಾದ ಮುಂದುವರೆಸಿದ್ದರು. ಕನ್ನಡಿಗರು ರೊಚ್ಚಿಗೆದ್ದ ಬಳಿಕ ತಮ್ಮ ಹೇಳಿಕೆ ವಾಪಸ್ ಪಡೆದಿದ್ದರು" ಎಂದು ಧರ್ಮೇಂದ್ರ ಕುಮಾರ್ ಅರೇನಹಳ್ಳಿ ನೆನಪಿಸಿದ್ದಾರೆ.

ಈ ಹಿಂದೆ ಹೊಗೇನಕಲ್ ನದಿ ನೀರಿನ ವಿಚಾರದಲ್ಲಿ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಭಾರೀ ಗಲಾಟೆ ನಡೆದಿತ್ತು. ತಮಿಳುನಾಡಿನ ಪರ ಸಿನಿಮಾ ತಾರೆಯರು ಬೀದಿಗಿಳಿದಿದ್ದರು. ಉಪವಾಸ ಸತ್ಯಾಗ್ರಹ ಮಾಡಿದ್ದರು. ಈ ವೇಳೆ ನಟ ರಜನಿಕಾಂತ್ ರೋಷಾವೇಶವಾಗಿ ಮಾತನಾಡಿದ್ದರು. ಈ ವೇಳೆ ಕರ್ನಾಟಕದಲ್ಲಿ ಗಲಾಟೆ ಮಾಡುವವರನ್ನು ಒದೆಯಬೇಕು(ಕನ್ನಡಿಗರನ್ನು) ಎಂದು ರಜನಿಕಾಂತ್ ಹೇಳಿಕೆ ಕೊಟ್ಟಿದ್ದರು. ಇದಕ್ಕೆ ಆಕ್ರೋಶ ವ್ಯಕ್ತವಾಗಿ ರಜನಿಕಾಂತ್ ನಟನೆಯ 'ಕುಚೇಲನ್' ಸಿನಿಮಾ ಬಿಡುಗಡೆಗೆ ಸಂಕಷ್ಟ ಎದುರಾಗಿತ್ತು. ಕನ್ನಡ ಪರ ಸಂಘಟನೆಗಳು ಸಿನಿಮಾ ಬಿಡುಗಡೆಗೆ ವಿರೋಧಿಸಿದ್ದವು. ಆಗ ರಜನಿಕಾಂತ್ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದರು. ಮತ್ತೆ ಅಂತಹ ತಪ್ಪು ಆಗುವುದಿಲ್ಲ ಎಂದಿದ್ದರು.

ಅಂದು ವೀಡಿಯೋ ಮಾಡಿ ಮಾತನಾಡಿದ್ದ ರಜನಿಕಾಂತ್ "ನಾನು ಎಲ್ಲಾ ಕನ್ನಡಿಗರನ್ನು ಒದೆಯಬೇಕು ಎನ್ನಲಿಲ್ಲ, ಯಾರು ಗಲಾಟೆ ಮಾಡುತ್ತಾರೆ, ಬಸ್, ಗಾಡಿಗೆ ಕಲ್ಲು ಹೊಡೆಯುತ್ತಾರೆ, ಬೆಂಕಿ ಹಚ್ಚುತ್ತಾರೆ ಅಂತಹವರಿಗೆ ಹೇಳಿದ್ದು. ಅವರು ನಿಜವಾದ ಹೋರಾಟಗಾರರಲ್ಲ, ನಾನು ನೋಡಿದ್ದೇನೆ. ನಾನು ಆ ಮಾತು ಹೇಳಿದ್ದು ಕನ್ನಡ ಹೋರಾಟಗಾರಿಗೆ ಅಲ್ಲ. ನಾನು ರಾಜಕಾರಣಿ ಅಲ್ಲ, ಮಾತುಗಾರನಲ್ಲ. ಏನೋ ಮಾತನಾಡುವಾಗ ತಪ್ಪಾಗಿದೆ. ಮತ್ತೆ ಆ ತಪ್ಪು ಆಗಬಾರದು ಎಂದಿದ್ದರು.

ರಜನಿಕಾಂತ್ ಪರೋಕ್ಷವಾಗಿ ಆದರೂ ಕ್ಷಮೆ ಕೇಳಿದ್ದಾರೆ ಎಂದು ಕನ್ನಡಗರು 'ಕುಚೇಲನ್' ಸಿನಿಮಾ ಬಿಡುಗಡೆಗೆ ಅವಕಾಶ ಮಾಡಿಕೊಟ್ಟಿದ್ದರು. ರಜನಿಕಾಂತ್ ಕ್ಷಮೆ ಕೇಳಿದ್ದಾರೆ ಎಂದು ತಮಿಳುನಾಡಿನಲ್ಲಿ ಅಭಿಮಾನಿಗಳು ಗರಂ ಆಗಿದ್ದರು. ಚಿತ್ರಮಂದಿರಗಳ ಮುಂದೆ ಹಾಕಿದ್ದ 'ಕುಚೇಲನ್' ಚಿತ್ರದ ಫ್ಲೆಕ್ಸ್, ಬ್ಯಾನರ್ ಹರಿದು ಹಾಕಿದ್ದರು. ಬಳಿಕ ಎಚ್ಚೆತ್ತುಕೊಂಡಿದ್ದ ರಜನಿಕಾಂತ್ ಉಲ್ಟಾ ಹೊಡೆದಿದ್ದರು. ನನಗೆ ಅಹಂಕಾರ ಇಲ್ಲ, ನಾನು ಕಂಡೆಕ್ಟರ್ ಜೀವನವನ್ನು ಮರೆತ್ತಿಲ್ಲ. ಇನ್ನು ಮುಂದೆ ಯಾರ ಮನಸ್ಸಿಗೂ ನೋವಾಗದಂತೆ ಮಾತನಾಡುತ್ತೇನೆ. ಕನ್ನಡಿಗರು ನನಗೆ ದೊಡ್ಡ ಪಾಠ ಕಲಿಸಿದ್ದೀರಾ, ಇದನ್ನು ಮರೆಯುವುದಿಲ್ಲ, ಕುಚೇಲನ್ ಸಿನಿಮಾ ಬಿಡುಗಡೆಗೆ ಅನುವು ಮಾಡಿಕೊಡಿ" ಎಂದು ರಜನಿಕಾಂತ್ ಕೇಳಿಕೊಂಡಿದ್ದರು.

ಬಳಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ರಜನಿಕಾಂತ್ "ನಾನು ಕ್ಷಮೆ ಕೇಳಿದ್ದೇನೆ ಎಂದು ಕೆಲವರು ಜನರ ದಾರಿ ತಪ್ಪಿಸುತ್ತಿದ್ದಾರೆ. ಅದು ಸಂಪೂರ್ಣ ಸುಳ್ಳು. ಉಪವಾಸ ಸತ್ಯಾಗ್ರಹದಲ್ಲಿ ಹೇಳಿದ ಹೇಳಿಕೆಗೆ ಸ್ಪಷ್ಟೀಕರಣ ಕೊಟ್ಟಿದ್ದೇನೆ ಅಷ್ಟೇ" ಎಂದು ಹೇಳಿ ಅಚ್ಚರಿ ಮೂಡಿಸಿದ್ದರು. ರಜನಿಕಾಂತ್ ರೀತಿಯಲ್ಲೇ ಮತ್ತೊಬ್ಬ ತಮಿಳು ನಟ ಸತ್ಯರಾಜ್ ಕೂಡ ಕನ್ನಡಿಗರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. 'ಬಾಹುಬಲಿ'-2 ಬಿಡುಗಡೆಗೆ ಸಂಕಷ್ಟ ಎದುರಾದಾಗ ವಿಷಾದ ವ್ಯಕ್ತಪಡಿಸಿ ವೀಡಿಯೋ ಮಾಡಿ ಮಾತನಾಡಿದ್ದರು. ಕೊನೆಗೆ ಆ ವಿವಾದವೂ ಕೊನೆಯಾಗಿತ್ತು.

17 ವರ್ಷಗಳ ಹಿಂದೆ ಕಾವೇರಿ ಕಿಚ್ಚಿನ ಸಮಯದಲ್ಲಿ ತಮಿಳು ನಟ ಸತ್ಯರಾಜ್ ಕನ್ನಡಿಗರ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದರು. 'ಬಾಹುಬಲಿ- 2' ಸಿನಿಮಾ ರಿಲೀಸ್ ಹೊಸ್ತಿಲಲ್ಲಿ ಈ ವೀಡಿಯೋ ವೈರಲ್ ಆಗಿ ವಿವಾದ ಸೃಷ್ಟಿಯಾಗಿತ್ತು. ತಮ್ಮ ಹೇಳಿಕೆಗೆ ಸತ್ಯರಾಜ್ ಕ್ಷಮೆ ಕೇಳದ ಹೊರತು ಸಿನಿಮಾ ಬಿಡುಗಡೆ ಬಿಡಲ್ಲ ಎಂದು ಕನ್ನಡ ಪರ ಸಂಘಟನೆಗಳು ಪಟ್ಟು ಹಿಡಿದಿದ್ದವು. ನಿರ್ದೇಶಕ ರಾಜಮೌಳಿ ಕೂಡ ಈ ಬಗ್ಗೆ ಸ್ಪಷ್ಟನೆ ಕೊಡುವ ಪ್ರಯತ್ನ ಮಾಡಿದ್ದರು. ಸತ್ಯರಾಜ್ ಹೇಳಿಕೆ ನೀಡಿರುವುದು 9 ವರ್ಷಗಳ ಹಿಂದೆ. ಆ ಬಳಿಕ ಅವರ ಸಿನಿಮಾಗಳು ಕರ್ನಾಟಕದಲ್ಲಿ ಬಿಡುಗಡೆಯಾಗಿದೆ. ಈಗ ಯಾಕೆ ಈ ಸಮಸ್ಯೆ ಎನ್ನುವುದು ಗೊತ್ತಿಲ್ಲ. ಸತ್ಯರಾಜ್ ಚಿತ್ರದ ರೈಟರ್ ಅಲ್ಲ, ನಿರ್ಮಾಪಕ ಅಲ್ಲ, ನಿರ್ದೇಶಕ, ಹೀರೊ ಅಲ್ಲ, ಸಹ ಕಲಾವಿದ. ಜನ ಸಿನಿಮಾ ಬಿಡುಗಡೆ ವಿರೋಧಿಸುವುದರಿಂದ ಸತ್ಯರಾಜ್‌ಗೆ ಏನು ಸಮಸ್ಯೆ ಇಲ್ಲ, ಆದರೆ ಇದು ದುಃಖದ ಸಂಗತಿ" ಎಂದಿದ್ದರು.

Kamal Haasan kannada row Rajinikanth Sathyaraj s Apology Episodes Resurface

'ಬಾಹುಬಲಿ' ಚಿತ್ರತಂಡ ಏನೇನೋ ಸಬೂಬು ಹೇಳಿದರೂ ಕನ್ನಡಿಗರು ಕೇಳಲಿಲ್ಲ. ಕೊನೆಗೆ ಸತ್ಯರಾಜ್ ವಿಷಾದ ವ್ಯಕ್ತಪಡಿಸಿ ತಮ್ಮ ಹೇಳಿಕೆಯಿಂದ ತಪ್ಪಾಗಿದೆ ಎಂದು ಹೇಳಿದ್ದರು. ಆಗ ಸತ್ಯರಾಜ್ ನಡೆಯನ್ನು ಕಮಲ್ ಹಾಸನ್ ಸ್ವಾಗತಿಸಿದ್ದರು. ಅಂದು ಸತ್ಯರಾಜ್ ಕೂಡ 'ಕ್ಷಮಿಸಿ' ಎಂದು ಕೇಳಲಿಲ್ಲ, ಬರೀ ವಿಷಾದ ವ್ಯಕ್ತಪಡಿಸಿದ್ದರು. ಕಾವೇರಿ ಬಿಕ್ಕಟ್ಟಿನ ಸಮಯದಲ್ಲಿ ಆವೇಶದಿಂದ ಆ ಮಾತುಗಳನ್ನಾಡಿದ್ದೆ. ಈ ಹೇಳಿಕೆಯಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ನಾನು ಕನ್ನಡ ವಿರೋಧಿಯಲ್ಲ, 'ಬಾಹುಬಲಿ- 2' ಚಿತ್ರ ಬಿಡುಗಡೆಗೆ ಅವಕಾಶ ಮಾಡಿಕೊಂಡಿ ಎಂದಿದ್ದರು. ಕೊನೆಗೆ ಇದನ್ನೇ ಕ್ಷಮೆ ಎಂದು ಒಪ್ಪಿಕೊಂಡು ಕನ್ನಡಪರ ಸಂಘಟನೆಗಳು ಸುಮ್ಮನಾಗಿದ್ದವು.

ಅಂದು ಸತ್ಯರಾಜ್ ತಮ್ಮ ವಿವಾದಾತ್ಮಕ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿ 'ಬಾಹುಬಲಿ-2' ಸಿನಿಮಾ ಬಿಡುಗಡೆಗೆ ಎದುರಾಗಿದ್ದ ಕಂಟಕವನ್ನು ನಿವಾರಿಸಿಕೊಂಡಿದ್ದರು. ಈ ಬಗ್ಗೆ ಕಮಲ್ ಹಾಸನ್ ಸಹ ಟ್ವೀಟ್ ಮಾಡಿ ಸತ್ಯರಾಜ್ ಬೆನ್ನು ತಟ್ಟಿದ್ದರು. "ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಸೌಹಾರ್ದತೆ ಮೆರೆದಿದ್ದಕ್ಕೆ ಅಭಿನಂದನೆ" ಎಂದು ಕಮಲ್ ಹಾಸನ್ ಟ್ವೀಟ್ ಮಾಡಿದ್ದರು. ತಮ್ಮ 'ವಿರುಮಾಂಡಿ' ಚಿತ್ರದ "ಕ್ಷಮಿಸುವುದನ್ನು ತಿಳಿದಿರುವವನು ಮನುಷ್ಯ. ಕ್ಷಮೆ ಕೇಳುವುದನ್ನು ತಿಳಿದಿರುವವನು ದೊಡ್ಡ ಮನುಷ್ಯ" ಎಂಬ ಡೈಲಾಗ್ ಅನ್ನು ಬರೆದುಕೊಂಡಿದ್ದರು.

ಇದೀಗ ಕಮಲ್ ಹಾಸನ್ ಕೂಡ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ರಜನಿಕಾಂತ್‌ ನಟನೆಯ 'ಕುಚೇಲನ್' ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆ ವೇಳೆ ಸಮಸ್ಯೆ ಎದುರಾಗಿತ್ತು. ಬಳಿಕ ಸತ್ಯರಾಜ್ ನಟನೆಯ 'ಬಾಹುಬಲಿ-2' ಚಿತ್ರಕ್ಕೆ ಸಂಕಷ್ಟ ಶುರುವಾಗಿತ್ತು. ಹಾಗಾಗಿ ಇಬ್ಬರೂ ತಮ್ಮ ತಮ್ಮ ಹೇಳಿಕೆಗಳಿಗೆ ವಿಷಾದ ವ್ಯಕ್ತಪಡಿಸಿ ತಪ್ಪಾಯಿತು ಎಂದಿದ್ದರು. ಇದೀಗ ಅದೇ ಸನ್ನಿವೇಶದಲ್ಲಿ ಕಮಲ್ ಹಾಸನ್ ನಿಂತಿದ್ದಾರೆ. ಮುಂದಿನ ವಾರವೇ 'ಥಗ್ ಲೈಫ್' ಸಿನಿಮಾ ಬಿಡುಗಡೆಯಾಗಬೇಕಿದೆ.

More from Filmibeat

English summary
Kamal Haasan refuses to apologize for his Kannada-Tamil language remark, past controversies involving Rajinikanth and Sathyaraj resurface
Read more about: kamal haasan rajinikanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X